Sunday, 17th October 2021

ಪ್ರಶಸ್ತಿಗಳು ಮತ್ತು ಪ್ರಮಾದಗಳು

1973 ರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ ಅಮೆರಿಕದ ಖ್ಯಾತ ವಿಡಂಬನಕಾರ ಟಾಮ್ ಲೆಹರರ್ ಇಂದಿನಿಂದ ರಾಜಕೀಯ ವಿಡಂಬನೆ ಎಂಬುದು ಸತ್ತುಹೋಯಿತು ಎಂದು ವಿಶ್ಲೇಷಿಸಿದರು.

ಇಂದಿನಿಂದ ವಿಡಂಬನೆಯ ಕ್ಷೇತ್ರದಿಂದ ನಾನು ಸನ್ಯಾಸ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದರೆಂದೂ ವರದಿಯಾಯಿತು. ಹೆನ್ರಿ ಕಿಸ್ಸಿಂಜರ್ ಅನೇಕ ಬಡಪಾಯಿ ದೇಶಗಳಲ್ಲಿ ಮಿಲಿಟರಿ ಕ್ರಾಂತಿಗಳ, ದಂಗೆಗಳ, ರಕ್ತಪಾತಗಳ ಹಿಂದಿನ ರೂವಾರಿಯಾಗಿದ್ದವರು. 1971ರ ಭಾರತ-ಪಾಕ್ ಯುದ್ಧದ ಸಮಯ ದಲ್ಲಿಯೂ ಅವರು ಪಾಕಿಸ್ತಾನದ ಪರವಾಗಿ ನಿಂತು ಅವರು ಪೂರ್ವ ಪಾಕಿಸ್ತಾನದಲ್ಲಿ ನಡೆಸುತ್ತಿದ್ದ ಬೆಂಗಾಲಿಗಳ ನರಮೇಧವನ್ನು ಬೆಂಬಲಿಸಿದ್ದರು. ಅಂಥ ವ್ಯಕ್ತಿಗೆ ‘ನೊಬೆಲ್ ಸಮಿತಿ ಶಾಂತಿ’ ಪ್ರಶಸ್ತಿಯ ವಿಜಯಮಾಲೆ ತೊಡಿಸಿದಾಗ ಸಹಜವಾಗಿ ಅದು ಎಲ್ಲ ಸಭ್ಯ ಮನಸುಗಳನ್ನು ಕೆರಳಿಸಿತ್ತು.

ಇಂಥ ಆಭಾಸಗಳು ಸಾಹಿತ್ಯ ಪ್ರಶಸ್ತಿಯ ಕ್ಷೇತ್ರದಲ್ಲೂ ವರದಿಯಾಗುತ್ತಿರುತ್ತವೆ. ಎಸ್‌ಎಲ್ ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್’ ಪ್ರಶಸ್ತಿಯ ಗೌರವ ದೊರಕಿದಾಗ ಇಡೀ ನಾಡು ಸಂಭ್ರಮಿಸಿತ್ತು. ಕೆಲ ವರ್ಷಗಳ ತರುವಾಯ ಅದೇ ಪ್ರಶಸ್ತಿ ವೀರಪ್ಪ ಮೊಯಿಲಿಯವರಿಗೆ ದೊರಕಿದಾಗ ಅದೇ ಜನ ಬೆಚ್ಚಿಬಿದ್ದಿದ್ದರು. ಸಾಹಿತ್ಯವಲಯದಲ್ಲಷ್ಟೇ ಅಲ್ಲ, ಜನಸಾಮಾನ್ಯ ಓದುಗರ ದೃಷ್ಟಿಯಲ್ಲಿಯೂ ಒಬ್ಬ ಉತ್ತಮ ಸಾಹಿತಿಯಾಗಿ ಗುರುತಿಸಿಕೊಳ್ಳದೆ ಇದ್ದ ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ಸಿಕ್ಕಿದ್ದು ಹೇಗೆ ಎಂಬುದು ಎಲ್ಲರಿಗೂ ಜೀರ್ಣವಾಗದ ಪ್ರಶ್ನೆಯಾಗಿಯೇ ಉಳಿದಿತ್ತು.

ಜ್ಞಾನಪೀಠ ಪ್ರಶಸ್ತಿಗೆ ಸಮಾನಾಂತರವಾಗಿ ಗುರುತಿಸಲ್ಪಡುವ ಅವಕಾಶದಿಂದ ವಂಚಿತವಾಯಿತು ಸಾಹಿತ್ಯ ವಲಯ ಆ ಪ್ರಶಸ್ತಿಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಮಾಡಿಕೊಂಡಿತು. ಈಗ ಇಂಥ ಎಡವಟ್ಟನ್ನು ಸ್ವತಃ ಜ್ಞಾನಪೀಠ ಪ್ರಶಸ್ತಿ ಮಾಡಿಕೊಳ್ಳಲು ಹೊರಟಿದೆ ಎಂಬ ಅನುಮಾನ ಕಾಡತೊಡಗಿದೆ. ಪತ್ರಿಕೆಗಳ ವರದಿಗಳ ಪ್ರಕಾರ ಜ್ಞಾನಪೀಠ ಪ್ರಶಸ್ತಿಗೆ ಸಲ್ಲಿಕೆಯಾದ ಮೂವರು ಕನ್ನಡ ಸಾಹಿತಿಗಳ ಹೆಸರಿನಲ್ಲಿ ಭೈರಪ್ಪ, ಚೆನ್ನವೀರ ಕಣವಿಯವರ ಜತೆಗೆ ಮೊಯ್ಲಿ ಯವರ ಹೆಸರಿದೆ. ಈ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳನ್ನು ಪ್ರಶ್ನಿಸುವಂತೆ ಮಾಡಿಬಿಟ್ಟಿದೆ. ಅದರಲ್ಲೂ ವರದಿಯ ಪ್ರಕಾರ ಪ್ರಶಸ್ತಿ ನಿರ್ಧರಿಸುವ ಸಮಿತಿಯ ಅಧ್ಯಕ್ಷರಿಗೆ ಆತ್ಮೀಯರಾಗಿರುವ ಕಾರಣ ಮೊಯ್ಲಿ ಅವರಿಗೆ ಈ ಪ್ರಶಸ್ತಿ ದಕ್ಕುವ ಸಾಧ್ಯತೆ ಬಹಳ ಎಂದು ಹೇಳಿರುವುದು ಸಾಹಿತ್ಯಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ಈಡು ಮಾಡಿದೆ. ಎಡಚರನ್ನು ವಿರೋಧಿಸುವ, ಭಾರತೀಯ ಕಲೆ, ಇತಿಹಾಸ, ಸಂಪ್ರದಾಯಗಳ ಶ್ರೇಷ್ಠತೆಯ ಪ್ರತಿಪಾದಕರ ನೆರಳೂ ಹತ್ತಿರ ಸುಳಿ ಯದಂತೆ ಭಾರತೀಯ ಜ್ಞಾನಪೀಠ ಎಚ್ಚರ ವಹಿಸಿದೆ. ಈ ತನಕ ಕೇಂದ್ರದಲ್ಲಿ ಅಽಕಾರದಲ್ಲಿದ್ದ ಸರಕಾರದ ನಿಲುವುಗಳು ಮತ್ತು ಪ್ರಶಸ್ತಿಯ ಆಯ್ಕೆಯ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ತೊಡಗಿಕೊಳ್ಳುವ ತಜ್ಞರ ಸ್ಥಾಪಿತ ಪೂರ್ವಾಗ್ರಹಗಳೂ ಇದಕ್ಕೆ ಕಾರಣವಾಗಿರಬಹುದು.

ಆದರೆ ಹಾಳೂರಿಗೆ ಉಳಿದವನೇ ಗೌಡ’ ಎಂಬಂತೆ ಯಾವ ಸರಕಾರೇತರ ಸಂಸ್ಥೆಯೂ ಸಾಹಿತ್ಯ ಕೃತಿಗಳಿಗೆ ಇಷ್ಟು ದೊಡ್ಡ ಮೊತ್ತದ ಪ್ರಶಸ್ತಿ ನೀಡಲು ಮುಂದೆ ಬಾರದಾಗ ಇಲ್ಲಿ ತೊಡಗಿಕೊಂಡಿದ್ದು ಜ್ಞಾನಪೀಠ ಪ್ರಶಸ್ತಿ. ಎಲ್ಲಕ್ಕಿಂತ ಹಳೆಯದು ಎಂಬ ಅಗ್ಗಳಿಕೆ ಅದಕ್ಕೆ ಇದ್ದೇ ಇದೆ. ಹೀಗಾಗಿ ಎಲ್ಲ ಭಿನ್ನಾಭಿಪ್ರಾಯದ
ಹೊರತಾಗಿಯೂ eನಪೀಠ ಪ್ರಶಸ್ತಿಗೆ ತನ್ನದೇ ಆದ ಪ್ರಭಾವಳಿ ಇದೆ. ಮೊಯ್ಲಿಯಂಥವರ ಆಯ್ಕೆ ಅದನ್ನೂ ಕಳಚಿ ಹಾಕುವ ಅಪಾಯವಿದೆ. ಒಂದು ಬಹುಮುಖ್ಯ ಮಾತು ಈ ಟೀಕೆ ಮೊಯ್ಲಿಯವರ ಸಾಹಿತ್ಯಕ್ಷೇತ್ರದ ಸಾಧನೆಯ ಬಗೆಗೆ ವಿನಃ ಅವರ ವ್ಯಕ್ತಿತ್ವದ ಕುರಿತಾಗಲೀ, ಅವರ ರಾಜಕೀಯ ಜೀವನದ ಕುರಿತಾಗಲಿ ಅಲ್ಲ. ಅವರು ವ್ಯಕ್ತಿಯಾಗಿಯೂ, ರಾಜಕಾರಣಿಯಾಗಿಯೂ, ಅತ್ಯಂತ ಸಭ್ಯರೆಂದು, ಬುದ್ಧಿವಂತರೆಂದು ಗುರುತಿಸಿಕೊಂಡಿರುವವರು.

ನಾಡಿನ ಮುಖ್ಯಮಂತ್ರಿಯಾಗಿಯೂ ಅವರ ಸಾಧನೆಗಳು ಅನೇಕ ಇರಬಹುದು. ಇದು ಅವುಗಳ ವಿಮರ್ಶೆಯಲ್ಲ, ಕೇವಲ ಸಾಹಿತಿಯಾಗಿ ಅವರ ಸಾಹಿತ್ಯದ ಶ್ರೇಷ್ಠತೆಯ ಕುರಿತಾದ ವಿಶ್ಲೇಷಣೆ. ಪ್ರಶಸ್ತಿ ಗಳು ಕೇವಲ ಸಾಹಿತ್ಯದ ಸತ್ವಕ್ಕೆ ದಕ್ಕಲಿ, ಪ್ರಭಾವ, ಪ್ರಚಾರ, ಪಂಥಗಳಿಗೆ ಬೇಡ ಎನ್ನುವ ಕಳಕಳಿಯಷ್ಟೇ.

Leave a Reply

Your email address will not be published. Required fields are marked *