Monday, 16th September 2024

ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಅದರ ಅರ್ಥವೇನು? ಕರುಳಿನ ಕ್ಯಾನ್ಸರ್ ಆಗಿರುವ ಸಾಧ್ಯತೆ ಇದೆಯೇ?

– ಡಾ. ಮಿಲಿಂದ್ ಶೆಟ್ಟಿ, ಕನ್ಸಲ್ಟೆಂಟ್ ರೇಡಿಯೇಶನ್ ಆಂಕಾಲಜಿಸ್ಟ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಹುಬ್ಬಳ್ಳಿ

ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಟೆಸ್ಟ್ ಮಾಡಿಸಿಕೊಳ್ಳುವುದು ರೋಗ ತಡೆಗಟ್ಟುವ ಕ್ರಮದ ಪ್ರಮಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಒಂದೊಮ್ಮೆ ಮಲದಲ್ಲಿ ರಕ್ತ ಕಂಡು ಬರುವ ವಿಚಾರವನ್ನು ಚರ್ಚಿಸೋಣ. ಒಂದು ವೇಳೆ ಇದ್ದಕ್ಕಿದ್ದಂತೆ ಮಲದಲ್ಲಿ ರಕ್ತ ಕಾಣಿಸಿದರೆ ಯಾರಿಗೇ ಆದರೂ ಆತಂಕ ಆಗಿಯೇ ಆಗುತ್ತದೆ. ಅದನ್ನು ನಿರ್ಲಕ್ಷ್ಯ ಮಾಡಬಾರದು. ಅದೊಂದು ಸಮಸ್ಯೆಯ ಲಕ್ಷಣ ಆಗಿರಬಹುದು. ಹಾಗಂತ ಅದು ಕ್ಯಾನ್ಸರ್ ಅಂತ ಭಾವಿಸುವ ಅಗತ್ಯವಿಲ್ಲ. ಮಲದಲ್ಲಿ ರಕ್ತ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು. ಕೆಲವು ಸರಳವಾಗಿರಬಹುದು, ಇನ್ನು ಕೆಲವು ಸಂಕೀರ್ಣವಾಗಿರಬಹುದು. ಕರುಳಿನ ಕ್ಯಾನ್ಸರ್ ಲಕ್ಷಣವೂ ಇರಬಹುದು. ಯಶಸ್ಸಿ ಚಿಕಿತ್ಸೆ ನೀಡುವುದಕ್ಕೆ ಕರುಳಿನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಹಾಗಾಗಿ ಕರುಳಿನ ಕ್ಯಾನ್ಸರ್ ಅನ್ನು ಲಕ್ಷಣ ಕಂಡ ತಕ್ಷಣ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಬೇಕು.

ಆರಂಭಿಕ ಹಂತದಲ್ಲಿ ಕರುಳಿನ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಬಹಳ ಇರುತ್ತದೆ. ಅಪಾಯದ ಅಂಶಗಳು ಮತ್ತು ಸ್ಕ್ರೀನಿಂಗ್ ಟೆಸ್ಟ್ ಗಳ ಕುರಿತು ಅರಿತುಕೊಳ್ಳುವ ಮೂಲಕ ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬಹುದಾಗಿದೆ ಮತ್ತು ಆರಂಭದಲ್ಲಿಯೇ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದಾಗಿದೆ.

ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಅದರ ಅರ್ಥವೇನು?

