Saturday, 14th December 2024

ತನ್ನಾವರಣವೇ ಸೆರೆಮನೆಯಾಯಿತೇ ’ಛೀ’ ನಾಕ್ಕೆ ?

ಸಕಾಲಿಕ

ಗಣೇಶ್ ಭಟ್, ವಾರಣಾಸಿ

ಕರೋನಾ ಹಿನ್ನೆಲೆಯಲ್ಲಿ ಜಗತ್ತಿನ ಕೆಂಗಣ್ಣಿಗೆ ತುತ್ತಾಗಿರುವ ಚೀನಾ ಅಧ್ಯಕ್ಷರಲ್ಲಿ ಅಭದ್ರತೆಯ ಭಾವ ಮೂಡಿದೆ. ತಾನು ಮೂರನೆಯ ಅವಧಿಗೆ ಅಧ್ಯಕ್ಷನಾಗು ತ್ತೇನೋ ಇಲ್ಲವೋ ಎಂಬ ಅಭದ್ರತೆಯಲ್ಲಿ ದೇಶ ಬಿಟ್ಟು ಹೋಗುತ್ತಿಲ್ಲ. 2022 ರಲ್ಲಿ ಚೀನಾ ಜಿಡಿಪಿ ಶೇ.5.5ಗೆ ಕುಸಿಯುವ ಸಾಧ್ಯತೆ ಇದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇಂದಿನ ಪರಿಸ್ಥಿತಿ ಹಾಗೆಯೇ ಇದೆ. 2020ರ ಜನವರಿ ನಂತರ ಕ್ಸಿ ಜಿನ್ ಪಿಂಗ್ ಚೀನಾದ ಹೊರಗೆ ಕಾಲಿಟ್ಟಿಲ್ಲ. ಜಗತ್ತು ಕರೋನಾ ದಾಟಿ ಸಹಜಸ್ಥಿತಿಗೆ ಮರಳುತ್ತಿದ್ದರೂ ಜಿನ್ ಪಿಂಗ್ ಜಾಗತಿಕ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿಲ್ಲ, ಜಾಗತಿಕ ನಾಯಕರನ್ನು ಮುಖತಃ ಭೇಟಿ ಯಾಗುತ್ತಿಲ್ಲ.

2013ರಲ್ಲಿ ಚೀನಾ ಅಧ್ಯಕ್ಷ ಪಟ್ಟ ಏರಿದ ಜಿನ್ ಪಿಂಗ್ 2018ರಲ್ಲಿ ಎರಡನೇ ಅವಧಿಗೆ ಪುನರಾಯ್ಕೆಗೊಂಡರು. ಅಲ್ಲಿನ ಸಂವಿಧಾನಕ್ಕೆ ತಿದ್ದುಪಡಿ ತಂದು ಎರಡು ಅವಧಿಯ ಮಿತಿಯನ್ನು ತೆಗೆದುಹಾಕಿ ಜೀವಿತಾವಧಿಯವರೆಗೆ ಅಧ್ಯಕ್ಷನಾಗುವ ಅವಕಾಶ ಮಾಡಿ ಕೊಂಡರು. ಆತ ಏಕೆ ಈ ಬದಲಾವಣೆ ಮಾಡಿದರು ಎನ್ನುವುದು ತಿಳಿಯದ್ದೇನಲ್ಲ. ಇದೀಗ 2023ರಲ್ಲಿ ಮೂರನೇ ಅವಧಿಗೂ ಅಧ್ಯಕ್ಷನಾಗಿ ಮುಂದುವರಿಯುವ ಎಲ್ಲ ವ್ಯವಸ್ಥೆ ಗಳನ್ನೂ ಮಾಡಿಕೊಳ್ಳುತ್ತಿದ್ದಾರೆ ಜಿನ್ ಪಿಂಗ. ಕಮ್ಯುನಿಸ್ಟ್ ಚೀನಾ ಸಹಜವಾಗಿಯೇ ವಿಸ್ತಾರವಾದಿ ದೇಶವಾದರೂ ಕಳೆದೆರಡು ದಶಕಗಳಲ್ಲಿ ತನ್ನ ವಿಸ್ತರಣಾ ವಾದವನ್ನು ಹೊರಗೆ ತೋರಿಸಿ ಕೊಳ್ಳುತ್ತಿರಲಿಲ್ಲ. ಜಾಗತೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡು, ಆರ್ಥಿಕ ಸುಧಾರಣೆಗೆ ಒಡ್ಡಿಕೊಂಡು ಜಾಗತಿಕ ಹೂಡಿಕೆದಾರರ ಆಕರ್ಷಣೆ ಕೇಂದ್ರವಾಗಿ ಹಾಗೂ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಕಳೆದ 30ವರ್ಷಗಳಲ್ಲಿ ಚೀನಾ ಬೆಳೆದದ್ದು ಸುಳ್ಳಲ್ಲ.

ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆ, ಸ್ಮಾರ್ಟ್ ಫೋನ್ ತಯಾರಿಕೆ, ಆಟೋಮೊಬೈಲ್ ಉತ್ಪಾದನೆ ಮೊದಲಾದ ಕ್ಷೇತ್ರಗಳಲ್ಲಿ ಚೀನಾ ಜಗತ್ತಿನ ನಂಬರ್ ಒನ್ ದೇಶವಾಗಿ ಬೇಳೆಯಿತು. ಅಗ್ಗದ ಕಾರ್ಮಿಕರು, ಭೂಮಿ, ನೀರು, ವಿದ್ಯುತ್‌ನಂಥ ಮೂಲಭೂತ ಸೌಲಭ್ಯಗಳ ಲಭ್ಯತೆ ಮೊದಲಾದ ಕಾರಣಗಳಿಂದ ಚೀನಾ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿ ಬೃಹತ್ ಉತ್ಪಾದನಾ ದೇಶವಾಗಿ ಹೊರಹೊಮ್ಮಿತು. ಜಿ ಪಿಂಗ್ ಅಧಿಕಾರಕ್ಕೆ ಬರುವಾಗ 10 ಶತ ಸಹಸ್ರ ಕೋಟಿ ಡಾಲರ್‌ಗಳ ಜಿಡಿಪಿ ಹೊಂದಿದ್ದ ಚೀನಾ 2020ರಲ್ಲಿ 14.5 ಶತ ಸಹಸ್ರ ಕೋಟಿ ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಬೆಳೆಯಿತು.

ಅಮೆರಿಕವನ್ನು ಹಿಂದಿಕ್ಕಿ ಜಾಗತಿಕ ದೊಡ್ಡಣ್ಣ ನಾಗಿ ಚೀನಾವನ್ನು ಬೆಳೆಸಬೇಕು ಎಂಬುದು ಅವರ ಮಹದಾಸೆ. ಆದರೆ 2019ಲ್ಲಿ ವುಹಾನ್‌ನಲ್ಲಿ ಆದ ಕರೋನಾ ಸ್ಫೋಟ ಈ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲಾ ಗಿಸಿತು. ಚೀನಾಗೆ ಕರೋನಾ ಜಗತ್ತಿಗೆ ಹರಡದಂತೆ ತಡೆಗಟ್ಟುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಅದೊಂದು ಸ್ಫೋಟ ಕಾರಣಕ್ಕೆ ತಾನು ಏಕಾಂಗಿಯಾಗಬಾರದೆಂದು ಚೀನಾ ತನ್ನ ಕೈಗೊಂಬೆ ಯಾಗಿದ್ದ ವಿಶ್ವ ಆರೋಗ್ಯ ಸಂಸ್ಥೆಯು ಕರೋನಾವನ್ನು ಜಾಗತಿಕ ಮಹಾಮಾರಿ ಎಂದು ಘೋಷಿಸುವಲ್ಲಿ ತಡಮಾಡುವಂತೆ ಮಾಡಿತು. ಪರಿಣಾಮ ಕರೋನಾ ಪ್ರಪಂಚವನ್ನೇ ಆಕ್ರಮಿಸುವಂತಾಯಿತು. ಚೀನಾ ತಾನು ಬಗೆದದ್ದೇ ಒಂದಾದರೆ, ದೈವ ವಿಧಿಸಿದ್ದು ಇನ್ನೊಂದು. ಇಂದು ಇಡೀ ಪ್ರಪಂಚದ ಕೆಂಗಣ್ಣಿಗೆ ತುತ್ತಾಗಿದೆ ಚೀನಾ.

ಯಾರೊಬ್ಬರೂ ಚೀನಾವನ್ನು ನಂಬುವ ಸ್ಥಿತಿಯಲ್ಲಿಲ್ಲ. ಪ್ರಪಂಚವನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳಲು ಚೀನಾ ಆಯ್ಕೆ ಮಾಡಿದ ಮಾರ್ಗಗಳು ಎರಡು. ಒಂದು ಅಗ್ಗದ ವಸ್ತುಗಳನ್ನು ಪೂರೈಸಿ ಜಾಗತಿಕ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಬಡ ದೇಶಗಳನ್ನು ಸಾಲದ ಬಲೆಗೆ ಸಿಲುಕಿಸಿ ನಿಯಂತ್ರಣದಲ್ಲಿಟ್ಟುಕೊಂಡು ಅಲ್ಲಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು.

ಜಗತ್ತಿನ 42 ದೇಶಗಳಿಗೆ ಚೀನಾ ಸುಮಾರು 385 ಶತಕೋಟಿ ಡಾಲರ್‌ಗಳಷ್ಟು ಸಾಲ ಕೊಟ್ಟಿದೆ. ಹೀಗೆ ಸಾಲ ಪಡೆದ ಪಾಕಿಸ್ತಾನ ಬಡ್ಡಿ ಕೂಡ ಮರುಪಾವತಿಸಲಾಗದೆ ಚಡಪಡಿಸುತ್ತಿದೆ. ಶ್ರೀಲಂಕಾ ಸಾಲತೀರಿಸಲಾಗದೇ ತನ್ನ ಹಂಬಂತೋಟ ಬಂದರನ್ನು 99 ವರ್ಷ ಗಳಿಗೆ ಚೀನಾಕ್ಕೆ ಬಿಟ್ಟುಕೊಡುವಂತೆ ಆಯಿತು. ಸುಡಾನ್, ಇಥಿಯೋಪಿಯಾ, ಜಿಂಬಾಬ್ವೆಗಳೂ ಚೀನಾದ ಬಲೆಯಲ್ಲಿ ಬಿದ್ದಿವೆ. ವೆನೆಜುವೆಲಾದಂತಹ ಲ್ಯಾಟಿನ್ ಅಮೆರಿಕ ದೇಶಗಳು ಕೂಡ ಚೀನಾದ ಸಾಲದಲ್ಲಿವೆ. ಮಲೇಷ್ಯಾ, ಥಾಯ್ಲೆಂಡ್, ಮಾಲ್ಡೀವ್ಸ್, ನೇಪಾಳಗಳೂ ಚೀನಾದ ಹಂಗಿನಲ್ಲಿವೆ.

ಸರ್ವಾಧಿಕಾರೀ ಕಮ್ಯುನಿಸ್ಟ್ ರಾಷ್ಟ್ರ ಸಹಜವಾಗಿ ಪ್ರಜಾಪ್ರಭುತ್ವ ದೇಶಗಳನ್ನು ದ್ವೇಷಿಸುತ್ತದೆ. ಅದರ ಗೆಳೆತನವೇನಿದ್ದರೂ ಪ್ರಜಾ ಪ್ರಭುತ್ವ ವಿರೋಧಿ ದೇಶಗಳ ಜತೆಗೇ. ಜಾಗತಿಕ ಭಯೋತ್ಪಾದನಾ ಕೇಂದ್ರ ಪಾಕಿಸ್ತಾನ, ಚೀನಾದ ಸಾರ್ವಕಾಲಿಕ ಮಿತ್ರ. ಸರ್ವಾ ಧಿಕಾರಿ ಕಿಂ ಜಾಂಗ್ ಉನ್‌ನ ಆಡಳಿತದಲ್ಲಿರುವ ಉತ್ತರಕೋರಿಯಾ ಪರಮ ಆಪ್ತ.

ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡುವ ತಯ್ಯಿಪ್ ಎರ್ಡೋಗಾನ್ ಆಡಳಿತದ ಟರ್ಕಿ ಚೀನಾಗೆ ಹತ್ತಿರ. ಇತ್ತೀಚೆಗೆ ಅಫ್ಘಾನಿಸ್ತಾನವನ್ನು ಆಕ್ರಮಿಸಿ ಅಧಿಕಾರವಹಿಸಿಕೊಂಡ ಭಯೋತ್ಪಾದನಾ ಸಂಘಟನೆ ತಾಲಿಬಾನಿಗೆ ಚೀನಾದ ಬೆಂಬಲ ಬಹಿರಂಗ ಸಂಗತಿ. ಚೀನಾದಲ್ಲಿ ಮಾನವ ಹಕ್ಕುಗಳಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಕೇಳಲೇ ಬೇಡಿ. ಉಯಿಗರ್ ಮುಸಲ್ಮಾನರನ್ನು ಸಂಪೂರ್ಣ ಹತ್ತಿಕ್ಕಲಾಗಿದ್ದು, ಇಂಥ 15 ಲಕ್ಷ ಮಂದಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅಲ್ಲಿಗೆ ಯಾವುದೇ ಸಾಮಾಜಿಕ ಮಾಧ್ಯಮಗಳಿಗೆ ಪ್ರವೇಶವಿಲ್ಲ.

ಚೀನಾ ಸರಕಾರದ ಕಣ್ಗಾವಲ ಇರುವ ವೈಬೋ ಮತ್ತು ವಿಚ್ಯಾಟ್‌ಗಳಷ್ಟೇ ಪ್ರಮುಖ ಸಾಮಾಜಿಕ ಮಾಧ್ಯಮಗಳು. ಸರಕಾರ ಜನರ ಮಾತುಕತೆ ಹಾಗೂ ಚಲನವಲನಗಳ ಮೇಲೆ ಸಿ ಸಿ ಕ್ಯಾಮೆರಾ ಮೂಲಕ ತೀವ್ರ ನಿಗಾ ಇಡುತ್ತದೆ. ಇಷ್ಟೆಲ್ಲ ಮೆರೆದಿದ್ದ ಅಧ್ಯಕ್ಷ ಈಗ ತಣ್ಣಗಾಗಿದ್ದೇಕೆ? ಕರೋನಾ ಕಾರಣಕ್ಕೆ ನಾನಾ ದೇಶಗಳ ಕೆಂಗಣ್ಣಿಗೆ ತುತ್ತಾಗಬೇಕಾದೀತೆಂಬ ಭಯದಿಂದಲೋ ಅಥವಾ ಮೂರನೆಯ ಅವಧಿಗೆ ಅಧ್ಯಕ್ಷನಾಗುತ್ತೇನೋ ಇಲ್ಲವೋ ಎಂಬ ಅಭದ್ರತೆಯ ಭಾವವೋ ಏನೋ ಈ ವರ್ಷದ ಸೆಪ್ಟೆಂಬರ್‌ನಲ್ಲಿ
ಅಮೆರಿಕದಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಜಿನ್ ಪಿಂಗ್ ಪ್ರತ್ಯಕ್ಷ ಭಾಗವಹಿಸದೆ ವಿಡಿಯೋ ಕಾನರೆನ್‌ನಲ್ಲಿ ಮಾತನಾಡಿದರು.

ಅಕ್ಟೋಬರ್ ನಲ್ಲಿ ರೋಮ್‌ನಲ್ಲಿ ನಡೆದ ಜಿ 20 ರಾಷ್ಟ್ರಗಳ ಅಧಿವೇಶನದಲ್ಲೂ ನೇರವಾಗಿ ಭಾಗವಹಿಸಲಿಲ್ಲ. ಜಾಗತಿಕ ತಾಪಮಾನ ಕುರಿತ ಗ್ಲಾಸ್ಗೋದಲ್ಲಿನ ಸಿಓಪಿ 26 ಹವಾಮಾನ ಅಧಿವೇಶನಕ್ಕೂ ಜಿನ್ ಪಿಂಗ್ ಗೈರುಹಾಜರು. ಅಲ್ಲಿ ಅವರಿಗೆ ಅವ
ಕಾಶ ಕೊಡಲಿಲ್ಲ. ಚೀನಾ ಸಿಓಪಿ 26 ಹವಾಮಾನ ಅಧಿವೇಶನದಲ್ಲಿ ಭಾಗವಹಿಸದೆ ಬಹುದೊಡ್ಡ ತಪ್ಪನ್ನೆಸಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಟೀಕಿಸಿದ್ದಾರೆ.

