Thursday, 28th January 2021

ದೆಹಲಿ ನಮ್ಮ ಬೆಂಗಳೂರಿಗೆ ಸರಿಸಾಟಿಯಲ್ಲ ಎಂದರೆ ನಂಬುವಿರಾ ?

ಅವಲೋಕನ

ಮಹಾಂತೇಶ ವಕ್ಕುಂದ

ಹಲವಾರು ಕೆಲಸ ಕಾರ್ಯಗಳ ನಿಮಿತ್ತ ನಾವೆಲ್ಲ ಆಗಾಗ ದೆಹಲಿಗೆ ಹೋಗುವುದು ಅನಿವಾರ್ಯ, ಹೋಗುತ್ತಿರುತ್ತೇವೆ. ಹಾಗೆಯೇ ನಾನು ಮೇಲಿಂದ ಮೇಲೆ ದೆಹಲಿಯ ಪ್ರವಾಸದಲ್ಲಿರುತ್ತೇನೆ. ಸಮಯ ಸಿಕ್ಕಾಗ ದಿಲ್ಲಿಯ ಗಲ್ಲಿಗಳಲ್ಲಿ ಓಡಾಡಿ ಸ್ಥಳೀಯ ಜನರ ಜೀವನ ಶೈಲಿ, ಲೋಕಲ್ ಫುಡ್, ಲೋಕಲ್ ಸಾರಿಗೆಯಲ್ಲಿ ತಿರುಗಿ ಅಲ್ಲಿಯ ಸಾಮಾನ್ಯ ಜೀವನವನ್ನು ಅನುಭವಿಸುವುದು ನನ್ನ ಅಭ್ಯಾಸ.

ಹಾಗೆಯೇ ಈ ಸಾರಿಯೂ ದೆಹಲಿಯ ಗಲ್ಲಿಗಳಲ್ಲಿ ಓಡಾಡಿದೆ, ದೆಹಲಿಯ ಹಲವು ಮುಖಗಳನ್ನೂ ಕಂಡೆ, ಆ ಸುತ್ತಾಟದ
ಅನುಭವಗಳ ಸಂಕಲನವಿದು. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳ ಇಕ್ಕೆಲಗಳಲ್ಲಿ ಸ್ಥಿತ ದೆಹಲಿ ನಮ್ಮ ದೇಶದ ಪ್ರಮುಖ
ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು, ಆದರೆ ವಿಶಿಷ್ಟವಾಗಿ ತಮ್ಮದೇ ವಿಧಾನ ಸಭೆ, ನ್ಯಾಯಾಲಯಗಳನ್ನು ಹೊಂದಿ, ತಾನು ಯಾವ ಅನ್ಯ ರಾಜ್ಯಕ್ಕೂ ಕಡಿಮೆ ಇಲ್ಲ ಎಂಬಂತೆ ರಾಜ್ಯ ರಾಜಕಾರಣವನ್ನೂ ದೆಹಲಿ ನಡೆಸಿಕೊಂಡು ಬಂದಿದೆ. ಈ ಭೂಪಟದ
ಮೇಲೆ ಇರುವ ಅತಿ ಹಳೆಯ ನಗರಗಳಲ್ಲೂ ಕೂಡ ದೆಹಲಿ ಒಂದು.

ಪಾಂಡವರ ಕಾಲದಿಂದ, ಸುಲ್ತಾನರು, ಮೊಘಲರ ಆಳ್ವಿಕೆ ಸೇರಿ ಇಂದಿನ ಅರವಿಂದ ಕೇಜ್ರಿವಾಲರ ಅಧಿಕಾರದವರೆಗೂ ದೆಹಲಿ
ರಾಜಕೀಯ ಕ್ಷೇತ್ರದ ಕೇಂದ್ರ ಬಿಂದು. ಯಮುನೆಯ ತಟದಲ್ಲಿ, ಗಂಗೆಯ ಫಲವತ್ತಾದ ಸಮತಟ್ಟಿನ ಪ್ರದೇಶದ ಮುಂಬಾಗಿಲಾಗಿ ಇರುವ ದೆಹಲಿಗೆ ಭೌಗೋಳಿಕವಾಗಿ ಸಾಕಷ್ಟು ಪ್ರಕೃತಿಯ ವರದಾನಗಳು ಲಭಿಸಿವೆ. ಆ ವರದಾನಗಳ ಫಲ ಪಡೆದ ಮನುಷ್ಯ
ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ದೆಹಲಿಯಲ್ಲಿ ವಾಸಿಸುತ್ತಿದ್ಧಾನೆ.