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಹಾನಿಕರ ಅಲ್ಲದೆಯೂ ಇರಬಹುದು ಮತ್ತು ಹಾನಿಕಾರಕ ಸಮಸ್ಯೆಗಳಿಂದಲೂ ಇರಬಹುದು. ಸಾಮಾನ್ಯವಾಗಿ ಹೆಮರಾಯಿಡ್ಸ್ ಸಮಸ್ಯೆಯಿಂದ ಆ ಥರ ಆಗಬಹುದು. ಆ ಸಮಸ್ಯೆ ಇದ್ದರೆ ನೋವು ರಹಿತವಾಗಿ ರಕ್ತಸ್ರಾವ ಆಗುತ್ತದೆ. ಅಲ್ಲದೇ ಕರುಳಿನ ಚಲನೆ ಸಮಯದಲ್ಲಿ ಗುದ ಭಾಗದಲ್ಲಿ ಬಿರುಕು ಉಂಟಾಗಬಹುದು. ಕೆಲವು ಬಾರಿ ಡೈವರ್ಟಿಕ್ಯುಲೋಸಿಸ್ (ಕರುಳಿನ ಒಳಪದರದಲ್ಲಿರುವ ಚೀಲಗಳು) ನಲ್ಲಿಯೂ ರಕ್ತಸ್ರಾವ ಉಂಟಾಗಬಹುದು. ಪೆಪ್ಟಿಕ್ ಅಲ್ಸರ್ ಗಳಂತಹ ಜಠರಗರುಳಿನ (ಗ್ಯಾಸ್ಟ್ರೋಇಂಟೆಸ್ಟೈನಲ್) ಸಮಸ್ಯೆ ಇದ್ದರೆ ರಕ್ತಸ್ರಾವದಿಂದ ಮಲದಲ್ಲಿ ಗಾಢ ಕೆಂಪು ಬಣ್ಣ ಕಾಣಿಸಿಕೊಳ್ಳಬಹುದು. ಇನ್ ಫ್ಲಮೇಟರಿ ಬೊವೆಲ್ ಡಿಸೀಸ್ ಅಂದ್ರೆ ಕರುಳಿನ ಉರಿಯೂತದ ಕಾಯಿಲೆ (ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ಡಿಸೀಸ್) ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಜೊತೆಗೆ ಅತಿಸಾರ ಬೇಧಿ ಮತ್ತು ನೋವು ಉಂಟು ಮಾಡಬಹುದು. ಅಂತಿಮವಾಗಿ ಮತ್ತು ಬಹಳ ಮುಖ್ಯವಾಗಿ ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಅದು ಕರುಳಿನ ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಈ ಸಮಸ್ಯೆ ಇದ್ದಾಗ ಮಲದಲ್ಲಿ ಗಾಢ ಕೆಂಪು ಬಣ್ಣದ ರಕ್ತ ಕಾಣಿಸುತ್ತದೆ.

ಕೊಲೊನ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ಟೆಸ್ಟ್ ಮಾಡಿಸುವುದು ಎಷ್ಟು ಮುಖ್ಯ?

ಕರುಳಿನ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಲಾಗುತ್ತದೆ. ಈ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ನಿಯಮಿತವಾಗಿ ಟೆಸ್ಟ್ ಅಥವಾ ಸ್ಕ್ರೀನಿಂಗ್ ಮಾಡಿಸುವ ಮೂಲಕ ಕ್ಯಾನ್ಸರ್ ಆಗುವ ಮೊದಲಿನ ಪ್ರೀಕ್ಯಾನ್ಸರಸ್ ಪೊಲಿಪ್ಸ್ (ಕರುಳಿನ ಒಳ ಪದರದಲ್ಲಿ ಕಾಣಿಸುವ ಅಸಹಜ ಬೆಳವಣಿಗೆಗಳು) ಗಳನ್ನು ಪತ್ತೆ ಹಚ್ಚಬಹುದು. ದುರದೃಷ್ಟವಶಾತ್ ಕರುಳಿನ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಹಾಗಾಗಿಯೇ ಟೆಸ್ಟ್ ಮಾಡಿಸುವುದು ಬಹಳ ಮುಖ್ಯ. ಟೆಸ್ಟ್ ಮಾಡಿಸುವುದರಿಂದ ಲಕ್ಷಣಗಳು ಗೋಚರಿಸುವ ಮೊದಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು.

ಕರುಳಿನ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಯಾರು ಮಾಡಿಸಬೇಕು?

