Friday, 13th December 2024

ಉಪಸಮರ; ಬಲಪ್ರದರ್ಶನಕ್ಕೆ ಸಜ್ಜಾದ ಬಿಜೆಪಿ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಕರ್ನಾಟಕದಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಮೂರು ಪಕ್ಷಗಳಿಗೂ ಒಂದಲ್ಲ ಒಂದು ರೀತಿ ಪ್ರತಿಷ್ಠೆಯ ಕಣವಾಗಿರುವ ಈ ಎರಡು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಳ್ಳಲು ತಂತ್ರ-ಪ್ರತಿತಂತ್ರದಲ್ಲಿ ತೊಡಗಿವೆ. ಅದರಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್‌ಗೆ ತಮ್ಮ ಕ್ಷೇತ್ರಗಳನ್ನು ಮರಳಿ ಪಡೆಯುವ ಉತ್ಸಾಹ ವಾದರೆ, ಕಾಂಗ್ರೆಸ್‌ಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೊದಲು ಉಪಚುನಾವಣೆಯಲ್ಲಿ ಗೆದ್ದು, ‘ಕರ್ನಾಟಕದಲ್ಲಿ ತಾನಿನ್ನೂ ಬಲಿಷ್ಠ’ ಎನ್ನುವುದನ್ನು ಸಾಬೀತುಪಡಿಸಬೇಕೆಂಬ ಉತ್ಸಾಹ.

ಈ ಎಲ್ಲ ಉತ್ಸಾಹ, ಪ್ರತಿಷ್ಠೆಯ ನಡುವೆ, ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ವರಿಷ್ಠರಿಗೆ ಕೇವಲ ಈ ಎರಡು ಚುನಾವಣೆ ಗೆಲುವು ಮಾತ್ರವಲ್ಲ, ಗೆಲ್ಲುವ ಮೂಲಕ, ಆಂತರಿಕವಾಗಿಯೇ ಸಂದೇಶ ರವಾನಿಸುವ ಲೆಕ್ಕಾಚಾರದಲ್ಲಿದೆ. ಹೌದು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಮಾತ್ರವಲ್ಲದೇ, ಅಽಕಾರಯುತ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಬಿಜೆಪಿ ಎದುರಿಸುತ್ತಿರುವ ಮೊದಲ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಇದಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿ, ಬಿಜೆಪಿಯಿಂದ ಹೊರನಡೆದಾಗ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿತ್ತು.

ನಿರೀಕ್ಷಿತ ಮಟ್ಟದ ಯಶಸ್ಸು ಲಭಿಸಿರಲಿಲ್ಲ. ಆದರೆ ಆಗ ಅವರು ಬಿಜೆಪಿಗೆ ನೇರ ಎದುರಾಳಿ ಎನ್ನುವುದು ಸ್ಪಷ್ಟವಾಗಿತ್ತು. ಇದೀಗ ಅವರು ಪಕ್ಷದಿಂದ ಹೊರನಡೆದಿಲ್ಲ. ಬದಲಿಗೆ, ಪಕ್ಷದೊಳಗೆ ‘ತಟಸ್ಥ’ರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಬಹುತೇಕ ಸಮಯದಲ್ಲಿ ಅವರು ಪಕ್ಷದ ಪ್ರಮುಖ ನಿರ್ಧಾರ ಗಳಲ್ಲಿ ಕಾಣಿಸಿಕೊಂಡಿಲ್ಲ. ಪ್ರತಿ ಸಭೆಯಲ್ಲಿ ಅವರು ಕಾಣಿಸಿಕೊಂಡರೂ, ಅದು ‘ಗೆಸ್ಟ್ ಅಪಿಯರೆನ್ಸ್’ ರೀತಿ ಇದೆ ಹೊರತು, ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ, ತಮ್ಮ ತವರು ಜಿಲ್ಲೆಯಾಗಿರುವ ಶಿವಮೊಗ್ಗ ಹಾಗೂ ತಮ್ಮ ಕ್ಷೇತ್ರ ಶಿಕಾರಿಪುರದಲ್ಲಿ ಸಾಲು ಸಾಲು ಯೋಜನೆ ಆರಂಭಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಬಿಜೆಪಿ ವರಿಷ್ಠರಿಂದ ಹಿಡಿದು, ಮುಖ್ಯಮಂತ್ರಿ, ಶಾಸಕರು ಹಾಗೂ ಸಚಿವರು ಎಲ್ಲರೂ ಯಡಿಯೂರಪ್ಪ ಅವರನ್ನು ಮುಂದಿರಿಸಿಕೊಂಡು ಪಕ್ಷ
ಸಂಘಟನೆ ಮಾಡುತ್ತಿದ್ದೇವೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ಆದರೆ ಅವರನ್ನು ಕೇವಲ ಉತ್ಸವ ಮೂರ್ತಿಯ ರೀತಿ ನೋಡುತ್ತಿದ್ದು, ಅವರ ಅಭಿಪ್ರಾಯ ಅಥವಾ ಸಲಹೆಗಳನ್ನು ಹೆಚ್ಚು ಗಂಭೀರವಾಗಿ ತಗೆದುಕೊಳ್ಳುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಬಿಡುತ್ತಾರೆ ಎನ್ನುವುದಕ್ಕಿಂತ, ಈ ಹಂತದಲ್ಲಿ ಯಡಿಯೂರಪ್ಪ ಅವರ ನಡೆಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೇ, ಚುನಾವಣೆ ಸಂಘಟನೆಯನ್ನು ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಉಪಚುನಾವಣಾ ವಿಷಯದಲ್ಲಿ ಬಿಜೆಪಿ ವರಿಷ್ಠರು ತಗೆದುಕೊಳ್ಳುತ್ತಿರುವ ನಿರ್ಣಯವನ್ನು ನೋಡಿದರೆ, ‘ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ’ ಎನ್ನುವ ಸಂದೇಶವನ್ನು ರವಾನಿಸಲು ಹೊರಟಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ. ಇದಕ್ಕೆ ಭಾನುವಾರ ಸಂಜೆ ಪ್ರಕಟಿಸಲಾದ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ಪಟ್ಟಿಯೇ ಉದಾಹರಣೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಗಾದಿ ಮೇಲೆ ಯಡಿಯೂರಪ್ಪ ಅವರು ಕೂತ ಬಳಿಕ ನಡೆದ ಬಹುತೇಕ ಉಪಚುನಾವಣೆಯಲ್ಲಿ ಒಂದಿಲ್ಲೊಂ ದು ರೀತಿಯಲ್ಲಿ, ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಆಯಕಟ್ಟಿನ ಸ್ಥಾನವನ್ನು ಕೊಡುತ್ತಿದ್ದರು.

ಉಪಚುನಾವಣೆಯ ಉಸ್ತುವಾರಿಗಳ ಪಟ್ಟಿ ಯಲ್ಲಿ ವಿಜಯೇಂದ್ರ ಅವರ ಹೆಸರಿಲ್ಲದೇ, ಪಟ್ಟಿಯೇ ಅಂತಿಮವಲ್ಲ ಎನ್ನುವ ಮಟ್ಟಿಗೆ ತಂದಿದ್ದರು. ಹಾಗೂ ವಿಜಯೇಂದ್ರ ಅವರ ಉಸ್ತುವಾರಿಯಲ್ಲಿ ನಡೆದ ಬಹುತೇಕ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದಿದ್ದರು ಸಹ. ಆದ್ದರಿಂದ, ಅವರಿಗೆ ಉಪಚುನಾವಣೆಯ ಮಾಸ್ಟರ್ ಎಂದು ಹೇಳಲಾಗುತ್ತಿತ್ತು. ಇದೇ ವರ್ಚಸ್ಸನ್ನು ಉಳಿಸಿಕೊಂ ಡು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಒಂದು ವಿಧಾನಸಭಾ ಟಿಕೆಟ್ ಅಂತಿಮಗೊಳಿಸ ಬೇಕು. ಗೆದ್ದ ಬಳಿಕ ಯಡಿಯೂರಪ್ಪ ಅವರು ತಮ್ಮ ಪ್ರಭಾವ ಬಳಸಿಕೊಂಡು ತಮ್ಮ ಪುತ್ರನಿಗೆ ‘ಉತ್ತಮ ಸ್ಥಾನಮಾನ’ ಕೊಡಿಸಬೇಕು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಸಿಎಂ ಸ್ಥಾನದಿಂದ ಇಳಿದ ಬಳಿಕ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದೆ.

