Friday, 24th September 2021

ಕೋವಿಡ್ ನಡುವೆಯೇ ನಿಫಾ ದಾಂಧಲೆ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಇತ್ತೀಚೆಗೆ (ಸೆಪ್ಟೆಂಬರ್ 5) ಕೇರಳದ ಕೋಜಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ 12 ವರ್ಷದ ಹುಡುಗ ನಿಫಾ ವೈರಸ್ ಸೋಂಕಿನಿಂದ ಮೃತನಾದ. ಆ ಹುಡುಗನಿಗೆ Encephalitis  (ಮೆದುಳಿನ ಸೋಂಕು ಮತ್ತು ಉರಿಯೂತ) ಹಾಗೂ Myocarditis (ಹೃದಯದ ಉರಿಯೂತ) ಆಗಿತ್ತು. ಆತನ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಿದಾಗ ಅದರಲ್ಲಿ ನಿಫಾ ವೈರಸ್ ಸೋಂಕು ಕಂಡುಬಂದಿದೆ. ಆ ನಂತರ ಕೇಂದ್ರ ಸರಕಾರ ಕೇರಳ ಸರಕಾರಕ್ಕೆ ಸಮುದಾಯ ಆರೋಗ್ಯದ ಬಗ್ಗೆ ಸಹಾಯ ಮಾಡಲು ಒಂದು ತಂಡವನ್ನು ಕಳುಹಿಸಿತು. ಈ ಘಟನೆಯ ನಂತರ ನಿಫಾ ವೈರಸ್ ಸೋಂಕು ಬಹಳ ಸುದ್ದಿಯಲ್ಲಿದೆ.

ಏನಿದು ನಿಫಾ (Nipah) ವೈರಸ್: ಈ ನಿಫಾ ವೈರಸ್ (NiV) zoonotic ವೈರಸ್ ಅಂದರೆ ಪ್ರಾಣಿಗಳಲ್ಲಿ ಕಂಡುಬರುವ ವೈರಸ್. ವಿವಿಧ ಪ್ರಾಣಿಗಳಿಂದ ಮನುಷ್ಯನಿಗೆ ಈ ವೈರಸ್ ಬರುತ್ತದೆ. ಅಲ್ಲದೆ ಕಲುಷಿತ ಆಹಾರ ಗಳಿಂದಲೂ ಬರಬಹುದು. ಆನಂತರ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೂ ಹಬ್ಬಬಹುದು. ಇದು ಆರ್ ಎನ್‌ಎ ವೈರಸ್. ಹೆನಿಫ್ ವೈರಸ್ ಮತ್ತು Paramyxoviridae ಕುಟುಂಬಕ್ಕೆ ಸೇರಿದೆ. ಆಸ್ಟ್ರೇಲಿಯಾದಲ್ಲಿ 1994ರಲ್ಲಿ ಕಂಡುಬಂದಿದ್ದ ಹೆಂಡ್ರಾ ವೈರಸ್ (HeV)ಗೆ ತೀರಾ ಹತ್ತಿರದ ಸಂಬಂಧಿ ವೈರಸ್. ಹೆಂಡ್ರಾ ವೈರಸ್ HeV ಮತ್ತು ನಿಫಾ ವೈರಸ್ Ni – ಈ ಎರಡೂ ಒಂದು ರೀತಿಯ ಬಾವಲಿಯಲ್ಲಿ (Fruit Bat) ಇರುತ್ತವೆ. ಸೋಂಕು ಹೊಂದಿರುವ ಈ ಬಾವಲಿಗಳು ಹಂದಿ, ನಾಯಿ, ಬೆಕ್ಕು, ಆಡು, ಕುದುರೆ, ಕುರಿ- ಹೀಗೆ ಹಲವು ಪ್ರಾಣಿಗಳಿಗೆ ಸೋಂಕು ದಾಟಿಸಬಹುದು.

ಮನುಷ್ಯನು ಈ ಪ್ರಾಣಿಗಳ ಹತ್ತಿರಕ್ಕೆ ಬಂದಾಗ- ಅದರಲ್ಲೂ ಬಾವಲಿ ಮತ್ತು ಹಂದಿಗಳು- ಅವುಗಳ ಬಾಯಿಯ ದ್ರವ – ಜೊಲ್ಲು ಅಥವಾ ಮೂತ್ರಗಳ ಸಂಪರ್ಕಕ್ಕೆ ಬಂದಾಗ- ಆತನಿಗೆ ಸೋಂಕು ಬರುತ್ತದೆ. ಪ್ರಾಣಿಗಳಿಂದ ಮನುಷ್ಯನಿಗೆ ಆರಂಭದಲ್ಲಿ ವರ್ಗಾವಣೆಯಾಗುವ ವೈರಸ್‌ಗೆ Spillover event ಎನ್ನುತ್ತಾರೆ. ಒಂದು ಬಾರಿ ಮನುಷ್ಯನಿಗೆ ಸೋಂಕು ಬಂದ ನಂತರ ನಿಫಾ ವೈರಸ್ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ ಅಥವಾ ವರ್ಗಾವಣೆ ಯಾಗುತ್ತದೆ. ಈ ರೀತಿಯ ನಿಫಾ ವೈರಸ್ ಸೋಂಕು ಬಹಳ ಸಾಮಾನ್ಯವೇ? ಈ ವೈರಸ್‌ನ ವರ್ಗಾವಣೆ ಮನುಷ್ಯನಿಗೆ 1998-99 ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರಗಳಲ್ಲಿ ಆಗಿತ್ತು. ಮಲೇಷಿಯಾ ದಲ್ಲಿ ಈ ವೈರಸ್ ಕಂಡುಬಂದ ಸ್ಥಳದ ಹೆಸರು ನಿಫಾ ಎಂಬ ಹಳ್ಳಿ. ಆ ಹಳ್ಳಿಯ ಹೆಸರನ್ನೇ ಈ ವೈರಸ್‌ಗೆ ಇಡಲಾಗಿದೆ. ಮೊದಲು ಕಂಡುಬಂದ ಹಳ್ಳಿಯಲ್ಲಿನ ವ್ಯಕ್ತಿಯಿಂದ ವೈರಸ್ ತ್ಯೇಕಿಸಲಾಯಿತು. ದುರದೃಷ್ಟವಶಾತ್ ಆ ವ್ಯಕ್ತಿ ಅಸುನೀಗಿದ.

ಆರಂಭದಲ್ಲಿ ಈ ಸೋಂಕು ರೋಗ ಮನುಷ್ಯನ ಸಮೀಪ ಇರುವ ಹಂದಿಗಳಲ್ಲಿ ಕಂಡುಬಂದಿತು. ಸುಮಾರು 300 ಜನರು ಸೋಂಕಿಗೆ ತುತ್ತಾಗಿ ಅದರಲ್ಲಿ
100 ಕ್ಕೂ ಹೆಚ್ಚು ಜನ ಮರಣ ಹೊಂದಿದ್ದರು. ವೈರಸ್ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಸುಮಾರು ಒಂದು ಮಿಲಿಯನ್ (10 ಲಕ್ಷ) ಹಂದಿಗಳನ್ನು ಕೊಲ್ಲಲಾಯಿತು. ಆಶ್ಚರ್ಯಕರವಾಗಿ ಆ ಭಾಗದಲ್ಲಿ ಆನಂತರ ನಿಫಾ ವೈರಸ್‌ನ ಸೋಂಕು ಕಂಡುಬರಲಿಲ್ಲ. ಆದರೆ, ಭಾರತದಲ್ಲಿ ಆಗಾಗ ಮತ್ತು ಬಾಂಗ್ಲಾದೇಶ ದಲ್ಲಿ ಈ ವೈರಸ್‌ನ ಸೋಂಕು 2001, 2003, 2004, 2005, 2007, 2008, 2010 ಮತ್ತು 2011ರಲ್ಲಿ ಕಂಡುಬಂದಿತ್ತು. ಭಾರತದಲ್ಲಿ ಈ ವೈರಸ್ ನ ಸೋಂಕು ಆಶ್ಚರ್ಯಕರವಾಗಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮಾತ್ರ ಕಂಡುಬಂದಿದೆ.

ಭಾರತದಲ್ಲಿ ನಿಫಾ ವೈರಸ್ ಸೋಂಕು ಕಂಡು ಬಂದದ್ದು ಯಾವಾಗ? ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಈ ನಿಫಾ ವೈರಸ್‌ನ ಸೋಂಕು ಜನವರಿ ಫೆಬ್ರವರಿ 2001ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಂಡುಬಂದಿತ್ತು. ಆಗ 66 ಜನರಲ್ಲಿ ಸೋಂಕು ಕಂಡುಬಂದಿದ್ದು, ಸೋಂಕು ಬಂದ 4 ವ್ಯಕ್ತಿಗಳಲ್ಲಿ 3 ವ್ಯಕ್ತಿಗಳು ಅಸುನೀಗಿದರು. 2007ರಲ್ಲಿ ಪುನಃ ಈ ವೈರಸ್‌ನ ಸೋಂಕು ಬಾಂಗ್ಲಾದೇಶದ ಗಡಿಭಾಗದ ನಾಡಿಯಾ ಜಿಲ್ಲೆಯಲ್ಲಿ (ಪಶ್ಚಿಮ ಬಂಗಾಳ) ಕಂಡು ಬಂದು ಸುಮಾರು 50 ವ್ಯಕ್ತಿಗಳಲ್ಲಿ ಸೋಂಕು ದೃಢವಾಯಿತು. ಅದರಲ್ಲಿ 5 ವ್ಯಕ್ತಿಗಳು ಮೃತರಾದರು. ಭಾರತದಲ್ಲಿ ಪುನಃ ದೊಡ್ಡ ಪ್ರಮಾಣದಲ್ಲಿ ಕಂಡುಬಂದದ್ದು 2018ರ ಮೇ, ಜೂನ್ ತಿಂಗಳುಗಳಲ್ಲಿ ಕೇರಳದ ಕೋಜಿಕೋಡ್‌ನಲ್ಲಿ.

18 ವ್ಯಕ್ತಿಗಳಲ್ಲಿ ಸೋಂಕು ಇದ್ದುದು ದೃಢವಾಗಿ 17 ವ್ಯಕ್ತಿಗಳು ಮರಣ ಹೊಂದಿದರು. ನಿಫಾ ವೈರಸ್ ಕಾಯಿಲೆಯ ಲಕ್ಷಣಗಳೇನು? ಅದು ಎಷ್ಟು ಅಪಾಯಕಾರಿ?
ಈ ವೈರಸ್ ಸಾಮಾನ್ಯ ರೀತಿಯ ಸೋಂಕು ಮತ್ತು ತೀವ್ರ ರೀತಿಯ ಸೋಂಕು ಎರಡನ್ನೂ ಉಂಟುಮಾಡಬಲ್ಲದು. ತೀವ್ರ ರೀತಿಯ ಸೋಂಕು ಬಂದಾಗ ಮೆದುಳಿನ ಭಾಗದಲ್ಲಿ ದೊಡ್ಡ ಪ್ರಮಾಣದ ಊತ ಕಂಡುಬಂದು Encephalitis ಗೆ ತಿರುಗಿ ಕೆಲವೊಮ್ಮೆ ಆ ವ್ಯಕ್ತಿಗೆ ಮರಣ ಬರಬಹುದು. ವೈರಸ್ ನ ಸೋಂಕಿಗೆ ಒಳಗಾಗಿ 4 ದಿವಸ ಮತ್ತು 2 ವಾರಗಳ ಮಧ್ಯೆ ಯಾವಾಗ ಬೇಕಾದರೂ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಬಲ್ಲವು.

ಆರಂಭದಲ್ಲಿ ಜ್ವರ, ತಲೆನೋವು ಕಾಣಿಕೊಂಡು 3 ದಿನಗಳಿಂದ ಕೆಲವು ವಾರಗಳವರೆಗೂ ಮುಂದುವರಿಯಬಹುದು. ಅಲ್ಲದೆ ಜತೆಯಲ್ಲಿ ಉಸಿರಾಟಕ್ಕೆ ಸಂಬಂಧ ಪಟ್ಟ ಲಕ್ಷಣಗಳಾದ ಕೆಮ್ಮು, ಶೀತ ಹಾಗೂ ಉಸಿರಾಡಲು ತೊಂದರೆಯಾಗುವುದು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆ ಎನ್ಸೆಫಲೈಟಿಸ್ ಹಂತಕ್ಕೆ ಹೋದರೆ ಆತನಿಗೆ ಒಂದು ರೀತಿಯ ಮಂಪರು, ನಿದ್ರಾವಸ್ಥೆ, ಮಾನಸಿಕವಾಗಿ ಗಲಿಬಿಲಿ, ಎಲ್ಲಿದ್ದೇನೆ ಎಂಬ ಅರಿವು ಗೊತ್ತಾಗದಿರುವುದು- ಈ ರೀತಿಯ ಲಕ್ಷಣಗಳು ಕಾಣಬಹುದು. ಇದೇ ಲಕ್ಷಣಗಳು ಮುಂದುವರಿದರೆ ಮುಂದಿನ ಒಂದೆರಡು ದಿನಗಳಲ್ಲಿ ಕೋಮಾ ಸ್ಥಿತಿಗೆ ರೋಗಿ ಹೋಗುತ್ತಾನೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 40-75% ಜನರು ಈ ಕಾಯಿಲೆಯಿಂದ ಮರಣ ಹೊಂದುತ್ತಾರೆ.

2018ರಲ್ಲಿ ಕೇರಳದ ಕೋಜಿಕೋಡ್ ನಲ್ಲಿ ಕಾಣಿಸಿಕೊಂಡಾಗ 90% ಗಿಂತ ಹೆಚ್ಚಿನ ರೋಗಿಗಳು ಮರಣ ಹೊಂದಿದ್ದರು. 2018ರ ನಿಫಾ ವೈರಸ್ ಸೋಂಕನ್ನು ಕೇರಳ ಹೇಗೆ ನಿಭಾಯಿಸಿತು? ಮರಣದ ಪ್ರಮಾಣ ಜಾಸ್ತಿ ಇರುವ ಈ ರೀತಿಯ ಕಾಯಿಲೆಯನ್ನು ನಿಭಾಯಿಸುವ ಬಗ್ಗೆ ಕೇರಳದ ಆರೋಗ್ಯ ವಿಭಾಗಕ್ಕೆ ಮೊದಲಿನ ಯಾವ ಅನುಭವಗಳೂ ಆಗ ಇದ್ದರಲಿಲ್ಲ. ಆಗ ಅದು ಆಫ್ರಿಕಾದ ಕೆಲವು ದೇಶಗಳಲ್ಲಿ ಕಂಡುಬಂದಿದ್ದ ಎಬೋಲಾ ಕಾಯಿಲೆಯಲ್ಲಿ ತೆಗೆದುಕೊಂಡ ಕ್ರಮಗಳನ್ನು ಅನುಕರಿಸಿದರು. ಹಾಗಾಗಿ ಅಲ್ಲಿನ ಅಧಿಕಾರಿಗಳು ಸೋಂಕು ಕಂಡುಬಂದ ಜನರನ್ನು ಗುರುತಿಸಿ ಅವರುಗಳನ್ನು 21 ದಿನಗಳ ಕಾಲ ಏಕಾಂತ ಸ್ಥಳದಲ್ಲಿ ಇಟ್ಟರು. ಮೊದಲ ಸಂಪರ್ಕದ ವ್ಯಕ್ತಿಗಳ ಮಾಹಿತಿಯ ಆಧಾರದ ಮೇಲೆ ಆತನಿಗೆ ಸಂಪರ್ಕಕ್ಕೆ ಬಂದ ಉಳಿದ ವ್ಯಕ್ತಿಗಳನ್ನು ತೀವ್ರವಾಗಿ ಶೋಧಿಸಿದರು.

ಜೂನ್ 2018ರಲ್ಲಿ ಒಮ್ಮೆ ಕೋಜಿಕೋಡ್, ಮಪುರಂ ಜಿಲ್ಲೆಗಳಲ್ಲಿ 3000 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಕಾರ್ಯಕರ್ತರು ನಿಫಾ ವೈರಸ್‌ನಿಂದ ಮರಣಹೊಂದಿದ ಕುಟುಂಬದ ಸದಸ್ಯರುಗಳನ್ನು ಭೇಟಿ ಮಾಡಿ ಅವರ ಮೃತ ದೇಹವನ್ನು ನಿಭಾಯಿಸಿದ ವ್ಯಕ್ತಿಗಳ ಅಥವಾ ಸಂಬಂಧಿಕರು ಗಳನ್ನು ಗುರುತಿಸಿದರು ಅಥವಾ ಪತ್ತೆ ಹಚ್ಚಿದರು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು.

ನಿಫಾ ಕೋವಿಡ್: ಕರೋನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ. ಹಾಗಾಗಿ ಬಹಳ ದೂರದಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಇದೆ.
ಆದರೆ, ನಿಫಾ ವೈರಸ್ ರೋಗಿಯ ಉಸಿರಾಟದ ಹನಿಗಳು, ದೇಹದ ದ್ರವಗಳ ಮೂಲಕವೇ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕರೋನಾ
ವೈರಸ್‌ನಷ್ಟು ವೇಗವಾಗಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಯ ಜೊತೆಗಿರುವವರಿಗೆ ಹಾಗೂ ಆಸ್ಪತ್ರೆಯಲ್ಲಿ ಈ ರೋಗಿಯ ಹತ್ತಿರ ಇರುವ ಸೋಂಕಿಲ್ಲದ ವ್ಯಕ್ತಿಗೆ
ಸೋಂಕು ಹರಡಬಲ್ಲದು.

ನಿಫಾ ವೈರಸ್ ಸೋಂಕು ಕೋವಿಡ್‌ಗಿಂತ ಹೆಚ್ಚಿನ ಹಾನಿ ತರಬಲ್ಲದು. ಈಗಾಗಲೇ ಮೇಲೆ ತಿಳಿಸಿರುವಂತೆ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ 40 -75% ಜನರು ಮರಣ ಹೊಂದುವ ಸಾಧ್ಯತೆ ಇದೆ. ಸೋಂಕಿನಿಂದ ಮರಣ ಹೊಂದದೇ ಉಳಿದವರಲ್ಲಿ ಹೆಚ್ಚಿನವರು ಮೊದಲಿನ ಸಹಜ ಸ್ಥಿತಿಗೆ ಬರುತ್ತಾರೆ. ಆದರೆ, ಕೆಲವರಲ್ಲಿ ಮಾತ್ರ ನರಗಳಿಗೆ ಸಂಬಂಧಪಟ್ಟ ಕೆಲವು ಲಕ್ಷಣಗಳು ಉಳಿದುಕೊಳ್ಳಬಹುದು. ಕೆಲವೊಮ್ಮೆ ಗುಣವಾದ ರೋಗಿಗಳಲ್ಲಿಯೂ ಕೆಲವರಲ್ಲಿ (ತುಂಬಾ ವಿರಳ) ಪುನಃ ಸೋಂಕು ಕಂಡುಬರಬಹುದು ಎನ್ನಲಾಗಿದೆ.

ನಿಫಾ ವೈರಸ್‌ನ ಚಿಕಿತ್ಸೆ ಹೇಗೆ?
ಈ ವೈರಸ್‌ಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ವೈರಸ್ ವಿರುದ್ಧದ ಔಷಧ ರಿಬಾವರಿನ್ ಎನ್ಸಫಲೈಟಿಸ್ ಬಂದವರಲ್ಲಿ ಮರಣ ಬರುವ ಸಂಭವತೆಯನ್ನು ಕಡಿಮೆ
ಮಾಡುತ್ತದೆ. ಇಮ್ಯುನೋಥೆರಪಿ ಚಿಕಿತ್ಸೆ (Monoclonal antibody therapies) ಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲಿ ಒಂದು ಅಂದರೆ – m102.4 ಮಾನೋಕ್ಲೋನಲ್ ಆಂಟಿಬಾಡಿಯು ಫೇಸ್ 1 ಕ್ಲಿನಿಕಲ್ ಟ್ರಯಲ್ ಪೂರೈಸಿದೆ. ಕೆಲವು ಸಂದರ್ಭಗಳಲ್ಲಿ ಎಮರ್ಜೆನ್ಸಿಯಾಗಿ ಇದನ್ನು ಉಪಯೋಗಿಸಿದಾಗ ಒಳ್ಳೆಯ ಫಲಿತಾಂಶ ಬಂದಿದೆ. ಆಂಟಿವೈರಲ್ ಔಷಧ ರೆಮ್ ಡೆಸಿವಿರ್ ಅನ್ನು – ಮನುಷ್ಯನಿಗೆ ಕಾಯಿಲೆ ತರುವ ಪ್ರಾಣಿಗಳಲ್ಲಿ ಫಲಪ್ರದವಾಗಿ ಉಪಯೋಗಿಸಬಹುದು ಎಂದು ಕಂಡುಬಂದಿದೆ.

ನಿಫಾ ವೈರಸ್ ಕಾಯಿಲೆ ಬರದಂತೆ ಮಾಡುವುದು ಹೇಗೆ?
ಈ ಕಾಯಿಲೆಗೆ ಈಗ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗೆಯೇ ನಿರ್ದಿಷ್ಟ ವ್ಯಾಕ್ಸೀನ್ ಸಹಿತ ಲಭ್ಯವಿಲ್ಲ. ಮಾನವನಿಗೆ ಕಾಯಿಲೆ ತರುವುದು ಮಧ್ಯವರ್ತಿಯಾಗಿರುವ (ಹೆಚ್ಚಿನ ಸಂದರ್ಭಗಳಲ್ಲಿ) ಹಂದಿ. 1998-99ರ ಮಲೇಷಿಯಾ ಅನುಭವದ ಪ್ರಕಾರ ಹಂದಿಗಳ ಫಾರಂಗಳನ್ನು ಆದಷ್ಟು ಸ್ವಚ್ಛವಾಗಿಡಬೇಕು. ಸರಿಯಾಗಿ ಶುದ್ಧೀಕರಿಸಿ, ಒಳ್ಳೆಯ ಸೂಕ್ತ ಡಿಟರ್ಜಂಟ್ ಗಳಿಂದ disinfection ಮಾಡಬೇಕು. ವೈರಸ್ ಕಾಯಿಲೆ ಬರುವ ಸಾಧ್ಯತೆಯ ಬಗ್ಗೆ ಸಂದೇಹ ಬಂದರೆ ಆ ಪ್ರಾಣಿಗಳಿರುವ ಸ್ಥಳವನ್ನೇ ಸಂಪೂರ್ಣವಾಗಿ ಕ್ವಾರಂಟೈನ್ ಮಾಡಬೇಕು. ಕೆಲವೊಮ್ಮೆ ಹತ್ತಿರದ ಪ್ರಾಣಿಗಳಿಗೆ ನಿಫಾ ವೈರಸ್ ಸೋಂಕು ಬರುವ ಸಂದೇಹ ಬಂದರೆ ಇಡೀ ಫಾರಂನ ಪ್ರಾಣಿಗಳನ್ನು ಸಾಮೂಹಿಕವಾಗಿ ಕೊಲ್ಲುವುದು ಅನಿವಾರ್ಯವಾಗುತ್ತದೆ.

ಹಾಗಲ್ಲದೆ ಕೆಲವೊಮ್ಮೆ ಅಲ್ಲಿನ ಪ್ರಾಣಿಗಳನ್ನು ಹೊರ ಹೋಗದಂತೆ ತಡೆಯಬೇಕು. ನಿಫಾ ವೈರಸ್‌ಗೆ ಸದ್ಯಕ್ಕೆ ವ್ಯಾಕ್ಸೀನ್ ಲಭ್ಯವಿಲ್ಲ. ಕೋವಿಶೀಲ್ಡ್ ತರಹದ ವ್ಯಾಕ್ಸೀನ್ ಗ್ರೀನ್ ಆಫ್ರಿಕನ್ ಮಂಗಗಳಲ್ಲಿ ಪರಿಣಾಮಕಾರಿ ಎನಿಸಿದೆ. ಇದರ ಬಗ್ಗೆ ಇನ್ನೂ ವಿವರವಾದ ಸಂಶೋಧನೆ ಆಗಬೇಕಿದೆ. ಇನ್ನೊಂದು ವ್ಯಾಕ್ಸೀನ್ ಕ್ಲಿನಿಕಲ್ ಟ್ರಯಲ್‌ನಲ್ಲಿದೆ. ಈ ವರ್ಷದ ಕೊನೆಯ ಹೊತ್ತಿಗೆ ಅದರ ಫಲಿತಾಂಶ ಗೊತ್ತಾಗಬಹುದು ಎನ್ನಲಾಗಿದೆ.

ಈಗ ಕೇರಳದಲ್ಲಿ ಪರಿಸ್ಥಿತಿ ಹೇಗಿದೆ?
2018ರಲ್ಲಿ ಒಮ್ಮೆಲೇ ದಿಢೀರ್ ಎಂದು ಕಾಣಿಸಿಕೊಂಡ ನಿಫಾ ವೈರಸ್ ಕಾಯಿಲೆಯಿಂದ ಆರೋಗ್ಯ ವಿಭಾಗಕ್ಕೆ ಒಮ್ಮೆಲೇ ಅನಿರೀಕ್ಷಿತ ದಾಳಿಯ ರೀತಿ
ಆಯಿತು. ಆದರೆ, ಈಗ 2021ರಲ್ಲಿ ಪರಿಸ್ಥಿತಿ ತುಂಬಾ ಭಿನ್ನ ರೀತಿಯಲ್ಲಿದೆ. ಈಗ ಪ್ರಸ್ತುತ ಇರುವ ಕೋವಿಡ್ ಕಾಯಿಲೆಯಲ್ಲಿ ತೆಗೆದುಕೊಂಡ ಕ್ರಮಗಳು ಹಾಗೂ
ನಿಫಾ ಕಾಯಿಲೆಯ 2018ರ ಅನುಭವ- ಈ ಎಲ್ಲವುಗಳಿಂದ ಸರಕಾರದ ಹಲವು ವಿಭಾಗಗಳಿಗೆ ಪರಿಸ್ಥಿತಿ ನಿಭಾಯಿಸುವುದು ಸುಲಭವಾಗಿದೆ. ಈಗ ನಿಫಾ ವೈರಸ್ ಸೋಂಕನ್ನು ಆರಂಭದ ಹಂತದಲ್ಲಿಯೇ ನಿಖರವಾಗಿ ಪತ್ತೆ ಹಚ್ಚಲು ಸುಲಭವಾಗಿದೆ.

2018ರಲ್ಲಿ PPE Kit, ಐಸೋಲೇಷನ್, ಕಾಂಟ್ಯಾಕ್ಟ್ ಟ್ರೇಸಿಂಗ್, ಕ್ವಾರಂಟೈನ್- ಈ ಎಲ್ಲ ಶಬ್ದಗಳೂ ಆಗ ಹೊಸದಾಗಿದ್ದವು. ಆಗ ಆಸ್ಪತ್ರೆಗಳಲ್ಲಿ ಸೋಂಕು ತಡೆಯುವ ವ್ಯವಸ್ಥೆಗಳೂ ಸರಿ ಇರಲಿಲ್ಲ. ಈಗ ಪ್ರಸ್ತುತ ಕೋವಿಡ್ ಕಾಯಿಲೆ ಇನ್ನೂ ಇರುವುದರಿಂದ ಈಗ ಆರೋಗ್ಯ ಕಾರ್ಯಕರ್ತರು PPE  ಕಿಟ್ಸ್‌ಗಳು, ಕೈಗೆ ಗ್ಲೌಸ್‌ಗಳು, ಮುಖಕ್ಕೆ ಮಾಗಳು – ಇವುಗಳ ಸಹಾಯದಿಂದ ಯಾವುದೇ ರೀತಿಯ ಜ್ವರ ಬಂದಾಗಲೂ ಅದನ್ನು ನಿಭಾಯಿಸಲು ಸನ್ನದ್ಧರಾಗಿದ್ದಾರೆ. ಈ ಎಲ್ಲಾ ಕ್ರಮಗಳಿಂದ ನಿಫಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂದು ಭಾವಿಸಬಹುದು.

Leave a Reply

Your email address will not be published. Required fields are marked *