Monday, 3rd October 2022

ರಾಷ್ಟ್ರೀಯ ಸೇವಾ ಯೋಜನೆಯ ದಿನದ ಮಹತ್ವ

ತನ್ನಿಮಿತ್ತ

ಡಾ.ಮುರಲೀ ಮೋಹನ್‌ ಚೂಂತಾರು

‘ಕೇವಲ ಮಣ್ಣು ಹೊರುವುದಕ್ಕೆ ಸೀಮಿತ’ ಎಂಬ ಹಣೆಪಟ್ಟಿ ಕಳಚಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ಎನ್‌ಎಸ್‌ಎಸ್ ಮುಖ್ಯಪಾತ್ರ ವಹಿಸುತ್ತಿದೆ. ಹೀಗಾಗಿ ಬಲ್ಲವರು, ‘ಎನ್‌ಎಸ್‌ಎಸ್ ಸ್ವಯಂಸೇವಕರು ರಸ್ತೆ ನಿರ್ಮಿಸಿದರೆ, ರಸ್ತೆಯು ವಿದ್ಯಾರ್ಥಿಯ ಜೀವನವನ್ನು ರೂಪಿಸುತ್ತದೆ’ ಎನ್ನುತ್ತಾರೆ.

ರಾಷ್ಟ್ರಾದ್ಯಂತ ಸೆಪ್ಟೆಂಬರ್ 24ನ್ನು ‘ರಾಷ್ಟ್ರೀಯ ಸೇವಾ ಯೋಜನೆಯ ದಿನ’ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾಬದ್ಧತೆ ಮೂಡಿಸಲೆಂದು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ
ಉದ್ದೇಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು (ಎನ್‌ಎಸ್‌ಎಸ್) ಪ್ರಾರಂಭಿ ಬಹುದೆಂದು ಡಾ. ರಾಧಾಕೃಷ್ಣನ್ ನೇತೃತ್ವದ ವಿಶ್ವವಿದ್ಯಾಲಯ ಅನುದಾನ ಸಮಿತಿ ಭಾರತ ಸರಕಾರಕ್ಕೆ ಶಿಫಾರಸು ಮಾಡಿತು.

ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವಿನ ಆಹ್ಲಾದಕರ- ರಚನಾತ್ಮಕ ಸಂಬಂಧವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಯಂಪ್ರೇರಿತ ಸಮುದಾಯ ಸೇವಾಭಾವನೆ ಮೂಡಿಸಲು ಈ ಯೋಜನೆಯನ್ನು ಜಾರಿಗೆ ತರಲಾಯಿತು. ‘ರಾಮರಾಜ್ಯ’ದ ಪರಿಕಲ್ಪನೆ ಇಟ್ಟುಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸಮಾಜಸೇವೆಯನ್ನೇ ಕಾಯಕವಾಗಿಸಿಕೊಂಡು ಧರ್ಮದಂತೆ ಆಚರಿಸುತ್ತಿದ್ದರು.

ಗಾಂಧೀಜಿಯವರ ಗೌರವಾರ್ಥವಾಗಿ ಮತ್ತು ಪುಣ್ಯಸ್ಮರಣೆಗಾಗಿ, ಅವರ ಜನ್ಮಶತಮಾನೋತ್ಸವ ವರ್ಷವಾದ 1969ರಲ್ಲಿ ಎನ್‌ಎಸ್‌ಎಸ್ ಪರಿಕಲ್ಪ ನೆಗೆ ಚಾಲನೆ ನೀಡಿ, ಸೆಪ್ಟೆಂಬರ್ 24ರಂದು ದೇಶದ ವಿವಿಧ ರಾಜ್ಯಗಳ 37 ವಿಶ್ವವಿದ್ಯಾಲಯಗಳಲ್ಲಿ ಪ್ರಾರಂಭಿಸಲಾಯಿತು. ಈ ಕಾರಣಕ್ಕಾಗಿಯೇ ಸೆಪ್ಟೆಂಬರ್ 24ನ್ನು ‘ಎನ್ ಎಸ್‌ಎಸ್ ದಿನ’ ಎಂಬುದಾಗಿ ದೇಶಾದ್ಯಂತ ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತದೆ.