ದೆಹಲಿ, ಪಕ್ಕದ ಸ್ಯಾಟಲೈಟ್ ನಗರಗಳಾದ ನೊಯಿಡಾ, ಗುರುಗ್ರಾಮ, ಘಾಝಿಯಾಬಾದ ಹಾಗೂ ಫರೀದಾಬಾದ (ಇವೆಲ್ಲವೂ ಈಗ
ದೆಹಲಿಯ ಭಾಗಗಳೇ) ಸೇರಿ ಇಲ್ಲಿ ಸುಮಾರು ಮೂರು ಕೋಟಿ ಜನ ವಾಸ್ತವ್ಯವಿದೆ ಎಂದರೆ ನಂಬುವಿರಾ? ನಂಬಲೇಬೇಕು… ಇಷ್ಟೆ ಜನಸಂಖ್ಯೆ, ವ್ಯತಿರಿಕ್ತ ಹವಾಮಾನ, ಲಕ್ಷಾಂತರ ವಲಸಿಗರ ಸಂಚಲನದ ನಡುವೆಯೂ ದೆಹಲಿಯಲ್ಲಿ ಕೆಲವೊಂದಿಷ್ಟು ಪ್ರದೇಶ ಗಳು ಈಗಲೂ ಸುಂದರವಾಗಿ, ಪ್ರೇಕ್ಷಣೀಯ ಸ್ಥಳಗಳಾಗಿ ಉಳಿದಿವೆ. ಅವುಗಳನ್ನು ನೋಡಲು, ದೆಹಲಿಯ ಅನುಭವ ಗಳನ್ನು ಸವೆಯಲು ಸಾಕಷ್ಟು ಜನ ಪ್ರತಿನಿತ್ಯ ದೆಹಲಿಗೆ ಆಗಮಿಸುತ್ತಿರುತ್ತಾರೆ.

ಇಂತಹ ಇತಿಹಾಸ ಪ್ರಸಿದ್ಧ ಹಾಗೂ ತನ್ನದೇ ಆದ ವಾಸ್ತವಿಕ ಮಹತ್ವ ಹೊಂದಿರುವ ದೆಹಲಿಯ ಇಂದಿನ ಪರಿಸ್ಥಿತಿ ಮಾತ್ರ ಆ ದೇವರಿಗೇ ಪ್ರೀತಿ. ಕರೋಲ್ ಭಾಗನಿಂದ ಹಿಡಿದು ಕನೌಟ್ ಪ್ಲೇಸ್‌ವರೆಗೂ ಈ ನಗರ ದೆಹಲಿಗರ ಕೈಗೆ ಸಿಕ್ಕಿ ಹದಗೆಟ್ಟು ಹೈದರಾ ಬಾದ ಆಗಿರುವುದಂತೂ ನಿಜ. ಪ್ರತಿ ನಗರದಂದು ಮಾರುಕಟ್ಟೆ ಪ್ರದೇಶ, ಜನ ಜಂಗುಳಿಯ ಪ್ರದೇಶ ಇದ್ದೇ ಇರುತ್ತದೆ. ಆದರೆ ದೆಹಲಿಯ ಇಂತಹ ಪ್ರದೇಶಗಳು ಮಾತ್ರ ಅಧೋಗತಿಯನ್ನು ತಲುಪಿವೆ.

