Friday, 13th December 2024

ಮಹಿಳೆಯರು ಮುಟ್ಟಿದರೆ ಅರ್ಚಕ ಮೂರ್ಛೆ ಹೋಗ್ತಾರೆ…!

ಭೋಪಾಲ್: ಇಲ್ಲಿನ ಅರ್ಚಕರಿಗೆ ವಿಚಿತ್ರ ಸಮಸ್ಯೆ. ಮಹಿಳೆಯರು ಮುಟ್ಟಿದರೆ ಸಾಕು ಮೂರ್ಛೆ ಹೋಗುತ್ತಿದ್ದಾರೆ. ಮಹಿಳಾ ನರ್ಸ್​ ಚಿಕಿತ್ಸೆ ಕೊಡಲು ಬಂದಾಗಲೂ ಅರ್ಚಕ ಮೂರ್ಛೆ ಹೋಗಿದ್ದು, ವೈದ್ಯರೇ ಸುಸ್ತಾಗಿ ಹೋದರು.

ಬೆರಾಸಿಯಾದ ಹನುಮಾನ್ ದೇವಸ್ಥಾನದ ಅರ್ಚಕ ಅನೇಕ ವರ್ಷಗಳಿಂದ ಈ ಸಮಸ್ಯೆ ಯಿಂದ ಬಳಲುತ್ತಿದ್ದಾರೆ. ಯಾವುದೇ ಮಹಿಳೆ ಇವರನ್ನು ಸ್ಪರ್ಷಿಸಿದರೆ ಮೂರ್ಛೆ ಹೋಗು ತ್ತಿದ್ದಾರೆ. ಬ್ರಹ್ಮಚರ್ಯ ಆಚರಿಸುವ ಭಗವಾನ್ ಹನುಮಾನ್ ಶಕ್ತಿ ನನ್ನ ಮೇಲೆ ಬರುತ್ತದೆ, ಇದೇ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

ಅರ್ಚಕರನ್ನು ಕರೆದುಕೊಂಡು ದೇಗುಲದ ಭಕ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮನೋ ವೈದ್ಯ ಆರ್.ಕೆ.ಬೈರಾಗಿ ಅವರು ಅರ್ಚಕರ ಪರೀಕ್ಷೆ ಮಾಡಿದ್ದು, ಇದೊಂದು ಮಾನಸಿಕ ಕಾಯಿಲೆ ಎಂದು ಹೇಳಿದ್ದಾರೆ. ಅರ್ಚಕರು ಕನ್ವರ್ಷನ್​ ಡಿಸಾರ್ಡರ್​ದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

ಇವರನ್ನು ತಪಾಸಣೆ ಮಾಡಲು ಓರ್ವ ಮಹಿಳಾ ನರ್ಸ್​ ಅನ್ನು ಬಿಟ್ಟಿದ್ದರು. ಅವರು ಅರ್ಚಕನನ್ನು ಮುಟ್ಟಿದಾಗ, ಅವರು ಮೂರ್ಛೆ ಹೋದರು. ನಂತರ ವೈದ್ಯರು ಅರ್ಚಕರಿಗೆ ಕಣ್ಣು ಮುಚ್ಚುವಂತೆ ಹೇಳಿದರು. ಅದರಂತೆ ಅರ್ಚಕ ಕಣ್ಣುಮುಚ್ಚಿದ್ದಾರೆ. ಆಗ ವೈದ್ಯರು ಈಗ ಮತ್ತೊಬ್ಬ ಮಹಿಳಾ ನರ್ಸ್​ ನಿಮ್ಮನ್ನು ಮುಟ್ಟುತ್ತಾರೆ, ಏನು ಆಗುತ್ತದೆ ನೋಡೋಣ ಎಂದಿದ್ದಾರೆ. ಅದರಂತೆ ಅರ್ಚಕ ಕಣ್ಣುಮುಚ್ಚಿದಾಗ ವೈದ್ಯರು ಮಹಿಳೆ ಬದಲು ಪುರುಷ ನರ್ಸ್​ಗೆ ಕರೆಸಿ ಅರ್ಚಕನನ್ನು ಮುಟ್ಟುವಂತೆ ಹೇಳಿದ್ದಾರೆ. ಬಂದದ್ದು ಪುರುಷ ಎಂದು ಅರ್ಚಕರಿಗೆ ತಿಳಿದಿರಲಿಲ್ಲ. ಆದರೆ ಪುರುಷ ನರ್ಸ್​ ಮುಟ್ಟುತ್ತಿದ್ದಂತೆಯೇ ಅಗಲೂ ಅರ್ಚಕ ಮೂರ್ಛೆ ಹೋಗಿದ್ದಾರೆ.

ಬ್ರಹ್ಮಚಾರಿಯಾಗಿರುವ ಅರ್ಚಕನಿಗೆ ಮಹಿಳೆಯರ ಬಗ್ಗೆ ಇಂಥದ್ದೇ ಒಂದು ಕಲ್ಪನೆ ಮೂಡಿದೆ. ಹನುಮನ ಭಕ್ತರಾಗಿರುವ ಅವರು, ತಾವೂ ಹನುಮನಂತೆ ಬ್ರಹ್ಮಚಾರಿ, ಮಹಿಳೆಯರು ಮುಟ್ಟುವಂತಿಲ್ಲ ಎಂದು ಊಹಿಸಿಕೊಂಡು ಅದನ್ನೇ ಸುಪ್ತ ಮನಸ್ಸಿನಲ್ಲಿಯೂ ಸೇರಿಸಿಕೊಂಡುಬಿಟ್ಟಿದ್ದಾರೆ. ಆದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.