Monday, 8th March 2021

ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆ ಸುರಕ್ಷಿತವೇ ?

ಅನಿಸಿಕೆ

ಅನಿತಾ ಪಿ.ತಾಕೊಡೆ

‘ನಾವು ಹೀಗೆಯೇ ಸುಖವಾಗಿದ್ದೇವಪ್ಪಾ, ಇದಕ್ಕಿಂತ ಹೆಚ್ಚಿನ ಜ್ಞಾನ ಬೇಕಾಗಿಲ್ಲ. ಬ್ಲ್ಯಾಕ್ ಮನಿ, ವೈಟ್‌ಮನಿ ಅಂತ ನಮಗೆ ಕಲಿಸುವುದಕ್ಕೆ ಬರಬೇಡಿ’ ಎನ್ನುತ್ತಿದ್ದ ಹಳ್ಳಿಗರೆಲ್ಲ ಕೆಲವು ವರ್ಷಗಳಿಂದ ಅನಿವಾರ್ಯವಾಗಿ ಬ್ಯಾಂಕಿನ ಮೆಟ್ಟಿಲು ಹತ್ತಿ ತಮ್ಮ
ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕಾಯಿತು.

ಸೇವಿಂಗ್, ಕರೆಂಟ್, ಓವರ್ ಡ್ರಾಫ್ಟ್, ಎಫ್‌ಡಿ, ನೆಟ್ ಬ್ಯಾಂಕಿಂಗ್ ವ್ಯವಸ್ಥೆಯ ಕುರಿತು ತಿಳಿದುಕೊಳ್ಳುವುದು ಕೂಡ ಅನಿವಾರ್ಯ ವಾಯಿತು. ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕ ನೀತಿ ಕಡ್ಡಾಯವಾದ ಕಾರಣ ಡೆಬಿಟ್ ಕಾರ್ಡ್ ಬಳಸುವ ವಿಧಾನ, ಕೆವೈಸಿ ಫಾರ್ಮ್ ತುಂಬಿಸುವುದು, ಬ್ಯಾಂಕ್ ಪುಸ್ತಕ ನೊಂದಣಿ ಮಾಡಿಸುವುದು, ಬ್ಯಾಂಕ್‌ಗಳು ವಿಲೀನವಾದಾಗ ಅಕೌಂಟ್ ನಂಬರಿನ ಜತೆಗೆ ಪಾಸ್‌ಬುಕ್ ಬದಲಾದಾಗ ಪದೇಪದೆ ಬ್ಯಾಂಕಿಗೆ ಅಲೆಯಬೇಕಾದ ಪರಿಸ್ಥಿತಿ.

ಇದನ್ನೆಲ್ಲ ಗಮನಿಸಿದರೆ, ದಿನ ನಿತ್ಯದ ಚಟುವಟಿಕೆಗಳಲ್ಲಿ ಬ್ಯಾಂಕಿಗೆ ಹೋಗಿ ಬರುವುದರಲ್ಲಿ ಅದೆಷ್ಟೋ ಸಮಯ ಕಳೆದು ಬಿಡುತ್ತದೆ. ಅಂತೆಯೇ ಕಾಲ ಕಾಲಕ್ಕೆ ಆಗುವ ಬದಲಾವಣೆಗಳಿಂದ ಕೆಲವೊಂದು ಎಡವಟ್ಟುಗಳನ್ನೂ ಎದುರಿಸಬೇಕಾಗುತ್ತದೆ.
ಮೂರ್ನಾಲ್ಕು ತಿಂಗಳ ಹಿಂದೆ ನನ್ನ ಮಗಳಿಗೆ ಡೆಬಿಟ್ ಕಾರ್ಡ್ ಮಾಡಿ ಕೊಡಲು ವಿಜಯಾ ಬ್ಯಾಂಕಿಗೆ ಅವಳನ್ನು ಕರೆದು ಕೊಂಡು ಹೋಗಿ ಅರ್ಜಿ ತುಂಬಿಸಿ ಕೊಟ್ಟು ಬಂದೆ.