ಕಲಿಕೆಯ ಜತೆಜತೆಗೆ ಸಮಾಜಸೇವೆಯ ಪರಿಕಲ್ಪನೆಗೂ ಒತ್ತುಕೊಟ್ಟು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವುದು ಎನ್‌ಎಸ್‌ಎಸ್ ಧ್ಯೇಯ. ಅಂದರೆ, ಮಕ್ಕಳು ನಾಲ್ಕುಗೋಡೆಯ ನಡುವೆ ನಿಗದಿತ ಪಾಠ-ಪ್ರವಚನ ಕೇಳಿ ಕೊಂಡು ಕಲಿಯುವುದರ ಜತೆಗೆ, ಸುತ್ತಲ ಸಮಾಜದ ಜನರೊಂದಿಗೆ ಬೆರೆತು ಅವರ ನೋವು-ನಲಿವು, ಕಷ್ಟ-ಸುಖ, ಕಷ್ಟ-ಕಾರ್ಪಣ್ಯ ಗಳಲ್ಲಿ ಪಾಲ್ಗೊಂಡು, ತನ್ಮೂಲಕ ವೈಯಕ್ತಿಕ-ಸಾಮಾಜಿಕ ಬೆಳವಣಿಗೆಗೆ ಹಾಗೂ ರಾಷ್ಟ್ರಾಭಿವೃದ್ಧಿಗೆ ಕಾರಣರಾಗಬೇಕು ಎಂಬುದು ಎನ್‌ಎಸ್‌ಎಸ್ ಆಶಯ.

ಇದು ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮವಾಗಿದ್ದು, ನಿಮಿತ್ತ ಮಾತ್ರವಾಗಿರುವ ಅಧ್ಯಾಪಕರು ಯೋಜನೆಯ ಅನುಷ್ಠಾನದ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೂ ಎನ್ ಎಸ್‌ಎಸ್ ಒಂದು ಸೂಕ್ತ ವೇದಿಕೆ. ೧೯೬೯ರಲ್ಲಿ ಎನ್‌ಎಸ್‌ಎಸ್ ಶುರುವಾದಾಗ, ೪೦,೦೦೦ ಪದವಿ ವಿದ್ಯಾರ್ಥಿಗಳು ಇದರಲ್ಲಿ ನೋಂದಾಯಿಸಿ ಕೊಂಡರು. ಪ್ರಾರಂಭದ ದಿನಗಳಲ್ಲಿ ಪದವಿ ತರಗತಿಗಳ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ ಎನ್‌ಎಸ್‌ಎಸ್ ಕ್ರಮೇಣ ವೈದ್ಯಕೀಯ, ತಾಂತ್ರಿಕ, ಪಾಲಿಟೆಕ್ನಿಕ್, ನರ್ಸಿಂಗ್, ಫಾರ್ಮಸಿ, ಫಿಸಿಯೋತೆರಪಿ, ಬಿ.ಎಡ್., ಡಿ.ಎಡ್. ಹಾಗೂ ಪದವಿಪೂರ್ವ
ತರಗತಿಗಳಿಗೂ ವಿಸ್ತರಣೆಗೊಂಡಿತು.

ಇಂದು ರಾಷ್ಟ್ರದ ಅತಿದೊಡ್ಡ ಯುವಸಂಘಟನೆಯಾಗಿ ಹೊರಹೊಮ್ಮಿರುವ ಎನ್‌ಎಸ್‌ಎಸ್, ಸರಿಸುಮಾರು ೩೫ ಲಕ್ಷ ಸ್ವಯಂ ಸೇವಕರು, ೩೫,೦೦೦ಕ್ಕೂ ಹೆಚ್ಚಿನ ಯೋಜನಾಧಿಕಾರಿಗಳನ್ನು ಒಳಗೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು ೩.೫ ಲಕ್ಷ ಸ್ವಯಂಸೇವಕರು ಮತ್ತು 3500 ಯೋಜನಾಧಿಕಾರಿಗಳಿರುವುದು ಹೆಮ್ಮೆಯ ಸಂಗತಿ.