ಸಾಮಾನ್ಯವಾಗಿ 45ನೇ ವಯಸ್ಸು ಇರುವವರು ಕರುಳಿನ ಕ್ಯಾನ್ಸರ್ ಪರೀಕ್ಷೆ ಮಾಡಬಹುದು. ಯಾಕೆಂದರೆ ಆ ಸಮಯದಲ್ಲಿ ಈ ಕ್ಯಾನ್ಸರ್ ಬಾಧಿಸುವ ಸಾಧ್ಯತೆ ಹೆಚ್ಚು. ಅದಕ್ಕೆ ಕೆಲವು ಅಂಶಗಳ ಮೇಲೆ ಗಮನ ಇಟ್ಟುಕೊಳ್ಳುವುದು ಒಳ್ಳೆಯದು. ನಿಕಟ ಸಂಬಂಧಿಗಳಲ್ಲಿ ಈಗಾಗಲೇ ಕರುಳಿನ ಕ್ಯಾನ್ಸರ್ ಇತಿಹಾಸ ಇದ್ದರೆ ಆ ಕುರಿತು ಹೆಚ್ಚು ಗಮನ ಹರಿಸಬೇಕು. ಅದಲ್ಲದೇ ವೈಯಕ್ತಿಕವಾಗಿ  ಅಲ್ಸರೇಟಿವ್ ಕೊಲೈಟಿಸ್ ಅಥವಾ ಕ್ರೋನ್ಸ್ ಡಿಸೀಸ್ ನಂತಹ ಕರುಳಿನ ಉರಿಯೂತದ ಕಾಯಿಲೆಯ ಹಿನ್ನೆಲೆ ಇದ್ದವರು, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಫೈಬರ್ ಕಡಿಮೆ ಇರುವಂತಹ ಜೀವನಶೈಲಿ ಸಮಸ್ಯೆಗಳಿಂದ ಬಳಲುತ್ತಿರುವವರು ಕರುಳಿನ ಕ್ಯಾನ್ಸರ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಕರುಳಿನ ಕ್ಯಾನ್ಸರ್ ನ ಸ್ಕ್ರೀನಿಂಗ್ ಟೆಸ್ಟ್ ಗಳ ವಿಧಗಳು

ಹಲವು ವಿಧದ ಕರುಳಿನ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳು ಲಭ್ಯವಿದೆ. ಪ್ರತಿಯೊಂದು ಕೂಡ ಅದರದ್ದೇ ಆದ ಸಾಧಕ ಬಾಧಕಗಳನ್ನು ಹೊಂದಿವೆ. ನಿಮ್ಮ ವಯಸ್ಸು, ಅಪಾಯದ ಅಂಶಗಳು ಮತ್ತು ಆದ್ಯತೆಗಳನ್ನು ಪರಿಗಣಿಸಿಕೊಂಡು ವೈದ್ಯರ ಮೂಲಕ ಚರ್ಚೆ ಮಾಡಿ ನೀವು ನಿಮಗೆ ಸೂಕ್ತವಾದ ಸ್ಕ್ರೀನಿಂಗ್ ವಿಧವನ್ನು ಆರಿಸಿಕೊಳ್ಳಬಹುದು.

• ಕೊಲೊನೋಸ್ಕೋಪಿಯು ಅತ್ಯಂತ ಸಮಗ್ರವಾದ ಪರೀಕ್ಷೆ ವಿಧಾನವಾಗಿದೆ. ಈ ವಿಧದಲ್ಲಿ ಗುದನಾಳದೊಳಗೆ ಕ್ಯಾಮೆರಾ ಇರುವ ಒಂದು ಉದ್ದವಾದ, ಹೊಂದಿಕೊಳ್ಳುವ ಟ್ಯೂಬ್ ಅನ್ನು ಕಳುಹಿಸಿ ಕರುಳಿನ ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಯ ಸಮಯದಲ್ಲಿ ಬಯಾಪ್ಸಿಗಾಗಿ ಅನುಮಾನಾಸ್ಪದ ಪಾಲಿಪ್ಸ್ ಅನ್ನು ತೆಗೆಯಲಾಗುತ್ತದೆ. ಈ ವಿಧಾನವೂ ಹೆಚ್ಚು ಪರಿಣಾಮಕಾರಿಯಾಗಿದ್ದರೂ ಕೊಲೊನೋಸ್ಕೋಪಿ ಮಾಡುವ ಮೊದಲು ಕರುಳನ್ನು ಸಿದ್ಧಗೊಳಿಸಬೇಕಾಗುತ್ತದೆ ಮತ್ತು ಪರೀಕ್ಷಿಸಿಕೊಳ್ಳುವವರಿಗೆ ಸೆಡೇಷನ್ ಅಂದ್ರೆ ನೋವು ಗೊತ್ತಾಗದಂತೆ ಮಾಡಲಾಗುತ್ತದೆ. ಅದರಿಂದ ಅನಾನುಕೂಲವಾಗಬಹುದಾಗಿದೆ.