ಮಾರುಕಟ್ಟೆ ಪ್ರದೇಶಗಳಲ್ಲಿ ಎಂದರಲ್ಲಿ ಕಸ, ಬೇಡದ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಎಂದರಲ್ಲಿ ಸುರಿಯುವ ವ್ಯಾಪಾರಿ ಗಳೇ ಈ ಕಸ ಜನಕರು. ಚೂರುಮಳೆಯಾದರೂ ಈ ಕಸ ವಾಹನಗಳ ಚಕ್ರಕ್ಕೆ ಸಿಲುಕಿ, ಅಪ್ಪಚ್ಚಿಯಾಗಿ ಊರೆಲ್ಲ ಪಾವ ಭಾಜಿ ಸುರಿದಂತೆ
ಕಾಣುವುದೂ ಇದೆ ವ್ಯಾಪಾರಿಗಳಿಂದ. ಅವುಗಳ ಮಧ್ಯದಲ್ಲಿ ಈಗಿನ ಯಾಂತ್ರಿಕ ಜೀವನ ಶೈಲಿಯ ಜೀವನ ಜಂಜಾಟ
ದಲ್ಲೂ ಓಡುವ ಮಾನವ ಚಾಲಿತ ತ್ರೀ ಚಕ್ರ ಸೈಕಲ್ ಗಳು, ಆ ತಗಡಿನ ಡಬ್ಬಿಯಂಥ ಎಲೆಕ್ಟ್ರಿಕ್ ಆಟೋಗಳು, ಕಿತ್ತು ಹೋಗಿರುವ
ದೆಹಲಿಯ ಬಸ್ಸುಗಳು, ಊರಿನ ಜನ ನಿಬಿಢ ಪ್ರದೇಶದಲ್ಲೂ ಸಂಚರಿಸುವ ಆ ಹೊಗೆ ಸೂಸುವ ಸಣ್ಣ ಲಾರಿಗಳು, ಎಂದರಲ್ಲಿ ಅಡುಗೆ ಮಾಡಿ ಬಡಿಸುವ ಕಾಕಾ ಅಂಗಡಿಗಳು ದೆಹಲಿಯ ಪ್ರಧೂಷಣೆಯ ಏರಿಕೆಗೆ ತಮ್ಮದೇ ಆದ ಕೊಡುಗೆಯನ್ನು ದಿನ ನಿತ್ಯ ನೀಡುತ್ತಿವೆ.

ನೆನಪಿರಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2014ರಲ್ಲಿ ದೆಹಲಿ ಜಗತ್ತಿನ ಅತೀ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರವೆಂಬ ಕುಖ್ಯಾತಿಗೆ ಒಳಗಾಗಿತ್ತು. ಇಂತಹ ಕುಖ್ಯಾತಿಯ ನಂತರವೂ ದೆಹಲಿಯ ವಾತಾವರಣದ ಶುದ್ಧತೆಗಾಗಿ ಅಲ್ಲಿನ ಸರಕಾರ ಇಲ್ಲಿಯವರೆಗೂ ಸಮರ್ಪಕ ಕ್ರಮಗಳನ್ನು ಕೈಗೊಳ್ಳದಿರುವುದು ಮಾತ್ರ ವಿಪರ್ಯಾಸ. ಇಂದು ಇದೆ ದೆಹಲಿಯಲ್ಲಿ, ಇದೆ ಪ್ರಧೂ ಷಣೆಯ ಕಾರಣಕ್ಕೆ ವರ್ಷ ವೊಂದರಲ್ಲಿ ಸುಮಾರು 15000 ಜನ ಸಾವಿಗೀಡಾಗುತ್ತಾರೆ ಎಂದರೆ? ನಂಬಲೇಬೇಕು.

ಪ್ರಧೂಷಣೆ ಒಂದು ಕಡೆಯಾದರೆ ದೆಹಲಿಯ ಸೌಂದರ್ಯ ಇನ್ನೊಂದು ಕಡೆ, ದೆಹಲಿಯ ಪ್ರಮುಖ ಪ್ರದೇಶಗಳ ಹಲವಾರು ಕಟ್ಟಡಗಳಿಗೆ ಯಾವ ಸುಣ್ಣ, ಬಣ್ಣವೂ ಇಲ್ಲ. ಅರ್ಧ ಬಿದ್ದ ಗೋಡೆಗಳು, ಕಟ್ಟಿದ ಗೋಡೆಗಳಿದ್ದರೆ ಅವುಗಳ ಮೇಲೆ ಸಿಮೆಂಟ್ ಗಿಲಾಯಿ ಇಲ್ಲ, ಕಿಟಕಿಗೆ ಬಾಗಿಲುಗಳಿಲ್ಲ. ಇನ್ನು ಚಳಿ ತಡೆಯಲು ಅದೇ ಕಿಟಕಿಗಳಿಗೆ ಸಿಲುಕಿ ಹಾಕಿರುವ ಗೋಣಿ ಚೀಲಗಳು, ರಸ್ತೆಯ ಪಕ್ಕ ಜನ ವಸತಿ, ರಸ್ತೆಯ ಮದ್ಯದ ಬ್ಯಾರಿಕೇಡ್‌ಗೆ ಒಣ ಹಾಕಿದ ಬಟ್ಟೆ, ಹೊದಿಕೆಗಳು. ಸಿಗ್ನಲಲ್ಲಿ ಚಮಕ್ ಮಾಡಿ ಭಿಕ್ಷೆ
ಬೇಡುವ ಮಕ್ಕಳು, ಆ ಮಕ್ಕಳ ಹಿಂದೆ ಹಿಂಡು ಹಿಂಡಾಗಿ ಬಂದು ಹಣ ಕೇಳುವ ದೈಹಿಕವಾಗಿ ಗಟ್ಟಿಯಾಗಿರುವ ಸೀ ಪುರುಷರು, ಇವರೆಲ್ಲರಿಗೂ ದೃಷ್ಟಿ ಬೊಟ್ಟಿಡುವಂತೆ ಬಂದು ಹಣ ಕೀಳುವ ಮಂಗಳಮುಖಿಯರು, ಎಂದರಲ್ಲಿ ಮಲಗಿ, ಅದನ್ನೇ ಹೊದ್ದು ಓಡಾಡುವ ದೇಹಗಳು, ದೇವಸ್ಥಾನಗಳ ಮುಂದೆ ಅನ್ನಕ್ಕಾಗಿ ಸಾಲಲ್ಲಿ ನಿಂತು ಆ ಅನ್ನವನ್ನು ಪೂರ್ತಿಯಾಗಿ ತಿನ್ನದೇ ರಸ್ತೆ ಪಕ್ಕದಲ್ಲಿಟ್ಟು ಹೋಗುವ ಕೃತಘ್ನ ಮನಸ್ಸುಗಳು.

ಕನೌಟ್ ಪ್ಲೇಸ್‌ನಂಥ ಪ್ರಮುಖ ಸ್ಥಳಗಳಲ್ಲೂ ತಮ್ಮ ನಾಯಿಗಳನ್ನು ತಂದು ಕಂಬಕ್ಕೆ ಮಲ ವಿಸರ್ಜನೆ ಮಾಡಿಸುವ ಜನಗಳು,
ಪಾನ್ ಬೀಡಾ ಅಗೆದು ಎಂದರಲ್ಲಿ ಉಗುಳುವವರು, ಸಿಕ್ಕ ಸಿಕ್ಕ ಪಾರ್ಕಿಂಗ್ ಮಾಡುವವರು, ರಸ್ತೆಯ ನಡುವಲ್ಲಿಯೇ ವಾಹನ ನಿಲ್ಲಿಸಿ ಮಾತನಾಡುವವರು ಇಂತಹ ಎಲ್ಲರೂ ಸೇರಿ ದಿನದಿಂದ ದಿನಕ್ಕೆ ದೆಹಲಿಯ ‘ಸೌಂದರ್ಯ ಕೀರ್ತಿಯನ್ನು’ ಹೆಚ್ಚಿಸು
ತ್ತಿzರೆ. ಅತಿಯಾದ ವಲಸೆ ಜನರ ಮೇಲೆ ದೆಹಲಿಯ ಸರಕಾರಕ್ಕೆ ಹಿಡಿತವಿಲ್ಲದಂತೆ ಮಾಡಿದೆ, ದಕ್ಷಿಣದವನಾದ ಕಾರಣ ನನಗೆ ಹಾಗೆ ಕಾಣಿಸಿತೋ ಏನೋ ಗೊತ್ತಿಲ್ಲ. ಆದರೆ ಉತ್ತರದವರ ಜೀವನ ಶೈಲಿ ಮಾತ್ರ ನಮಗೆ ಹಿಡಿಸುವಂತದಲ್ಲ.

ಅದ್ಯಾವುದೋ ಸ್ಟಾಂಡ್ ಅಪ್ ಕಾಮಿಡಿಯಲ್ಲಿ ಕೇಳಿದ್ದೆ ಉತ್ತರ ಭಾರತದವರು ನೋಡೋಕೆ ಮಾತ್ರ ಬೆಳ್ಳಗಿರ್ತಾರೆ, ಸ್ನಾನನೂ
ಮಾಡ, ಹಲ್ಲೂ ಉಜ್ಜಲ್ಲ ಅಂತ. ಅದು ದೆಹಲಿಯಲ್ಲಿ ನಿಜವಾಗಿ ಕಾಣಿಸುತ್ತಿತ್ತು. ಕೋಟ್ಲಾ ಎಂಬ ಪ್ರದೇಶಕ್ಕೆ ಹೋದಾಗ ಅಲ್ಲಿನ ಮನೆಗಳನ್ನು ಕಂಡು ದಂಗಾದೆ. ಅಪಾರ್ಟ್ಮೆಂಟ್ ನಂತಹ 8-10 ಅಂತಸ್ತಿನ ಮನೆಗಳವು, ಅವುಗಳಲ್ಲಿ ಚಿಕ್ಕ ಚಿಕ್ಕ ಗೂಡುಗಳಲ್ಲಿ
ಸಂಸಾರ, ಇದಿರು ಬದಿರು ಇರುವ ಇಂತಹ ಕಟ್ಟಡಗಳ ಮಧ್ಯದಲ್ಲಿ ಓಡಾಡಲಿಕ್ಕೆ ಇರುವುದು ಮಾತ್ರ ಎಂಟಡಿ ರಸ್ತೆ, ಸೈಕಲ, ಬೈಕ್, ಸಣ್ಣ ಪುಟ್ಟ ವಾಹನ, ಜನಗಳು ಓಡಾಟಕ್ಕೆ ಇದೇ ರಸ್ತೆ, ಮಕ್ಕಳಾಟಕ್ಕೂ ಇದೆ ಮೈದಾನ.

ಮೂಲ ಅವಶ್ಯಕತೆಗಳಿಗೂ ಸ್ಥಳವಿಲ್ಲದೆ ಮನೆಕಟ್ಟಲು ಅನುವು ಮಾಡಿಕೊಟ್ಟ ಅಧಿಕಾರಿಗಳು ಮಾತ್ರ ಅಪ್ಪಟ ಅರಮನೆಯಲ್ಲಿ, ಆದರೆ ಅವರು ಸೇವಿಸುವುದೂ ಇದೆ ಗಾಳಿ. ಬದುಕುತ್ತಿರುವುದೂ ಇದೇ ಪ್ರಧೂಷಣೆಯಲ್ಲಿ. ಇಂತಹ ಅಧ್ವಾನಗಳ ನಡುವೆ ಬದುಕುತ್ತಿರುವ ದಿಲ್ಲಿವಾಲಾಗಳ ಮಧ್ಯದಿಂದ ಜಾರಿ ಉಸ್ಸ್ ಎಂದು ನಿಟ್ಟುಸಿರು ಬಿಡುತ್ತಾ ವಿಮಾನವನ್ನೇರಿ ಮಧ್ಯರಾತ್ರಿ ಒಂದು ಘಂಟೆಗೆ ಕೆಂಪೇಗೌಡರ ಸ್ವರ್ಗ ಬೆಂಗಳೂರಿಗೆ ಬಂದಿಳಿದೆ.