ಏನನ್ನು ಕಲಿಸಲಾಗುತ್ತದೆ?
ಎನ್‌ಎಸ್‌ಎಸ್‌ನ ಆರಂಭದ ದಿನಗಳಲ್ಲಿ ಸಾಕ್ಷರತೆ, ಗಿಡ ನೆಡುವಿಕೆ, ಶಾಲಾ ಮೈದಾನ ವಿಸ್ತರಿಸುವಿಕೆ, ರಸ್ತೆ ದುರಸ್ತಿ, ಶ್ರಮದಾನ ಇತ್ಯಾದಿ ಕೆಲಸಗಳಿಗೆ ಆದ್ಯತೆ ನೀಡಲಾಗಿತ್ತು. ಕಾಲಾನಂತರದಲ್ಲಿ ಸಂಘಟನೆಯ ದೃಷ್ಟಿಕೋನ ಬದಲಾಗಿ, ಈ ಸಾಂಪ್ರದಾಯಿಕ ಕೆಲಸಗಳ ಜತೆಜತೆಗೆ ವ್ಯಕ್ತಿತ್ವ ವಿಕಸನ, ಸಾಮುದಾಯಿಕ ಚಟುವಟಿಕೆಗಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವರ್ಧಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುನೀಡಲಾಗುತ್ತಿದೆ.

ಹೀಗಾಗಿ, ‘ಕೇವಲ ಮಣ್ಣು ಹೊರುವುದಕ್ಕೆ ಸೀಮಿತ’ ಎಂಬ ಹಣೆಪಟ್ಟಿ ಕಳಚಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ
ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಎನ್‌ಎಸ್ ಎಸ್ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಈ ಕಾರಣದಿಂದಲೇ ಬಲ್ಲವರು, ‘ಎನ್‌ಎಸ್‌ಎಸ್ ಸ್ವಯಂಸೇವಕರು ರಸ್ತೆ ನಿರ್ಮಿಸಿದರೆ, ರಸ್ತೆಯು ವಿದ್ಯಾರ್ಥಿಯ ಜೀವನವನ್ನು ರೂಪಿಸುತ್ತದೆ’ ಎನ್ನುತ್ತಾರೆ.

ಒಟ್ಟಾರೆ ಹೇಳುವುದಾದರೆ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ನಾಲ್ಕು ಗೋಡೆಯ ನಡುವೆ ಕಲಿಯುವ ಪುಸ್ತಕದ
ಬದನೇ ಕಾಯಿ ಅಲ್ಲ, ಇದು ಸಮುದಾಯದ ನಡುವೆಯಿದ್ದು ಕಲಿಯುವ ಅನುಭವದ ಶಿಕ್ಷಣ ವಿಧಾನ. ಯೋಜನೆ, ತಾಂತ್ರಿಕತೆ, ಸಂವಹನೆ, ಮುಂದಾಳತ್ವ, ಮೌಲ್ಯಮಾಪನ, ಆತ್ಮವಿಶ್ವಾಸ ಮತ್ತು ಮಾನವೀಯ ಸಂಬಂಧಗಳೇ ಮೊದಲಾದ ಬಾಬತ್ತುಗಳಲ್ಲಿ ವಿದ್ಯಾರ್ಥಿಗಳಿಗೆ ಕುಶಲತೆ ಸಿದ್ಧಿಸಲು-ವೃದ್ಧಿಸಲು ಪೂರಕವಾಗುವ ಚಟುವಟಿಕೆಗಳಿಗೆ ಒತ್ತುಕೊಡುತ್ತಿರುವುದು ಈ  ಮಾತಿಗೆ ಪುಷ್ಟಿನೀಡುತ್ತದೆ.

ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಭಕ್ತಿ, ಸಹಬಾಳ್ವೆ, ಸೋದರತ್ವದ ಪರಿಕಲ್ಪನೆಗಳನ್ನು ಆಳವಾಗಿ ಮೂಡಿಸಲು ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ವಿಶೇಷ ತರಬೇತಿಗಳು, ರಕ್ತದಾನ ಶಿಬಿರಗಳನ್ನು ಎನ್‌ಎಸ್‌ಎಸ್‌ನಲ್ಲಿ ಆಯೋಜಿಸಲಾಗುತ್ತದೆ. ಬೇರೆ ಬೇರೆ ಜಾತಿ- ಧರ್ಮ-ಸಂಸ್ಕೃತಿ-ಊರಿನ ಮಕ್ಕಳು ವಿಶೇಷ ಶಿಬಿರಗಳಲ್ಲಿ ಜತೆಗೂಡಿ ದುಡಿದು ಬೇಯಿಸಿ ತಿನ್ನುವುದರಿಂದ ಈ ಸಹಬಾಳ್ವೆ-ಸೋದರತ್ವದ ಅನುಭೂತಿಯಾಗುತ್ತದೆ, ಮಾನವೀಯ ಸಂಬಂಧಗಳು ಗಟ್ಟಿಯಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಯಾಗುತ್ತದೆ ಎಂಬ ಅಂಶವನ್ನಿಲ್ಲಿ ಗಮನಿಸಬೇಕು.