ಜಿನ್ ಪಿಂಗ್ ಸ್ವಯಂ ನಿರ್ಬಂಧದ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಪಕ ಬಳಸಿಕೊಂಡಿದ್ದಾರೆ. ಮೋದಿ ಅಮೆರಿಕ ಯಾತ್ರೆ ಅತ್ಯಂತ ಫಲಪ್ರದವಾಗಿದ್ದು, ಜೋ ಬೈಡೆನ್ ಜತೆಗಿನ ಮಾತುಕತೆಗಳು ಅಮೆರಿಕವನ್ನು ಇನ್ನಷ್ಟು ಹತ್ತಿರ ವಾಗಿಸಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಕಮಲಾ ಸ್ವಯಂ ಪ್ರೇರಿತ ಹೇಳಿಕೆ ನೀಡಿ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳನ್ನು ಖಂಡಿಸಿದ್ದಾರೆ. ಪದಗ್ರಹಣ ಪೂರ್ವದಲ್ಲಿ ಕಾಶ್ಮೀರದ ವಿಚಾರದಲ್ಲಿ ಪ್ರತ್ಯೇಕತಾವಾದಿಗಳ ಪರವಾಗಿ ಮಾತನಾಡುತ್ತಿದ್ದ ಕಮಲಾರ ಬದಲಾದ ಅಭಿಪ್ರಾಯವು ನರೇಂದ್ರ ಮೋದಿ ಅವರ ರಾಜತಾಂತ್ರಿಕ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ.

ಮೋದಿ ಭೇಟಿ ಸಂದರ್ಭದಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾಗಳ ಚತುಷ್ಪಕ್ಷೀಯ ಸಂಘಟನೆಯಾದ ಕ್ವಾಡ್ ಮಾತುಕತೆಗಳೂ ಯಶಸ್ವಿಯಾದವು. ಆಮೆರಿಕ ಅಧ್ಯಕ್ಷ, ಜಪಾನ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿಗಳ ಜತೆಗೆ ಮೋದಿ ಪ್ರಾದೇಶಿಕ
ಭದ್ರತೆ ಕುರಿತು ಮಾತುಕತೆ ನಡೆಸಿದರು. ಕ್ವಾಡ್ ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಾಬಲ್ಯವನ್ನು ನಿಯಂತ್ರಿಸಲು ಹುಟ್ಟಿಕೊಂಡಿರುವ ಸಂಘಟನೆ ಎನ್ನುವುದು ಚೀನಾಗೆ ಗೊತ್ತಿಲ್ಲದ ವಿಷಯವೇನಲ್ಲ. ಇತ್ತೀಚೆಗೆ ರೋಮ್‌ನಲ್ಲಿ ನಡೆದ ಜಿ20 ದೇಶಗಳ ಸಮ್ಮೇಳನದಲ್ಲಿ ಮೋದಿ ವಿಶ್ವ ನಾಯಕರ ಜತೆಗೆ ಆತ್ಮೀಯವಾಗಿ ನಡೆದುಕೊಂಡದ್ದು ಹಾಗೂ ಗ್ಲಾಸ್ಗೋ ಸಮ್ಮೇಳನದಲ್ಲಿ ಇಂಗ್ಲೆಂಡ್ ಪ್ರಧಾನಿ
ಮೋದಿಯವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದ್ದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ ಯಶಸ್ಸನ್ನು ಬಣ್ಣಿಸಿ ‘ಒನ್ ಸನ್, ಒನ್ ಗ್ರಿಡ್, ಒನ್ ವರ್ಲ್ಡ್, ನ್ ನರೇಂದ್ರ ಮೋದಿ’ ಎಂದು ಕೊಂಡಾಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಕಲ್ಲಿದ್ದಲಿನ ಆಮದು ನಿಲ್ಲಿಸಿದ ನಂತರ ಚೀನಾ ದೊಡ್ಡ ಮಟ್ಟಿನ ಕಲ್ಲಿದ್ದಲಿನ ಕೊರತೆ ಎದುರಿಸುತ್ತಿದೆ. ಪರಿಣಾಮ ವಿದ್ಯುತ್ ಉತ್ಪಾದನೆ ಗಣನೀಯ ಕುಸಿದು ಕೈಗಾರಿಕೆಗಳು ಹಾಗೂ ಉತ್ಪಾದನಾ ಚಟುವಟಿಕೆಗಳು ಬಾಽಸಲ್ಪಟ್ಟಿವೆ. ಪವರ್ ಕಟ್ ಹಾಗೂ ಲೋಡ್ ಶೆಡ್ಡಿಂಗ್ ಹೆಚ್ಚಾಗಿದ್ದು ಕೈಗಾರಿಕೆಗಳಿಗೆ ಉತ್ಪಾದನೆ ಕಡಿಮೆ ಮಾಡಲು ಸರಕಾರ ಸೂಚಿಸಿದೆ. ಇದರ ಜತೆಗೆ ಚೀನಾದ ಅತೀ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ಎವರ್ ಗ್ರ್ಯಾಂಡೆ 300 ಶತ ಕೋಟಿ ಡಾಲರ್ ಸಾಲ ಮರುಪಾವತಿ ಸಲಾಗದೆ ದಿವಾಳಿ ತಲುಪಿದೆ.