ಹದಿನೈದು ದಿವಸದ ನಂತರ ಡೆಬಿಟ್ ಕಾರ್ಡ್ ಕೊರಿಯರ್ ಮುಖಾಂತರ ಮನೆಗೆ ಬಂತು. ಅದೇ ದಿನ ಮಗಳ ಮೊಬೈಲ್ಗೆ ‘ಕೆಲವು ವರ್ಷಗಳಿಂದ ನಿಮ್ಮ ಖಾತೆ ಚಲಾವಣೆಯಲ್ಲಿ ಇಲ್ಲದಿರುವುದರಿಂದ ಇನ್ ಒಪರೇಟಿವ್ ಆಗಿದೆ. ಬ್ಯಾಂಕಿಗೆ ಬಂದು ಸಂಪರ್ಕಿಸಿ’ ಎಂದು ಮೆಸೇಜ್ ಬಂದಿತ್ತು. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ‘ಏಳು ವರ್ಷಗಳಿಂದ ಖಾತೆ ಚಲಾವಣೆಯಲ್ಲಿಲ್ಲದ ಕಾರಣ ಡೋರ್ಮೆಂಟ್ ಆಗಿದೆ’ ಎಂದು ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೊಟ್ಟು ಅದನ್ನು ತುಂಬಿಸಿ ಫೋಟೋ ಲಗತ್ತಿಸಿ ಕೊಡಲು ಹೇಳಿದರು.

ಅವರು ಹೇಳಿದಂತೆಯೇ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಮಾರನೇ ದಿನ ಮತ್ತೆ ಹೋದಾಗ, ಒರಿಜಿನಲ್ ಆಧಾರ್ ಕಾರ್ಡ್
ಮತ್ತು ಪಾನ್‌ಕಾರ್ಡ್ ಕೂಡ ಕಡ್ಡಾಯ ಬೇಕು ಎಂದು ಹೇಳಿದರು. ಎರಡು ದಿವಸದ ನಂತರ ಅದನ್ನೂ ಕೊಟ್ಟು, ಮೇಡಂ ನಾನು ಐದನೇ ಸಲ ಬರುತ್ತಿರುವುದು. ಒಂದು ಖಾತೆ ತೆರೆಯಿರಿ ಅಥವಾ ಮುಚ್ಚಿ ಅದರಲ್ಲಿರುವ ಆರು ಸಾವಿರ ರು.ಗಳನ್ನು ತೆಗೆದು ಕೊಡಿ ಅಂದೆ. ಇಲ್ಲ, ಸದ್ಯಕ್ಕೆ ಏನೂ ಮಾಡುವುದಕ್ಕಾಗುವುದಿಲ್ಲ. ಅದು ತುಂಬಾ ಲಾಂಗ್ ಪ್ರೊಸೆಸ್. ಹೆಡ್ ಆಫೀಸಿಗೆ ಹೋಗಿ ಅಲ್ಲಿ ನಿರ್ಧಾರ ಆಗಬೇಕು. ಈಗ ಮೊಬೈಲ್ ನಂಬರ್ ಕೊಟ್ಟು ಹೋಗಿ ನಾವೇ ಕಾಲ್ ಮಾಡ್ತೇವೆ. ಆ ಮೇಲೆ ಬನ್ನಿ ಅಂದರು.

ಸುಮಾರು ಎರಡು ತಿಂಗಳಿನ ಕಾಲ ಓಡಾಟ ನಡೆಸಿದರೂ ಅವರು ಹೀಗೆಯೇ ಏನಾದರೊಂದು ನೆಪಹೇಳಿ ವಾಪಸ್ಸು
ಕಳುಹಿಸುತ್ತಿದ್ದರು. ಪರಿಚಿತರಿರುವ ಬೇರೆ ಬ್ಯಾಂಕಿನ ಸಿಬ್ಬಂದಿಗಳಲ್ಲಿ ಈ ವಿಷಯದ ಕುರಿತು ಚರ್ಚಿಸಿದೆ. ‘ಯಾವುದೇ ಖಾತೆ ಸಂಪೂರ್ಣ ಮುಚ್ಚಿ ಹೋಗಬೇಕಾದರೆ ಹತ್ತು ವರ್ಷಗಳಾದರೂ ಬೇಕು. ಈಗ ಏಳು ವರ್ಷಗಳಷ್ಟೇ ಆಗಿರುವುದರಿಂದ ಹೆಡ್ ಆಫೀಸಿನವರೆಗೆ ಹೋಗಬೇಕಾದ ಅವಶ್ಯಕತೆ ಇಲ್ಲ.

ನೀವು ಯಾವ ಬ್ಯಾಂಕಿನಲ್ಲಿ ಖಾತೆ ತೆರೆದಿರುವಿರೋ ಅಲ್ಲಿಯೇ ಈ ಸಮಸ್ಯೆಯನ್ನು ಸರಿಪಡಿಸಬಹುದು’ ಎಂದು ಎಲ್ಲರೂ ಒಂದೇ ರೀತಿಯ ಸಲಹೆಯನ್ನು ಕೊಟ್ಟರು. ಪುನಃ ಬ್ಯಾಂಕಿಗೆ ಹೋಗಿ ಧೈರ್ಯದಿಂದ ಈ ವಿಷಯ ತಿಳಿಸಿದೆ. ಆಗ ಅಲ್ಲಿ ಕೂತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಸರಿ, ಹಳೇ ಪುಸ್ತಕ ಕೊಟ್ಟು ಹೋಗಿ. ಹೇಗೂ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿರುವುದರಿಂದ ಪುಸ್ತಕ ಮತ್ತು ಅಕೌಂಟ್ ನಂಬರ್ ಬದಲಾಗುವುದಿದೆ.

ಎಲ್ಲಾ ಒಟ್ಟಿಗೆ ಮಾಡಿ ಕೊಡುವ. ಈಗ ನಿಮ್ಮ ಮೊಬೈಲ್ ನಂಬರ್ ಕೊಟ್ಟು ಹೋಗಿ, ಕರೆ ಮಾಡಿದ ಮೇಲೆ ಬನ್ನಿ ಎಂದು
ಮತ್ತೊಮ್ಮೆ ಮೊಬೈಲ್ ನಂಬರ್ ತೆಗೆದುಕೊಂಡರು. ಒಂದು ವಾರದ ನಂತರ ನಡು ಮಧ್ಯಾಹ್ನದ ಹೊತ್ತಿಗೆ ಒಂದು ಕರೆ ಬಂತು. ‘ಹಲೋ, ನಾನು ಬ್ಯಾಂಕ್ ಆಫ್ ಬರೋಡಾದಿಂದ ಮಾತನಾಡುತ್ತಿರುವೆನು. ನಿಮ್ಮ ಅಕೌಂಟ್ ಕ್ಲೋಸ್ ಮಾಡಬೇಕೇ? ಅಥವಾ ಮುಂದುವರಿಸುತ್ತೀರಾ?’ ಎಂದು ಕೇಳಿದ. ಇಲ್ಲ, ಕ್ಲೊಸ್ ಮಾಡಲಿಕ್ಕೆ ಇಲ್ಲ ಅಂದೆ.

ಹಾಗದರೆ ಅಕೌಂಟ್ ನಂಬರ್ ಹೇಳಿ ಅಂದ. ಮಗಳ ಪುಸ್ತಕ ಕಬಾಟಿನಿಂದ ತೆಗೆಯುವಾಗ ಸ್ವಲ್ಪ ತಡವಾಯ್ತು. ಮೇಡಂ
ಬ್ಯಾಂಕಿನಿಂದ ಕರೆ ಮಾಡುತ್ತಿರುವುದು. ಸ್ವಲ್ಪ ಬೇಗ ಹೇಳಿ ಎಂದು ಅವಸರಿಸಿದ. ಅಕೌಂಟ್ ನಂಬರ್ ಹೇಳಿದ ನಂತರ, ಒಂದು ನಿಮಿಷ, ಕಾಲ್ ರೆಕಾರ್ಡ್ ಆಗ್ತಾ ಇದೆ. ಕಟ್ ಮಾಡಬೇಡಿ ಅಂದವನು ಒಂದೆರಡು ನಿಮಿಷದಲ್ಲಿಯೇ ಅಕೌಂಟ್ ಸರಿಯಾಯ್ತು. ಇನ್ನು ನೀವು ನಿಶ್ಚಿಂತೆಯಿಂದ ಡೆಬಿಟ್ ಕಾರ್ಡ್ ಯೂಸ್ ಮಾಡಬಹುದು ಅಂದ.

