ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಕೆಲ ವರ್ಷಗಳ ಹಿಂದೆ ನಡೆದ ಹೈದರಾಬಾದ್, ದೆಹಲಿ,ಬೆಂಗಳೂರು, ಮುಂಬೈ ಸೇರಿದಂತೆ ನಾನಾ ಭಾಗಗಳಲ್ಲಿ ಉಗ್ರರ ಅಟ್ಟ ಹಾಸಕ್ಕೆ ಇಡೀ ದೇಶವೇ ನಲುಗಿ ಹೋಗಿತ್ತು.
ಸಮುದ್ರ ಮಾರ್ಗಗಳ ಮೂಲಕ, ಅಕ್ರಮ ನುಸುಳುವಿಕೆ ಮೂಲಕ ಭಾರತವನ್ನು ಪ್ರವೇಶಿಸಿ ಉಗ್ರರು ರಕ್ತಸಿಕ್ತ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುಂಡಿಕ್ಕಿ, ಅಮಾಯಕರನ್ನು ಒತ್ತೆಯಾಳಾಗಿಟ್ಟುಕೊಂಡು ಮುಂಬೈನ
ನಾರಿಮನ್, ತಾಜ್ ಹೋಟೆಲ್‌ಗಳಲ್ಲಿ ಭಯದ ವಾತಾವರಣವನ್ನು ನಿರ್ಮಿಸಿದ್ದ ಇದೇ ಲಷ್ಕರ್ – ಇ – ತೋಯ್ಬಾ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹೆಸರು ಭಾರತದಲ್ಲಿ ಸಾಕಷ್ಟು ಬಾರಿ ಸದ್ದು ಮಾಡಿತ್ತು.
ಉಗ್ರರು ತನ್ನ ವಿಧ್ವಂಸಕ ಕೃತ್ಯಗಳಿಗೆ ಕರಾವಳಿ, ಸಮುದ್ರ ಮಾರ್ಗಗಳನ್ನೇ ಅವಲಂಬಿಸಿರುವ ಕಾರಣ ಇದೇ ಉಗ್ರರ ಲಿಂಕ್ ಭಟ್ಕಳ,
ಉಳ್ಳಾಲ, ಕಾಸರಗೋಡು, ಹೈದರಾಬಾದ್, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ನಾನಾ ಭಾಗಗಳಲ್ಲಿ ವಿಸ್ತರಿಸಿಕೊಂಡಿತ್ತು. ದೂರ
ದೂರಗಳಲ್ಲಿ ನಡೆಯುತ್ತಿದ್ದ ಇಂತಹ ಸ್ಫೋಟ ಪ್ರಕರಣಗಳ ಆರೋಪಿಗಳನ್ನು ಭಟ್ಕಳ, ಹುಬ್ಬಳ್ಳಿ, ಉಳ್ಳಾಲ, ಕಾಸರಗೋಡು
ಭಾಗದಿಂದ ಪೊಲೀಸರು ಎತ್ತಿಕೊಂಡು ಹೋದಾಗಲೇ ಆ ಭಾಗದ ಜನತೆ ಬೆಚ್ಚಿ ಬಿದ್ದಿದ್ದರು. ಈ ಪೈಕಿ ಡಾಕ್ಟರ್, ಎಂಜಿನಿಯರಿಂಗ್ ಸೇರಿದಂತೆ ಉನ್ನತ ತಾಂತ್ರಿಕ ಶಿಕ್ಷಣ ಪಡೆದವರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿತ್ತು. ಈ ಘಟನೆಗಳ ಬಳಿಕ 7-8 ವರ್ಷಗಳ ಆಜುಬಾಜಿಗೆ ದೇಶದಲ್ಲಿ ಯಾವುದೇ ರೀತಿಯ ಬಾಂಬ್ ಸ್ಫೋಟಗಳಾಗಲಿ, ವಿಮಾನ ನಿಲ್ದಾಣ, ಐಟಿಬಿಟಿ ಕಂಪನಿ, ಪ್ರಮುಖ ಜನನಿಬಿಢ ಪ್ರದೇಶಗಳಲ್ಲಿ ಸಜೀವ ಬಾಂಬ್ ಪತ್ತೆಯಾಗುವುದಾಗಲಿ, ಇನ್ನಿತರ ಯಾವುದೇ ಘಟನೆಗಳು ಸಂಭವಿಸಿಲ್ಲ.
ಇದಕ್ಕೆ ಒಂದು ರೀತಿಯ ಮೂಲ ಕಾರಣವೆಂದರೆ ದೇಶದ ರಕ್ಷಣಾ ವ್ಯವಸ್ಥೆ ಬಲಗೊಂಡಿರುವುದು, ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕ ತಾವಾದಿಗಳ ಹುಟ್ಟಡಗಿರುವುದು, ಕರಾವಳಿ ರಕ್ಷಣಾ ಪಡೆಗಳ ಬಲವರ್ಧನೆಯೂ ಪ್ರಮುಖವಾದುದು. ಕರಾವಳಿ ಭಾಗವೆಂಬು ವುದು ಧಾರ್ಮಿಕ ಕ್ಷೇತ್ರ, ಕೈಗಾರಿಕಾ, ತಾಂತ್ರಿಕ, ವಿಮಾನ ನಿಲ್ದಾಣ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಬಂದರುಗಳನ್ನು ಹೊಂದಿರುವ ಸ್ಥಳ.
ಇದು ಪ್ರಕಾರ ಪ್ರಮುಖವಾಗಿ ಉಗ್ರರ ಹಿಟ್ ಲಿಸ್ಟ್‌ನಲ್ಲಿರುವ ಸ್ಥಳವೆಂದರೂ ತಪ್ಪಾಗಲಾರದು. ಈ ಪ್ರದೇಶಕ್ಕೆ ಹಲವಾರು ಬಾರಿ ಉಗ್ರರ ಬೆದರಿಕೆ ಕರೆ, ಪತ್ರಗಳು ಬಂದಿತ್ತೆಂಬುವುದು ಗಮನಾರ್ಹ. ಇದೀಗ ಮಂಗಳೂರಿನ ಕದ್ರಿಯ ಬಳಿ ಗೋಡೆಯೊಂದರಲ್ಲಿ ಲಷ್ಕರ್ – ಇ – ತೋಯ್ಬಾವನ್ನು ಬೆಂಬಲಿಸಿ ಬರೆಯಲಾದ ಬರಹವೊಂದು ಕಂಡು ಬಂದಿರುವುದು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಪ್ರಚೋದನಾಕಾರಿ ಬರಹ ಇದಾಗಿದೆ. ಈ ಭಾಗದಲ್ಲಿ ಇಂತಹ ಹಲವಾರು ಆಕ್ಷೇಪಾರ್ಹ ಬರಹ, ಘೋಷಣೆ, ಪಾಕ್ ಧ್ವಜ ಹಾರಾಟದಂಥ ಘಟನೆಗಳು ಮರುಕಳಿಸುತ್ತಿರುವುದರ ಹಿಂದೆ ಮತೀಯವಾದಿ ಸಂಘಟನೆಯೊಂದರ ಕೈವಾಡವನ್ನು ತಳ್ಳಿ ಹಾಕು ವಂತಿಲ್ಲ.
ಈ ಘಟನೆಯು ಸಾಕಷ್ಟು ಆಕ್ರೋಶ, ಚರ್ಚೆಯನ್ನು ಹುಟ್ಟು ಹಾಕಿರುವ ಮಧ್ಯೆಯೇ ಕೋರ್ಟ್ ರಸ್ತೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಮತ್ತೆ ಎಚ್ಚರಿಕೆಯ ಬರಹ ರಾರಾಜಿಸಿದೆ. ಈ ಎಲ್ಲಾ ಘಟನೆಗಳನ್ನು ಅವಲೋಕಿಸಿದಾಗ ಉಗ್ರ ಸಂಘಟನೆ ಯನ್ನು ಬೆಂಬಲಿಸುವ ಹೀನಮನಸ್ಥಿತಿಯ ವ್ಯಕ್ತಿಗಳು ಬಂದರು ನಗರಿಯಲ್ಲಿ ನೆಲೆವೂರಿರುವುದು ಸ್ಪಷ್ಟವಾಗಿದ್ದು, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಇಂತಹ ಶಕ್ತಿಗಳ ಹೆಡೆಮುರಿ ಕಟ್ಟುವ ಕಾರ್ಯ ಮಾಡಬೇಕಾಗಿದೆ.