Wednesday, 11th December 2024

ಕೃಷಿಗೆ ಮಾರಕ ಕಾಡಾನೆಗಳ ದಾಳಿ

ಅಭಿಮತ

ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ

ದೇಶದ ರೈತ ಕಳೆದ ಹಲವಾರು ದಶಕಗಳಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿzನೆ. ಆತನ ಸಂಕಷ್ಟ ಆಲಿಸುವ ಪುರುಸೊತ್ತು ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ. ಬೆಂಬಲ ಬೆಲೆ, ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯ, ದಲ್ಲಾಳಿಗಳ ಹಾವಳಿ, ಸಾಲ ಬಾಧೆ, ಕೃಷಿ ಚಟುವಟಿಕೆಗಳಿಗೆ ರೋಗದ ಭೀತಿ, ಸೂಕ್ತ ಮಾರುಕಟ್ಟೆ ಕೊರತೆ ಸೇರಿದಂತೆ ಇನ್ನಿತರ ತೊಂದರೆಗಳ ಸುಳಿಯಲ್ಲಿ ಅನ್ನದಾತ ಸಿಲುಕಿರುವುದಂತೂ ಸುಳ್ಳಲ್ಲ. ಈ ದೇಶದ ಕಾವಲುಗಾರನಾಗಿರುವ ಸೈನಿಕನಂತೆಯೇ ಅನ್ನದಾತನು ಕೂಡ ಒಂದು ಪ್ರಮುಖ ಭಾಗವೇ ಸರಿ. ದಿನವಿಡೀ ಹೊಲದಲ್ಲಿ ದುಡಿದು ಕಟ್ಟಿಕೊಂಡು ಹೋದ ಬುತ್ತಿಯ ಅನ್ನ ಉಂಡು ಬೆನ್ನು ಬಾಗಿಸಿ ದುಡಿಯುವ ಶ್ರಮಜೀವಿ ಅರ್ಥಾತ್ ಉಳುವ ಯೋಗಿ ನಮ್ಮ ದೇಶದ ಬೆನ್ನೆಲುಬೇ ಸರಿ.

ಪ್ರಸ್ತುತ ಮಲೆನಾಡು, ಹಾಸನ, ಉತ್ತರ ಕನ್ನಡ, ಕೊಡಗು, ರಾಮನಗರ, ಹಾವೇರಿ, ಕಾಸರಗೋಡು, ಗುಂಡ್ಯ, ಬಿಳಿನೆಲೆ, ಸುಳ್ಯ ಸುಬ್ರಹ್ಮಣ್ಯ, ಮೈಸೂರು ಸೇರಿದಂತೆ ಹಲವಾರು ಜಿಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಕಾಡಾನೆಗಳ ಹಿಂಡಿನ ಸಂಚಾರ ಸೇರಿದಂತೆ ಹಲವಾರು ವನ್ಯಮೃಗಗಳ ದಾಳಿಯಿಂದ ಕೋಟ್ಯಂತರ ಪ್ರಮಾಣದ ಬೆಳೆ ಹಾನಿಯಾಗುತ್ತಿರುವುದು ಪ್ರತಿ ವರ್ಷವೂ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇಂತಹ ಒಂಟಿ ಸಲಗಗಳ ದಾಳಿಯಿಂದ ಅಪಾರ ಪ್ರಮಾಣದ ಕಾಫಿ, ತೆಂಗು, ಮಾವು, ಅಡಿಕೆ, ಬಾಳೆ, ಏಲಕ್ಕಿ, ಶುಂಠಿ, ಭತ್ತ, ತರಕಾರಿ ಸೇರಿದಂತೆ ಹಲವಾರು ಬೆಳೆಗಳು ತುಳಿತಕ್ಕೊಳಗಾಗಿ ಹಾನಿಯಾಗುತ್ತಿರುವುದು ಒಂದೆಡೆಯಾದರೆ,
-ಸಲು ಕೊಡುವ ಬೆಳೆಗಳು ಪದೇ ಪದೆ ಹಾನಿಗೀಡಾದರೆ ಮತ್ತೆ ಮರುಬೆಳೆಯಲು ವರ್ಷಾನುಗಟ್ಟಲೆ ಹಿಡಿಯುತ್ತದೆ.

ಕೆಲವೊಮ್ಮೆ ಇಂತಹ ಸಲಗಗಳ ಹಿಂಡು ರಾತ್ರಿ ವೇಳೆ ಸಂಚಾರ ಆರಂಭಿಸಿದರೆ, ಕೆಲವು ಬಾರಿ ಹಗಲು ಹೊತ್ತ ಅಡ್ಡಾಡುತ್ತಿರುವು ದರಿಂದ ಜನಸಾಮಾನ್ಯರು ಮನೆಯಿಂದ ಹೊರ ಬರಲಾರದ ಸ್ಥಿತಿಗೂ ತಲುಪುತ್ತಾರೆ. ಮತ್ತೆ ಕೆಲವೆಡೆ ಇಂತಹ ಘಟನೆಗಳಿಂದ ಹೊಲ, ತೋಟದ ಕಾರ್ಮಿಕರಿಗೆ ಕೆಲಸ ಮಾಡಲಾಗದಂಥ ಸ್ಥಿತಿಗೂ ದೂಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಜೀವ ಭಯ ಒಂದೆಡೆಯಾದರೆ, ಹಲವಾರು ಪ್ರಾಣ ಹಾನಿ ಸಂಭವಿಸಿ, ವನ್ಯಮೃಗಗಳು ರೈತರಿಗೆ ಶಾಪವಾಗಿಯೂ ಪರಿಣಮಿಸುತ್ತಿದೆ.