  • ಕಡಿಮೆ ತೀವ್ರತೆಯ ವಿಧಾನವನ್ನು ಆರಿಸಿಕೊಳ್ಳುವುದುದಾದರೆ ಫೀಕಲ್ ಇಮ್ಯುನೊಕೆಮಿಕಲ್ ಟೆಸ್ಟ್ (ಎಫ್‌ಐಟಿ) ಆಯ್ದುಕೊಳ್ಳಬಹುದು. ಈ ವಿಧದಲ್ಲಿ ರಕ್ತದ ಅಂಶಗಳಿರುವ ಮಲದ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. ಅದರಿಂದ ಕರುಳಿನ ಕ್ಯಾನ್ಸರ್ ಅಥವಾ ಇತರ ಸ್ಥಿತಿಗಳ ಲಕ್ಷಣಗಳನ್ನು ಅರಿಯಬಹುದಾಗಿದೆ. ಎಫ್ಐಟಿ ಸರಳ ವಿಧಾನವಾಗಿದ್ದು. ಯಾವುದೇ ತಯಾರಿಯ ಅಗತ್ಯ ಇರುವುದಿಲ್ಲ. ಆದರೆ ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ದೃಢೀಕರಣ ಮಾಡಲು ಕೊಲೊಲೋಸ್ಕೋಪಿ ಮಾಡಬೇಕಾಗುತ್ತದೆ.
  • ಮಲ ಪರೀಕ್ಷೆಯ ಮತ್ತೊಂದು ವಿಧಾನವೆಂದರೆ ಅದು ಕೊಲೋಗಾರ್ಡ್ ಡಿಎನ್ಎ. ಈ ವಿಧಾನದಲ್ಲಿ ಕರುಳಿನ ಕ್ಯಾನ್ಸರ್ ಅನ್ನು ಸೂಚಿಸಬಹುದಾದ ಮಲದಲ್ಲಿನ ರಕ್ತ ಮತ್ತು ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಈ ವಿಧಾನವು ಎಫ್ಐಟಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದು, ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿದ್ದರೆ ದೃಢೀಕರಣಕ್ಕೆ ಮತ್ತೆ ಕೊಲೊಲೋಸ್ಕೋಪಿ ಮಾಡಬೇಕಾಗುತ್ತದೆ.

ತಡ ಮಾಡಬೇಡಿ, ಈಗಲೇ ಪರೀಕ್ಷಿಸಿಕೊಳ್ಳಿ

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಅಪಾಯ ಉಂಟು ಮಾಡಬಹುದಾದ ತೊಂದರೆಯ ಲಕ್ಷಣ ಆಗಿರಬಹುದು. ಆದರೆ ಅದಕ್ಕಾಗಿ ಭಯ ಪಡುವ ಅಗತ್ಯ ಏನೂ ಇಲ್ಲ. ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದರಿಂದ ಯಾವುದೇ ಸ್ಥಿತಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಲದಲ್ಲಿ ರಕ್ತ ಕಾಣಿಸಿಕೊಂಡರೆ ತಕ್ಷಣ ನಿಮ್ಮ ಲಕ್ಷಣಗಳ ಬಗ್ಗೆ ಮಾತುಕತೆ ನಡೆಸಲು ಮತ್ತು ಸ್ಕ್ರೀನಿಂಗ್ ಮಾಡುವ ಕುರಿತಾಗಿ ಚರ್ಚಿಸಲು ವೈದ್ಯರ ಜೊತೆ ಅಪಾಯಿಂಟ್ ಮೆಂಟ್ ನಿಗದಿಪಡಿಸಿಕೊಳ್ಳಿ. ಒಂದು ವಿಚಾರ ನೆನಪಿಡಿ, ಕರುಳಿನ ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಮಾಡಿಸುವುದು ಜೀವ ಉಳಿಸುವ ಒಂದು ವಿಧಾನವಾಗಿದೆ. ಹಾಗಾಗಿ ತಡ ಮಾಡಬೇಡಿ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಇಂದೇ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಳ್ಳಿ.

ಡಾ. ಮಿಲಿಂದ್ ಶೆಟ್ಟಿಕನ್ಸಲ್ಟೆಂಟ್ – ರೇಡಿಯೇಷನ್ ಆಂಕಾಲಜಿಸ್ಟ್,ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಹುಬ್ಬಳ್ಳಿ.ಮೇಲ್-ಐಡಿ: milismystique_84@yahoo.co.in

 

 

Leave a Reply

Your email address will not be published. Required fields are marked *