Tuesday, 10th December 2024

ಇನ್ನೆಷ್ಟು ದಿನ ಸಹಿಸುವುದು ಈ ಅವಹೇಳನ ?

ಅಭಿಮತ

ಹರ್ಷಿತಾ ವಿಟ್ಲ

ಭಾರತದಲ್ಲಿ ಕನ್ನಡ ಭಾಷೆಯ ಅವಹೇಳನ ಮಾಡಿದ್ದು ನಿಜವಾದ ಸಂಗತಿ ಎಂದು ಸ್ವತಃ ಗೂಗಲ್ ಒಪ್ಪಿಕೊಂಡಿದೆ. ಭಾರತದಲ್ಲಿ ಅತ್ಯಂತ ಕೆಟ್ಟ ಭಾಷೆ ಯಾವುದು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕನ್ನಡವೆಂಬುದಾಗಿ ಉತ್ತರಿಸುತ್ತಿತ್ತು. ಈ ಒಂದು ಉತ್ತರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು.

ಕನ್ನಡದ ಭಾಷೆ ಮೇಲಿರುವ ಅಭಿಮಾನಕ್ಕೆ ಕುತ್ತು ಬಂದಾಗ ಕೆರಳಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಕ್ಕೆ ಆಗುತ್ತಿರುವ ಅವಹೇಳನದ ವಿರುದ್ಧ ಧ್ವನಿ ಎತ್ತಿದ್ದರು. ಕರ್ನಾಟಕದ ಮೂಲೆ ಮೂಲೆಯಿಂದಲೂ ಸಾಮಾನ್ಯ ನಾಗರಿಕರು ಸೇರಿದಂತೆ ಕನ್ನಡ ಪರ ಸಂಘಟನೆಗಳು, ರಾಜಕೀಯ ನಾಯಕರು ಹೀಗೆ ಹಲವರು ಒಕ್ಕೊರಲಿನಿಂದ ಗೂಗಲ್ ಬಳಿ ಕ್ಷಮೆ
ಯಾಚಿಸುವಂತೆ ಹೇಳಿದರು. ಇದರ ಪರಿಣಾಮವಾಗಿ ಗೂಗಲ್ ನೀಡಿದ್ದ ತಪ್ಪು ಮಾಹಿತಿಯನ್ನು ತೆಗೆದು ಹಾಕಿತ್ತು. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯು ಪ್ರಪಂಚದಲ್ಲಿ ಒಂದು ಅಗ್ರಗಣ್ಯ ಭಾಷೆ. 2500 ವರ್ಷಗಳ ಇತಿಹಾಸವನ್ನು ಹೊಂದಿದ ಈ ಭಾಷೆಯನ್ನು 7 ಕೋಟಿ ಜನರು ಮಾತನಾಡುತ್ತಾರೆ. ಅಭಿಜಾತ ಭಾಷೆ ಎಂಬ ಸ್ಥಾನ ತನ್ನದಾಗಿಸಿಕೊಂಡ ಈ ಭಾಷೆಯ ಲಿಪಿಗಳ ಬಳಕೆ ಕೃಷ್ಣ ದೇವರಾಯನ ಕಾಲದಲ್ಲಿಯೆ ಪ್ರಚಲಿತದಲ್ಲಿ ಇತ್ತು. ಕ್ರಿ.ಶ.2ನೇ ಶತಮಾನದಿಂದ ಕನ್ನಡಿಗರ ಸ್ಥಾನ ಗುರುತಿಸಿಕೊಂಡಿದೆ. ಇಷ್ಟೊಂದು ಭಾಷಾ ಶ್ರೀಮಂತಿಕೆ ಇರುವ ಕನ್ನಡ ಭಾಷೆಯ ಅವಹೇಳನವನ್ನು ಮಾಡಿದ ವೆಬ್‌ಸೈಟ್‌ವೊಂದು ಕನ್ನಡಿಗರ
ಸ್ವಾಭಿಮಾನಕ್ಕೆ ಅಡ್ಡಿ ಮಾಡಿದೆ.

ಯಾವುದೇ ಸಂಸ್ಥೆ ತನ್ನ ಕರ್ತವ್ಯ ಮೀರಿ ನಡೆಯುವಂತಿಲ್ಲ. ತಂತ್ರಜ್ಞಾನದ ತಪ್ಪನ್ನು ದೂರುವಂತಿಲ್ಲ. ಅದಕ್ಕೆ ನೀಡಿದ ಜವಾಬ್ದಾರಿಯನ್ನು ನಿಬಾಯಿಸಬೇಕಿತ್ತು. ಈ ಘಟನೆಗೆ ಕೀ ವರ್ಡ್ಸ್ ಕಾರಣ ನೀಡಿದ್ದಾರೆ. ಆದರೆ ಸರಿಯಾದ ಉತ್ತರ ನೀಡಿಲ್ಲ. ಅದಾದ ಬಳಿಕ ಗೂಗಲ್‌ನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ನೀಡಿದೆ. ಯಾವುದೇ ಮಾಹಿತಿಯನ್ನು ಕನ್ನಡದಲ್ಲಿಯೇ ಅವಕಾಶ ಮಾಡಿಕೊಟ್ಟಿದೆ. ಆದರೆ ಆದ ಗೋಜಲಿಗೆ ಸರಿಯಾದ ಉತ್ತರ ನೀಡಲು ಯಶ್ವಸಿಯಾಗಿಲ್ಲ.

ಇದಾದ ಕೆಲವೇ ದಿನದ ಬಳಿಕ ಮತ್ತೆ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವ ಕೆಲಸ ನಡೆದಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್ ಕನ್ನಡಕ್ಕೆ ಅವಮಾನ ಮಾಡಿದೆ. ಸಾಮಾನ್ಯವಾಗಿ ಮಹಿಳೆಯರು ಧರಿಸುವ ಉಡುಪಾದ ಬಿಕಿನಿಯಲ್ಲಿ ಕನ್ನಡ ಧ್ವಜದ ಬಣ್ಣವನ್ನು ಬಳಸಲಾಗಿತ್ತು. ಇದು ಅತೀ ಶೀಘ್ರದಲ್ಲಿಮಾರಾಟಕ್ಕೆ ಇಡಲಾಗಿದೆ ಎಂಬ ಮಾಹಿತಿಯು ಪ್ರಸಾರವಾಗಿತ್ತು. ಒಂದು ದೇಶಕ್ಕೆ ಅವಮಾನ ಮಾಡುವುದು ಹೇಗೆ ತಪ್ಪೋ ಹಾಗೆಯೇ ಒಂದು ರಾಜ್ಯದ ಬಾವುಟಕ್ಕೆ ಅವಮಾನ ಮಾಡುವುದು ಕೂಡಾ
ಅಷ್ಟೇ ಅಪರಾಧ.

ಪ್ರಪಂಚದ ಇತರ ದೇಶಗಳಾದ ಯುಎಸ್ ಮುಂತಾದ ದೇಶಗಳಲ್ಲಿ ದೇಶದ ಧ್ವಜವನ್ನು ಬಿಕಿನಿಗಳ ರೂಪದಲ್ಲಿ ಪ್ರತಿಬಿಂಬಿ ಸುತ್ತಾರೆ. ಅದೇ ತರಹ ಈಗ ಕರ್ನಾಟಕದ ಧ್ವಜ ಮತ್ತು ಲಾಂಛನವನ್ನು ಮುದ್ರಣ ಮಾಡಲಾಗಿದೆ. ಮತ್ತೆ ಮತ್ತೆ ಕನ್ನಡಿಗರನ್ನ ಕೆಣಕುವ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಬೇಕಾದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕು. ಕನ್ನಡ ಭಾಷೆ , ನಾಡು-ನುಡಿಯ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿದೀತು.

ಇನ್ನೆಷ್ಟು ದಿನ ಇಂಥ ಕೃತ್ಯಗಳನ್ನು ಸಹಿಸಿಕೊಳ್ಳುವುದು. ಈಗಲಾದರೂ ಇಲಾಖೆಗಳು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಭಾಷೆಗೆ ಬಂದೊದಗುವ ಕಂಟಕಗಳನ್ನು ತಡೆಯಬೇಕು.