ಘೋಷವಾಕ್ಯ ಮತ್ತು ಚಿಹ್ನೆ ‘ನನಗಲ್ಲ ನಿನಗೆ’ (NOT ME BUT YOU) ಎಂಬುದು ಎನ್‌ಎಸ್‌ಎಸ್‌ನ ಘೋಷವಾಕ್ಯ. ಪ್ರಜಾ ಪ್ರಭುತ್ವದಲ್ಲಿ ನಿಸ್ವಾರ್ಥ ಸೇವೆ, ಸಹಬಾಳ್ವೆ ಮತ್ತು ಸೋದರತ್ವಗಳಿಗೆ ಇರುವ ಮಹತ್ವವನ್ನು ಇದು ಸಾರಿಹೇಳುತ್ತದೆ. ಮನುಷ್ಯ ಮನುಷ್ಯನಿಗೆ ಸಹಾಯಮಾಡಿ, ಪರಸ್ಪರ ನಂಬಿಕೆ-ವಿಶ್ವಾಸ- ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕೆಂಬುದನ್ನು ಪ್ರತಿ ಪಾದಿಸುತ್ತದೆ. ‘ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ’ ಎಂಬ ಸಂದೇಶದೊಂದಿಗೆ ರಾಷ್ಟ್ರದ ಸರ್ವತೋಮುಖ
ಅಭಿವೃದ್ಧಿಯ ಸದುದ್ದೇಶವನ್ನು ಗಮನದಲ್ಲಿಟ್ಟುಕೊಂಡು ಎನ್‌ಎಸ್‌ಎಸ್ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಎನ್‌ಎಸ್‌ಎಸ್ ಚಿಹ್ನೆಯನ್ನು ಒಡಿಶಾ ರಾಜ್ಯದ ಸುಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯದ ರಥದ ಚಕ್ರದ ಮಾದರಿಯಲ್ಲಿ
ರಚಿಸಲಾಗಿದೆ. ಈ ರಥದ ಚಕ್ರವು ಸೃಷ್ಟಿ-ಸ್ಥಿತಿ- ಲಯದ ಹಾಗೂ ಕಾಲಾನುಕಾಲಕ್ಕೆ ಆಗುವ ಜೀವನರಥದ ಬೆಳವಣಿಗೆಯ ಸೂಚಕ. ಎನ್ ಎಸ್‌ಎಸ್ ಚಿಹ್ನೆಯು ಈ ರಥಚಕ್ರದ ಸಂಕ್ಷಿಪ್ತ ರೂಪವಾಗಿದ್ದು ಮುಖ್ಯವಾಗಿ ಚಲನೆಯನ್ನು ಸೂಚಿಸುತ್ತದೆ, ಬದುಕಿನ ಏರುಪೇರು, ಕಷ್ಟ-ಸುಖಗಳನ್ನು ಪ್ರತಿಬಿಂಬಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ಎನ್‌ಎಸ್‌ಎಸ್‌ನಲ್ಲಿ ಪಾಲ್ಗೊಂಡವರೆಲ್ಲರೂ ಸಮಾಜದ ಅಭಿವೃದ್ಧಿ ಮತ್ತು ಸಮುದಾಯದ ಏಳಿಗೆಗೋಸ್ಕರ ನಿರಂತರ ಶ್ರಮಿಸಬೇಕೆಂಬ ಆಶಯ ಇದರಲ್ಲಿ ಧ್ವನಿತವಾಗಿದೆ. ಅಧಿಕಾರಿಗಳು ಮತ್ತು ಸ್ವಯಂಸೇವಕರು ಬರುತ್ತಾರೆ ಹೋಗುತ್ತಾರೆ, ಆದರೆ ಚಟುವಟಿಕೆಗಳು ನಿರಂತರ ಸಾಗುತ್ತಿರಬೇಕು ಎಂದು ಈ ಚಿಹ್ನೆ ಸೂಚಿಸುತ್ತದೆ.

