Friday, 13th December 2024

ಬೋರ್ಡಿಗಷ್ಟೇ ಬೋರ್ಡ್; ಖರ್ಚಿಗೆ ಕಾಸಿಲ್ಲ

daily wage workers vidhana soudha

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬಜೆಟ್ ಘೋಷಿತ ಅನುದಾನವೇ ಬಂದಿಲ್ಲ,

ಕ್ರಿಯಾ ಯೋಜನೆಗಳು ನಿಷ್ಕ್ರಿಯ

ನಿಲ್ಲದ ನೇಮಕ ಪ್ರಕ್ರಿಯೆ, ಅಧ್ಯಕ್ಷರಲ್ಲಿ ಉತ್ಸಾಹ, ನಿಗಮಗಳಲ್ಲಿ ನಿರುತ್ಸಾಹ

ರಾಜ್ಯ ಸರಕಾರ ಸಮುದಾಯಗಳ ಓಲೈಕೆಗೆ ನಿಗಮ, ಮಂಡಳಿ ಸ್ಥಾಪಿಸುತ್ತಿದೆಯಲ್ಲದೆ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲು ಅಧ್ಯಕ್ಷರ ನೇಮಕಗಳನ್ನೇನೋ ಮಾಡುತ್ತಿದೆ. ಆದರೆ ಸುಮಾರು 15ಕ್ಕೂ ಹೆಚ್ಚು ನಿಗಮ, ಮಂಡಳಿಗಳಿಗೆ ಕಚೇರಿ ಖರ್ಚಿಗೂ ಕಾಸಿ ಲ್ಲದ ಸ್ಥಿತಿ ಇದೆ.

ಸುಮಾರು 15ಕ್ಕೂ ಹೆಚ್ಚು ನಿಗಮ, ಮಂಡಳಿಗಳು ನಷ್ಟದಲ್ಲಿ ನರಳುತ್ತಿದ್ದು, ವೇತನ ಮತ್ತು ಕಚೇರಿ ವೆಚ್ಚದ ಸೌಲಭ್ಯಕ್ಕೂ ಪರ ದಾಡುವ ಸ್ಥಿತಿ ಇದೆ. ಏಕೆಂದರೆ, ಸರಕಾರ ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ನಿಗಮ, ಮಂಡಳಿಗೆ ಅನುದಾನಗಳಲ್ಲಿ ಶೇ.50ರಷ್ಟು ಕತ್ತರಿ ಹಾಕಿದೆ. ಅಷ್ಟೇ ಅಲ್ಲ.

ವರ್ಷವೇ ಕಳೆದರೂ ಆದಿಜಾಂಬವ ನಿಗಮ, ಸವಿತಾ ಸಮಾಜ ನಿಗಮ, ಮಡಿವಾಳ ಮಾಚಿದೇವ ಹಾಗೂ ಅಲ್ಪಸಂಖ್ಯಾತ ಅಭಿ ವೃದ್ಧಿ ನಿಗಮ ಸೇರಿದಂತೆ ಅನೇಕ ನಿಗಮ, ಮಂಡಳಿಗಳಿಗೆ ಬಜೆಟ್‌ನಲ್ಲಿ ಘೋಷಿಸಿದ್ದ ಚೂರುಪಾರು ಅನುದಾನವೂ ಸಿಕ್ಕಿಲ್ಲ. ಸುಮಾರು 40ಕ್ಕೂ ಹೆಚ್ಚಿನ ನಿಗಮ, ಮಂಡಳಿಗಳು ಕ್ರಿಯಾ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ಕಾಸಿಲ್ಲದೆ ಒಣುತ್ತಾ
ಕುಳಿತಿದ್ದು, ನಿಗಮಗಳ ಕ್ರಿಯಾ ಯೋಜನೆಗಳು ನಿಷ್ಕ್ರಿಯವಾಗಿವೆ. ಇದರಿಂದಾಗಿ ಫಲಾನುಭವಿಗಳಿಗೆ ಅಧಿಕಾರಿಗಳು ಉತ್ತರ ನೀಡದಂತಾಗಿದ್ದಾರೆ.

ಇಂಥ ಆರ್ಥಿಕ ದುಸ್ಥಿತಿಯ ಸರಕಾರ ನಿಗಮ, ಮಂಡಳಿಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನೇಮಕ ಮಾಡಿ ಉತ್ಸಾಹ ಹೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದು, ಈ ಮೂಲಕ ಗ್ರಾಮಪಂಚಾಯಿತಿ ಮತ್ತು ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾರ್ಯಕರ್ತರು ಉತ್ಸಾದಿಂದ ದುಡಿಯುವಂತೆ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಇದು ನೂತನ ಅಧ್ಯಕ್ಷರಿಗೆ ಭ್ರಮ ನಿರಶನ ತಂದರೂ ಅಚ್ಚರಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನುದಾನದಲ್ಲಿ ಸುಣ್ಣ-ಬೆಣ್ಣೆ: ರಾಜ್ಯದಲ್ಲಿ ಹಿಂದಿನ ಸರಕಾರದಂತೆ ಈಗಲೂ ಜಾತಿಗೊಂದು ನಿಗಮ, ಮಂಡಳಿ ಸ್ಥಾಪಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ನಂತರದಲ್ಲಿ ವೀರಶೈವ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದ್ದು, ಇದರೊಂದಿಗೆ ನಿಗಮ, ಮಂಡಳಿಗೆ ಸಂಖ್ಯೆ
ಸುಮಾರು 95ಕ್ಕೇರಿದೆ.

