Saturday, 12th October 2024

ಯುಪಿಎಸ್ಸಿ ಪರೀಕ್ಷೆ ವಂಚಿತರಿಗೆ ಹೆಚ್ಚುವರಿ ಅವಕಾಶ: ಕೇಂದ್ರ

ನವದೆಹಲಿ: 2020ರ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಕರೋನ 19 ರ ದಿಂದ ಹೆಚ್ಚುವರಿ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

2020ರ ಅಕ್ಟೋಬರ್ ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಕರೋನ -19 ಕಾರಣದಿಂದ ತಪ್ಪಿಸಿಕೊಂಡಿ ರುವ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಹೆಚ್ಚುವರಿ ಪ್ರಯತ್ನ ನೀಡುವಂತೆ ನಾಗರಿಕ ಸೇವಾ ಆಕಾಂಕ್ಷಿ ರಾಚ್ನಾ ಸಿಂಗ್ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇಳೆಯಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಅಕ್ಟೋಬರ್ 4ರಂದು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆದಿತ್ತು.

ಆರಂಭದಲ್ಲಿ ಮೇ ತಿಂಗಳಲ್ಲಿ ಪರೀಕ್ಷೆ ನಿಗದಿಯಾಗಿತ್ತಾದರೂ, ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. 2020ರ ಸೆಪ್ಟೆಂಬರ್ ನಲ್ಲಿ, ಉನ್ನತ ನ್ಯಾಯಾಲಯ, ಗರಿಷ್ಠ ವಯೋಮಿತಿ ವಿಸ್ತರಿಸುವ ಮೂಲಕ 2020ರ ಕೊನೆಯ ಪ್ರಯತ್ನದ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಗೆ ಸೂಚಿಸಿತ್ತು.

ಆದರೆ, ಜನವರಿ 22ರಂದು, ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ನೀಡಲು ಕೇಂದ್ರ ಸರ್ಕಾರ ಒಲವು ತೋರುವುದಿಲ್ಲ ಎಂದು ಹೇಳಿತ್ತು. 2021ರ ನಾಗರಿಕ ಸೇವಾ ಪರೀಕ್ಷೆಯ ಅಧಿಸೂಚನೆಯನ್ನು ಫೆಬ್ರವರಿ 10ರಂದು ಪ್ರಕಟಿಸಲಾಗುತ್ತದೆ.