Friday, 13th December 2024

ಜಾಸ್ತಿ ನೀರೇ ತುಂಬಿರುವ ದೇಹದಲ್ಲಿ ಮನಸ್ಸೆಲ್ಲಿ ?

ಸಂಡೆ ಸಮಯ

ಸೌರಭ ರಾವ್, ಕವಯತ್ರಿ, ಬರಹಗಾರ್ತಿ

ಕಡಲು ಬಾನುದ್ದಕ್ಕೂ, ಬಾನು ಕಡಲುದ್ದಕ್ಕೂ ಸ್ವಲ್ಪ ಮುನ್ನ ಬಿಸಿಲು ಬಿದ್ದುಕೊಂಡಿತ್ತು ತೆಪ್ಪಗೆ ತೀರದಲ್ಲಿ ಕಡಲ ಮೇಲೆ ಬಿದ್ದು ಛಿದ್ರಗೊಂಡಿತ್ತು. ಸೂರ್ಯ ಆಚೆ ದಡದ ಊರುಗಳನೆಬ್ಬಿಸಲು ಇಲ್ಲಿಂದ ಜಾರುತ್ತಾ ಜಾರುತ್ತಾ ಮರೆಯಾಗುವ ಮುನ್ನ ಶಾಂತ ಜ್ವಾಲೆ ಯಾವ ತೀರವನಿನ್ನೂ ತಲುಪದೇ ದೂರ ದೂರ ದೂರ ತೇಲುತ್ತಲೇ ಇರುವೊಂದು ನೌಕೆ ಇದ್ದುದರಲ್ಲಿ ಮೌನ ವಾಗಿಯೇ ಇರುವ ಜಗತ್ತು ತಾನು ಹೇಳಬೇಕಾದದ್ದನ್ನೆಲ್ಲ ಸಮುದ್ರದ ಮಂದ್ರ ತಾರ ಮೊರೆತಗಳ ಹೆಗಲೇರಿಸಿ ತಾನು ಖಾಲಿಯಾಗಿ ಬಿಟ್ಟಂತೆ ಈಗ ಬೆಳಕಿನ ಬೆನ್ನ ಹಿಂದೆ ಹಿಂದೆಯೇ ಅವಿತು ನಡೆದು ಇದೋ ಕತ್ತಲು ಮುಂದೆ ಬಂದುಬಿಟ್ಟಿದೆ ಬೆಳಕು ಬಣ್ಣಗಳೆಲ್ಲ ಅದರಲ್ಲಿ ಕರಗಿ ಬೆರೆಯುತ್ತಿವೆ.

ಈಗ ಅನಾಮಿಕ ಸೆಳೆತಗಳೆಲ್ಲವೂ ಎಂಥದೋ ಅನಿಚ್ಛೆಗಳಾಗಿ ಸುಪ್ತ ದ್ವಂದ್ವಗಳೆಲ್ಲವೂ ಶಾಂತ ನಿರ್ದ್ವಂದ್ವದೆಡೆಗೆ ಹೆಜ್ಜೆ ಕಿತ್ತಿಡು ವಷ್ಟು ಎಚ್ಚರ ಸದ್ಯತೆ, ದೂರದ ಸಾಧ್ಯತೆಗಳ ನಡುವೆಯೂ ಎಂದಿನಂತೆ ತಲ್ಲಣಿಸದೇ ಸುಮ್ಮನಿದ್ದೇನೆ ಯಾವ ನಿರೀಕ್ಷೆಯೂ ಇರದೆ, ಭೂ ವ್ಯೂಮಗಳಮಗಳನಾವರಿಸಿದ ಈ ಕತ್ತಲನು ಉಸಿರಲೇ ಬಗೆದು ಕೂತಿದ್ದೇನೆ. ಅರಬ್ಬೀ ಸಮುದ್ರದ ತೀರದಲ್ಲಿ ಕೂತು ನೀರಿನ ಬಗ್ಗೆ ಒಂದಷ್ಟು ಸಾಲುಗಳನ್ನು ಗೀಚಿಕೊಂಡು ಬಂದು, ಶಹರದ ಮನೆಯ ಕಿಟಕಿಯೊಂದರ ಪಕ್ಕ ಕೂತು ಮಳೆಯನ್ನೂ ನೋಡುತ್ತಾ ಗೀಚಿದ ಒಂದಷ್ಟು ಸಾಲುಗಳು ಇಲ್ಲಿ ಒಟ್ಟಿಗೆ.