ಇಂತಹ ಸನ್ನಿವೇಶಗಳಲ್ಲಿ ಕಾಡಾನೆಗಳ ಹಿಂಡನ್ನು ಅಭಯಾರಣ್ಯಗಳಿಗೆ ದೂಡುವುದು, ಸ್ಥಳಾಂತರಿಸುವುದು ಸೇರಿದಂತೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರೈತರು, ಜನಸಾಮಾನ್ಯರು ಆಯಾಯ ಭಾಗಗಳಲ್ಲಿ ಜಿಲ್ಲಾಧಿಕಾರಿ ಸಭೆ, ಕೆಡಿಪಿ ಸಭೆ, ಜಿ.ಪಂ, ತಾ.ಪಂ, ಗ್ರಾ.ಪಂ ಸೇರಿದಂತೆ ಹತ್ತಾರು ಸಭೆಗಳಲ್ಲಿ ಅರಣ್ಯ ಇಲಾಖೆ, ಸರಕಾರಗಳನ್ನು ಒತ್ತಾಯಿಸುತ್ತಲೇ ಬರುತ್ತಿದ್ದಾರೆ.  ಉಳ್ಳವರು, ದೊಡ್ಡ ದೊಡ್ಡ ಎಸ್ಟೇಟ್ ಮಾಲೀಕರು ತಮ್ಮ ಜಾಗದ ಸುತ್ತಲೂ ಸೋಲಾರ್ ಬೇಲಿಗಳನ್ನು ಅಳವಡಿಸಿದರೆ, ಬಡ, ಮಧ್ಯಮ ವರ್ಗದ ರೈತರು ಇವುಗಳನ್ನು ಅಳವಡಿಸುವಲ್ಲಿ ಅಶಕ್ತರೂ ಆಗಿದ್ದಾರೆ.

ಈಗಾಗಲೇ ಸರಕಾರಗಳು ಇಂತಹ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ಎಕರೆಗೆ 500 ರುಪಾಯಿಗಳನ್ನು ನಿಗದಿಪಡಿಸಿರುವುದು ಏನೂ ಸಾಲದೆಂಬಂತಿದೆ. ಕಾಡಿನಂಚಿನ ಭಾಗದಲ್ಲಿರುವ ಕೃಷಿ ಪ್ರದೇಶಗಳಿಗೆ ಪದೇ ಪದೆ ಇಂತಹ ವನ್ಯಮೃಗಗಳ ದಾಳಿ ಸಾಮಾನ್ಯ ವೆಂಬಂತಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನೀಡಲಾದ ಸಾವಿರಾರು ಅರ್ಜಿಗಳು ಅರಣ್ಯ ಇಲಾಖೆಗಳಲ್ಲಿ ನಿರ್ಲಕ್ಷ ಕ್ಕೊಳಗಾಗಿ ಕೊಳೆಯುತ್ತಿರುವುದು ಒಂದೆಡೆಯಾದರೆ ಮತ್ತೆ ಕೆಲವೆಡೆ ಹಾನಿ ಅನುಭವಿಸಿದ ರೈತರಿಗೆ ತಡವಾಗಿ ಪರಿಹಾರ ಧನ ವಿತರಿಸುವ ಬೇಜವಾಬ್ದಾರಿತನಗಳೂ ನಡೆಯುತ್ತಿದೆ.

ಇನ್ನು ಕೆಲ ಭಾಗಗಳಲ್ಲಿ ತಂತಿ ಬೇಲಿಗಳಿಗೆ ವಿದ್ಯುತ್ ಸ್ಪರ್ಶ ನೀಡಿ ಕಾಡಾನೆಗಳನ್ನು ಕೊಲ್ಲುವ ಅಮಾನವೀಯ ಘಟನೆಗಳಿಂದ ಹತ್ತಾರು ಆನೆಗಳ ಮಾರಣಹೋಮಗಳು ಇತ್ತೀಚೆಗೆ ನಡೆದಿದ್ದು, ಇಂತಹ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಅವಶ್ಯ ಕತೆಯಿದೆ. ಕೃಷಿ ಸಂಪತ್ತಿನ ಜತೆ ವನ್ಯಸಂಪತ್ತಿನ ರಕ್ಷಣೆಯೂ ಕೂಡ ಸರಕಾರದ ಮಹತ್ತರ ಹೊಣೆಯಾಗಿದ್ದು, ಇಂತಹ ಸಮಸ್ಯೆ ಗಳಿಗೆ ತಾರ್ಕಿಕ ಅಂತ್ಯ ಒದಗಿಸಬೇಕಾದ ಹೊಣೆ ಅರಣ್ಯ ಇಲಾಖೆ ಮತ್ತು ಸರಕಾರದ ಮೇಲಿದೆ.