Wednesday, 11th December 2024

Accident Case: ಇಬ್ಬರ ಜೀವ ತೆಗೆದ ಶ್ರೀಮಂತ ಮಹಿಳೆಯಿಂದ ಹಣ ಪಡೆದು ಸಂತ್ರಸ್ತ ಕುಟುಂಬದಿಂದ ಕ್ಷಮಾದಾನ!

Accident Case


ಹಣವು ಜೀವನಕ್ಕೆ ಬಹಳ ಮುಖ್ಯವಾದುದು ನಿಜ. ಅಂದಮಾತ್ರಕ್ಕೆ ಹಣಕ್ಕಾಗಿ ಮನುಷ್ಯತ್ವವನ್ನೇ ಮಾರಾಟ ಮಾಡುವುದು ಎಷ್ಟು ಸರಿ? ಹಣದಿಂದ ಜನರ ನಡುವಿನ ಹಾಗೂ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಬಗೆಹರಿಸಬಹುದು. ಹಣವು ಎಲ್ಲರ ಮೇಲೂ ಪ್ರಭಾವ ಬೀರುವಂತಹ ಅಂಶವಾಗಿದೆ. ಶ್ರೀಮಂತರು ಹಣ ನೀಡಿ ಕಾನೂನಿನ ವಿರುದ್ಧ ಏನು ಬೇಕಾದರೂ ಮಾಡಬಹುದು ಎಂಬುದನ್ನು ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಒಂದು ಆಕ್ಸಿಡೆಂಟ್‌ (Accident Case) ಘಟನೆ ನಿರೂಪಿಸಿದೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ವರದಿಯಾದ ಸುದ್ಧಿಯೊಂದರಲ್ಲಿ ಶ್ರೀಮಂತ, ಪ್ರಭಾವಿ ಉದ್ಯಮಿ ಕುಟುಂಬ ಮತ್ತು ಬಡ ವರ್ಗಕ್ಕೆ ಸೇರಿದ ಇಬ್ಬರು ಮೃತ ವ್ಯಕ್ತಿಗಳನ್ನು ಒಳಗೊಂಡ ಕುಟುಂಬದ ಪ್ರಕರಣದಲ್ಲಿ ಹಣವು ನಿರ್ಣಾಯಕ ಪಾತ್ರ ವಹಿಸಿರುವುದನ್ನು ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಪಾಕಿಸ್ತಾನದ ಶ್ರೀಮಂತ, ಪ್ರಭಾವಿ ಉದ್ಯಮಿ ಕುಟುಂಬಕ್ಕೆ ಸೇರಿದ ಮಹಿಳೆ ಮಾಡಿದ ಅಪಘಾತದಲ್ಲಿ ಸಾವನಪ್ಪಿದ ಇಬ್ಬರು ಮೃತರ ಕುಟುಂಬವು ಆರೋಪಿಗೆ ಕ್ಷಮಾದಾನ ನೀಡಿರುವುದಾಗಿ ವರದಿಯಲ್ಲಿ ತಿಳಿದು ಬಂದಿದೆ. ಈ ಸುದ್ದಿಯನ್ನು ಅವರ ವಕೀಲರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್ 19ರಂದು ನತಾಶಾ ದಾನಿಶ್ ಎಂಬಾಕೆ ದುಬಾರಿ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನದ ನಿಯಂತ್ರಣ ಕಳೆದುಕೊಂಡಿದ್ದರಿಂದ ಇಮ್ರಾನ್ ಆರಿಫ್ ಮತ್ತು ಅವರ ಮಗಳು ಅಮ್ನಾ ಆರಿಫ್ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಳು. ಆಕೆ ಕುಡಿದು ವಾಹನ ಓಡಿಸಿದ್ದಳು ಎಂದು ಆರೋಪಿಸಲಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಪೊಲೀಸರು ಹಂಚಿಕೊಂಡ ಈ ಅಪಘಾತದ ವಿಡಿಯೊದಲ್ಲಿ ಅವರ ಬೈಕ್ ಹಾರಿ ಹೋಗಿ ದೂರ ಬಿದ್ದ ಪರಿಣಾಮ ತಂದೆ ಮತ್ತು ಮಗಳು ಸಾವನಪ್ಪಿದ್ದರು. ಆದರೆ ಈ ಘಟನೆಯಲ್ಲಿ ತನ್ನ ತಪ್ಪಿನಿಂದಾದ ಪರಿಣಾಮದ ಬಗ್ಗೆ ನತಾಶಾ ದಾನಿಶ್ ಪಶ್ಚಾತ್ತಾಪಪಡಲಿಲ್ಲ. ಈ ಅಪಘಾತವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನವನ್ನು ಸೆಳೆಯಿತು ಮತ್ತು ನತಾಶಾ ದಾನಿಶ್ ತನ್ನ ಕೃತ್ಯಗಳ ಬಗ್ಗೆ ಆಕೆಯ ಮುಖದಲ್ಲಿ ಯಾವುದೇ ಪಶ್ಚಾತ್ತಾಪದ ಭಾವನೆ ಇಲ್ಲದಿರುವುದನ್ನು ವಿಡಿಯೊದಲ್ಲಿ ನೋಡಿದ ಸುದ್ದಿ ಚಾನೆಲ್‍ಗಳಲ್ಲಿ ಇದು ಒಂದು ತೀವ್ರ ಚರ್ಚೆಯ ವಿಷಯವಾಗಿತ್ತು.

ಮೃತ ಇಮ್ರಾನ್ ಆರಿಫ್ ಅಂಗಡಿಗಳಿಗೆ ಪೇಪರ್‌ಗಳನ್ನು ಮಾರಾಟ ಮಾಡುತ್ತಿದ್ದರೆ, ಅವರ ಮಗಳು ಅಮ್ನಾ ಆರಿಫ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಳು. ಸೆಪ್ಟೆಂಬರ್ 6 ರ ಶುಕ್ರವಾರ ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತಾದ ವಿಚಾರಣೆಯ ನಂತರ, ಮೃತರ ಕುಟುಂಬದವರು ಅಲ್ಲಾಹನ ಹೆಸರಿನಲ್ಲಿ ನತಾಶಾ ಅವಳನ್ನು ಕ್ಷಮಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೇ ಸಂತ್ರಸ್ತರ ಕುಟುಂಬಗಳು ಆರೋಪಿಯನ್ನು ಕ್ಷಮಿಸುವಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರೋಪಿ ನತಾಶಾ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, 2005ರಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪ್ರತಿವಾದಿ ವಕೀಲರು ಹೇಳಿದ್ದಾರೆ. ಮೃತರ ಕುಟುಂಬ ಮತ್ತು ಆರೋಪಿ ಕುಟುಂಬದವರ ನಡುವಿನ ಒಪ್ಪಂದವನ್ನು ಪ್ರಕರಣದ ವಿಚಾರಣೆ ನಡೆಯುತ್ತಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಯಿತು, ನಂತರ ಶರಿಯಾ ಕಾನೂನುಗಳ ಅಡಿಯಲ್ಲಿ ಆರೋಪಿಗೆ ಜಾಮೀನು ನೀಡಲಾಯಿತು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸಂತ್ರಸ್ತರ ಕುಟುಂಬಗಳು ಇಬ್ಬರ ರಕ್ತ ಹರಿಸಿ ಹಣವನ್ನು ಸ್ವೀಕರಿಸಿವೆ ಎಂದು ಆರೋಪಿಸಿದ್ದಾರೆ.

“ಮೃತರ ಕುಟುಂಬದವರು ಅಲ್ಲಾಹನ ಹೆಸರಿನಲ್ಲಿ ಆರೋಪಿಯನ್ನು ಕ್ಷಮಿಸಿದ್ದಾರೆ ಮತ್ತು ಅವರ ಸಾವಿಗೆ ಕ್ಷಮಾದಾನದ ರೂಪದಲ್ಲಿ ಹಣವನ್ನು ತೆಗೆದುಕೊಂಡಿದ್ದಾರೆ ಎಂಬುದು ಆಧಾರರಹಿತ ವದಂತಿಗಳು” ಎಂದು ಪ್ರತಿವಾದಿ ವಕೀಲರು ತಿಳಿಸಿದ್ದಾರೆ. ಅಲ್ಲದೆ “ನ್ಯಾಯಾಲಯವು ನತಾಶಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ, ಅವರು ವಿಶ್ವದ ಎಲ್ಲಿ ಬೇಕಾದರೂ ಹೋಗಬಹುದು” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ:ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕ; ಮುಂದೇನಾಯಿತು ನೋಡಿ…

ಪಾಕಿಸ್ತಾನದಲ್ಲಿ, ಶರಿಯಾ ಕಾನೂನುಗಳ ಅಡಿಯಲ್ಲಿ, ಬಲಿಪಶುವಿನ ಕುಟುಂಬ / ವಾರಸುದಾರರು ಆರೋಪಿಯನ್ನು ಅವನು ಅಥವಾ ಅವಳು ಸಾವಿಗೆ ಕಾರಣವಾಗಿದ್ದರೂ ಸಹ ಕ್ಷಮಿಸಬಹುದು. ಈ ಕಾನೂನನ್ನು ಕಿಸಾಸ್ ಮತ್ತು ದಿಯಾತ್ ಕಾನೂನು ಎಂದು ಕರೆಯಲಾಗುತ್ತದೆ. ಕಿಸಾಸ್ ಅನ್ನು “ಅಪರಾಧಿಯ ದೇಹದ ಒಂದೇ ಭಾಗದಲ್ಲಿ ಗಾಯವನ್ನು ಉಂಟುಮಾಡುವ ಮೂಲಕ ಶಿಕ್ಷೆ” ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ದಿಯಾತ್ ಅರ್ಥ, “ಬಲಿಪಶುಗಳ ವಾರಸುದಾರರಿಗೆ ಪಾವತಿಸಬೇಕಾದ ಪರಿಹಾರ”.