Wednesday, 5th October 2022

ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ: ಹೈಕೋರ್ಟ್ ಮೌಖಿಕ ಆದೇಶ

Karnataka High Court

ಉಡುಪಿ; ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಬ್ರೇಕ್ ನೀಡಿದೆ.

ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಮೌಖಿಕ ಆದೇಶ ನೀಡಿ, ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.

ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರದಿಂದ ಫ್ರೌಢ ಶಾಲೆಗಳು ಕಾರ್ಯಾರಂಭ ಮಾಡಲು ಸೂಚನೆ ನೀಡಿದೆ. ಹಂತ ಹಂತವಾಗಿ ಕಾಲೇಜುಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶಕ್ಕೆ ಸರ್ವರೂ ಸಮ್ಮತಿ ಸೂಚಿಸಿದರೆ ಸಿಎಫ್‌ಐ ಮಾತ್ರ ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ ಎಂದು ಹೇಳಿದೆ.

ಉಡುಪಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲ ಕಟ್ಟೆ, ಹೈಕೋರ್ಟ್‌ನ ಮಧ್ಯಂತರ ಆದೇಶ ನಮಗೆ ತೃಪ್ತಿ ತಂದಿಲ್ಲ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ” ಎಂದು ಹೇಳಿದ್ದಾರೆ.

ಆದರೆ ರಾಜ್ಯ ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಸೋಮವಾರದ ನಂತರದ ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಪರವಾದ ತೀರ್ಪು ಬರಬಹುದು. ನಮ್ಮ ವಿರುದ್ಧ ತೀರ್ಪು ಬಂದರೆ ಹೋರಾಟ ಮುಂದುವರಿಸುತ್ತೇವೆ ಎಂದರು.

“ಇನ್ನು ಸರ್ಕಾರ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತದೆ ಅಂತಾ ಆದೇಶ ನೀಡಿದೆ. ಸೋಮವಾರದಿಂದ ಶಾಲಾ-ಕಾಲೇಜಿಗಳಿಗೆ ತೆರಳುವ ನಿರ್ಧಾರ ವನ್ನು ವಿದ್ಯಾರ್ಥಿನಿಯರ ಇಚ್ಛೆಗೆ ಬಿಡುತ್ತೇವೆ. ನಾವು ಯಾವುದೇ ಸಲಹೆಗಳನ್ನು ಯಾರಿಗೂ ನೀಡುವುದಿಲ್ಲ. ಪೋಷಕರ ಮತ್ತು ವಿದ್ಯಾರ್ಥಿನಿಯರು ತಮ್ಮ ಅಭಿ ಪ್ರಾಯದಂತೆ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬಹುದು” ಎಂದು ಸ್ಪಷ್ಟಪಡಿಸಿದರು.

ಹಿಂದೂ ಜಾಗರಣ ವೇದಿಕೆ ಪ್ರತಿಕ್ರಿಯೆ ನೀಡಿದೆ. ಉಡುಪಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ನ್ಯಾಯಾಲಯದ ಮಧ್ಯಂತರ ಆದೇಶ ಸ್ವಾಗತಿಸುತ್ತೇನೆ. ಕೇಸರಿ ಸಮವಸ್ತ್ರದ ಭಾಗ ಅಲ್ಲ. ಪ್ರತಿಭಟನೆ ರೂಪದಲ್ಲಿ ಕೇಸರಿ ಶಾಲು ಹಾಕಲಾಗಿತ್ತು. ರಾಜ್ಯದ ಕಾಲೇಜುಗಳಲ್ಲಿ ಸಮಾನ ವಸ್ತ್ರ ಸಂಹಿತೆ ಬರಬೇಕು. ಕೇಸರಿ ಹಾಗೂ ಹಿಜಾಬ್‌ಗೆ ಅವಕಾಶ ನೀಡಬಾರದು. ಹೈಕೋರ್ಟ್ ಏನೇ ಆದೇಶ ನೀಡಿದರೂ ಸ್ವಾಗತಿಸುತ್ತೇವೆ ಎಂದರು.

“ಹಿಜಾಬ್ ಪ್ರತಿಭಟನಾಧಾರಿ ವಿದ್ಯಾರ್ಥಿನಿಯರನ್ನು ದೇಶವಿರೋಧಿ ಚಟುವಟಿಕೆಗೆ ಬ್ರೈನ್ ವಾಶ್ ಮಾಡಲಾಗಿದೆ. ಮುಸ್ಲಿಂ ಯುವಕರ ನಿಷ್ಠೆ ಭಾರತಕ್ಕೆ ಅಲ್ಲ, ಸೈನಿಕರು ಹುತಾತ್ಮರಾದಾಗ ಸಂಭ್ರಮಿಸಿದ್ದಾರೆ” ಎಂದು ಪ್ರಕಾಶ್ ಕುಕ್ಕೆಹಳ್ಳಿ ದೂರಿದರು.