ವಿಮಾನ ನಿಲ್ದಾಣದಾಚೆ ಮೈ ಪರಚಿಕೊಳ್ಳದೆ (Scratchless), ಹೊಗೆ ಸೂಸದೆ ವಾಯು ವಜ್ರ ವೋಲ್ವೋ ಬಸ್ಸುಗಳು ಆ ತಡರಾತ್ರಿ
ಯಲ್ಲೂ ಪ್ರಯಾಣಿಕರ ಸೇವೆಗಾಗಿ ಕಾಯುತ್ತಿದ್ದವು. ವಿಜಯ ನಗರಕ್ಕೆ ತೆರಳುವ ಬಸ್ಸು ಇನ್ನು ಒಂದು ಗಂಟೆ ತಡ ಎಂದು ಗೊತ್ತಾದಾಗ ಟ್ಯಾಕ್ಸಿ ಕಡೆ ಮುಖ ಮಾಡಿದೆ, ಸುಸಜ್ಜಿತವಾದ ಓಲಾ ಟ್ಯಾಕ್ಸಿ ನಿಲ್ದಾಣದಲ್ಲಿ ಬುಕ್ ಮಾಡಿದ 15 ನಿಮಿಷಕ್ಕೆ ಮಿಣಿ ಮಿಣಿ ಪೌಡರ್ ಹಾಕಿ ಬಂದ ರಾಧಿಕೆಯಂತೆ ಟ್ಯಾಕ್ಸಿ ಬಂತು, ಅವೂ ಕ್ಲೀನ್ ಹಾಗೂ ನೀಟ್. ಟ್ಯಾಕ್ಸಿ ಚಾಲಕ ಕೆಳಗಿಳಿದು ನಮ್ಮ ಬ್ಯಾಗ್ ಎತ್ತಿಕೊಂಡು ಕಾರಿನೊಳಗಿಟ್ಟ, ಬೀಡಿ ಸೇದುತ್ತಿಲ್ಲ, ಪಾನ್ ಅಗೆಯುತ್ತಿಲ್ಲ, ಶುಭ್ರವಾದ ಬಟ್ಟೆ ತೊಟ್ಟು, ಹಸನ್ಮುಖಿಯಾಗಿ ಮಾತನಾಡುತ್ತ ನಮ್ಮನ್ನು ಕಾರಲ್ಲಿ ಹತ್ತಿಸಿಕೊಂಡ.

ವಿಮಾನ ನಿಲ್ದಾಣದ ಹದ್ದಿನಲ್ಲಿ ಗಾಡಿ ಹೊರಟಾಗ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಉದ್ಯಾನವನ. ಸಮತಟ್ಟಾದ, ಸುವ್ಯವಸ್ಥಿತ ವಾದ ರಸ್ತೆಗಳು, ಅವುಗಳ ಮೇಲೆ ಕ್ರಮಬದ್ಧವಾದ ರಸ್ತೆ ಮಾರ್ಕಿಂಗ್ಸ್, ಅಕ್ಕಪಕ್ಕದಲ್ಲಿ ಐಷಾರಾಮಿ ಹೋಟೆಲ್ಗಳು, ಮುಂದೆ ಬಂದಂತೆ ದೊಡ್ಡ ದೊಡ್ಡ – ಓವರ್ ಗಳು, ಐಟಿ ಕಂಪೆನಿಗಳು, ಸುತ್ತಮುತ್ತಲೆಲ್ಲ ಕಾಣುವ ಹಸಿರು, ಕಡಿಮೆಯಾದರೂ ಮಿಕ್ಕಿ ಉಳಿದಿರುವ ಸ್ವಚ್ಛಂದದ ಕೆರೆಗಳು, ಶಿಸ್ತಿನ ಜನ, ಮೆಚ್ಚಬಹುದಾದಂಥ ಟ್ರಾಫಿಕ್ ಪ್ರಜ್ಞೆ, ಇವೆಲ್ಲವನ್ನೂ ನೋಡಿ ಮರಳಿ ಗೂಡಿಗೆ ಬಂದೆ. ಆ ಗೂಡು ಸದಾ ಸುಂದರ ಗಿದೆ ಎಂಬಂತೆ ಭಾಸವಾಯಿತು.

ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಿನ ಸೌಂದರ್ಯ ಮಾತ್ರ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬಂತೆ
ಭಾಸವಾಗಿ ದ್ದಂತೂ ನಿಜ. ದೆಹಲಿಗೆ ಹೋಲಿಕೆ ಮಾಡಿ ನೋಡುವುದೇನೋ ಸರಿ, ಆದರೆ 2000ನೇ ಇಸವಿಯಲ್ಲಿ ನಾ ಕಂಡ
ಬೆಂಗಳೂರಿಗೂ ವಾಸ್ತವದ ಬೆಂಗಳೂರಿಗೂ ಮನಸ್ಸಿನಲ್ಲಿ ಹೋಲಿಕೆ ಶುರುವಾಯಿತು. ಕೆರೆ ಉದ್ಯಾನಗಳ ನಗರಿ ಎಂದೇ ವಿಖ್ಯಾತಿ ಪಡೆದಿದ್ದ ಬೆಂಗಳೂರಿನ ಆ ಬೃಹತ್ ಮರಗಳು ಮೆಟ್ರೋ ರೈಲಿಗೆ ಸಿಲುಕಿ ಧರೆಗುರುಳಿದ್ದ ನೆನೆದು ನೋವಾದರೆ, ಭೂಗಳ್ಳರ ಕಾಟಕ್ಕೆ ಬಲಿಯಾದ ಕೆರೆಗಳ ಲೆಕ್ಕ ಸಿಗಲಿಲ್ಲ.