ನಮ್ಮ ಅಸ್ತಿತ್ವಕ್ಕೆ ಕಾರಣವಾದ ನೀರು, ಎಲ್ಲಾ ನೀರಿನ ಬಗ್ಗೆಯೇ. ಗವಾಕ್ಷದ ಮೇಲೆ ರಭಸವಾಗೆರಗಿ ಮುಗ್ಗರಿಸುತ್ತಿವೆ, ಮಳೆಹನಿ ಗಳು. ಅನಾಮತ್ತಾಗಿ ಗತಿ ಕ್ಷೀಣಿಸಿ ನಿರ್ವಿಕಾರ, ನಿರ್ಲಿಪ್ತವಾಗಿ ಜಾರಿಹೋಗುತ್ತವೆ, ಬೆಂದು ಬಾಯಾರಿ ಕಾದಿದ್ದ ಭೂಮಿಯ ಮಡಿಲಿಗೆ, ಮುಕ್ಕಾಲು ಪಾಲು ನೀರಿನಿಂದಲೇ ಆವೃತವಾದ ಇದೇ ಇಳೆಯ ಎದೆಯೊಳಗೆ. ಅವಳು ಹಿತವಾಗಿ ಕೆರಳಿ ಭೂಗಂಧ
ಪಸರಿಸುವಾಗ ಖಾಲಿ ಕೂತಿದ್ದ ಮನಸ್ಸು ನವಿರಾಗಿ ನರಳುತ್ತದೆ, ಹೊಸ ಚಿಗುರಿನಂತೆ ಅರಳುತ್ತದೆ.

ಅರ್ಧಕ್ಕೂ ಜಾಸ್ತಿ ನೀರೇ ತುಂಬಿರುವ ಈ ದೇಹದಲ್ಲೀಗ ಆ ಮನಸ್ಸೆಲ್ಲಿ? ಗುಡುಗುವಾಗೇಕೋ ಸಮುದ್ರದ ಸೆಳೆತ. ಅದರ ಸೆಳೆತ ತನ್ನ ಆಳದಲ್ಲೇ ಕಳೆದುಹೋದಂತೆ, ಅದನ್ನು ಹುಡುಕುತ್ತಲೇ ಮರಳಿ ಮರಳಿ ಮೊರೆವ ಕಡಲ ಕಿನಾರೆಯಲ್ಲೀಗ ಮನಸ್ಸು ಅಲೆಗಳ ಹಿಂದೆ ಹಿಂದೆ ಹಿಂದೆ ಗಿರಿ ಶಿಖರ ಪರ್ವತಗಳ ಶಿಲೆ – ಬಂಡೆಗಳ ಮೈಕೈಗಳಿಂದ ಒಸರುವ ಝರಿಗಳ ಝುಳುಝುಳು, ಸಿಹಿಸಿಹಿ ನೀರಿನ ನೆನಪಿನ ಕಚಗುಳಿ. ದಿಕ್ಕುಗೆಟ್ಟು, ಜೀವನದ ಜಂಜಡಗಳ ತೊರೆದವರಂತೆ ಅಲೆಯುವ ಅನಾಮಿಕ ಅಲೆಮಾರಿಗಳ ದಾಹ
ತಣಿಸುವ ಹೊಳೆ, ತೊರೆಗಳು.

ಒಮ್ಮೆ ಕಾರ್ಗತ್ತಲ ಸೀಳುವ ಕಂದೀಲು ಹಿಡಿದು ಕಡುರಾತ್ರಿಯಲ್ಲಿ ಅನಾಮಧೇಯ ಗುಡ್ಡಗಳನೇರಿ, ಕೊಳವೊಂದರ ಬಳಿ ಕೂತು ತಾರೆಗಳನೆಣಿಸುವಾಗ, ಚಂದ್ರನಿಲ್ಲದ ಬಾನಿನಲ್ಲಿ ಮಿನುಗುತ್ತಿದ್ದ ಶುಕ್ರನ ಪ್ರತಿಬಿಂಬ ನಲುಗುತ್ತಿದ್ದ ನೆನಪು, ಕೊಳ ಅದನ್ನು ಮನನ ಮಾಡುತ್ತಿದ್ದ ಹಾಗೆ ಭಾಸವಾದ ಅನುಭೂತಿ ಸ್ಮತಿಕೋಶವೊಂದರಲ್ಲಿ ಭದ್ರವಾಗಿ ಬೆಚ್ಚಗೆ ಅಡಗಿಕೂತಿದೆ.  ಜೀವಕೋಶ ದಲ್ಲೂ ನೀರು.

ಕಟ್ಟಡ ನಿರ್ಮಾಣದ ಕೆಲಸದಲ್ಲಿ ನಿರತನಾಗಿದ್ದ ಕೂಲಿಯೊಬ್ಬನ ಬೆವರು ಬಿಸಿಲಲ್ಲಿ ಹೊಳೆಯುತ್ತದೆ, ಅವ ಬಾಯಾರಿ  ಜಾಡಿ ಯಿಂದ ನೀರು ಕುಡಿಯುವಾಗ ಹನಿಯೊಂದು ದಾರಿ ತಪ್ಪಿ ಅವನ ಗಂಟಲಿನಿಂದಿಳಿಯುತ್ತದೆ. ಅದೂ ಕವಿತೆಯಂತೆ ಕಂಡ ಕವಿಯ ಮನಸ್ಸಿನ ರೂಪಕಗಳ ಅನವರತ ದಾಹದ ಬಗ್ಗೆ ವಿಚಿತ್ರ ವ್ಯಥೆಯಾಗುತ್ತದೆ ಅಕ್ಕಿ ಅಂಬಲಿ ಅಥವಾ ಅನ್ನವಾಗಿ ಹಸಿವ ನೀಗಿಸಲು ಬೇಕಿರುವ ನೀರು.

ನೀರು. ಉದಕ. ವಾರಿ. ಜಲ. ಜೀವಜಲ. ತೀರದೆಡೆಗೆ ನುಗ್ಗಿ ನುಗ್ಗಿ ಬರುವಾಗ, ಬಂಡೆಗಳನಪ್ಪಳಿಸುವಾಗ ವಾರಿಧಿಯಲೆಗಳ ನೋವೇ ನಮ್ಮೊಳಗನ್ನೂ ಕಲಕಿ ರಾಡಿಯೆಬ್ಬಿಸುತ್ತದೆಯೇ? ಮಳೆಯಲ್ಲಿ ಪ್ರೇಮಿಗಳು ಮುತ್ತಿನ ಮತ್ತಲ್ಲಿ ಕರಗುವಾಗ ಇನ್ನೆಲ್ಲೋ ಗುಡಿಸ ಲೊಳಗೆ ಮಲಗಿದ ಕಂದಮ್ಮನ ಮೇಲೆ ನೀರು ಸೋರದ ಹಾಗೆ ತಾಯಿಯೊಬ್ಬಳು ಹೆಣಗುತ್ತಾಳೆ. ಕತ್ತಲು ಬೆಳಕನ್ನು ತೊಳೆದುಹಾಕಿ, ಬೆಳಕನ್ನು ಮತ್ತೊಂದು ನಾಳೆ ಪುನಃ ತಂದಾಗ ಅದೇ ಕಂದಮ್ಮನ ಜೊಲ್ಲುಗೆನ್ನೆಯಲ್ಲಿ ನೀರು. ಆದ ನೋಡುತ್ತಾ ಕೂತು ಎಲ್ಲ ವೇದನೆ ಮರೆತು ನಕ್ಕ ಅಮ್ಮನ ಬಿಸಿ ಕಂಬನಿ ನೀರು.

