Sunday, 24th January 2021

ಕೇಂದ್ರದ ನಾಯಕರ ಮುಂದೆ ಆರೋಪ ಮಾಡಲು ಅಡ್ಡಿ ಮಾಡಿಲ್ಲ: ಯಡಿಯೂರಪ್ಪ

ದಾವಣಗೆರೆ/ ಬೆಂಗಳೂರು: ಸಚಿವ ಸ್ಥಾನ ದೊರೆಯದಿರುವ ಜನರು ಇಲ್ಲಿ ಹೇಳಿಕೆ ನೀಡುವ ಬದಲಿಗೆ ಕೇಂದ್ರದ ನಾಯಕರ ಮುಂದೆ ಹೇಳಿಕೆ ನೀಡಲಿ, ಆರೋಪ ಮಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರ ಸಿಡಿ ಆರೋಪ ಕುರಿತಂತೆ ಕೇಳಲಾದ ಪ್ರಶ್ನೆಗೆ, ಯಾರು ಏನೇ ಮಾತನಾಡಿದರೂ, ಕೇಂದ್ರದ ನಾಯಕರಲ್ಲಿ ದೂರು ಕೊಡಲಿ ಎಂದರು.

ಕೇಂದ್ರದ ನಾಯಕರ ಅಪೇಕ್ಷೆಯಂತೆ ನನ್ನ ಇತಿ-ಮಿತಿಯೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಯಶಸ್ವಿಯಾಗಿ ಮಂತ್ರಿ ಮಂಡಲದ ವಿಸ್ತರಣೆ ಮಾಡಲಾಗಿದೆ. ಕೇಂದ್ರ ನಾಯಕರ ಆಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರದ ನಾಯಕರ ಮುಂದೆ ಆರೋಪ ಮಾಡಲು, ದೂರು ನೀಡಲು ಯಾರು ಅಡ್ಡಿ ಮಾಡಿಲ್ಲ. ಇಲ್ಲಿ ಹೇಳಿಕೆ ಕೊಡುವ ಮೂಲಕ ಗೊಂದಲದ ವಾತಾವರಣ ಉಂಟು ಮಾಡಿ ವಾತಾವರಣ ಕೆಡಿಸುವುದು, ಪಕ್ಷದ ಶಿಸ್ತಿಗೆ ಧಕ್ಕೆ ತರುವುದು ಬೇಡ ಎಂದರು.

ಇನ್ನೂ ಎರಡೂಕಾಲ ವರ್ಷ ಆಡಳಿತ ಆವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು. ಕೇಂದ್ರದ ನಾಯಕರ ಆಶೀರ್ವಾದ ಇರುವುದರಿಂದ ಯಾರೂ ಸಹ ಏನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಉತ್ತಮ ಆಡಳಿತ ಮಾಡುತ್ತೇವೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *