Tuesday, 27th September 2022

ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ವೈವಾಹಿಕ ಹಕ್ಕು ಇಲ್ಲ: ಮದ್ರಾಸ್‌ ಹೈಕೋರ್ಟ್

ಚೆನ್ನೈ: ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕು(ಲಿವಿಂಗ್ ಟುಗೆದರ್‌) ಸಾಗಿಸುವವರಿಗೆ ಯಾವುದೇ ವೈವಾಹಿಕ ಹಕ್ಕು ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪು ನೀಡಿದೆ.

ಕೊಯಮತ್ತೂರಿನ ಆರ್ ಕಲೈಸೆಲ್ವಿ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಗೊಳಿಸಿ ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಆರ್ ವಿಜಯಕುಮಾರ್‌ರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರು ನ್ಯಾಯಾಲಯದ ಮುಂದೆ ಯಾವುದೇ ವೈವಾಹಿಕ ವಿವಾದದ ಬಗ್ಗೆ ಅರ್ಜಿ ಸಲ್ಲಿಸಲು ಆಗದು ಎಂದು ಹೇಳಿದೆ.

ಕೊಯಮತ್ತೂರಿನ ಆರ್ ಕಲೈಸೆಲ್ವಿ ಎಂಬವರು ವೈವಾಹಿಕ ಹಕ್ಕುಗಳ ಮರುಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು 2019 ರ ಫೆಬ್ರವರಿ 14 ರಂದು ತಿರಸ್ಕಾರ ಮಾಡಿತ್ತು. ಈ ನಿಟ್ಟಿನಲ್ಲಿ ಆರ್ ಕಲೈಸೆಲ್ವಿ ಮದ್ರಾಸ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

“ನಾನು 2013 ರಿಂದ ಜೋಸೆಫ್‌ ಬೇಬಿ ಜೊತೆಯಲ್ಲಿ ವಾಸವಾಗಿದ್ದೇನೆ. ಆದರೆ ಆತ ನನ್ನನ್ನು ಹೊರಗೆ ಹಾಕಿದ್ದಾನೆ,” ಎಂದು ಆರ್ ಕಲೈಸೆಲ್ವಿ ಆರೋಪ ಮಾಡಿ, ಕೋರ್ಟ್ ಮೆಟ್ಟಿಲೇರಿದ್ದಾರೆ.

“ದೀರ್ಘ ಸಮಯದಿಂದ ಜೊತೆಯಾಗಿ ವಾಸಿಸುತ್ತಿದ್ದರೂ, ಲಿವಿಂಗ್ ಟುಗೆದರ್‌ನಲ್ಲಿ ಇದ್ದರೂ ಯಾವುದೇ ಒಂದು ಆಚರಣೆಯಂತೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸದೆ ಇದ್ದಾಗ, ಆ ವ್ಯಕ್ತಿಯು ತನ್ನ ವೈವಾಹಿಕ ಹಕ್ಕುಗಳ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಲು ಆಗದು. ಕಾನೂನಿನ ಪ್ರಕಾರ ವಿವಾಹವಾಗಿದ್ದರೆ ಮಾತ್ರ ವೈವಾಹಿಕ ಹಕ್ಕುಗಳು ದೊರೆಯುತ್ತದೆ,” ಎಂದು ಹೇಳಿದೆ.

ದೇಶದ ಸುಪ್ರೀಂ ಕೋರ್ಟ್ ಲಿವಿಂಗ್‌ ಟುಗೆದರ್‌ ಅಥವಾ ಲಿವಿಂಗ್‌ ಇನ್ ಸಂಬಂಧವು ಒಪ್ಪುವಂತದ್ದು ಎಂದು ಈಗಾಗಲೇ ಹೇಳಿದೆ. ಹಾಗೆಯೇ ಪತಿ ಪತ್ನಿಯಂತೆ ಜೋಡಿಯೊಂದು ದೀರ್ಘಕಾಲ ವಾಸ ಮಾಡುತ್ತಿದ್ದರೆ ಅವರನ್ನು ಕಾನೂನು ಬದ್ಧವಾಗಿ ದಂಪತಿ ಎಂದೇ ಭಾವಿಸಲಾಗುತ್ತದೆ” ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.