ಇನ್ನೊಂದು ರಿಯಲ್ ಎಸ್ಟೇಟ್ ಕಂಪನಿ ಕೈಸಾ ಸಹ ನಷ್ಟದಲ್ಲಿದೆ. ಗಾಯಕ್ಕೆ ಬರೆ ಎಳೆದಂತೆ ಅನೇಕ ಬಹುರಾಷ್ಟ್ರೀಯ ಕಂಪನಿ ಗಳು ಚೀನಾ ತೊರೆಯುತ್ತಿವೆ. ಉಯಿಗರ್ ಪ್ರಕರಣದಲ್ಲಿ ಪ್ರಸಿದ್ಧ ಕ್ರೀಡಾ ಉತ್ಪನ್ನಗಳ ಸಂಸ್ಥೆ ನೈಕಿ, ಚೀನಾವನ್ನು ತೊರೆದಿದೆ. ಆಪಲ್ ಕಂಪನಿಯು ಭಾರತ ಹಾಗೂ ತೈವಾನ್‌ಗಳ ಕಡೆಗೆ ಮುಖ ಮಾಡಿದೆ. ಸ್ಯಾಮ್‌ಸಂಗ್ ತನ್ನ ಚೀನಾದ ಉತ್ಪಾದನಾ ಘಟಕ ವನ್ನು ಭಾರತಕ್ಕೆ ಸ್ಥಳಾಂತರಿಸಿದೆ. ಎಲ್‌ಜಿ, ಆಡಿಡಾಸ್, ಪ್ಯೂಮಾ, ಎಚ್‌ಪಿ, ಡೆಲ, ಝೂಮ, ಶಾರ್ಪ್, ಕಿಯಾ ಮೋಟಾರ್ಸ್, ಹ್ಯುಂಡಾಯ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್, ಲಿಂಕ್ಡಿನ್, ಗೋಪ್ರೋ, ಇಂಟೆಲ, ಸೋನಿ ಮೊದಲಾದ ಹತ್ತು ಹಲವು ಕಂಪನಿಗಳು ಚೀನಾ ತೊರೆಯುತ್ತಿವೆ.