ಇನ್ನು ಪ್ರತಿಷ್ಠೆಯ ಕ್ಷೇತ್ರವಾ ಗಿರುವ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಚುನಾವಣಾ ಉಸ್ತುವರಿ ಪಟ್ಟಿಯಲ್ಲಿಯೂ ವಿಜಯೇಂದ್ರ ಅವರ ಹೆಸರು ಕಾಣಿಸಲಿಲ್ಲ.
ಆದರೆ ವಿಜಯೇಂದ್ರ ಅವರನ್ನು ಉಸ್ತುವಾರಿಯಾಗಿ ನೇಮಿಸದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಅಸಮಾಧಾನ, ಆಕ್ಷೇಪ, ವಿರೋಧ ವ್ಯಕ್ತ ಪಡಿಸಿದರು. ಆದರೆ ಈ ವಿರೋಧ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಬದಲಿಗೆ ಲಿಂಗಾಯತ ಹಾಗೂ ಯಡಿಯೂರಪ್ಪನವರ ಪ್ರಭಾವವಿರುವ ಹಾನಗಲ್ ಉಪಚುನಾವಣೆಯ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ, ವಿಜಯೇಂದ್ರ ಅವರನ್ನು ಒಂದು ದಿನದ ಬಳಿಕ ಅಂದರೆ, ಸೋಮವಾರ ಮಧ್ಯಾಹ್ನ ಹಾನಗಲ್ ಉಸ್ತುವಾರಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇದಕ್ಕು ಮೊದಲು ವಿಜಯೇಂದ್ರ ಅವರಿಗೆ ಉಸ್ತುವಾರಿಸ್ಥಾನ ನೀಡದೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಚುನಾವಣೆಯಿಂದ ಅಂತರ
ಕಾಯ್ದು ಕೊಳ್ಳುವಂತೆ ಮಾಡುವ ತಂತ್ರ ಎನ್ನುವ ವಿಶ್ಲೇಷಣೆ ಕೇಳಿಬಂದಿದ್ದವು. ಆದರೆ ಲಿಂಗಾ ಯತ ಪ್ರಾಬಲ್ಯವಿರುವ ಹಾನಗಲ್‌ನಲ್ಲಿ ಇದರಿಂದ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನುವುದು ತಿಳಿಯುತ್ತಿ ದ್ದಂತೆ ಪರಿಷ್ಕೃತ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ.

ಪ್ರಮುಖವಾಗಿ ಹಾನಗಲ್ ಕ್ಷೇತ್ರ ಹಾವೇರಿ ಜಿಲ್ಲೆಯಲ್ಲಿ ಬರಲಿದೆ. ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆಯುವ ಉಪಚುನಾವಣೆಯಲ್ಲಿಯೇ ಹಿನ್ನಡೆಯಾದರೆ, ಪಕ್ಷಕ್ಕೆ ಹಾಗೂ ಸರಕಾರಕ್ಕೆ ಡ್ಯಾಮೇಜ್ ಆಗಲಿದೆ. ಈ ಕ್ಷೇತ್ರದ ಮೇಲೆ ಯಡಿಯೂರಪ್ಪ ಅವರ ಹಿಡಿತ ಉತ್ತಮ ರೀತಿಯಲ್ಲಿದೆ. ಆದ್ದರಿಂದ ಹಾನಗಲ್ ಗೆಲ್ಲುವುದಕ್ಕೆ ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ತರುವುದು ಅನಿವಾರ್ಯ. ಒಂದು ವೇಳೆ ಅವರು ಪ್ರಚಾರಕ್ಕೆ ಬರಲು ಒಪ್ಪದಿದ್ದರೂ, ಅವರ ಪುತ್ರನನ್ನು ಉಸ್ತುವಾರಿಯನ್ನಾಗಿ ನೇಮಿಸಿದರೆ, ‘ನೆಗೆಟಿವ್’ ಎ-ಕ್ಟ್ ಮಾಡುವುದಿಲ್ಲ ಹಾಗೂ ವಿಜಯೇಂದ್ರ ಅವರಿಗೆ ಈ ಕ್ಷೇತ್ರದಲ್ಲಿ ಯುವಕರನ್ನು ಸಂಘಟಿಸುವ
ಶಕ್ತಿಯಿದೆ ಎನ್ನುವುದನ್ನು ಅರಿತು, ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಹೆಸರು ಸೇರಿಸಲಾಗಿದೆ ಎನ್ನುವ ವಿಶ್ಲೇಷಣೆಗಳು ಶುರುವಾಗಿವೆ.