ಅನಾಥ ಮಗುವೊಂದರ ಆಕ್ರಂದನದ ತೇವ ಕಣ್ಣೀರು. ಕಣ್ಣ‘ನೀರು’. ಮಕ್ಕಳು ತೊರೆದುಹೋದ ವೃದ್ಧನೊಬ್ಬನ ಹೆಪ್ಪುಗಟ್ಟಿದ ನೋವು ಆಗಾಗ ಕರಗಿ ಕೆನ್ನೆಯ ಮೇಲೆ ಜಾರುವ ನೀರು, ನಿರ್ವಾತವನ್ನೂ ಅಣಕಿಸುವಂತೆ ಆವಿಯಾಗುತ್ತದೆ, ಕ್ಷಣಗಳಲ್ಲಿ, ಆ
ನಿರ್ಭಾವುಕ ಬಿಂದು. ಯುದ್ಧದಲ್ಲಿ ಮಡಿದ ಸೈನಿಕನಿಗೆ ಅಶ್ರುತರ್ಪಣ, ನೀರು. ಆನಂದಬಾಷ್ಪ, ನೀರು. ಗರಿಗರಿ ಜರಿ ಲಂಗ ತೊಟ್ಟು ಮೈಲಿಗಟ್ಟಲೆ ದೂರದಿಂದ ನೀರ ಹೊತ್ತು ತರುವ ಲಲನೆಯ ಬಿಂದಿಗೆಯೊಳಗೆ ತುಳುಕುವ ಹಮ್ಮು, ನೀರಿಗೆ. ಇಬ್ಬನಿ, ನೀರು.

ಅದು ಕರಗಿ ಪರ್ಣದಂಚಿನಲ್ಲಿ ಕೂತು ನಸುಕಿನಲ್ಲಿ ಹೊಳೆವ ಹನಿ, ನೀರು. ಅಮೃತಪಾನ ಮಾಡಿದಂತೆ ಅದನ್ನು ಮೆಲ್ಲಗೆ ನಾಲಿಗೆಗೆ ತಾಗಿಸಿ ನುಂಗುತ್ತಾ ಕಾಡಿನಲ್ಲಿ ಗೆಳೆಯನೊಡನೆ ನಡೆಯುತ್ತಾ ಹೋದಾಗ, ಅವ ಮೆಲ್ಲಗೆ ಕೈಹಿಡಿದು ಮಂದಹಾಸ ಬೀರಿದಾಗ ಹುಟ್ಟಿದ ರಾಗ, ಜಲತರಂಗದಿಂದ ಹುಟ್ಟಿದ ನಾದದಂತೆ, ಪದಗಳ ಹಂಗಿಲ್ಲದ ಅಮೂರ್ತ ಸೌಂದರ್ಯ. ಕಥೆ ಯೊಂದರ ಆರಂಭ ನೀರಿನಿಂದ. ಜೀವರಾಶಿಯೆಲ್ಲದರ ಆರಂಭವೂ ನೀರಿನಿಂದ.

