Tuesday, 17th May 2022

ವಿಶ್ವವಾಣಿ ಮುಂದಿನ ವಾರ್ಷಿಕೋತ್ಸವ ಸ್ವಂತ ವಿಶ್ವಭವನದಲ್ಲಿ !

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – ೧೮೪

ಬೇಡಿಕೆ ಜಾಸ್ತಿ, ಗುಣಮಟ್ಟದಲ್ಲಿ ರಾಜಿಯಿಲ್ಲ; ಬಾಬುಸಿಂಗ್ ಠಾಕೂರ್ ಫೇಡಾದಂತೆ ನಮ್ಮ ಪತ್ರಿಕೆ!

ಬೆಂಗಳೂರು: ‘ವಿಶ್ವವಾಣಿ’ ಮುಂದಿನ ವಾರ್ಷಿಕೋತ್ಸವ ಸ್ವಂತ ಕಟ್ಟಡ ‘ವಿಶ್ವಭವನ’ ದಲ್ಲಿ ನಡೆಯುವುದಾಗಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್
ವಿಶ್ವಾಸ ಪೂರ್ವಕವಾಗಿ ಘೋಷಿಸಿದರು.

ಪತ್ರಿಕೆ ವಾರ್ಷಿಕೋತ್ಸವದ ವಿಶೇಷ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಓದುಗರು, ಅಭಿಮಾನಿಗಳು, ಸದಸ್ಯರೆಲ್ಲರ ಮಾತುಗಳನ್ನು ಆಲಿಸಿದ ನಂತರ, ಮುಕ್ತ ಮನಸ್ಸಿನಿಂದ ಭಾವಪರವಶರಾಗಿ ಹಳೆಯ ದಿನಗಳು, ಹಿತೈಷಿಗಳು-ಗೆಳೆಯರು- ಓದುಗರೊಟ್ಟಿಗಿನ ಸಂಬಂಧಗಳ ಬಗ್ಗೆ ಹಂಚಿಕೊಂಡರು. ಸ್ವಂತದ ನಾಲ್ಕು ಅಂತಸ್ತಿನ ಹೊಸ ಕಟ್ಟಡ ಕಟ್ಟುವ ಸಂಕಲ್ಪ ಇದ್ದು, ತಿಂಗಳೊಳಗೆ ಇದಕ್ಕೆ ಅಡಿಗಲ್ಲು ಹಾಕಲಾ ಗುವುದು. ಮಾಡುವುದು ಬಹಳಷ್ಟಿದೆ. ನಾವು ಮಾತನಾಡಿದ್ದಕ್ಕಿಂತ ಸಾಧನೆಯೇ ಮಾತ ನಾಡಲಿ. ಎಲ್ಲವನ್ನೂ ನಿಮ್ಮ ಮುಂದಿಟ್ಟು, ನಿಮ್ಮ ಬಾಯಿಂದ ಕೇಳಿ ಖುಷಿ ಪಡುವ ಸಂದರ್ಭ ಬರಲಿ ಎಂದು ಆಶಿಸುತ್ತೇನೆ. ನಿಮ್ಮ ವಿಶ್ವಾಸವನ್ನು ಕಾಪಾಡುತ್ತೇನೆ, ವಿಶ್ವಾಸವೇ ವಿಶ್ವ ಎಂದು ಮನದುಂಬಿ ಹೇಳಿದರು.

ಅವರು ಹೇಳಿದ್ದಿಷ್ಟು: ಪಾಪು ಮನಸ್ಸು ಮಾಡಿದ್ದರೆ ಮಂತ್ರಿ ಅಥವಾ ಬಹಳ ದೊಡ್ಡ ದೊಡ್ಡ ಸ್ಥಾನಗಳಿಗೆ ಹೋಗಬಹು ದಿತ್ತು. ಆದರೂ, ೫೯ ವರ್ಷಗಳ ಕಾಲ ವಿಶ್ವವಾಣಿ ನಡೆಸಿದರು. ನನ್ನ ಅಚಲ ನಂಬಿಕೆಯೆಂದರೆ, ಒಳ್ಳೆಯ ಕೆಲಸ ಮಾಡಿದಾಗ ಕೈ ಹಿಡಿಯುವವರು ಇದ್ದೇ ಇದ್ದು, ಯಶಸ್ಸು ಸಿಗಲಿದೆ. ಪತ್ರಿಕೆ ಆರಂಭಿಸಿದಾಗ ಒಂದೆರಡು ವರ್ಷ ಗಳಲ್ಲೇ ಸತ್ತು ಹೋಗುತ್ತದೆ ಎಂದು ಹಲವರು ಹೇಳಿದ್ದರು. ಪತ್ರಿಕೆ ಎರಡು ವರ್ಷಕ್ಕಿಂತ ಜಾಸ್ತಿ ಬದುಕಿದರೆ ನಿರಂತರವಾಗಿ ಬದುಕಲಿದೆ ಎಂದರ್ಥ. ಇದೀಗ ೧ನೇ ತಾರೀಖು ಭಾನುವಾರವಾದರೂ ಸಂಬಳ ನಿಡುತ್ತೇವೆ. ಯಾವುದೇ ಬಾಕಿಯಿಲ್ಲದಂತೆ ಪತ್ರಿಕೆ ನಡೆಸಿಕೊಂಡು ಹೋಗುತ್ತಿದ್ದೇವೆ.

ಮಧ್ಯದಲ್ಲಿ ಹೂಡಿಕೆದಾರರು ಕೈ ಕೊಟ್ಟಿದ್ದರಿಂದ ಪತ್ರಿಕೆಯ ವೇಗ ಸ್ವಲ್ಪ ಕುಂಠಿತವಾಗಿತ್ತು. ನನ್ನ ಜತೆ ಕೆಲಸ ಮಾಡಿದವರೇ, ಮುಂಚೆಯೇ ದೀಪಾವಳಿ ಇಶ್ಯೂ ಯಾಕೆ ರೆಡಿ ಮಾಡ್ತಿದ್ದೀರಿ, ದೀಪಾವಳಿ ಬರುವಷ್ಟರಲ್ಲಿ ಪತ್ರಿಕೆಯೇ ಇರೋದಿಲ್ಲ ಎಂಬಂತಹ ಮಾತುಗಳನ್ನಾಡಿ ದ್ದರು. ಇವೆಲ್ಲ ನನಗೆ ಅದ್ಭುತವಾದ ಕಿಕ್ ಕೊಡುತ್ತಿದ್ದ ಟಾನಿಕ್ ಆಗಿತ್ತು. ಪತ್ರಿಕೆ ಗೆಲ್ಲಬೇಕೆಂದರೆ ಸಂಪಾದಕನ ಹೆಚ್ಚುಗಾರಿಕೆಯಲ್ಲ, ಓದುಗನೇ ಎತ್ತಿಕೊಂಡು ಹೋಗಬೇಕು. ಓದುಗರು ನಮ್ಮ ಜತೆ ನಿಂತು ಕೊಂಡಿರು ವವರೆಗೂ ನಮಗೆ ಏನೂ ಸಮಸ್ಯೆಗಳಾಗುವುದಿಲ್ಲ. ನನಗೆ ಪ್ರತಿದಿನವೂ ಓದುಗರ ಪಲ್ಸ್ ಸಿಗುತ್ತಿತ್ತು. ಈಗಲೂ ಬಹಳ ಜನ ನಿಮ್ಮ ಪತ್ರಿಕೆ ಸಿಗೊಲ್ಲ ಅಂತಾರೆ. ಪತ್ರಿಕೆಯ ಎಕನಾಮಿಕ್ಸ್ ಬೇರೆಯದ್ದೇ ಆಗಿದೆ.

ವಾಸ್ತವವೆಂದರೆ, ವಿಶ್ವವಾಣಿ ಎಲ್ಲಾ ಕಡೆಯೂ ಸಿಗುತ್ತಿದ್ದು, ನಾವು ಜಾಸ್ತಿ ಕೊಡುತ್ತಿಲ್ಲ. ವಿಶ್ವವಾಣಿ ಬಾಬೂ ಸಿಂಗ್ ಠಾಕೂರ್ ಫೇಡಾದಂತೆ. ಅವರು ೫೦೦ ಕೆಜಿ ಫೇಡಾ ಮಾರಿದರೂ ಖರ್ಚಾಗುತ್ತದೆ. ಆದರೆ, ೮೦ ಕೆಜಿಗಿಂತ ಜಾಸ್ತಿ ಮಾರಾಟ ಮಾಡುವುದಿಲ್ಲ. ಪುಣ್ಯವಶಾತ್ ಹಲವು ಸ್ನೇಹತರು, ಅಭಿಮಾನಿಗಳು ಇದ್ದಾರೆ.
ಕಷ್ಟದಲ್ಲಿ ಪತ್ರಿಕೆಯ ಕೈ ಹಿಡಿದಿದ್ದಾರೆ. ಹಣಕಾಸು ನೆರವು ಮಾಡಿದ್ದಾರೆ. ಇಂದಿನವರೆಗೂ ಒಂದು ಪೈಸೆಯೂ ಅವರಿಗೆ ನನ್ನಿಂದ ಲಾಭವಾಗಿಲ್ಲ. ಭಟ್ಟರು ಒಳ್ಳೆಯ ಕೆಲಸ ಮಾಡುತ್ತಿದ್ದು, ನಾವು ಅವರೊಂದಿಗೆ ಇದ್ದರೆ ಸಾಕೆಂಬ ‘ಸ್ವಾರ್ಥ’ವಷ್ಟೇ ಅವರಲ್ಲಿದೆ.

