Wednesday, 11th December 2024

ಎಐಎಂಐಎಂ ನಾಯಕ ಆರಿಫ್ ಜಮಾಲ್ ಗುಂಡು ಹಾರಿಸಿ ಹತ್ಯೆ

ಪಾಟ್ನಾ: ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಆರಿಫ್ ಜಮಾಲ್ ತನ್ನ ಅಂಗಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ.

ಆರಿಫ್ ಜಮಾಲ್ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದಾರೆ. ರಾತ್ರಿ 8.30ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಆರಿಫ್ ಜಮಾಲ್ ನನ್ನು ಜನರು ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ದುಷ್ಕರ್ಮಿಗಳು ಆರಿಫ್ ಜಮಾಲ್ ಹೊಟ್ಟೆಗೆ ಒಂದೇ ಒಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ, ಜನರು ಮೊದಲು ಅವರನ್ನು ಸದರ್ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಇಲ್ಲಿಂದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.

ಆರಿಫ್ ಜಮಾಲ್ ಕೂಡ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ. 2015 ರಲ್ಲಿ ಅವರು ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಬಳಿಕ 2022ರ ಜಿಲ್ಲಾ ಪರಿಷತ್ ಚುನಾವಣೆಗೂ ಸ್ಪರ್ಧಿಸಿದ್ದರು.