ಅಭಿಮತ
ಬಸವರಾಜ ಶಿವಪ್ಪ ಗಿರಗಾಂ
ಭಾರತದ ರೈತ ಚಿಂತಕ ಮಾಜಿ ಪ್ರಧಾನಿ ಶ್ರೀಚೌಧುರಿ ಚರಣಸಿಂಗರವರ ಜನ್ಮದಿನವನ್ನು ರೈತ ಕಾಯಕಕ್ಕೆ ಗೌರವ ಅರ್ಪಿಸಲು ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ರೈತ ಕುಟುಂಬದ ಚರಣಸಿಂಗರು ಉತ್ತರಪ್ರದೇಶದ ಘಾಜಿಯಾಬಾದ ಜಿಲ್ಲೆಯ ನೂರ್‌ಪುರ್ ಎಂಬ ಕುಗ್ರಾಮದಲ್ಲಿ ಡಿಸೆಂಬರ್ 23, 1902ರಂದು ಜನಿಸಿದರು.
ಅರ್ಥಶಾಸದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದಯನ್ನು ಪಡೆದಿದ್ದರು. ತಮ್ಮ ಮೂಲ ಕಾಯಕ ಕೃಷಿಯಲ್ಲಿ ತಲ್ಲೀನರಾಗಿದ್ದರು. ಸ್ವಾತಂತ್ರ್ಯ ಪೂರ್ವ 1937ರಲ್ಲಿ ಚಪ್ರೌಲಿ ಕ್ಷೇತ್ರದಿಂದ ೩೪ನೇ ವಯಸ್ಸಿನಲ್ಲಿಯೇ ಶಾಸಕರಾಗಿದ್ದ ಚರಣ ಸಿಂಗರು ರೈತರ ಕಷ್ಟ – ನಷ್ಟಗಳನ್ನು ಸ್ವತಃ ಅನುಭವಿಸಿರುವ ಪರಿಣಾಮ ರಾಜಕೀಯ ಅಧಿಕಾರದಲ್ಲಿ ರೈತರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.
ದೇಶಾದ್ಯಂತ ಜಾರಿಯಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ಜಾರಿಗೊಳಿಸಿದ ಕೀರ್ತಿ ಚೌಧರಿಯವರಿಗೆ ಸಲ್ಲುತ್ತದೆ. ಜಮೀನ್ದಾರಿ ಪದ್ಧತಿ ನಿಷೇಧ, ಭೂ ಸುಧಾರಣೆ ಕಾಯಿದೆ ಜಾರಿ, ಭಾರತೀಯ ಕಾರ್ಮಿಕ ಕಾಯಿದೆಗೆ ಹೊಸ ರೂಪುರೇಷೆ ಹಾಗೂ ಭೂಮಾಲಿಕರು ಮತ್ತು ಹಣ ಹೂಡಿಕೆದಾರರ ವಿರುದ್ಧ ರೈತರನ್ನು ಒಗ್ಗೂಡಿಸಿ ಸಾರ್ವಜನಿಕವಾಗಿ ಪ್ರಶಂಸಿಸಲ್ಪಟ್ಟರು. ಭಾರತ ದಲ್ಲಿರುವ ಶೇ.70ರಷ್ಟು ಅನಕ್ಷರಸ್ಥ ರೈತರ ಶ್ರಮದಾಯಕ ಕೃಷಿ ಜೀವನದ ಕುರಿತು ಕಳಕಳಿ ಹೊಂದಿದ್ದರು.
ರೈತರು ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿರಬೇಕು ಹಾಗೂ ಇಡಿ ಮಾನವ ಸಂಕುಲವು ರೈತರ ಕಷ್ಟಗಳನ್ನು ಅರ್ಥೈಸಿ ಕೊಂಡು ರೈತರನ್ನು ಸದಾ ಸ್ಮರಿಸುತ್ತಿರಬೇಕು ಎಂಬುದು ಚೌಧರಿಯವರ ನಿಲುವಾಗಿತ್ತು. ದೇಶದ 5ನೇಯ ಪ್ರಧಾನಿ, ಉಪ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರಾಗಿ ಹಲವಾರು ಸುಧಾರಣೆಗಳನ್ನು ಜಾರಿಗೊಳಿಸಿದರು. ಆರ್ಥಿಕ ಸುಧಾರಣೆಯ ಹೆಸರಿನ ನೀತಿಗಳನ್ನು ನಿಷ್ಠೂರರಾಗಿ ವಿರೋಧಿಸುತ್ತಿದ್ದರು. ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರಕಾರಗಳು ಸತತ ಪ್ರಯತ್ನಿಸು ತ್ತಿವೆ.
ಕೃಷಿ ದ್ವಿಗುಣ ಆಯೋಗ ರಚನೆ, ಸಹಾಯಧನ, ನೀರಾವರಿ ಯೋಜನೆ, ಬಡ್ಡಿರಹಿತ ಸಾಲ, ಸಾಲಮನ್ನಾ, ಕೃಷಿ ಉಪಕರಣಗಳ ಸೌಲಭ್ಯ, ತಂತ್ರಜ್ಞಾನಗಳ ಮಾಹಿತಿ, ಅಧ್ಯಯನ ಪ್ರವಾಸ, ಬೀಜ – ಗೊಬ್ಬರಗಳ ಸೌಲಭ್ಯ, ಮುಕ್ತ ಮಾರುಕಟ್ಟೆ, ಬೆಳೆ ವಿಮೆ, ಪ್ರಕೃತಿ ವಿಕೋಪಗಳ ಪರಿಹಾರ, ಆಹಾರ ಸಂಸ್ಕರಣೆ, ಕೃಷಿ ಕೈಗಾರಿಕೆಗಳು ಹಾಗೂ ಬೆಂಬಲ ಬೆಲೆ ಸೇರಿದಂತೆ ಹಲವಾರು ಕ್ರಮಗಳ ಅನುಷ್ಠಾನಕ್ಕಾಗಿ ಲಕ್ಷಾಂತರ ಕೋಟಿ ಹಣ ಖರ್ಚು ಮಾಡಿದರೂ ರೈತ ಮಾತ್ರ ಇಂದು ಸುಖಿಯಾಗಿಲ್ಲ.
ರೈತ ಸುಖಿಯಾಗದಿರುವ ನೈಜ ಕಾರಣಗಳನ್ನು ಸರಕಾರವು ಸ್ವತಃ ಫೀಲ್ಡಿಗಿಳಿದು ಗುರುತಿಸದೆ ಕೇವಲ ಕಾಗದದಲ್ಲಿನ ಕಾರಣಗಳ ಪರಿಣಾಮ ಕೃಷಿಯ ನಿರೀಕ್ಷಿತ ಸುಧಾರಣೆ ಅಸಾಧ್ಯವಾಗಿದೆ. ಸರಕಾರವು ಕೇವಲ ಎಸಿ ರೂಮಿನಲ್ಲಿ ಕುಳಿತು ಕೃಷಿಯ ಗಂಧ – ಗಾಳಿ ಗೊತ್ತಿರದ ಹಲವರ ಮಾಹಿತಿಗೆ ಮಣೆ ಹಾಕಿ ಕಾರ್ಪೋರೇಟರ್‌ಗಳ ಪರವಾದ ನೀತಿಗಳನ್ನು ಘೋಷಣೆ ಮಾಡುತ್ತಿರುವುದು ಆತಂಕ ಕಾರಿ ಬೆಳವಣಿಗೆ.
ರೈತ ಶ್ರೇಷ್ಠ, ವ್ಯಾಪಾರಿ ಮಧ್ಯಮ, ನೌಕರಿ ಕನಿಷ್ಠ ಹಾಗೂ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ನಾಣ್ಣುಡಿ ಗಳಂತೆ ಕೃಷಿಗೆ ತನ್ನದೇ ಆದ ಮರ್ಯಾದೆ ಇದೆ. ಭಾರತದಲ್ಲಿ ಕೃಷಿಯನ್ನು ಕ್ರಿ.ಪೂ. 9000 ವರ್ಷಗಳ ಹಿಂದಿನಿಂದಲೆ ಮುಂದು ವರಿಸಿಕೊಂಡು ಬರಲಾಗುತ್ತಿದೆ. ಇತ್ತಿತ್ತಲಾಗಿ ಕೃಷಿ ಪ್ರಾರಂಭಿಸಿದ ಅಮೆರಿಕೆಯ ಕ್ಯಾಲಿಫೋರ್ನಿಯಾ, ಚೀನಾ ಮತ್ತು ಇಸ್ರೇಲ್ ದೇಶಗಳ ಶೇ.90 ರೈತರು ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಶ್ಲಾಘನೀಯ.
ಆದರೆ ನೈಸರ್ಗಿಕ ಸಂಪನ್ಮೂಲ ಹೇರಳವಾಗಿರುವ ಭಾರತದಲ್ಲಿ ಕೇವಲ ಶೇ.5 ರೈತರು ಸಾಧನೆ ಮಾಡುತ್ತಿದ್ದಾರೆ. ಈ ಸಾಧನೆಯು ಇನ್ನುಳಿದ ಶೇ.95 ರೈತರಲ್ಲೂ ಏಕಿಲ್ಲ? ವಿಶ್ವಕ್ಕೆ ಕೃಷಿಯನ್ನು ಪರಿಚಯಿಸಿದ ಭಾರತೀಯರು ಇಂದು ಸೋಮಾರಿಗಳಾದರೆ?
ಅಥವಾ ಸರಕಾರಗಳು ಮತಬ್ಯಾಂಕ್‌ಗಾಗಿ ಸಹಾಯ ಕಲ್ಪಿಸಿ ಸೋಮಾರಿಯನ್ನಾಗಿಸಿದರೆ? ಎಂಬ ಜಿಜ್ಞಾಸೆಯು ಕೃಷಿ ಪಂಡಿತ ರನ್ನು ಮತ್ತು ಜ್ಞಾನಿಗಳನ್ನು ಕಾಡುತ್ತಿದೆ.
ಒಟ್ಟಾರೆ ರೈತರಲ್ಲಿ ಸ್ವತಃ ಮೈಮುರಿದು ದುಡಿಯುವ ಶಕ್ತಿ ಕಡಿಮೆಯಾಗಿ ಆರೋಗ್ಯವೂ ಹಾಳಾಗುತ್ತಿದೆ. ಭಾರತದ ರೈತ ಚಿಂತಕ ಮಾಜಿ ಪ್ರಧಾನಿ ಶ್ರೀಚೌಧುರಿ ಚರಣಸಿಂಗರವರ ಜನ್ಮದಿನವನ್ನು ರೈತ ಕಾಯಕಕ್ಕೆ ಗೌರವ ಅರ್ಪಿಸಲು ರೈತ ದಿನಾಚರಣೆಯನ್ನಾಗಿ
ಆಚರಿಸಲಾಗುತ್ತಿದೆ.