ಶಿರಸಿ: ಪಕ್ಷದ ಅಡಿಯಲ್ಲಿ ಬರುವವರು ಹೇಳಿಕೆ ನೀಡುವಾಗ ಬಹಿರಂಗವಾಗಿ ಮಾತನಾಡದೇ ಪಕ್ಷದಲ್ಲಿ ಚರ್ಚಿಸುವುದು ಉತ್ತಮ. ನಮ್ಮ ಮಾತುಗಳು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಮಾಜಿ ಸಚಿವ ವಿಶ್ವನಾಥ್ ಹಾಗೂ ಸಿಪಿ ಯೋಗೇಶ್ವರ ಅವರ ಬಹಿರಂಗ ಹೇಳಿಕೆ ಕುರಿತು ಶಿರಸಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರ ವಿಚಾರ ಹೇಳಲು ಅವಕಾಶವಿದೆ. ಆದರೆ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಹಿತದೃಷ್ಟಿಯಿಂದ ವಿಚಾರ ಮಾಡಬೇಕು ಎಂದರು. ಯಾವುದೇ ವಿಷಯಕ್ಕೆ ಬೇಸರವಿದ್ದಲ್ಲಿ ರಾಜ್ಯಾಧ್ಯಕ್ಷರ ಬಳಿ ಹೋಗಲಿ. ಮುಖ್ಯಮಂತ್ರಿಗಳಿಗೆ ತಿಳಿಸಲಿ. ಅವರು ವಿಶ್ವನಾಥ ಇರಲಿ ಅಥವಾ ಮತ್ತೊಬ್ಬರು ಇರಲಿ. ಬಹಿರಂಗ ಚರ್ಚೆಗೆ ಅಂತಿಮ ಇರುವುದಿಲ್ಲ.
ಆದ ಕಾರಣ ಸಂಯಮ ಕಾಯ್ದುಕೊಂಡು ಹೋಗಬೇಕು ಅಂದರು. ಗ್ರಾಮ ಪಂಚಾಯತ ಚುನಾವಣೆಯ ಹಿನ್ನೆಲೆಯಲ್ಲಿ 5-6 ತಂಡಗಳನ್ನು ರಚನೆ ಮಾಡಿಕೊಂಡು 4 ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ಬಿಜೆಪಿ ಗ್ರಾಮ ಪಂಚಾಯತ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಂಡಿದ್ದು, ಶಾಸಕರ, ಸಂಸದರ ಚುನಾವಣೆಗೆ ನೀಡಿ ದಷ್ಟೇ ಮಹತ್ವ ನೀಡುತ್ತಿದೆ ಎಂದರು.
ಶಾಸಕ, ಸಂಸದರ ಚುನಾವಣೆ ನಾಯಕರ ಚುನಾವಣೆಯಾಗಿದ್ದು, ಗ್ರಾಮ ಪಂಚಾಯತ ಕಾರ್ಯಕರ್ತರ ಚುನಾವಣೆಯಾಗಿದೆ. ಆ ಕಾರಣಕ್ಕೆ ಸಮವೇಶ ನಡೆಸಿ ಕಾರ್ಯಕರ್ತರಿಗೆ ಸ್ಪೂರ್ತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಅಲ್ಲದೇ ಈ ಬಾರಿ ಅತಿ ದೊಡ್ಡ ಪ್ರಮಾಣದಲ್ಲಿ ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಆಯ್ಕೆ ಆಗಲಿದ್ದಾರೆ ಎಂದರು