Thursday, 11th August 2022

ನಂದಿ ಬೆಟ್ಟಕ್ಕೆ ವಾರಾಂತ್ಯ ಪ್ರವೇಶ ನಿಷೇಧ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ

ಚಿಕ್ಕಬಳ್ಳಾಪುರ: ಡಿಸೆಂಬರ್- ಜನವರಿ ಚುಮುಚುಮು ಚಳಿಯಲ್ಲಿ ನಂದಿ ಬೆಟ್ಟ ಹತ್ತಿ ಅಲ್ಲಿನ ಸೂರ್ಯೋದಯದ ಸೊಬಗನ್ನು ಸವಿಯುವುದೇ ಕಣ್ಣಿಗೆ ಹಬ್ಬ ದಂತಿರುತ್ತದೆ. ಪ್ರವಾಸಿಗರು, ಚಾರಣಿಗರು ಇಂತಹ ಅವಕಾಶಕ್ಕಾಗಿ ಕಾದಿರುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ವಾರಾಂತ್ಯ ಪ್ರವಾಸಿಗರ ಆಸೆಗೆ ತಣ್ಣೀರೆರಚಿದೆ.

ನಂದಿ ಬೆಟ್ಟಕ್ಕೆ ಹೋಗಿ ಬರಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಾಕರಿಸಿದ್ದು, ವಾರಾಂತ್ಯ ದಿನ ಗಳಾದ ಶನಿವಾರ ಹಾಗೂ ಭಾನುವಾರಗಳಂದೇ ಪ್ರವೇಶ ನಿರಾಕರಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಸುಕಿನ ಜಾವ ನಂದಿ ಗಿರಿಧಾಮ ನೋಡಲು ಆಗಮಿಸಿರುವ ಪ್ರವಾಸಿಗರಿಗೆ ಪ್ರವೇಶವಿಲ್ಲದೆ ನಿರಾಶರಾದರು. ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ತೆರವುಗೊಳಿಸದ ಹಿನ್ನೆಲೆ ನಂದಿ ಗಿರಿಧಾಮದ ಬಳಿ ಪ್ರವಾಸಿಗರು ಪರದಾಡುವಂತಾಗಿದೆ. ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಕಳೆದ 6 ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣಕ್ಕೆ ನಿರ್ಬಂಧ ಹೇರಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಪ್ರವಾಸಿಗರು ಆಕ್ರೋಶಗೊಂಡಿದ್ದರೆ, ಇತ್ತ ಗಿರಿಧಾಮದಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದು ಸಬೂಬು ಹೇಳುತ್ತಿದೆ. ಅಲ್ಲದೆ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ವಾರಾಂತ್ಯ ಕರ್ಫ್ಯೂ ಇರಲಿದೆ ಎಂದು ತಿಳಿಸಿದೆ. ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ವಾರಾಂತ್ಯ ದಿನಗಳಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.