ನಮ್ಮ ಪತ್ರಿಕೆಯ ಬ್ರ್ಯಾಂಡ್ ಎಂದರೆ ಅಂಕಣ. ಎಲ್ಲ ಅಂಕಣಕಾರರಿಗೂ ನಾನು ಶಿರ ಬಾಗಲೇಬೇಕು. ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ್, ಕಾರ್ಯನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ, ನಿರಂತರವಾಗಿ ನನ್ನ ಜತೆ ನಿಂತ ಸಂಪಾದಕೀಯ ಸಲಹೆಗಾರ ನಂಜನಗೂಡು ಮೋಹನ್, ಉದ್ಯಮಿ ಷಡಕ್ಷರಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ್, ನೆರವಿತ್ತ ನಾಗೇಂದ್ರ ಮತ್ತಿತರ ಅಭಿಮಾನಿಗಳನ್ನು ನೆನೆದು, ವಿಶ್ವೇಶ್ವರ ಭಟ್ ಕೃತಜ್ಞತೆಗಳನ್ನು ಸಲ್ಲಿಸಿದರು.

ರೈತರೊಬ್ಬರು ರೊಟ್ಟಿ ಕೊಟ್ಟರು!

ಅಕ್ಷರಗಳಿಗಿಂತ ಮಿಗಿಲಾದ ಸಂಬಂಧವಿಲ್ಲ. ನಾನೊಮ್ಮೆ ಬಾಲ್ಕಿಯಿಂದ ವಾಪಸ್ ಬರುವಾಗ ನನ್ನನ್ನು ತುಂಬಾ ಹೊತ್ತಿನಿಂದ ನೋಡಿದ ರೈತರೊಬ್ಬರು, ನೀವು ‘ವಿಶ್ವನಾಥ ಭಟ್ಟ’ರಲ್ಲವೇ? ಎಂದರು. ಅದಕ್ಕೆ ನಾನೂ ಹೌದು ಎಂದೆ. ಪುಷ್ಪೋದ್ಯಮ ಸ್ಟಾರ್ಟ್ ಮಾಡುವ ಬಗ್ಗೆ ನೀವು ಬರೆದಿದ್ದನ್ನು ನೋಡಿಕೊಂಡು,
ನಾನೂ ಹೂವು ಬೆಳೆದೆ, ನಿಜಕ್ಕೂ ನನ್ನ ಜೀವನದಲ್ಲಿ ಹೂವು ಅರಳಿದೆ ಎಂದರು.

ನಂತರ ಅವರ ಮನೆಗೆ ನನ್ನನ್ನು ಕರೆದೊಯ್ದು ಜೋಳದ ರೊಟ್ಟಿ ಕೊಟ್ಟರು. ಯಾವುದೇ ಊರಿಗೆ ಹೋದರೂ ಅಭಿಮಾನಿ, ಓದುಗರು ಸಿಕ್ಕೇ ಸಿಗುತ್ತಾರೆ. ತುಂಬಾ
ಸಂತೋಷಕೊಟ್ಟ ಸಂಗತಿ ಎಂದರೆ ಇದೇ ಅಲ್ಲವೇ? ಅಕ್ಷರವೇ ನನಗೆ ಆಶ್ರಯ ಕೊಟ್ಟಿದ್ದು, ಇದಕ್ಕಿಂತ ದೊಡ್ಡ ಹೆಚ್ಚುಗಾರಿಕೆ ಯಾವುದೂ ಇಲ್ಲವೆಂದು ಭಾವಿಸಿದ್ದೇನೆ ಎಂದರು ವಿಶ್ವೇಶ್ವರ ಭಟ್‌ರು.

***

‘ವಿಶ್ವವಾಣಿ’ ೭ ವರ್ಷಗಳಿಂದ ಸಿಬ್ಬಂದಿಗೆ ೧೫ ಕೋಟಿ ರು. ಸಂಬಳ ನೀಡಿದ್ದು, ಸುಮಾರು ೫೦ ಕೋಟಿ ರು.ಗಳನ್ನು ಇನ್ನಿತರೆಗಾಗಿ ಖರ್ಚು ಮಾಡಿದೆ. ಇದು ಭಟ್ಟರ ಸಾಮರ್ಥ್ಯ. ಅವರು ಜೀವದ ಬೆದರಿಕೆಯನ್ನೂ ಸವಾಲಾಗಿ ಸ್ವೀಕರಿಸಿ ೩೦ ವರ್ಷಗಳಿಂದ ಈ ನೆಲದ ಸಂಸ್ಕೃತಿ, ಹಿರಿಮೆ- ಗರಿಮೆಗಳನ್ನು ಬರಹ ರೂಪದಲ್ಲಿ ಕಟ್ಟಿಕೊಡುತ್ತ ಬಂದಿದ್ದಾರೆ .
-ನಂಜನಗೂಡು ಮೋಹನ್