ಎನ್‌ಎಸ್‌ಎಸ್ ಸ್ವಯಂಸೇವಕರು ರಾಷ್ಟ್ರದ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ಯಾವುದೇ ತ್ಯಾಗಕ್ಕೆ ಸಿದ್ಧರಾಗಿರಬೇಕು ಮತ್ತು ದೇಶದ ಸಮೃದ್ಧಿಗೆ ಮತ್ತು ಮಾನವ ಕಲ್ಯಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕೆಂಬ ಆಶಯವನ್ನು ಈ
ಚಿಹ್ನೆ ಸಾರುತ್ತದೆ.

ಕೊನೆಯ ಮಾತು: ಪ್ರತಿಫಲಾಪೇಕ್ಷೆ ಇಲ್ಲದೆ ಮತ್ತು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿ ಮಾಡುವ ಸೇವೆ ಅತ್ಯಂತ ಪವಿತ್ರವಾದುದು. ಇದರಲ್ಲಿಯೇ ನಮ್ಮ ಊರು-ರಾಜ್ಯ-ದೇಶದ ಹಿತ ಅಡಗಿದೆ ಎಂಬುದನ್ನು ಮರೆಯದಿರೋಣ.
ಎನ್‌ಎಸ್‌ಎಸ್‌ನ ಉದ್ದೇಶಗಳು

೧. ನಾಯಕತ್ವದ ಗುಣ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದು
೨. ಸಾಕ್ಷರತೆಯ ಮೂಲಕ ಅಕ್ಷರ ಕ್ರಾಂತಿಗೆ ನೆರವಾಗುವುದು.
೩. ವಾಸಮಾಡುವ ಸಮಾಜದಲ್ಲಿನ ಸಮುದಾಯಗಳ ಸಮಸ್ಯೆ ಮತ್ತು ಅಗತ್ಯಗಳನ್ನು ಅರಿತು, ಸಮಸ್ಯೆಯ ಪರಿಹಾರಕ್ಕೆ ಮತ್ತು
ಅಗತ್ಯಗಳ ಈಡೇರಿಕೆಗೆ ಯತ್ನಿಸುವುದು.

೪. ವ್ಯಕ್ತಿಯಾಗಿ ಈ ಸಮಾಜಕ್ಕೆ ಏನು ಮಾಡಬಲ್ಲೆ ಎಂಬ ಚಿಂತನೆ ಮಾಡುವುದು.

೫. ಗ್ರಾಮ ಮತ್ತು ಗುಡಿ ಕೈಗಾರಿಕೆಗಳ ಪ್ರಗತಿಗೆ ನೆರವಾಗುವುದು.

೬. ಗ್ರಾಮಗಳ ನೈರ್ಮಲ್ಯದ ಕುರಿತು ಚಿಂತನೆ, ವಿಮರ್ಶೆ ಮಾಡುವುದು.

೭. ಸಮಾಜದಲ್ಲಿ ಪರಿಸರದ ಕಾಳಜಿ ಹುಟ್ಟುಹಾಕುವುದು, ಪರಿಸರದ ಸಂರಕ್ಷಣೆಯಲ್ಲಿ ನೆರವಾಗುವುದು.

೮. ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸುವುದು.

೯. ಕೋಮವಾದ ತೊಲಗಿಸಿ ರಾಷ್ಟ್ರೀಯ ಭಾವೈಕ್ಯತೆಯ ಪ್ರಜ್ಞೆಯನ್ನು ಬೆಳೆಸುವುದು. ಮೇಲು-ಕೀಳು ಎಂಬ ಭಾವನೆ ತೊಲಗಿಸಿ ವರ್ಗರಹಿತ ಸಮಾಜ ನಿರ್ಮಿಸಲು ಶ್ರಮಿಸುವುದು.

೧೦. ಮೈತ್ರಿ, ಸಹೋದರತ್ವ, ಸಹಬಾಳ್ವೆ, ಸೌಹಾರ್ದತೆ, ಸಹಕಾರ ಮತ್ತು ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿಕೊಳ್ಳುವುದು. ತನ್ಮೂಲಕ ವೈಯುಕ್ತಿಕ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವುದು.