Monday, 4th November 2024

ಕೆಎ 47 ಹೊರತು ಎಕೆ 47 ಅಲ್ಲಾ ..!

ಅಭಿಮತ

ಸಚಿನ್‌ ಭಟ್ಕಳ

ನಿಮ್ದು ಯಾವ ಜಿ,
ನಮ್ದಾ ಉತ್ತರ ಕನ್ನಡ
ಹೋ ಹೋ ‘ಉತ್ತರಕರ್ನಾಟಕ’ ನಾ
ಸರಿ, ಸರಿ.
‘ಉತ್ತರ ಕರ್ನಾಟಕ’ ಅಲ್ಲಾ ಮಾರಾಯಾ, ಉತ್ತರ ಕನ್ನಡ ಅದ್ಯಾವ ಜಿ, ಎಲ್ಲಿ ಬರುತ್ತೆ, ಮಂಗಳೂರು ಹತ್ರನಾ? ಹ, ಹ ಮಂಗಳೂರು ಹತ್ರನೇ, ಅಂತ ನಾವುಗಳು ಸುಮ್ನೆ ಇರಬೇಕು. ಒಂದೊಂದ್ಸಲ ನಮ್ಮ ಜಿ ಕರ್ನಾಟಕದಲ್ಲಿ ಇಲ್ವೆನೋ ಅನ್ಸುತ್ತೆ..! ಎಂಬಷ್ಟರ ಮಟ್ಟಿಗೆ ದೂರ ಇಟ್ಟಿದ್ದಾರೆ, ಬಹುತೇಕರಿಗೆ ನಮ್ಮ ಜಿಯ ಪರಿಚಯ ಇಲ್ಲ, ಆ ರೀತಿ ಇಲ್ಲಿಯ ಸ್ಥಳೀಯ ರಾಜಕಾರಣಿ ಗಳು ಅಭಿವೃದ್ಧಿ ಮಾಡಿದ್ದಾರೆ.

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯೆ ಅಡಿಕೆ, ತೆಂಗುಗಳ ಮಡಿಲು. ಸಿರಿಗನ್ನಡ ಚಪ್ಪರವೇ ನನ್ನ ಜಿಲ್ಲೆ. ಇಲ್ಲಿಯೇ ಮತ್ತೊಮ್ಮೆ ಹುಟ್ಟುವೆ ನಲ್ಲೆ, ಎಂಬುದು ಇದೇ ಜಿಲ್ಲೆಯ ಕವಿ ದಿನಕರ ದೇಸಾಯಿ ಅವರ ಸಾಲುಗಳು. ಇಲ್ಲಿ ಇಡೀ ಕರ್ನಾಟಕದಲ್ಲಿರುವ ಭೌಗೋಳಿಕ ವಾತಾವರಣ, ಒಂದೇ ಒಂದು ಜಿಲ್ಲೆಯಲ್ಲಿ ಕಾಣ ಸಿಗುವ ಒಂದು ವಿಶಿಷ್ಟವಾದ ಜಿಲ್ಲೆ, ಮಲೆನಾಡು, ಕರಾವಳಿ, ಬಯಲು ಸೀಮೆ ಇವು ಮೂರನ್ನೂ ಒಳಗೊಂಡಿದೆ ಹಾಗೂ ಅತಿ ಹೆಚ್ಚು ಅರಣ್ಯ ಇರುವ ಪ್ರದೇಶ ಕೂಡ ನಮ್ಮ ಜಿಲ್ಲೆಯೇ.

ಮುರುಡೇಶ್ವರ, ಗೋಕರ್ಣ, ಇಡಗುಂಜಿ, ಯಾಣ, ಇನ್ನು ಹಲವು ದೇವಸ್ಥಾನಗಳು, ಪ್ರಸಿದ್ಧ ಪ್ರವಾಸಿ ತಾಣಗಳು ಇರುವುದು ನಮ್ಮ ಜಿಯ. ಇಲ್ಲಿ ಚುನಾವಣೆ ಬಂದರೆ ಉತ್ತರ ಪ್ರದೇಶದ ಯೋಗಿಯಿಂದ ಹಿಡಿದು, ಅಮಿತ್ ಷಾ, ಅಲ್ಲದೆ ರಾಜ್ಯದ ಸಿದ್ದರಾಮಯ್ಯ, ಇತ್ತೀಚೆಗೆ ಡಿಕೆಶಿವರೆಗೂ ಬಂದು ಹೋಗುತ್ತಾರೆ. ಈ ಜಿಲ್ಲೆ, ಜಿಲ್ಲೆಯ ತಾಲೂಕು ಕೇವಲ ಚುನಾವಣೆ, ಚುನಾವಣೆ ಮತಕ್ಕೆ ಮಾತ್ರ ಕೌಂಟ್ ಆಗುತ್ತದೆ ಹೊರತು, ಅಭಿವೃದ್ಧಿಗಲ್ಲ..! ಅಂಥ ನನಗೆ ಅನಿಸುತ್ತದೆ.