ಸರಕಾರ ಜಾತಿಗೊಂದು ನಿಗಮ, ಸ್ಥಾಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಇತ್ತೀಚಿಗೆ ಸ್ಥಾಪನೆಯಾದ ಮರಾಠ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಿ, ಎರಡು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿರುವ ಆದಿಜಾಂಬವ, ಆರ್ಯವೈಶ್ಯ, ಸವಿತಾ ಸಮಾಜ ಸೇರಿದಂತೆ ಕೆಲವು ನಿಗಮಗಳಿಗೆ ಅನುದಾನವನ್ನೇ ನೀಡದೆ ಆ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ರಾಜ್ಯ: ಇದರ ಮಧ್ಯೆ, ಮೈಸೂರು ಸಕ್ಕರೆ ಕಾರ್ಖಾನೆ, ಎನ್ ಜಿಇಎಫ್, ಕಲಬುರ್ಗಿ ವಿದ್ಯುತ್ ಕಂಪನಿ, ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಸಾರಿಗೆ ನಿಗಮ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸೇರಿದಂತೆ 20ಕ್ಕೂ ಹೆಚ್ಚು ನಿಗಮಗಳು ನಷ್ಟದಲ್ಲಿದ್ದು, ಇವುಗಳನ್ನು ಸರಕಾರ ಮುಚ್ಚುತ್ತಲೂ ಇಲ್ಲ. ಪುನಶ್ಚೇತನಕ್ಕೂ ಕ್ರಮಕೈಗೊಂಡಿಲ್ಲ. ಆದರೂ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಿ ತನ್ನ ಬೊಕ್ಕಸಕ್ಕೆ ನಷ್ಟ ಭರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಚಾರ ಐದು ವರ್ಷಗಳ ಹಿಂದೆಯೇ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಅನೇಕ ನಿಗಮ, ಮಂಡಳಿಗಳು ನಷ್ಟದ
ಲ್ಲಿದ್ದು, ಇವುಗಳಿಗೆ ಅಧ್ಯಕ್ಷರ ನೇಮಕ ಮಾಡಬಾರದು ಎಂದು ಈ ಹಿಂದೆ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕರ ಹಿತಾ ಸಕ್ತಿ ಅರ್ಜಿ ಸಲ್ಲಿಸಿದ್ದರು. ಆನಂತರದಲ್ಲಿ ಸರಕಾರ ಬದಲಾಗಿದ್ದರಿಂದ ವಿಷಯ ತಣ್ಣಗಾಯಿತು. ಆದರೆ ನಿಗಮ, ಮಂಡಳಿಗಳ ಸ್ಥಿತಿಗತಿ ಮಾತ್ರ ಬದಲಾಗಿಲ್ಲ.

ನಷ್ಟದಲ್ಲಿರುವ ನಿಗಮಗಳು
ಮೈಸೂರು ಕಾಗದ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆ, ಎನ್‌ಜಿಇಎಫ್, ಕಲಬುರ್ಗಿ ವಿದ್ಯುತ್ ಕಂಪನಿ, ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಸಾರಿಗೆ ನಿಗಮ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕೃಷ್ಣಾ ಜಲ ಭಾಗ್ಯ ನಿಗಮ, ಅಲ್ಬ ಸಂಖ್ಯಾತರ ಅಭಿವೃದ್ಧಿ ನಿಗಮ, ರಾಜೀವ್ ಗಾಂಧಿ ಗ್ರಾಮೀಣಿ ವಸತಿ ನಿಗಮ, ಲಿಡ್ಕರ್, ಜೈವಿಕ ಇಂಧನ ಮಂಡಳಿ, ಕರ ಕುರಶಲ ಅಭಿವೃದ್ಧಿ ಮಂಡಳಿ, ಖಾದಿ ಅಭಿವೃದ್ಧಿ ನಿಗಮ.

ಈ ಬಾರಿ ಸರಕಾರದಲ್ಲಿ ಹಣಕಾಸಿನ ಕೊರತೆಯಿಂದಾಗಿ ಬಹುತೇಕ ನಿಗಮ, ಮಂಡಳಿಗಳಿಗೆ ಶೇ.30ರಿಂದ 50ರಷ್ಟು ಅನುದಾನ ಕೊರತೆ ಆಗಿದೆ. ಇಂಥ ಸಂದರ್ಭದಲ್ಲಿ ನಿಗಮ, ಮಂಡಳಿಗಳು ಕೂಡ ಕಾರ್ಯ ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ.
– ಆಯನೂರು ಮಂಜುನಾಥ್ ವಿಧಾನಪರಿಷತ್ ಸದಸ್ಯ

ಸಂವಿಧಾನದಲ್ಲಿ ಜಾತ್ಯತೀತ ಎನ್ನುವ ಶಬ್ದ ಇರುವ ಕಾರಣ ಜಾತಿಗೊಂದು ನಿಗಮ, ಮಂಡಳಿ ಸ್ಥಾಪಿಸುವುದು ಸಂವಿಧಾನ
ಬಾಹಿರ. ಒಂದು ವೇಳೆ ಸರಕಾರ ನಿಗಮ, ಮಂಡಳಿ ರಚಿಸಿದ ಮೇಲೆ ಎಲ್ಲಾ ಜನಾಂಗದವರ ಅಭಿವೃದ್ಧಿಕಾಯಬೇಕು. ಸರಿಯಾಗಿ ಅನುದಾನ ನೀಡಬೇಕು.
– ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ನ ಮಾಜಿ ಸಚಿವ