Friday, 24th March 2023

ವಿಜಯನಗರ ಜಿಲ್ಲೆ ರಚನೆಗೆ ಬೆಂಬಲ ಇಲ್ಲ: ಶಾಸಕ ಸೋಮಶೇಖರ್​​ ರೆಡ್ಡಿ

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ನಾನು ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್​​​ ರೆಡ್ಡಿ ಹೇಳಿದರು.

ನೂತನ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡಿದ ಕುರಿತು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿರುವುದು ಸರಿಯಲ್ಲ. ಇದಕ್ಕೆ ನನ್ನ ಪ್ರಬಲ‌ ವಿರೋಧವಿದೆ ಎಂದರು.

ನೂತನ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಲು ಮುಂದಾಗಬಾರದಿತ್ತು. ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ಜಿಲ್ಲೆಯ ಜನರು ಹೋರಾಡಿದರೆ ಅವರೊಂದಿಗೆ ನಾನೂ ಕೂಡ ನಿಲ್ಲುವೆ ಎಂದು ಎಚ್ಚರಿಸಿದರು.
ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಜಿಲ್ಲಾ ಬಿಜೆಪಿ ಎರಡು ಹೋಳಾಗುತ್ತದೆ. ಮುಂದೆ ಜನರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ. ವಿಜಯನಗರ ‌ಜಿಲ್ಲೆ ಬೇಡ ಬೇಡ ಎಂದು ಎಷ್ಟು ಬಾರಿ ಸಿಎಂ ಬಿಎಸ್​ವೈ ಅವರಿಗೆ ಹೇಳಬೇಕು? ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗದೊಂದಿಗೂ ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಚನೆಯಾಗಲೇಬೇಕು ಎಂದು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡರೆ ಮತ್ತು ಮೊಂಡುತನಕ್ಕೆ ಬಿದ್ದರೆ ನಾವೇನು ಮಾಡಬೇಕು? ನಾನಂತೂ ಇನ್ನೊಂದು ಬಾರಿ ಸಿಎಂಗೆ ಹೇಳಲ್ಲ. ಯಾರಾದರೂ ಈ ಬಗ್ಗೆ ಹೋರಾಟ ಮಾಡಿದರೆ ನಾನು ಬೆಂಬಲ ಕೊಡುತ್ತೇನೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ‌ಮಾಡಿದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಹೋರಾಟ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ಅವರ ಪರವಾಗಿ ನಾನು ಸಹ ಹೋಗುವೆ ಎಂದು ಹೇಳಿದರು.

error: Content is protected !!