ಅಭಿಮತ
ಸಂದೀಪ್ ಶರ್ಮಾ
ಕನ್ನಡ ಸಾಹಿತ್ಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಿಗೆ ಬೆಳೆಯಬೇಕು ಎಂದೆಲ್ಲಾ ಹಿಂದಿನ ಹಾಗೂ ಇಂದಿನ ಸರಕಾರಗಳೂ ಘೋಷಿಸುತ್ತಲೇ ಬಂದಿವೆ. ಆದರೆ ಕನ್ನಡ ಸಾಹಿತ್ಯ ಪುಸ್ತಕಗಳ ಓದು ಕ್ಷಿಣಿಸುತ್ತಿದೆ ಎಂಬುದನ್ನು ಸರಕಾರಗಳು ಮನಗಂಡಂತಿಲ್ಲ.
ಇತ್ತೀಚೆಗೆ ಈ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ, ಗ್ರಂಥಾಲಯ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುವ ಕ್ರಮಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿದೆ. ಪಬ್ಲಿಕ್ ಲೈಬ್ರರಿಗಳಿಗೆ ಪ್ರತಿವರ್ಷ ಖರೀದಿಸಲಾಗುವ ಪುಸ್ತಕಗಳಿಗೆ ನೀಡಲಾಗುವ ಅನುದಾ ನದಲ್ಲಿ ಶೇ.30ರಷ್ಟನ್ನು ಕಡಿತ ಮಾಡಲಾಗಿದೆ. ಈಗ ಕರೋನಾ ತಂದೊಡ್ಡಿರುವ ಸಂಕಷ್ಟದಿಂದ ವಾಚಕರು ಗ್ರಂಥಾಲಯಕ್ಕೆ ಹೋಗುವುದನ್ನೇ ತಡೆದಿದೆ.
ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಖರೀದಿಗೆ ಮೀಸಲಿಡುತ್ತಿದ್ದ ಅನುದಾನದಲ್ಲೂ ಶೇ.5ಕ್ಕೆ ಕತ್ತರಿ ಹಾಕಲಾಗಿದೆ. ಈಗ ಮತ್ತಷ್ಟು ಕತ್ತರಿ ಬೀಳುತ್ತದೆ. ಉಳಿಯುವ ಮೊತ್ತದಲ್ಲಿ ಹೆಚ್ಚಿನ ಹಣ ಗ್ರಂಥಾಲಯ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಗೆ ನೀಡಲಾ ಗಿದೆ.
ಗ್ರಂಥಾಲಯಗಳ ಡಿಜಿಟಲೀಕರಣ, ಇ – ಪುಸ್ತಕಗಳ ಖರೀದಿಗೆ ಇಲಾಖೆ ಮುಂದಾಗಿದ್ದು, 10 ಕೋಟಿ ರುಪಾಯಿಗಳನ್ನು ಇದಕ್ಕಾಗಿ ಮೀಸಲಿಟ್ಟಿರುವುದು ವಿಚಿತ್ರ ಸಂಗತಿ.ವಾಚಕರು ಎಲ್ಲ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲ. ಹಲವು ಅಮೂಲ್ಯ ಸಾಹಿತ್ಯವು ಆರ್ಥಿಕವಾಗಿಯೂ ಬೆಲೆ ಬಾಳುವಂಥದ್ದಾಗಿದ್ದು, ಪರಿಶೀಲನೆಗಷ್ಟೆ ಲಭ್ಯ. ಆದರೆ ಜ್ಞಾನವು ಎಲ್ಲರಿಗೂ ಮುಕ್ತ ಹಾಗೂ ಲಭ್ಯ ವಾಗಿರಬೇಕು ಎಂಬ ಆಶಯದಿಂದ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ರೂಪುಗೊಂಡಿದೆ. ಕನ್ನಡದಲ್ಲಿ ಪ್ರತಿವರ್ಷ ಸುಮಾರು 5000 – 6000 ಪುಸ್ತಕಗಳು ಬಿಡುಗಡೆಯಾಗುತ್ತವೆ.
ಅದರಲ್ಲಿ ಮುಖ್ಯವೆನಿಸಿದವನ್ನು ಆಯ್ಕೆ ಮಾಡಿ ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಈ ಖರೀದಿಯಲ್ಲೂ ಸಾಕಷ್ಟು ಅವ್ಯವ ಹಾರದ ವಾಸನೆ ಮೂಗಿಗೆ ನಿಧಾನವಾಗಿ ನಾಟುತ್ತಿದೆ. ಇದಕ್ಕೊಂದು ಪಾರದರ್ಶಕ ವ್ಯವಸ್ಥೆಯೂ ಇಲ್ಲ. ಲೆಕ್ಕ ಪರಿಶೋಧನೆ ಯಂತು ಇಲ್ಲವೇ ಇಲ್ಲ. ಹಲವು ವರ್ಷಗಳಿಂದ ಗ್ರಂಥಾಲಯ ಕಟ್ಟಡಗಳು ಶಿಥಿಲಗೊಂಡಿದ್ದರೂ ದುರಸ್ತಿ ಕಾರ್ಯಗಳಾಗದೆ ಈಗಲೋ ಆಗಲೋ ಎಂಬ ದಿನಲೆಕ್ಕದ ಪರಿಸ್ಥಿತಿಯಲ್ಲಿ ಕಟ್ಟಡಗಳು ನಿಂತಿವೆ. ಕಟ್ಟಡಗಳನ್ನು ದುರಸ್ತಿಗೊಳಿಸದೆ ಡಿಜಿಟಲೀ ಕರಣ ಹಾಗೂ ಇ – ಬುಕ್‌ಗಳ ಖರೀದಿಗೆ ಹೆಚ್ಚಿನ ಹಣ ಮೀಸಲಿಡುತ್ತಿರುವುದು ಸದ್ಯಕ್ಕೆ ಅವ್ಯವಹಾರಿಕ, ಅಪ್ರಾಯೋಗಿಕ ಕೂಡ.
ಕನ್ನಡದಲ್ಲಿ ಇ- ಬುಕ್‌ಗಳು ಬೆರಳೆಣಿಕೆಯಷ್ಟಿವೆ. ಕೆಲವರು ಕನ್ನಡದಲ್ಲಿ ಇ – ಪುಸ್ತಕಗಳ ಮಾರುಕಟ್ಟೆ ಸೃಷ್ಟಿಗೆ ಪ್ರಯತ್ನಿಸಿ ಕೈ ಸೋತಿದ್ದಾರೆ. ಇಂಥ ಸನ್ನಿವೇಶದಲ್ಲಿ ಇ – ಬುಕ್ ಗಳನ್ನು ಎಲ್ಲಿಂದ ಖರೀದಿಸುತ್ತಾರೆ? ಇರುವ ಮೂರ್ನಾಲ್ಕು ಇ – ಪುಸ್ತಕಗಳ ಖರೀದಿಗೆ ಕೋಟ್ಯಂತರ ರುಪಾಯಿ ಅನುದಾನ ಬೇಕೆ? ಹೋಗಲಿ, ಇ – ಬುಕ್‌ಗಳನ್ನು ಓದುಗರಿಗೆ ಹಂಚುವ, ಹಿಂಪಡೆಯುವ ವ್ಯವಸ್ಥೆ ಹೇಗೆ? ಅದಕ್ಕೆ ಬೇಕಾಗುವಷ್ಟು ಮೂಲಸೌಕರ್ಯಗಳು ಇಲಾಖೆಯಲ್ಲಿವೆಯೇ? ಸಿಬ್ಬಂದಿಗಳಿಗೆ ಈ ಆಧುನಿಕ ವ್ಯವಸ್ಥೆಯ ತರಬೇತಿ ಇದೆಯೇ? ಈಗಿನ್ನೂ ಅಮೂಲ್ಯ ಗ್ರಂಥಗಳ ಡಿಜಿಟಲೀಕರಣದ ವ್ಯವಸ್ಥೆ ಆರಂಭವಾಗಿದೆ.
ಭವಿಷ್ಯದ ಓದುವಿಕೆ ಕ್ಷೇತ್ರವು ಡಿಜಿಟಲ್ ಆಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಸಿದ್ಧತೆಗಳೂ ಆಗಬೇಕು. ಆದರೆ ಆ ಕಾಲವಿನ್ನೂ ದೂರವಿದೆ. ಕನ್ನಡದ ಮಾತ್ರವಲ್ಲ, ಇಂಗ್ಲಿಷ್ ಓದುಗರೂ ಕೂಡ ಇ – ಬುಕ್‌ಗಳನ್ನು ಓದುವುದಕ್ಕಿಂತಲೂ ಕಾಯಂಪ್ರತಿಗಳನ್ನು ಓದುವುದನ್ನೇ ಇಷ್ಟಪಡುತ್ತಾರೆ. ಡಿಜಿಟಲ್ ವ್ಯವಸ್ಥೆಯೇ ಸ್ವಯಂಪೂರ್ಣವಲ್ಲ. ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲದ ವಯಸ್ಕರು ಮೊದಲಿನ ವ್ಯವಸ್ಥೆಯಲ್ಲೆ ಉಳಿಯುತ್ತಾರೆ.
ಮುದ್ರಿತ ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ಇವರನ್ನು ಓದುವಿಕೆಯ ಸಾಧ್ಯತೆಗಳಿಂದ
ವಂಚಿಸಿದಂತಾಗುತ್ತದೆ. ಮುದ್ರಿತ ಪುಸ್ತಕಗಳ ಖರೀದಿ ನಿಲ್ಲಿಸಿದರೆ ಇವರ ಬೆನ್ನೆಲುಬೇ ಮುರಿದ ಹಾಗೆ. ಸದ್ಯಕ್ಕೆ ಗ್ರಂಥಾಲಯ ವ್ಯವಸ್ಥೆಗೆ ಕಾಯಕಲ್ಪ ಆಗಬೇಕು. ಪ್ರಕಾಶಕರ ಹಾಗೂ ಓದುಗರ ಹಿತ ಕಾಪಾಡಿಕೊಳ್ಳುವಂತೆ ಅನುದಾನ ಮರುಹಂಚಿಕೆ, ಡಿಜಿಟಲೀಕರಣ, ಪುಸ್ತಕ ಖರೀದಿಯಲ್ಲಿ ಪಾರದರ್ಶಕತೆಗಳು ಮೂಡಬೇಕು.