ರಾಜ್ಯ ಬಿಜೆಪಿ ನಾಯಕರ ಮನಸ್ಥಿತಿಗೂ ಬಿಜೆಪಿ ವರಿಷ್ಠರ ಮನಸ್ಥಿತಿಗೂ ವ್ಯತ್ಯಾಸವಿದೆ. ಬಿಜೆಪಿ ವರಿಷ್ಠರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಂತ್ರಗಾರಿಕೆ ಹಾಗೂ ಸಂಘಟನೆಯ ಬಲ ಬಳಸಿಕೊಂಡು ಯಾವ ರಾಜ್ಯವನ್ನಾದರೂ ಗೆಲ್ಲಬಹುದು ಎನ್ನುವ ಉತ್ಸಾಹದಲ್ಲಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಇದು ಸಾಧ್ಯವಾಗಿದೆ ಕೂಡ. ಆದರೆ ಕರ್ನಾಟಕದ ಮಟ್ಟಿಗೆ ಈ ಉಪಚುನಾವಣೆಯಲ್ಲಿ ಇದು ಸಾಧ್ಯವೇ? ಯಡಿಯೂರಪ್ಪ ಅವರನ್ನು ಮೀರಿ, ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ? ಅದರಲ್ಲಿಯೂ ಶಿಕಾರಿಪುರದ ಪಕ್ಕದಲ್ಲಿರುವ ಹಾನಗಲ್‌ನಲ್ಲಿ ಯಡಿಯೂರಪ್ಪ ಅವರ ಮಾತು ಹೆಚ್ಚು ನಡೆಯುತ್ತದೆ. ಆ ಕ್ಷೇತ್ರದಲ್ಲಿಯೂ ಯಡಿಯೂರಪ್ಪ ಅವರನ್ನು ದೂರವಿಟ್ಟು ಚುನಾವಣೆ ಗೆಲ್ಲಬಹುದೇ ಎನ್ನುವ ಪ್ರಶ್ನೆಗಳು ಕಾರ್ಯಕರ್ತರಲ್ಲಿದೆ. ಈ ಹಂತದಲ್ಲಿ ಯಡಿಯೂರಪ್ಪ ಪಕ್ಷದ ವಿರುದ್ಧ ನೇರವಾಗಿ ನಿಂತು ಹೋರಾಡದಿದ್ದರೂ, ತಟಸ್ಥರಾಗಿ, ಇತರ ಪಕ್ಷದ ಅಭ್ಯರ್ಥಿಗೆ ನೆರವಾದರೂ ಬಿಜೆಪಿಗೆ ನಷ್ಟ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಆರ್‌ಎಸ್‌ಎಸ್ ಆಂತರಿಕ ವರದಿಯಲ್ಲಿಯೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿರು
ವುದು ರಾಜ್ಯ ಬಿಜೆಪಿ ನಾಯಕರಿಗೆ, ಅದರಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಡುತ್ತಿದೆ.

ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಸಿಂದಗಿಯಲ್ಲಿ ಮೂಲ ಬಿಜೆಪಿಗರಿಂದ ಒಂದು ಹಂತದಲ್ಲಿ ವಿರೋಧ ಶುರುವಾಗಿದೆ. ತವರು ಜಿಲ್ಲೆ ಹಾವೇರಿಯ
ಹಾನಗಲ್‌ನಲ್ಲಿಯೂ ಇದೇ ಪರಿಸ್ಥಿತಿ ಶುರುವಾದರೆ, ತಮ್ಮ ಸರಕಾರ ಅಽಕಾರಕ್ಕೆ ಬಂದ ಮೊದಲ ಚುನಾವಣೆಯಲ್ಲಿಯೇ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಚುನಾವಣೆ ಗೆಲುವಿಗೆ ಶತಾಯಗತಾಯ ಹೋರಾಟಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ದೂರ ವಿಟ್ಟು ಚುನಾವಣೆ ನಡೆಸಿ ಎನ್ನುವ ಸಂದೇಶ ವರಿಷ್ಠರಿಂದ ಬಂದರೆ, ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ ಎನ್ನುವುದು ಬೊಮ್ಮಾಯಿ ಅವರಿಗೆ ಇರುವ ಆತಂಕ.
ಇನ್ನು ಯಡಿಯೂರಪ್ಪ ಅವರು ಈಗಾಗಲೇ ಲಿಂಗಾಯತ ಸಮುದಾಯದ ಮಾಸ್ ಲೀಡರ್ ಎನಿಸಿಕೊಂಡಿದ್ದಾರೆ.

ಆದರೀಗ ಬಿಜೆಪಿಯ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಅವರ ಫೇಸ್‌ವ್ಯಾಲ್ಯು ಬದಲಿಗೆ, ಪಕ್ಷದ ಮುಖ ನೋಡಿ ಮತಹಾಕುವಂತೆ ಮಾಡಬೇಕಿದೆ. ಇದು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗಲಿದೆ ಎನ್ನುವುದು ತಿಳಿಯಲು ಹಾಗೂ ಇದರ ಆಳ-ಅಗಲ ಅರಿಯುವುದಕ್ಕೂ ಉಪಚುನಾವಣೆ ಮಹತ್ವ ಎನಿಸಿದೆ. ಒಂದು ವೇಳೆ ಉಪಚುನಾವಣೆಯಲ್ಲಿ ಹಿನ್ನಡೆಯಾದರೆ, ಪುನಃ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ತಟಸ್ಥ ಮಾಡುವ ವರಿಷ್ಠರ ಮೊದಲ ಭಾಗವೇ, ಅವರ ಪ್ರವಾಸಕ್ಕೆ ಅಡ್ಡಹಾಕಿದ್ದು.

ಬಹಿರಂಗವಾಗಿ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಅಡ್ಡಿ ಪಡಿಸದಿದ್ದರೂ, ಅತಂರಿಕವಾಗಿ ಪ್ರವಾಸಕ್ಕೆ ಹತ್ತಾರು ನಿಯಮಗಳನ್ನು ವರಿಷ್ಠರು ಹೇರಿದ್ದಾರೆ.
ವರಿಷ್ಠರ ಸೂಚನೆಯಂತೆ, ಯಡಿಯೂರಪ್ಪ ಅವರು ಪ್ರವಾಸ ಮಾಡಬೇಕು. ಅವರೊಂದಿಗೆ ಬಿಜೆಪಿಯ ಇತರ ನಾಯಕರನ್ನು ಕರೆದುಕೊಂಡು ಹೋಗುವ ಮೂಲಕ, ಇದೊಂದು ಪಕ್ಷದ ಕಾರ್ಯಕ್ರಮ ಎನ್ನುವಂತೆ ಮಾಡಬೇಕು ಎಂಬೆಲ್ಲ ನಿಯಮಗಳನ್ನು ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ತಮ್ಮ ಪ್ರವಾಸವನ್ನು ಪದೇಪದೆ ಮುಂದಕ್ಕೆ ಹಾಕುತ್ತಿದ್ದಾರೆ.

ಇನ್ನು ಬಿಜೆಪಿಯಲ್ಲಿ ಶುರುವಾಗಿರುವ ಈ ಆಂತರಿಕ ತಿಕ್ಕಾಟವನ್ನು ಬಳಸಿಕೊಳ್ಳಲು ಕಾಂಗ್ರೆಸ್ ತುದಿಗಾಲಿನಲ್ಲಿ ನಿಂತಿದೆ. ಬಿಜೆಪಿಯಲ್ಲಿರುವ ಯಡಿಯೂರಪ್ಪ ಅವರ
ರಾಜೀನಾಮೆಯಿಂದ ಚಿಕ್ಕ ಪ್ರಮಾಣದಲ್ಲಿ ಯಡಿಯೂರಪ್ಪ ಆಪ್ತ ಬಣ ಹಾಗೂ ವಿರೋಧದ ಬಣದಲ್ಲಿ ಬಿರುಕು ಕಾಣಿಸಿಕೊಂಡು, ಅದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ದೇಶದ ಬಹುತೇಕ ರಾಜ್ಯಗಳನ್ನು ಕಳೆದುಕೊಂಡರೂ, ಕರ್ನಾಟಕದಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿರುವ ಕಾಂಗ್ರೆಸ್, ಬಿಜೆಪಿಯಲ್ಲಿನ ಅತಂರಿಕ ಕಿತ್ತಾಟವನ್ನು ಬಳಸಿ ಕೊಳ್ಳಲು ಪ್ರಯತ್ನಿಸುತ್ತಿದೆ. ಅದರಲ್ಲಿಯೂ ಯಡಿಯೂರಪ್ಪ ಅವರು ‘ಮೌನ’ವಹಿಸಿದರೆ, ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಮತ
ಗಳು ಬಿಜೆಪಿಯ ಕೈಜಾರಲಿವೆ ಎನ್ನುವುದು ಕಾಂಗ್ರೆಸ್‌ಗೆ ತಿಳಿದಿದೆ. ಒಂದು ವೇಳೆ ಆ ರೀತಿ ಏನಾದರೂ ಆದರೆ, ಅದರ ಲಾಭ ವನ್ನು ಕಾಂಗ್ರೆಸ್ ಪಡೆಯಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್, ಯಡಿಯೂರಪ್ಪ ಅವರ ಸಹಾಯವನ್ನು ಪಡೆಯಲು ಹಿಂದೇಟು ಹಾಕುವುದಿಲ್ಲ.

ಆದರೆ ಈ ಎಲ್ಲ ಸವಾಲುಗಳನ್ನು ಮೀರಿ ಗೆಲ್ಲುವ ಅನಿವಾರ್ಯತೆಯಲ್ಲಿ ಬಿಜೆಪಿಯಿದೆ. ಏಕೆಂದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ನಾಯಕತ್ವವನ್ನು ಯಾರೊಬ್ಬರ ಕೈಗೂ ನೀಡದೇ ದೆಹಲಿಯಿಂದಲೇ ನಿಭಾಯಿಸುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಅದಕ್ಕೆ ಸಾಮೂಹಿಕ ನಾಯಕತ್ವ ಎನ್ನುವ ಹೆಸರನ್ನು ನೀಡಿದ್ದಾರೆ. ಈ ಸಾಮೂಹಿಕ ನಾಯಕತ್ವದ ನಾಯಕ ಮಾತ್ರ ದೆಹಲಿಯಲ್ಲಿರುವವರು ಎನ್ನುವುದನ್ನು ಹೇಳಿಲ್ಲ. ಆದ್ದರಿಂದ ಇದೀಗ ಯಡಿಯೂರಪ್ಪ
ಅವರನ್ನು ಸೈಡ್‌ಲೈನ್ ಮಾಡಿ, ಎದುರಿಸುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವನ್ನು ತೋರಿಸಬೇಕಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ
ಬೊಮ್ಮಾಯಿ ಅವರು, ಈಗಾಗಲೇ ಹಲವು ವಿಷಯಗಳಿಂದ ‘ಸಾಮಾನ್ಯರ ಮುಖ್ಯಮಂತ್ರಿ’ ಎಂದು ಕರೆಸಿಕೊಂಡಿದ್ದಾರೆ.

ಆದರೆ ಈ ಕಾಮನ್‌ಮ್ಯಾನ್ ಸಿಎಂ ಎನ್ನುವುದು ಮತವಾಗಿ ಬದಲಾಗುವುದೇ? ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಫಲಿತಾಂಶದ ದಿನ ತಿಳಿಯಲಿದೆ.