ಇಲ್ಲೂ ವಲಸಿಗರ ಹಾವಳಿ ಹೆಚ್ಚಾಗಿ ಬೆಂಗಳೂರು ಸಂಸ್ಕಾರ ಹೀನವಾಗುತ್ತಿದೆಯೇನೋ ಎಂಬ ಅಳುಕು ಒಂದೆಡೆಯಾದರೆ, ದಿನ ನಿತ್ಯದ ಕರ್ಮದಲ್ಲಿ ಕಳೆದು ಹೋದ ಮಾನವ ತನ್ನ ಕೊಡುಗೆಯಿಂದ ಬೆಂಗಳೂರನ್ನು, ಇಲ್ಲಿನ ನೀರು, ಗಾಳಿಯನ್ನು ಕಲುಷಿತ
ಗೊಳಿಸುತ್ತಿರುವುದೂ ಕಡಿಮೆಯೇನಿಲ್ಲ ಎಂದೆನಿಸಿತು. ಬೆಂಗಳೂರಿನ ಜನಸಂಖ್ಯೆಯೂ ಈಗ ಒಂದೂವರೆ ಕೋಟಿ ದಾಟಿದೆ. ಮುಂದೊಂದು ದಿನ ದೆಹಲಿಗೆ ಬಂದ ದುಸ್ಥಿತಿ ಬೆಂಗಳೂರಿಗೂ ಬರಬಹುದೇನೋ.

ಆದರೂ ದೆಹಲಿ ಬೆಂಗಳೂರಿನ ಹೋಲಿಕೆಗಳ ನಡುವೆ ಲೆಕ್ಕಾಚಾರ ಮಾಡಿದಾಗ ಮಾತ್ರ ದೆಹಲಿಗರ, ದೆಹಲಿ ಸರಕಾರದ ಮನಸ್ಥಿತಿ ಮಾತ್ರ ನಮ್ಮ ಬೆಂಗಳೂರಿಗಿಂತ ಹತ್ತಾರು ವರ್ಷ ಹಿಂದಿರುವಂತೆ ಭಾಸವಾಯಿತು. ಕುರುಡುಗಣ್ಣಿಗಿಂತ ಮೆಳ್ಳುಗಣ್ಣು ಶ್ರೇಷ್ಠ ಎಂಬಂತೆ ಬೆಂಗಳೂರು ಅತ್ಯುತ್ತಮವಲ್ಲದಿದ್ದರೂ ದೆಹಲಿಗಿಂತ ಉತ್ತಮ. ಆ ಮೆಳ್ಳುಗಣ್ಣಿನ ಪೋರೆ ತೆಗಿಸಿ ಅದನ್ನೆ ನಿಚ್ಚಳವಾಗಿಸಿ, ಪರಿಶುದ್ಧವಾದ ಬದುಕಿನೆಡೆಗೆ ನಾವೆ ಸಾಗಬೇಕಿದೆ. ಬೆಂಗಳೂರಿಗೆ ಆ ಹಳೆಯ ಚೈತನ್ಯ ಮತ್ತೆ ತುಂಬಬೇಕಿದೆ ಎಂದೆನಿಸಿತು.
ಬೆಂಗಳೂರಿಗರು ಆ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಾರೆ ಎಂಬ ಆಶ್ವಾಸನೆಯೂ ಸ್ವಯಂಪ್ರೇರಿತವಾಗಿ  ಮನದಲ್ಲಿ ಮೂಡಿ ಖುಷಿಯಾ ಯಿತು.

Leave a Reply

Your email address will not be published. Required fields are marked *