Wednesday, 11th December 2024

ಕಪ್ಪು ವರ್ಣದ ಹೆಸರಲ್ಲಿ ಆರೋಪ ಸರಿಯಲ್ಲ

ಅನಿಸಿಕೆ
ಶ್ರೀರಂಗ ಪುರಾಣಿಕ

ಗೌರವ ವರ್ಗದವರನ್ನು ತಪ್ಪು ಮಾಡಿದರೂ ಜನ ನಂಬುತ್ತಾರೆ, ಕಪ್ಪಿದ್ದವರನ್ನು ನಂಬುವುದಿಲ್ಲವೆಂದು ದುನಿಯಾ ವಿಜಯ್ ಕಪ್ಪು ವರ್ಣದ ಕುರಿತು ಏಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಪ್ರಾಯಶಃ ಡ್ರಗ್ಸ್‌ ಪ್ರಕರಣದಲ್ಲಿ ಅವರ ಹೆಸರು ಕೇಳಿಬರಬಹುದೆಂಬ ಅಳುಕಿನಿಂದ ಸಿಂಪತಿಗಾಗಿ ಹೀಗೆ ಹೇಳುತ್ತಿದ್ದಾರೆನೋ? ಆದರೆ ಚಿತ್ರಭಿಮಾನಿಗಳಾದ ನಾವು ದುನಿಯಾ ವಿಜಯ್ ಅವರನ್ನು ಪ್ರಶ್ನಿಸಬೇಕು.

ದುನಿಯಾ ಚಿತ್ರದ ಮೂಲಕ ನಾಯಕರಾದಾಗ ನಟನೆ ನೋಡಿ ಕನ್ನಡದ ಚಿತ್ರಾಭಿಮಾನಿಗಳು ಒಪ್ಪಿಕೊಂಡರೇ ಹೊರತು ಅವರ ರೂಪದಿಂದಲ್ಲ. ಕನ್ನಡದ ಅನೇಕ ಜನಪ್ರಿಯ ನಾಯಕನಟರ ಬಣ್ಣ ಕಪ್ಪು. ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ರಜನಿಕಾಂತ್ ಬಣ್ಣವೂ ಕಪ್ಪು. ತೆಲುಗಿನಲ್ಲಿ ಮೆಗಾಸ್ಟಾರ್ ಎಂದು ಕರೆಸಿಕೊಳ್ಳುವ ಚಿರಂಜೀವಿ ಬಣ್ಣವೂ ಸಾದಗಪ್ಪು. ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತದೆ. ಕಲಾವಿದರನ್ನು ಅಭಿನಯದಿಂದ ಸ್ವೀಕರಿಸುವರೆ ಹೊರತು ಬಣ್ಣದಿಂದ ಅಳೆಯುವರಲ್ಲ ಭಾರತೀಯ ಚಿತ್ರಾಭಿಮಾನಿಗಳು.

ಅನೇಕ ಗೌರವ ವರ್ಣದ ನಟರು ನಾಯಕನಟರಾಗಿ ಚಿತ್ರರಂಗದಕ್ಕೆ ಪಾದಾರ್ಪಣೆಮಾಡಿದರೂ ಚಿತ್ರಾಭಿಮಾನಗಳು ಸ್ವೀಕರಿಸಿದ ಕಾರಣ ಪೋಷಕ ನಟರಾಗಿ ಉಳಿದುಕೊಂಡಿದ್ದಾರೆ. ಇನ್ನು ಕೆಲವರು ಚಿತ್ರರಂಗದಿಂದ ದೂರಾದ ಉದಾಹರಣೆಗಳು ಅನೇಕ. ಭಾರತೀಯರು ಪೂಜಿಸುವ ಕೃಷ್ಣನೇ ಕಪ್ಪುವರ್ಣೀಯನು. ಕೃಷ್ಣನನ್ನು ಪೂಜ್ಯಭಾವದಿಂದ ಕಾಣುವ ಭಾರತೀಯರು  ಕಪ್ಪು ವರ್ಣಿಯರನ್ನು ಕೃಷ್ಣವರ್ಣದವರೆಂದು ಗೌರವ ಪೂರ್ವಕವಾಗಿ ಕರೆಯುತ್ತೇವೆ.

ಭಾರತೀಯರಲ್ಲಿ ವರ್ಣದ್ವೇಷ ಮೂಡಿಸಿದವರು ಬ್ರಿಟಿಷರಾಗಿದ್ದಾರೆ. ಅವರು ಕಪ್ಪುವರ್ಣಯ ನೀಗ್ರೋಗಳನ್ನು ಗುಲಾಮರಂತೆ ಕಾಣುತ್ತಿದ್ದರು. ದೇವರು ಕೆಂಪುವರ್ಣೀಯರಾದ ನಮಗೆ ಜಗತ್ತನ್ನು ಆಳುವ ಅವಕಾಶ ನೀಡಿದ್ದಾನೆ ಅವರು ಹೇಳುತ್ತಿದ್ದರು. ಈ ಇತಿಹಾಸದ ವಿಷಗಳಿಗೂ ಚಿತ್ರರಂಗಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೇ ನೋಡಿದರೆ ಕಪ್ಪು ವರ್ಣದ ನಟಿಯರಿಗೆ ಕಪ್ಪೆಂದು ಚಿತ್ರರಂಗದವರೆ ತಾರತಮ್ಯ ಮಾಡುತ್ತಾರೆ ಹೊರತು, ಚಿತ್ರಾಭಿಮಾನಿಗಳಲ್ಲ. ನಟರು ಕಪ್ಪಾಗಿದ್ದರೆ ನಡೆಯುತ್ತದೆ. ನಾಯಕ ನಟಿಯರು ಮಾತ್ರ ಕಪ್ಪಾಗಿರಬಾರದು.

ಇದು ಚಿತ್ರರಂಗದಲ್ಲಿನ ಅಲಿಖಿತ ನಿಯಮವಾಗಿದೆ. ಕೇವಲ ಮೈಮಾಟ ಪ್ರದರ್ಶಿಸುವ ನಟಿಯರಿಗೆ ನಾಯಕಿಯ ಪಟ್ಟಕೊಟ್ಟು ಚೆನ್ನಾಗಿ ಅಭಿನಯಿಸುವ ನಟಿಯರಿಗೆ ಪೋಷಕ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ. ತಮಿಳುನಾಡಿನಲ್ಲಿ ಹೆಚ್ಚಿನ ನಟರು ಕಪ್ಪುವರ್ಣದವರಾದರೂ ನಾಯಕಿ ಮಾತ್ರ ಗೌರವ ವರ್ಣದವಳಾಗಿರುತ್ತಾಳೆ. (ಒಂದಿಬ್ಬರು ನಟಿಯರನ್ನು ಹೊರತುಪಡಿಸಿ ಉಳಿದ ನಟಿಯರು ಗೌರವವರ್ಣದವರಾಗಿದ್ದಾರೆ) ಇದಕ್ಕೂ ದುನಿಯಾ ವಿಜಯ್ ಹೇಳಿಕೆಗೂ ಸಂಬಂಧವಿಲ್ಲ. ಕನ್ನಡ ಚಿತ್ರರಂಗದಲ್ಲಿ ಯಶಸ್ಸಿ ನಾಯಕ ನಟನೆಂದೇನಿಸಿಕೊಂಡಿದ್ದ ದುನಿಯಾ ವಿಜಯ್ ಉತ್ತುಂಗ ಏರುತ್ತಲೇ ಹಣದ ಮದವೋ ಹೆಣ್ಣಿನ ಚಪಲವೋ? ಹಲವಾರು ನಟಿಯರೊಂದಿಗೆ ಅಕ್ರಮ ಸಂಬಂಧದ ವದಂತಿಗಳು, ಅದಕ್ಕೆ ಪೂರಕವಾದ ಪುರಾವೆಗಳು ಜಾಲತಾಣದಲ್ಲಿ ಹರಿದಾಡಿದವು.

ಕಷ್ಟದಲ್ಲಿ ಕೈ ಹಿಡಿದ ಹೆಂಡತಿಯನ್ನು ಕೈಬಿಟ್ಟು ಇನ್ನೊಬ್ಬಳನ್ನು ಮದುವೆಯಾದವರು ದುನಿಯಾ ವಿಜಯ್. ತಮ್ಮ ಜೀವನದಲ್ಲಿ ಮಾಡಿಕೊಂಡ ಎಡವಟ್ಟುಗಳಿಂದ ಅಭಿಮಾನಿಗಳ ಮನಸ್ಸಿನಿಂದಲೂ ದೂರಾದರು. ಅಭಿಮಾನಿಗಳ ಪಾಲಿಗೆ ಆದರ್ಶವಾಗ ಬೇಕಿದ್ದರೆ ವೈಯಕ್ತಿಕ ಬದಕು ಆದರ್ಶಮಯವಾಗಿರಬೇಕು. ಪಾರದರ್ಶಕವಾಗಿರಬೇಕು. ಕನ್ನಡ ನಟರಾದ ವಿಷ್ಣು ವರ್ಧನ್, ಅನಂತನಾಗ್, ಶಂಕರ್ ನಾಗ್, ನರಸಿಂಹ ರಾಜು, ಮುಸರಿ ಕೃಷ್ಣಮೂರ್ತಿ , ಬಾಲಕೃಷ್ಣ, ಕಲ್ಯಾಣ ಕುಮಾರ್, ರಾಜಕುಮಾರ, ಉದಯ ಶಂಕರ್, ವಜ್ರಮುನಿ, ಜಗ್ಗೇಶ್, ರಾಮಕೃಷ್ಣ, ಶ್ರೀಧರ್ ಇನ್ನು ಅನೇಕ ನಟರು ಹಾಗೇ ಇದ್ದರು. ಹೀಗಾಗಿಯೇ ಅವರನ್ನು ಇಂದಿಗೂ ಆದರ್ಶಮಯವಾಗಿ ನೋಡುತ್ತಾರೆ, ಆರಾಧಿಸುತ್ತಾರೆ.