Wednesday, 11th December 2024

ಪಾದರಾಯನಪುರ ಘಟನೆ ಸಂಬಂಧ 54 ಜನರ ಬಂಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ಪ್ರಕರಣದ ಸಂಬಂಧ ಈವರೆಗೂ 54 ಮಂದಿ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಹಾಗೂ ಗಲಾಟೆ ವಿಡಿಯೊ ಆಧರಿಸಿ ಜೆ.ಜೆ.ನಗರ ಪೊಲೀಸರು ಮಹಿಳೆಯೊಬ್ಬಳು ಸೇರಿ 54 ಮಂದಿಯನ್ನು ಬಂಧಿಸಿದ್ದಾರೆ. ಈ ಗಲಾಟೆಯ ಹಿಂದೆ ಮಹಿಳೆಯ ಕೈವಾಡ ಇದೆ ಎನ್ನಲಾಗಿದೆ. ಈ ಸಂಬಂಧ ಫರೋಜಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಗಾಂಜಾ ನಶೆಯಲ್ಲಿ ಗಲಾಟೆ?
ಈ ಮಹಿಳೆ ತರಕಾರಿ ಮಾರಾಟ ಮಾಡುತ್ತಿದ್ದಳು. ಅಲ್ಲದೇ ಪುಂಡರಿಗೆ ಗಾಂಜಾ ನೀಡಿದ್ದಾಳೆ. ಜತೆಗೆ ಯುವಕರು ಜಮಾವಣೆಗೊಳ್ಳುವಂತೆ ಪ್ರಚೋದನೆ ಕೊಟ್ಟಿದ್ದಾಳೆ. ಈ ಮಹಿಳೆ ನೀಡಿದ ಮಾಹಿತಿಯ‌ ಮೇರೆಗೆ ಭಾನುವಾರ ರಾತ್ರಿ 20 ಮಂದಿಯನ್ನು ಬಂಧಿಸಲಾಗಿತ್ತು.
ನಂತರ ವಿಡಿಯೊ ಆಧರಿಸಿ 32 ಮಂದಿಯನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ 150 ರಿಂದ 200 ಮಂದಿ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ ಎನ್ನುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋಟ್..
ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣದ ಸಂಬಂಧ ಆರೋಗ್ಯ ಅಧಿಕಾರಿಗಳು ದೂರು ನೀಡಿದ್ದಾರೆ. ದೂರಿನ ಅನ್ವಯ ೫೪ ಮಂದಿಯನ್ನು ಈವರೆಗೂ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ.
ಸೌಮೇಂದು ಮುರ್ಖಜಿ, ಹೆಚ್ಚುವರಿ ಪೊಲೀಸ್ ಆಯುಕ್ತ

 

ಮೊಬೈಲ್‌ ವಶ:

ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದ ಸಂಬಂಧ ೫೪ ಮಂದಿಯನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಬಳಿ‌ ಇದ್ದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಮೊಬೈಲ್ ಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕೃತ್ಯದ ಹಿಂದೆ ಇರ್ಫಾನ್ ಎಂಬಾದ ಕೈವಾಡವಿದ್ದು, ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.