Friday, 13th December 2024

ಕನ್ನಡದ ಮಹತ್ವದ ಪ್ರಕಾರ ’ಯಕ್ಷಗಾನ ಸಾಹಿತ್ಯ’

ಅಭಿಮತ

ರವಿ ಮಡೋಡಿ

ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಹಿರಿತನ ಹೊಂದಿರುವ ಕನ್ನಡಕ್ಕೆ ಸುಮಾರು 2000 ವರುಷಗಳಷ್ಟು ಇತಿಹಾಸವಿದೆ. ಕನ್ನಡ ಸಾಹಿತ್ಯವನ್ನು ಜನಪದ, ವಚನ, ದಾಸ ಸಾಹಿತ್ಯ ಹೀಗೆ ಹಲವು ಪ್ರಕಾರಗಳಾಗಿ ವಿಂಗಡಿಸಬಹುದು. ಇಂಥ ಅನೇಕ ಪ್ರಕಾರಗಳಲ್ಲಿ ಬಹಳಷ್ಟು ಜನರಿಗೆ ತಿಳಿಯದೆ ಇರುವ ಮತ್ತೊಂದು ಸಾಹಿತ್ಯ ಪ್ರಕಾರವೇ ಅದು ಯಕ್ಷಗಾನ ಸಾಹಿತ್ಯ.

ಯಕ್ಷಗಾನವು ಸಾಹಿತ್ಯ, ಗಾಯನ, ನೃತ್ಯ, ಅಭಿನಯ, ವೇಷಭೂಷಣ ಮತ್ತು ಅರ್ಥಗಾರಿಕೆಯನ್ನು ಒಳಗೊಂಡ ಒಂದು ಪರಿಪೂರ್ಣ ಕಲೆ. ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆಯಾಗಿದೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ – ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಯಕ್ಷಗಾನ ಪರಿಭಾಷೆಯಲ್ಲಿ ಯಕ್ಷಗಾನದ ಸಾಹಿತ್ಯವನ್ನು ‘ಪದ/ಪದ್ಯ’ ಅಥವಾ ಪದಗಳ/ಪದ್ಯಗಳ ಸಮೂಹವನ್ನು ಪ್ರಸಂಗ ಎಂಬುದಾಗಿಯೂ ಮತ್ತು ಕವಿಯನ್ನು ಪ್ರಸಂಗಕರ್ತ ಎಂಬುದಾಗಿ ಕರೆಯುತ್ತಾರೆ.

ಪ್ರಸಂಗಕರ್ತನಿಗೆ ಕೇವಲ ಸಾಹಿತ್ಯದ ಪರಿಣಿತಿಯಿದ್ದರೆ ಸಾಲದು. ಅವನಿಗೆ ರಂಗ ಪ್ರಜ್ಞೆ, ರಾಗ – ತಾಳ, ಸ್ವರ, ಲಯ,ಇವುಗಳ  ತಿಳಿವಳಿಕೆ ಇದ್ದರೆ ಮಾತ್ರ ಒಂದು ಪರಿಣಾಮಕಾರಿಯಾದ ಪ್ರಸಂಗವನ್ನು ರಚಿಸುವುದಕ್ಕೆೆ ಸಾಧ್ಯವಾಗುತ್ತದೆ. ಕನ್ನಡದ ಶಬ್ದಗಳನ್ನು ಛಂದೋಬದ್ಧವಾಗಿ ಬಳಸಿ, ತಾಳಕ್ಕೆ ಸರಿಯಾಗಿ ಪೋಣಿಸಿ, ಅದು ವಿಶಾಲವಾದ ಅರ್ಥ ಮೂಡುವುಂತೆ ರಚಿಸಿದಾಗ
ಅದು ಪದವಾಗುತ್ತದೆ ಅಥವಾ ಪದ್ಯವಾಗುತ್ತದೆ. ಇಂಥ ಪದ್ಯಗಳು ರಂಗಪ್ರಯೋಗದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಭಾಗವತರು ಹಾಡಿ, ಭಾವವನ್ನು ತುಂಬಿ ಕರುಣ, ಶೃಂಗಾರ, ಭಯ ಇತ್ಯಾದಿ ನವರಸಗಳು ಮೂಡುವಂತೆ ಸಾಹಿತ್ಯ ರಚನೆಯಾಗಿರುತ್ತದೆ. ಇಂಥ ಕ್ಲಿಷ್ಟ ಮತ್ತು ಅಭೂತವಾದ ಸಾಹಿತ್ಯವು, ಪ್ರಸಂಗಗಳ ಮೂಲಕ ರಂಗದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಯಕ್ಷಗಾನ ರಂಗಭೂಮಿಗೆ ಮುಖ್ಯ ಭಾಗವಾಗಿ ಇದು ಜೀವಾಳವಾಗಿರುತ್ತದೆ.

ಕೇವಲ ಸಾಹಿತ್ಯ ಮಾತ್ರವಲ್ಲದೇ ಇಡೀ ಯಕ್ಷಗಾನ ರಂಗಭೂಮಿಗೆ, ನಿರ್ದೇಶನವು ಇದರ ಸಾಹಿತ್ಯದಿಂದಲೇ ಸಿಗುತ್ತದೆ.
ಮೇಲ್ನೋಟಕ್ಕೆ ಇದು ರಂಗಭೂಮಿಯ ಸಂಗೀತ ನಾಟಕ’ ದಂತೆ ತೋರಿದರೂ, ಇದು ಗೇಯ ಕಾವ್ಯದ ಲಕ್ಷಣಗಳನ್ನು ಒಳಗೊಂಡಿದೆ. ಯಕ್ಷಗಾನ ಪ್ರಸಂಗ ಸಾಹಿತ್ಯ ವಿಫುಲ ಮತ್ತು ಶ್ರೀಮಂತ ಸಾಹಿತ್ಯವಾಗಿದ್ದು ಹಾಡಿನ ರೂಪದಲ್ಲಿ ಜನಸಾಮಾನ್ಯ ರನ್ನು ಪೌರಾಣಿಕ ಕಥೆಗಳ ಮೂಲಕ ತಲುಪುವ ಮಾಧ್ಯಮವಾಗಿ ಹಲವು ಶತಮಾನಗಳಿಂದ ನಡೆದುಬಂದಿದೆ. ಆಧುನೀಕತೆ ಮತ್ತು ತಂತ್ರಜ್ಞಾನದ ಬೆಳಕನ್ನೇ ಕಾಣದ ಕಾಲದಲ್ಲಿ ಯಕ್ಷಗಾನದ ಆಟಗಳು ಹಳ್ಳಿಹಳ್ಳಿಗಳನ್ನು ತಲುಪಿ ಜನಮಾನಸದಲ್ಲಿ ಮನೋರಂಜನೆಯ ಜತೆಗೆ ಪುರಾಣ – ಕಥೆಗಳ ಜ್ಞಾನದ ಬೆಳಕನ್ನು ಹಚ್ಚಿದ್ದು ಸತ್ಯವಷ್ಟೇ.

ಇದಕ್ಕೆ ಪ್ರಮುಖ ಕಾರಣ ಯಕ್ಷಸಾಹಿತ್ಯದಲ್ಲಿನ ಶ್ರೀಮಂತಿಕೆ ಮತ್ತು ಅನಕ್ಷರಸ್ಥರ ನೆನಪಿನಲ್ಲೂ ಉಳಿಯುವಂಥ ಸರಳ ಸಾಹಿತ್ಯ.ಇದರ ಸಾಹಿತ್ಯ ರಚನೆಗೊಳ್ಳುವುದು ಶುದ್ಧವಾದ, ಅಪ್ಪಟವಾದ ಕನ್ನಡವನ್ನು (ಕಂಗ್ಲೀಷ್ ಕೂಡ ಇಲ್ಲ) ಬಳಸಿಯೇ. 18ನೇ ಶತಮಾನ ಯಕ್ಷಗಾನ ಪ್ರಸಂಗ ಸೃಷ್ಟಿಯ ಪರ್ವಕಾಲ ಎನ್ನುವುದನ್ನು ಕ್ರಿ.ಶ. 1860ರಲ್ಲಿ ಬಿ.ಎಲ್ ರೈಸ್ ಅವರು ಪ್ರಕಟಿತ ‘ಕರ್ನಾಟಕ ಶಬ್ದಾನುಶಾಸನಂ’ನಲ್ಲಿ ಪ್ರಸ್ತಾಪಿಸುತ್ತಾರೆ.

700-800 ವರುಷದ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ, ಇಲ್ಲಿವರೆಗೆ 1000 ಅಧಿಕ ಕವಿಗಳನ್ನು ಗುರುತಿಸಬಹುದು.
5,000ಕ್ಕೂ ಅಧಿಕ ಪ್ರಸಂಗಗಳು ರಚನೆಯಾಗಿ, ಸರಿ ಸುಮಾರು 10 ಲಕ್ಷಕ್ಕೂ ಅಧಿಕ ಸಂಖ್ಯೆಯ ಪದ್ಯಗಳು ರಚನೆಯಾಗಿದೆ. ಬಹುಶಃ ಕನ್ನಡದಲ್ಲಿ ಒಂದು ಪ್ರಕಾರದ ಸಾಹಿತ್ಯ ಇಷ್ಟು ದೊಡ್ಡ ಮಟ್ಟದಲ್ಲಿ ರಚಿತವಾಗಿರುವುದು ದಾಖಲೆಯಾಗಿರಬಹುದು. ಈ ಬಗ್ಗೆ ಸಂಶೋಧನೆ ಅಗತ್ಯವಿದೆ. ಇಂಥ ಶುದ್ಧ ಮತ್ತು ಸಮೃದ್ಧವಾದ ಕನ್ನಡ ಸಾಹಿತ್ಯದ ಪರಂಪರೆ ಕರ್ನಾಟಕದಲ್ಲಿ ಮನೆಮಾತಗಿ ದೆಯೇ ಎಂಬ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಇದನ್ನು ಕನ್ನಡ ಸಾಹಿತ್ಯವೆಂದು ಗಂಭೀರವಾಗಿ ಪರಿಗಣಿಸದ ಹಾಗೆ ಕಾಣಿಸುವುದಿಲ್ಲ. ತನ್ನ ಯಾವುದೇ ಚಟುವಟಿಕೆ ಗಳಲ್ಲಿ ಇದಕ್ಕೆ ಸ್ಥಾನವನ್ನು ನೀಡದೆ ಇರುವುದು ಸೋಜಿಗವೆನಿಸುತ್ತದೆ.

ಕನ್ನಡ ಅಸ್ಮಿತೆಯನ್ನು ಬಹಳ ಪರಿಣಾಮಕಾರಿಯಾಗಿ ಉಳಿಸುವುದಕ್ಕೆ ಯಕ್ಷಗಾನಕ್ಕೆ ವಿಫುಲವಾದ ಅವಕಾಶಗಳಿರುವುದನ್ನು ಎಂದಿಗೂ ಮರೆಯುವ ಹಾಗಿಲ್ಲ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಂಸ್ಥೆಗಳು ಯಕ್ಷಗಾನವನ್ನು ಬಳಸಿಕೊಳ್ಳಬಹುದಾಗಿದೆ. ಜತೆಗೆ ತನ್ನದೇ ವಿಶಿಷ್ಟ ಛಂದಸ್ಸು ಹೊಂದಿರುವ ಯಕ್ಷಗಾನ ಸಾಹಿತ್ಯದ ರಚನೆಯ ಹಾಗೂ ಮಟ್ಟಿನ ಬಗ್ಗೆ ಇನ್ನೂ ಹೆಚ್ಚಿನ ಸಂಶೋ ಧನೆಗಳಾಗಬೇಕು ಹಾಗೂ ಯಕ್ಷ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದಂತೆ ಪ್ರಶಸ್ತಿ, ಪುರಸ್ಕಾರಗಳು, ಮನ್ನಣೆಗಳು ಸಿಕ್ಕಾಗ ಮಾತ್ರ ಇದರ ಬೆಳವಣಿಗೆ ಸಾಧ್ಯವಾಗುತ್ತದೆ.