Monday, 14th October 2024

ಭರವಸೆಯ ಬೆಳಕು ನವಭಾರತದ ಯುವಜನಾಂಗ

ಅಭಿಮತ

ಮಣ್ಣೆಮೋಹನ್‌

ಇದೀಗ ಆಧುನಿಕ ಭಾರತದಲ್ಲಿ, ಯುವಶಕ್ತಿ ನವ ಶಕ್ತಿಯಾಗಿ ಹೊರಹೊಮ್ಮುವ ಕಾಲಘಟ್ಟ. ಸುಮಾರು ಮೂರು ದಶಕಗಳ ಹಿಂದೆ ಭಾರತದ ಔದ್ಯೋಗಿಕ ವಲಯಕ್ಕೆ ಪಾದಾರ್ಪಣೆ ಮಾಡಿದ ಮಾಹಿತಿ ತಂತ್ರಜ್ಞಾನವೆಂಬ ಮಾಂತ್ರಿಕ ವಿಭಾಗ, ಯುವ ಜನಾಂಗದ ಪಾಲಿಗೆ ಆಶಾಕಿರಣವಾಗಿ ಮೂಡಿಬಂದಿದ್ದೀಗ ಇತಿಹಾಸ.

ದೇಶದ ಸಶಕ್ತ ಯುವಪಡೆಯ ಕೌಶಲ್ಯದಿಂದ ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನವತಾರೆಯಾಗಿ ಉದಯಿಸಿ, ಜಗತ್ತಿನ ದಿಗ್ಗಜನಾಗಿದ್ದು ಒಂದು ರೋಚಕ ಅಧ್ಯಾಯ. ಎಚ್‌ಸಿಎಲ್‌, ಇನ್ಫೋಸಿಸ್, ವಿಪ್ರೋ, ಟೆಕ್ ಮಹೇಂದ್ರಗಳು ಇಂದು ದೇಶದ ಹೆಮ್ಮೆಯ ಹೆಗ್ಗುರುತುಗಳು.

ಇವುಗಳೊಂದಿಗೆ ನೂರಾರು ಕಂಪನಿಗಳು ಈ ಕ್ಷೇತ್ರದಲ್ಲಿ ದುಡಿಯುತ್ತಾ ನಿರುದ್ಯೋಗದ ನಿವಾರಣೆಗೆ ಕಾರಣವಾಗಿ, ದೇಶದ ಜಿಡಿಪಿಗೆ ಅಮೂಲ್ಯ ಕೊಡುಗೆ ನೀಡುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿವೆ. ಈ ಕ್ಷೇತ್ರದಲ್ಲಿ ಬೆಂಗಳೂರಿನ ಸಾಧನೆಯಂತೂ ಅದ್ವಿತೀಯವಾದದ್ದು. ಆ ಮೂಲಕ ಸಿಲಿಕಾನ್ ಸಿಟಿ ಎಂದು ನಾಮಾಂಕಿತವನ್ನು ತನ್ನದಾಗಿಸಿಕೊಂಡಿದೆ. ಮುಂದೆ ಇದೇ ಯುವಪಡೆ ತನ್ನ ಕುಶಲತೆಯಿಂದ ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ, ಅನೇಕ ಜೀವರಕ್ಷಕ ಔಷಧಿ ಗಳನ್ನು ಅನ್ವೇಷಿಸಿ, ಹೊಸ ಬಗೆಯ ಆವಿಷ್ಕಾರಗಳಿಗೆ ಕಾರಣವಾಗಿ, ಈ ಕ್ಷೇತ್ರವನ್ನು ಬಲಾಢ್ಯಗೊಳಿಸಿ, ಬಯೋ ತಂತ್ರಜ್ಞಾನದ ಜಗತ್ತಿನಲ್ಲಿ ಛಾಪು ಮೂಡಿಸಿದ್ದು ಮರೆಯಲಾಗದ ಮಹಾನ್ ಸಾಧನೆ. ಬಯೋಕಾನ್, ರೆಡ್ಡಿ ಲ್ಯಾಬ್ಸ್‌ನಂಥ ಹತ್ತಾರು ಕಂಪನಿಗಳು ಈ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿವೆ.

ಹಾಗೆಯೇ ನ್ಯಾನೋ ಟೆಕ್ನಾಲಜಿಯೂ ರೂಪ ತಳೆದು ಅನೇಕ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಇದೀಗ ಹೊಸ ಬಗೆಯ ಆಪ್‌ಗಳ, ಸ್ಟಾರ್ಟಪ್‌ಗಳ ಜಮಾನ. ಫ್ಲಿಪ್‌ಕಾರ್ಟ್, ಸ್ನಾಪ್ ಡೀಲ್‌, ಬಿಗ್ ಬಾಸ್ಕೆಟ್, ಮಂತ್ರಗಳು ಆನ್‌ಲೈನ್ ಶಾಪಿಂಗ್ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾದರೆ, ಫೋನ್ ಪೇ, ಪೇಟಿಯಂಗಳು ಹಣಕಾಸು ವ್ಯವಹಾರದ ಹೊಸ ಸಾಧ್ಯತೆ ಗಳನ್ನು ಸೃಷ್ಟಿಸಿವೆ.

ಜೊಮೋಟೋ, ಫಾಸೋಸ್, ಸ್ವಿಗ್ಗಿಗಳು ಜನರ ಜಿಹ್ವಾ ಚಾಪಲ್ಯ ತಣಿಸಿದರೆ, ಓಲಾ, ಮೇರು, ರೆಡ್ ಬಸ್ , ಜೂಮ್ ಕಾರುಗಳು ನಾವು ಸಾಗುವ ಹಾದಿಯನ್ನು ಸನಿಹಕ್ಕೆ ತಂದ ಆಪ್‌ಗಳು. ಗಾನ, ಪಿಂಕ್ ಮ್ಯೂಸಿಕ್, ಸಾವನ್ ಗಳು ಸಂಗೀತದ ಸುಧೆಯನ್ನು ಹರಿಸಿದರೆ, ಡಿಸ್ನಿ ಹಾಟ್ ಸ್ಟಾರ್ ಮುಂತಾದವು ದೃಶ್ಯಮಾಧ್ಯಮವನ್ನು ನಮ್ಮ ಕಣ್ಣೆದುರು ಪ್ರತ್ಯಕ್ಷಗೊಳಿಸಲು ಸಹಕಾರಿಯಾಗಿವೆ. ಇಂತಹ ನೂರಾರು ಆಪ್‌ಗಳನ್ನು ಸೃಷ್ಟಿಸಿ, ನಾವಿನ್ಯತೆ ತೆರೆದಿಟ್ಟು, ಮನುಕುಲದ ಬದುಕಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾದ ನಮ್ಮ ಯುವಪಡೆ, ಜಗತ್ತಿನ ಕಣ್ಣಲ್ಲಿ ಭಾರತ ಕ್ಕೊಂದು ತಂತ್ರಜ್ಞಾನ ಸ್ವರ್ಗವೆಂಬ ನಾಮಾಂಕಿತವನ್ನು ನೀಡಿ ದೇಶದ ಹಿರಿಮೆ – ಗರಿಮೆಗಳನ್ನು ದಶದಿಕ್ಕುಗಳಿಗೆ, ಜಗದಗಲಕ್ಕೆ ಪಸರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತ್ತೀಚಿನ ಉದಾಹರಣೆಯಾಗಿ ದೇಶಾದ್ಯಂತ ಲಾಕ್ ಡೌನ್‌ನಿಂದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದ್ದಂತಹ ನಿರ್ವಾತ ಸಮಯ ದಲ್ಲಿ, ಅತ್ಯಂತ ಕ್ಷಿಪ್ರ ಅವಽಯಲ್ಲಿ ಭಾರತದ ಐಟಿ ಕಂಪನಿಗಳು ಮೈಕ್ರೋಸಾಫ್ಟ್ ಟೀಮ್ಸ, ಸಿಸ್ಕೋ ವೆಬೇಕ್ಸ್, ಝೂಮ್ಸ, ಇನ್ ಹೌಸ್ ವೆಬ್ ಸೈಟ್, ಯೂಟ್ಯೂಬ್‌ಗಳ ನೆರವಿನಿಂದ ಇಂಟರ್ನಲ್ ಸಾಫ್ಟ್ವೇರ್‌ಗಳನ್ನು ವಿನ್ಯಾಸಗೊಳಿಸಿಕೊಂಡು, ವಿಡಿಯೋ ಸಂವಾದಗಳು, ಕಚೇರಿಗಳ ವರ್ಚುವಲ್ ಮೀಟಿಂಗ್ ಗಳನ್ನೊಳಗೊಂಡು, ಮನೆಯಿಂದಲೇ ಕೆಲಸ ಮಾಡುವ ರೀತಿ ಸಜ್ಜಾಗಿ ದ್ದಂತೂ ಅಚ್ಚರಿಯೇ ಸರಿ.

ಕೋವಿಡ್19ನ ಈ ಸಂಕಷ್ಟ ಸಮಯದಲ್ಲಿಯೂ ನಮ್ಮ ಯುವ ತಂತ್ರಜ್ಞರು ಮನೆಗಳಲ್ಲಿ ಕುಳಿತು ಕೆಲಸ ಮಾಡುವುದರ ಮೂಲಕ, ವಿದೇಶಿ ವಿನಿಮಯವನ್ನು ಸರಕಾರದ ಖಜಾನೆಗೆ ತುಂಬಿಸುತ್ತಾ, ಸೋಂಕು ಹರಡುವಿಕೆಯು ಅಷ್ಟರಮಟ್ಟಿಗೆ ನಿಯಂತ್ರಣಕ್ಕೊಳಗಾಗುವಂತೆ ಮಾಡಿದ್ದಂತೂ ತಂತ್ರಜ್ಞಾನದ ವಿಜಯವೆಂದೇ ಹೇಳಬೇಕು. ಹಾಗೆಯೇ ಶಾಲಾ – ಕಾಲೇಜುಗಳು ಸಹ ತಮಗೆ ಅನುಕೂಲವಾಗುವ ಹಾಗೆ ಸಾಫ್ಟ್ವೇರ್‌ಗಳನ್ನು, ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸಿಕೊಂಡು ಆನ್‌ಲೈನ್‌ನಲ್ಲಿ
ಪಾಠಪ್ರವಚನಗಳನ್ನು ನೀಡುತ್ತಾ, ಶೂನ್ಯವಾಗಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಗತ್ಯತೆಗಳನ್ನು ಪೂರೈಸಿ, ಪೋಲಾಗು ತ್ತಿದ್ದ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಸದುಪಯೋಗ ವಾಗುವಂತೆ ಮಾಡಿದ್ದು ಸಹ ಯುವಜನಾಂಗದ ಸಾಹಸವೇ ಸರಿ.