ಜಿಲ್ಲೆಯ ಭಟ್ಕಳ ತಾಲೂಕು ಜೈನರ ನೆಲೆ ಬೀಡು, ಭಟ್ಕಳಟಕ ಎಂಬ ಜೈನಮುನಿಯಿಂದ ಭಟ್ಕಳ ಎಂಬ ಹೆಸರು ಬಂದಿದೆ. ಇದಕ್ಕೆ ಕುರುಹುಗಳು ಎಂಬಂತೆ ಅಲ್ಲಿ ಕಾಣ ಸಿಗುವ ಜೈನ ಬಸದಿಗಳು, ಮತ್ತು ಎಲ್ಲ ದರ್ಮದ ಸಹ ಸಹಬಾಳ್ವೆಯ ತಾಲೂಕು ಕೂಡ. ಇಂಥ ಶಾಂತ ತಾಲೂಕಿಗೆ ಒಂದು ಹಣೆಪಟ್ಟಿ ಕೂಡ ಬಿದ್ದಿದೆ, ಅದೇ ‘ಭಯೋತ್ಪಾದನೆ’ ಈ ತಾಲೂಕನ್ನು ‘ಭಯೋತ್ಪಾದನೆಯ ಕೇಂದ್ರ ಬಿಂದು’ ಭಯೋತ್ಪಾದಕರ ಅಡಗು ತಾಣ ಎಂಬಂತೆ ಈ ಹಿಂದೆ ಕೆಲವು ಮಾಧ್ಯಮಗಳು, ರಾಜಕಾರಣಿಗಳು ಬಿಂಬಿಸಿದ್ದಾರೆ.

ಇದರಿಂದ ಇಲ್ಲಿಯ ಯುವಕರಿಗೆ ಹೊರಗಡೆ ಉದ್ಯೋಗ ಸಿಗುವುದು ಕಷ್ಟವೇ ಆಗಿದೆ. ಅಲ್ಲದೆ ಸ್ಥಳೀಯವಾಗಿ ಯಾವ ಕೈಗಾರಿಕೆಗಳು ಪ್ರವೇಶಿಸಲಿಲ್ಲ. ಸ್ವ – ಉದ್ಯೋಗಕ್ಕೂ ಕೂಡ ಯಾವುದೇ ಪ್ರೋತ್ಸಾಹ ಇಲ್ಲ. ಪ್ರತಿ ಸಲ ಚುನಾವಣೆ ಸಂದರ್ಭ ಭಾಷಣದಲ್ಲಿ ಈ ತಾಲೂಕಿನಲ್ಲಿ ಉದ್ಯೋಗ ಅವಕಾಶದ ಕೊರತೆ ಇದೆ, ನಾವುಗಳು ಅಧಿಕಾರಕ್ಕೆ ಬಂದರೆ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಅವಕಾಶ ಹೆಚ್ಚಿಸುತ್ತೇವೆ ಎಂದು ಕೇವಲ ಭರವಸೆಯೇ ಹೊರತು, ಚುನಾವಣೆ ಮುಗಿದ ಮೇಲೆ ಒಬ್ಬನೆ, ಒಬ್ಬ ರಾಜಕಾರಣಿನೂ ನಮ್ಮ ತಾಲೂಕಿಗೆ ತಲೆ ಕೂಡ ಹಾಕಿ ಮಲಗಲ್ಲ, ಇದಕ್ಕೆ ಸರಿಯಾಗಿ ಇಲ್ಲಿಯ ಅಧಿಕಾರಿಗಳು ಕೂಡ ಇದ್ದಾರೆ.

ಗಂಡ ಹೆಂಡಿರ ಮಧ್ಯೆ ಕೂಸು ಬಡವಾಯಿತು, ಅನ್ನೋ ತರ ಯುವಕರ ಪರಿಸ್ಥಿತಿ ಅಧೋಗತಿಯಾಗಿದೆ.  ಕೇವಲ ರಸ್ತೆ, ಚರಂಡಿ, ಸರಿಪಡಿಸಿ ಅಭಿವೃದ್ಧಿ ಮಾಡಿದ್ದೀನಿ ಅನ್ನೋದು ಹೇಳುವುದು ಬಿಟ್ಟು, ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ದೊರಕುವಂತೆ, ಅಷ್ಟೇ ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು. ಅದು ಕೂಡ ಪರಿಸರದ ರಕ್ಷಣೆ ಜತೆಗೆ ಆದಾಗಲೇ ಗ್ರಾಮ, ತಾಲೂಕು, ಜಿಲ್ಲೆ
ಅಭಿವೃದ್ಧಿಯತ್ತ ಸಾಗುವುದು.