ಹಳ್ಳಬಿದ್ದ ರಸ್ತೆಯ ಹಳಿಯುತ್ತಾ ಗಾಡಿಬಿಡುವ ಪಟ್ಟಣದ ಮಂದಿಯ ಮಧ್ಯ ಶಾಲೆಯಿಂದ ಮರಳುತ್ತಿರುವ ಮಗುವೊಂದು ಕಾಗದದ ದೋಣಿ ಮಾಡಿ ಹಳ್ಳವೊಂದರಲ್ಲಿ ತೇಲಿಬಿಡುತ್ತದೆ. ಕಡೆಗೆ ಕೊಚ್ಚೆಯೆಂದು ನಾವು ತಿರಸ್ಕರಿಸಿದ ನೀರ ಮೇಲೂ ಕನಸ ಹೊತ್ತ ದೋಣಿ ಸಾಗುತ್ತದೆ, ತೊಯ್ದು ಹೋಗುವವರೆಗೂ. ಸಂಚಾರಕ್ಕೆಂದು ಹೊರಟ ಪೇಟೆ ಮಂದಿ ಹೀಗೇ ಯಾವುದೋ ಕೆರೆ, ಕಾಲುವೆ ಪಕ್ಕ ಸೆಲ್ಫಿ ತೆಗೆದುಕೊಂಡು (ಪ್ರಪಂಚಕ್ಕೆ ಪ್ರಪಂಚದ ಮೇಲಿನ ತಮ್ಮ ಉತ್ಕಟ ಪ್ರೀತಿಯನ್ನು ಸಾರಿ ಹೇಳಲು) ಅಲ್ಲೇ ತ್ಯಜಿಸಿ ಬರುವ ತ್ಯಾಜ್ಯವನ್ನೂ ನುಂಗಿ ತಾನು ಕಲುಷಿತಗೊಂಡರೂ, ಇಡೀ ಮಾನವಕುಲವನ್ನು ಇನ್ನೂ ಪೋಷಿಸುತ್ತಲೇ,
ಬದುಕುಳಿಸಿರುವ ನೀರು.

ಕರ್ಪೂರದ ಘಮ ಕರಗಿದ ದೇವರಗುಡಿಯ ತೀರ್ಥ, ನೀರು, ಅಭಿಷೇಕ, ನೀರು. ಗೋಮಾತೆಯ ಗಂಜಲ, ನೀರು. ಗಂಗೆ-ತುಂಗೆ ಯಮುನೆ ಗೋದಾವರಿ ಶರಾವತಿ ಕಾವೇರಿ ಕೃಷ್ಣೆ ನೀರು ನೀರು ನೀರು ತಾವರೆ ಸರಸ್ಸು ಅಲ್ಲೆಲ್ಲೋ ಮುಗುಳುನಗುತ್ತದೆ. ಮುಳುಗಿ ಎದ್ದ ಹಕ್ಕಿಯ ಕೊಕ್ಕಿನಲ್ಲಿ ಅರೆಕ್ಷಣ ಒದ್ದಾಡಿ ಮಡಿದ ಮೀನಿನ ಪಾಲಿನ ನೀರು. ಕಪ್ಪೆಚಿಪ್ಪಿನೊಳಗೆ ಮುತ್ತಾದ ಜಲಧಿಯ ಕಣ್ಣ ಬಿಂದು, ನೀರು. ಸ್ತಬ್ಧವರ್ಣಬಿಂಬಗಳಿಗೆ ಆಗರವಾದ ಬಾವಿನೀರು, ರಾಟೆ – ಹಗ್ಗ, ಬಿಂದಿಗೆಯ ಚುಂಬನಕ್ಕೆ ತುಂಬುನಾದ ಹುಟ್ಟಿ ಸುವ ಬಾವಿನೀರು.

ಸ್ವರಸ್ಥಾಯಿ ನಿಮ್ಮ ಕಲ್ಪನೆಗೆ, ನಿಮ್ಮ ಆಲೋಚನೆಯ ಶೃತಿಸೇರುವಂತೆ. ಪಂಚಭೂತಗಳಲ್ಲೊಂದು, ನೀರು. ಸದ್ಯಕ್ಕೆ ಮಳೆ ನಿಂತಿದೆ. ಮನೆಯ ಪಕ್ಕದ ಪುಟ್ಟ ತೋಟವೀಗ ಒದ್ದೆ ಮುದ್ದು ಹಸಿರಿನ ಮುದ್ದೆ. ಕಿಟಕಿಯ ಮೇಲೆ, ಜಾರದೇ ಉಳಿದ ಕೆಲವು ಬಿಂದುಗಳಿವೆ. ಈ ಹಠಮಾರಿ ಹನಿಗಳೂ ನೀರು, ಬೀದಿದೀಪದ ಚಂದದ ಹಳದಿಯಲ್ಲೂ ತುಳುಕುತ್ತಾ- ಗಾಢ ಜೀವನ ಪ್ರೇಮದ ಜ್ವರಬಡಿದಂತೆ.