ಅಬ್ಬಾ ಇಷ್ಟು ದಿನ ಬ್ಯಾಂಕಿಗೆ ಅಲೆದಾಡಿದ್ದು ಸಾರ್ಥಕವಾಯ್ತು. ಅಂದುಕೊಂಡು ಉಸಿರು ಬಿಡುವಷ್ಟರಲ್ಲಿ ನಿಮ್ಮದು ವಿಜಯಾ ಬ್ಯಾಂಕಿನಲ್ಲಿ ಖಾತೆ ಇದೆಯಲ್ಲವೇ ಎಂದು ಕೇಳಿದ. ಹೌದು ಅಂದೆ. ಡೆಬಿಟ್ ಕಾರ್ಡ್ ಕೂಡ ಅಪ್‌ಡೇಟ್ ಮಾಡಲಿಕ್ಕೆ ಇದೆ ಎಂದು ಅವನಂದಾಗ, ಇಲ್ಲ ನಾನು ಬ್ಯಾಂಕಿನಲ್ಲಿಯೇ ಹೋಗಿ ಮಾಡುತ್ತೇನೆ ಅಂದೆ. ಎಷ್ಟು ತಿಂಗಳಾಯ್ತು ಕಾರ್ಡ್ ಯೂಸ್ ಮಾಡದೆ ಎಂದು ಮತ್ತೆ ಕೇಳಿದ.

ಏಳೆಂಟು ತಿಂಗಳಾಯ್ತು ಅಂದೆ. ‘ಪ್ರತಿ ಇಪ್ಪತ್ತೈದು ದಿವಸಕ್ಕೆ ಒಮ್ಮೆ ಡೆಬಿಟ್ ಕಾರ್ಡ್ ಯೂಸ್ ಮಾಡಬೇಕು ಇಲ್ಲಾಂದ್ರೆ ಬಂದ್ ಆಗುತ್ತೆ ಮೇಡಂ. ಕರೋನಾ ಸಮಯವಾದ್ದರಿಂದ ಇದನ್ನೆಲ್ಲ ನಾವು ಕಾಲಿಂಗ್ ಮೂಲಕವೇ ಮಾಡುತ್ತಿದ್ದೇವೆ. ಕಾರ್ಡ್ ನಂಬರ್ ಹೇಳಿ’ ಅಂದ. ಈಗ ಬ್ಯಾಂಕಿನಿಂದಲೇ ಮೆಸೇಜ್ ಬರುತ್ತೆ ಅದರಲ್ಲಿ ಇದ್ದ ಒಟಿಪಿ ಹೇಳಿದ ಮೇಲೆ ನಿಮ್ಮ ಇಮೇಲ್‌ಗೆ ಒಂದು
ಫಾರ್ಮ್ ಬರುತ್ತೆ. ಅದನ್ನು ತುಂಬಿಸಿ ಬ್ಯಾಂಕಿಗೆ ಕೊಟ್ಟರಾಯಿತು ಅಂದ. ಅವನು ಹೇಳಿದಂತೆಯೇ ಒಟಿಪಿ ನಂಬರ್ ಹೇಳಿದಾಗ ಒಂದೆರಡು ಬಾರಿ, ತಪ್ಪು ಹೇಳ್ತಾ ಇದ್ದೀರಿ ಇನ್ನೊಂದು ಸಲ ಕಳಿಸ್ತಾ ಇದ್ದೀನಿ, ಈಗ ಸರಿಯಾಗಿ ಬೇಗ ಹೇಳಿ ಅಂದ.

ಏನೋ ಸಂಶಯ ಬಂದು ಕಾಲ್ ಕಟ್ ಡಿ ಮೊಬೈಲ್ ನೋಡುವಷ್ಟರಲ್ಲಿ ಅಕೌಂಟಿನಲ್ಲಿದ್ದ 40 ಸಾವಿರ ರು. ಡೆಬಿಟ್ ಆದ ಮೆಸೇಜ್ ಬಂದಿತ್ತು. ತಕ್ಷಣ ಅದೇ ನಂಬರಿಗೆ ಕರೆ ಮಾಡಿ ಕೇಳಿದಾಗ, ಏನೂ ತೊಂದರೆ ಇಲ್ಲ ಮೇಡಂ. ಇದು ಬ್ಯಾಂಕಿನಿಂದ ಕರೆ ಮಾಡುತ್ತಿರುವುದು. ಒಂದು ವೇಳೆ ಹಣ ಡೆಬಿಟ್ ಆಗಿದ್ದರೂ ನಿಮ್ಮ ಖಾತೆಗೆ ಬರುತ್ತೆ ಚೆಕ್ ಮಾಡಿ ನೋಡಿ. ಈಗ ಇನ್ನೊಂದು ಒಟಿಪಿ ಕಳುಹಿಸಿದ್ದೇನೆ ಹೇಳಿಬಿಡಿ ಅಂದ.

ಇದ್ದ ನಲ್ವತ್ತೈದು ಸಾವಿರದಲ್ಲಿ ನಲ್ವತ್ತು ಸಾವಿರ ಡೆಬಿಟ್ ಆಗಿದೆ ಉಳಿದಿರುವುದು ಐದು ಸಾವಿರ ರು. ಮಾತ್ರ. ಕೂಡಲೇ ಕರೆ ಸ್ಥಗಿತಗೊಳಿಸಿದೆ. ಯಾರಾದರೂ ಗೊತ್ತಿರುವವರಲ್ಲಿ ವಿಚಾರಿಸೋಣ ಎಂದು ಪರಿಚಯದ ಎಚ್‌ಡಿಎಫ್‌ಸಿ ಬ್ಯಾಂಕಿನ ಮ್ಯಾನೇಜರ್ ಅವರಿಗೆ ಕರೆ ಮಾಡಿದೆ. ನಿಮಗೆ ಯಾರೋ ಫ್ರಾಡ್ ಮಾಡಿದ್ದಾರೆ. ಮೊದಲಿಗೆ ಪೊಲೀಸ್ ಕಂಪ್ಲೇಟ್ ಕೊಟ್ಟು ಬಿಡುವುದು ಒಳ್ಳೆಯದು. ಪೊಲೀಸ್ ಸ್ಟೇಷನ್‌ನಿಗೆ ಒಬ್ಬರೇ ಹೋಗಬೇಡಿ ನಾನೂ ಬರುತ್ತೇನೆ ಅಂದರು.

ಬ್ಯಾಂಕಿಗೆ ಹೋಗಿ ವಿಷಯ ತಿಳಿಸಿದಾಗ ‘ಬ್ಯಾಂಕಿನಿಂದ ಯಾರೂ ಕರೆ ಮಾಡುವುದಿಲ್ಲ. ನಮಗೆ ಅಷ್ಟು ಸಮಯವೂ
ಇಲ್ಲ. ಇನ್ನು ಏನೂ ಮಾಡುವುದಕ್ಕೂ ಸಾಧ್ಯವಿಲ್ಲ. ನಿನ್ನೆಯೂ ಒಬ್ಬರು ಬಂದು ಐವತ್ತು ಸಾವಿರ ಕಳೆದೋಯ್ತು ಅಂದರು.
ಇನ್ನು ಮುಂದೆ ಜಾಗ್ರತೆ ವಹಿಸಿ’ ಅಂದಾಗ, ನಾನೂ ಸುಮ್ಮನಿರಲಿಲ್ಲ. ನೀವು ಕರೆ ಮಾಡುವುದಿಲ್ಲ ಎಂದಾದರೆ, ನನ್ನ ಮಗಳ ಖಾತೆ ಇನ್ ಆಪರೇಟಿವ್ ಆದ ಕಾರಣಕ್ಕೆ ಪ್ರತಿ ಸಲ ಬಂದಾಗಲೂ ನನ್ನ ಮೊಬೈಲ್ ನಂಬರ್ ಯಾಕೆ ತಗೊಂಡ್ರಿ? ಅಂದೆ. ‘ಯಾವಾಗ? ಯಾರು ತಗೊಂಡ್ರೂ ಬಿಟ್ರೂ ಇನ್ನು ಮುಂದೆ ನೆನಪಿಟ್ಟುಕೊಳ್ಳಿ.

ಬ್ಯಾಂಕಿನಿಂದ ನಾವ್ಯಾರೂ ಕರೆ ಮಾಡುವುದಿಲ್ಲ. ಏನಾದರೂ ಮಾಹಿತಿ ಬೇಕಾದರೆ ನೀವೇ ಇಲ್ಲಿಗೆ ಬರಬೇಕು. ಒಂದು ತಿಂಗಳಿಂದ
ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ನಿಮ್ಮ ಮಗಳ ಖಾತೆ ಇನ್ನೂ ಆಪರೇಟಿವ್ ಆಗಿಲ್ಲ. ಒಂದು ವಾರ ಬಿಟ್ಟು ಬನ್ನಿ” ಎಂದು ತಮ್ಮ ಕಾರ್ಯದಲ್ಲಿ ನಿರತರಾದರು. ಅಕೌಂಟ್ ಸ್ಟೇಟ್‌ಮೆಂಟ್ ತೆಗೆದು ಕೊಡುವವಳು, ನಮ್ಮ ಬ್ಯಾಂಕ್ ಸಿಬ್ಬಂದಿಯೊಬ್ಬರು ಇಪ್ಪತ್ತು ಸಾವಿರ ಮೊನ್ನೆ ತಾನೆ ಕಳೆದುಕೊಂಡರು. ಹೀಗಾಗಬಾರದಿತ್ತು ಎಂದು ಅನುಕಂಪ ವ್ಯಕ್ತ ಪಡಿಸಿದಳು.

ಅಂದು ಜೀವನದಲ್ಲಿ ಮೊದಲ ಬಾರಿ ಪೊಲೀಸ್ ಸ್ಟೇಷನ್ನಿನ ಮೆಟ್ಟಿಲು ಹತ್ತಿದ ದಿನವದು. ಸ್ಟೇಷನ್ನಿನ ಒಳಗಡೆ ಹೋಗಿ
ಪೊಲೀಸ್ ಪೇದೆಯಲ್ಲಿ ವಿಷಯ ತಿಳಿಸಿದಾಗ ಅಲ್ಲೇ ಎದುರಿಗೆ ಅಂಟಿಸಿದ ಪೇಪರಿನಲ್ಲಿರುವ ವಿವರಗಳ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೇಳಿ, ನಾಳೆ ಅದರಲ್ಲಿ ಬರೆದಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ.

ಮರುದಿನ ಮರಾಠಿ ಭಾಷೆಯಲ್ಲಿ ಬರೆದ ದೂರಿನ ಪತ್ರ ಹಾಗೂ ವಿವರಗಳ ಜೊತೆಗೆ ಬ್ಯಾಂಕಿನ ಸ್ಟೇಟ್‌ಮೆಂಟನ್ನು ಲಗತ್ತಿಸಿ ಕೊಟ್ಟೆ. ಈ ಸಮಸ್ಯೆ ಬಗೆಹರಿದೀತೇ ಎಂದು ಕೇಳಿದಾಗ ಪೋಲೀಸ್ ಅಧಿಕಾರಿ ಮೊದಲನೇ ದಿನ ಬಂದಿದ್ದ ದೂರಿನ ಪತ್ರಗಳನ್ನು ತೋರಿಸಿ, ಒಬ್ಬರದು ಎರಡು ಲಕ್ಷ ಹೋಗಿದೆ. ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ. ನಾವು ಪ್ರಯತ್ನಿಸುತ್ತೇವೆ. ಇದರ ಜೆರಾಕ್ಸ್ ಪ್ರತಿಗಳನ್ನು ಬ್ಯಾಂಕಿಗೂ ಕೊಟ್ಟು ಬಿಡಿ ಏನಾದರೂ ವಿಷಯ ತಿಳಿದರೆ ಕರೆ ಮಾಡುತ್ತೇವೆ ಅಂದ.

ಬ್ಯಾಂಕಿಗೆ ಹೋಗಿ ಪೋಲೀಸ್ ಕಂಪ್ಲೇಂಟ್ ಕೊಟ್ಟ ಜೆರಾಕ್ಸ್ ಪ್ರತಿಗಳನ್ನು ಕೊಟ್ಟಾಗ, ‘ಇಲ್ಲಿ ಏನೂ ಕೊಟ್ಟು ಪ್ರಯೋಜನವಿಲ್ಲ. ನೀವೇ ಇಟ್ಟುಕೊಳ್ಳಿ. ನಮಗೆ ಇದರ ಅಗತ್ಯ ಇಲ್ಲ. ಇನ್ನೇನು ಮಾಡಿದರೂ ನಿಮ್ಮ ಹಣ ಸಿಗುವುದಿಲ್ಲ. ಇನ್ನು ಮುಂದೆ ಎಚ್ಚರಿಕೆ ವಹಿಸಿ’ ಅಂದರು.

ಕಳೆದ ಒಂದು ವರ್ಷದಿಂದ ವಿಜಯಾ ಬ್ಯಾಂಕಿನಲ್ಲಿರುವ ನನ್ನ ಖಾತೆ ಖಾಲಿಯಾಗಿತ್ತು. ಹೊಟೇಲಿನ ಬಾಡಿಗೆ ಹಣವನ್ನು ಗೂಗಲ್ ಪೇ ಮೂಲಕ ಮಾಲೀಕನ ಖಾತೆಗೆ ಜಮಾಯಿಸುವ ಸಲುವಾಗಿ ಒಂದು ವಾರದ ಹಿಂದೆಯಷ್ಟೇ ಪತಿ ನನ್ನ ಖಾತೆಗೆ ನಲ್ವತ್ತೈದು ಸಾವಿರ ಜಮಾಯಿಸಿದ್ದರು. ಹಿಂದೆ ಬ್ಯಾಂಕಿನ ಖಾತೆ ಖಾಲಿಯಾಗಿರುವಾಗ ಯಾವತ್ತೂ ಈ ತರ ಕರೆ ಬಂದಿರಲಿಲ್ಲ. ಖಾತೆಯಲ್ಲಿ ಹಣ ಇದೆಯಂದಾಗ ಮಾತ್ರ ಈ ಕರೆಗಳು ಹೇಗೆ ಬರುತ್ತವೆ? ಇಂಥದ್ದೇ ಬ್ಯಾಂಕಿನಲ್ಲಿ ನಮ್ಮ ಖಾತೆಯಿದೆ, ಅದರಲ್ಲಿ ಹಣವಿದೆ ಎಂದು ಇತರರಿಗೆ ಹೇಗೆ ತಿಳಿಯುತ್ತದೆ? ನಮ್ಮ ಮೊಬೈಲ್ ನಂಬರ್ ವಂಚಕರ ಕೈಗೆ ಸಿಗುವುದರ ಹಿಂದೆ ಯಾರದಾದರೂ ಕೈವಾಡಗಳಿವೆಯೇ? ಇಂಥ ತೊಂದರೆಗಳು ನಡೆದಾಗ ಗ್ರಾಹಕರಿಗೆ ಬ್ಯಾಂಕಿನಿಂದ ಅಥವಾ ಪೊಲೀಸರಿಂದ ಯಾವುದೇ ಸಹಕಾರ ಯಾಕೆ ಸಿಗುವುದಿಲ್ಲ…! ಇಂಥ ಅನೇಕ ಪ್ರಶ್ನೆಗಳು ಕಾಡುತ್ತವೆ.

ಆ ವಂಚಕನ ಮಾತಿನ ಚಾತುರ್ಯತೆ ಹೇಗಿತ್ತೆಂದರೆ, ಒಂದು ಕ್ಷಣವೂ ಯೋಚನೆ ಮಾಡುವುದಕ್ಕೆ ಅವಕಾಶವೇ ಕೊಡುತ್ತಿರಲಿಲ್ಲ. ಯಾವುದೇ ಕೆಲಸವಾಗಲಿ ಹತ್ತು ಬಾರಿ ಯೋಚಿಸಿ ನಿರ್ಧರಿಸುವ ಹಾಗೂ ಮನೆ ಮಂದಿಗೆಲ್ಲ ತಿಳಿ ಹೇಳುತ್ತಿದ್ದ ನಾನೇ ಅಂದು ಮೋಸ ಹೋಗಿದ್ದೆ. ನನಗೆ ತಿಳಿದಿರುವ ಪ್ರಕಾರ ಈಗ ಅಧಾರ್ ಕಾರ್ಡ್, ಫೋಟೋ ಸಹಿತ ಕೆಲವೊಂದು ದಾಖಲೆಗಳನ್ನು ನೀಡದೇ ಸಿಮ್ ಕಾರ್ಡ್ ಸಿಗುವುದಿಲ್ಲ.

ಆದರೆ ವಂಚಕನ ಮೊಬೈಲ್ ಸಂಖ್ಯೆ ಸಹಿತ ಎಲ್ಲ ಮಾಹಿತಿಯನ್ನು ಕೊಟ್ಟರೂ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲು ಯಾಕೆ ಸಾಧ್ಯವಿಲ್ಲ? ಅದೆಷ್ಟೋ ಸಾಮಾನ್ಯ ಜನರಿಗೆ ಈ ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ನ ಉಪಯೋಗವೆಲ್ಲ ಹೊಸತು. ಆದ್ದರಿಂದ ನಿತ್ಯ ಅದೆಷ್ಟೋ ಅಮಾಯಕರೇ ಬಲಿಯಾಗುತ್ತಿದ್ದಾರೆ. ಇಂಥ ಅನೇಕ ಘಟನೆಗಳು ವಾಟ್ಸ್‌ಆಪ್ ಮೂಲಕ ನಿತ್ಯ ಕಾಣಲು ಸಿಗುತ್ತವೆ. ನೀವು ಬಿಂದಾಸ್ ಕಂಪ್ಲೇಂಟ್ ಕೊಡಿ. ನಮ್ಮನ್ನು ಏನೂ ಮಾಡಲಿಕ್ಕೆ ಆಗುವುದಿಲ್ಲ. ನಾವು ದಿನಕ್ಕೆ ಹೀಗೆಯೇ
ಒಂದೆರಡು ಲಕ್ಷ ರುಪಾಯಿ ಸಂಪಾದಿಸುತ್ತೇವೆ.

ಏನು ಬೇಕಾದ್ರೂ ಮಾಡಿ ಎಂದು ಈ ದಂಧೆಯಲ್ಲಿ ತೊಡಗಿರುವವರು ರಾಜಾರೋಷವಾಗಿ ಹೇಳುತ್ತಾರಂತೆ. ಹೀಗೆ ಅವರು ಹೇಳಬೇಕಾದರೆ ಅದರ ಹಿಂದಿರುವ ಒಳಮರ್ಮವೇನು? ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಮೋಸ ಮಾಡಿ ಕೂತಲ್ಲಿಯೇ ಸಂಪಾದಿಸುವ ಮೋಸಗಾರರ ಹಿಂದೆ ದೊಡ್ಡ ಜಾಲವೇ ಇದೆಯಂತೆ. ನಮ್ಮ ಸುತ್ತಮುತ್ತ ಇರುವವರಲ್ಲಿಯೇ ಕೆಲವರು ಇದೇ ದಂದೆಯಲ್ಲಿ ತೊಡಗಿದ್ದಾರೆ, ಲಾಕ್‌ಡೌನ್ ವೇಳೆಯಲ್ಲಿ ಇಂಥ ಅವ್ಯವಹಾರಗಳು ಇನ್ನೂ ಹೆಚ್ಚಾಗಿವೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

ಪಾರದರ್ಶಕವಾದ ಆರ್ಥಿಕ ನೀತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕೆಂದು ಕಾನೂನು ಜಾರಿಯಾಗುವಾಗ ಅದರಲ್ಲಿ ಆಗುವಂಥ ಅನಾಹುತಗಳ ಬಗ್ಗೆಯೂ ಸಂಬಂಧಪಟ್ಟವರು ಗಮನಹರಿಸಬೇಕಲ್ಲವೇ? ಒಟಿಪಿ ಶೇರ್ ಮಾಡಿಕೊಂಡರೆ ಮಾತ್ರವಲ್ಲ, ಮೊಬೈಲ್‌ಗೆ ಬಂದ ಲಿಂಕ್ ಒತ್ತಿದರೂ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಆನ್‌ಲೈನ್ ಮೂಲಕ ನಾನಾ ರೀತಿ ನಡೆಯುವ ಅವ್ಯವಹಾರಗಳ ಸುದ್ದಿ ನಿರಂತರವಾಗಿ ಕೇಳಿ ಬರುತ್ತಿದ್ದರೂ ಇನ್ನೂ ಯಾಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯ ವಾಗುತ್ತಿಲ್ಲ? ಯಾವುದೇ ಒಂದು ಕಾನೂನುಗಳನ್ನು ಎಲ್ಲರೂ ಅನುಸರಿಸಲೇಬೇಕಾದಾಗ ಅದರಿಂದ ಆಗುವ ತೊಂದರೆಗಳ ಬಗೆಗೂ ಯೋಚಿಸಿ, ಅಂಥ ಮೊಸಗಾರರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡಲ್ಲಿ ಹಲವಾರು ಅಮಾಯಕರು ಇಂಥ ಜಾಲಕ್ಕೆ ಬಲಿಯಾಗುವುದನ್ನು ತಡೆಯಬಹುದು.

Leave a Reply

Your email address will not be published. Required fields are marked *