ಇವುಗಳೆಲ್ಲದರ ಪರಿಣಾಮ 2022ರಲ್ಲಿ ಚೀನಾದ ಜಿಡಿಪಿಯು ಶೇ.5.5ಗೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಚೀನಾ ಅಧ್ಯಕ್ಷರ ಅಭದ್ರತೆಯ ಭಾವ ಯಾವ ಮಟ್ಟಕ್ಕೆ ಏರಿದೆ ಎಂದರೆ ತನ್ನ ದೇಶದ ಕೊಟ್ಯಧಿಪತಿಗಳನ್ನೇ ಮಟ್ಟ ಹಾಕುವಷ್ಟು. ಅಲೀಬಾಬಾದ ಸಂಸ್ಥಾಪಕ ಜ್ಯಾಕ್ ಮಾ ನನ್ನು ಚೀನಾ ಯಾವ ರೀತಿ ನಡೆಸಿಕೊಂಡಿತು ಎನ್ನುವದನ್ನು ವಿಶ್ವವೇ ನೋಡಿದೆ. ಗೇಮಿಂಗ್ ಸಂಸ್ಥೆಯಾದ ಟೆನ್ಸೆಂಟ್ ನ ಮೇಲೆ ಚೀನಾ ಸರಕಾರ ಕ್ರಮ ತೆಗೆದುಕೊಂಡಿದೆ. ಅಲ್ಲಿನ ಟ್ಯಾಕ್ಸಿ ಸೇವೆಯ ಸಂಸ್ಥೆಯಾದ ಡೀಡಿಯ ಮೇಲೆ ಇತ್ತೀಚೆಗೆ ಸರಕಾರ ನಿಯಂತ್ರಣ ಹೇರಿದೆ.

ಟಿಕ್ ಟಾಕ್ ನ ಮಾತೃ ಸಂಸ್ಥೆಯಾದ ಬೈಟ್ ಡಾನ್ಸ್ ಮೇಲೆ ಮೆಮೋಗಳ ಮೇಲೆ ಮೆಮೋಗಳನ್ನು ಕೊಡಲಾಗುತ್ತಿದೆ. ನೇಪಾಳ ಹಾಗೂ ಮಾಲ್ಡೀವ್ಸ್ ಭಾರತ ವಿರೋಧಿ ನಿಲುವು ತೆಗೆದುಕೊಳ್ಳುವಂತೆ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಇತ್ತೀಚೆಗೆ ಚೀನಾದ ಕೈಗೊಂಬೆ ಕೆ ಪಿ ಶರ್ಮಾ ಓಲಿ ಇಳಿದು ಭಾರತದ ಪರವಾಗಿರುವ ಶೇರ್ ಬಹಾದೂರ್ ದೇವುಬಾ ನೇಪಾಳ ಪ್ರಧಾನಿಯಾಗಿ ಚೀನಾದ ಆಟ ಬಂದ್ ಆಗಿದೆ. 2018 ರಲ್ಲಿ ಮಾಲ್ಡೀವ್ಸ್‌ನಲ್ಲೂ ಅಬ್ದುಲ್ ಯಾಮೀನ್ ಸೋತು, ಭಾರತದ ಮಿತ್ರ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅಧ್ಯಕ್ಷರಾದರು.

ಧೋಕ್ಲಾಂ ಹಾಗೂ ಗಾಲ್ವಾನ್‌ನಲ್ಲಿ ನಡೆದ ಭಾರತ ಚೀನಾಗಳ ನಡುವಿನ ಸೈನಿಕರ ಸಂಘರ್ಷದಲ್ಲಿ ಭಾರತದ ಸೈನಿಕರು ಮೇಲುಗೈ ಸಾಧಿಸಿ ಚೀನಾ ಹುಳುಕನ್ನು ಜಗತ್ತಿಗೆ ಸಾರಿದ್ದಾರೆ. ಬಹುತೇಕ ಚೀನಾದ ಎಲ್ಲ ಆಪ್‌ಗಳ ಮೇಲೆ ನಿಷೇಧ ಹೇರಿ, ಅಲ್ಲಿನ ಹೂಡಿಕೆ ದಾರ ಸಂಸ್ಥೆಗಳನ್ನೂ ನಿರ್ಬಂಧಿಸಿದೆ. ಚೀನಾದ ಎಲ್ಲ ರೀತಿಯ ಕುತಂತ್ರಗಳಿಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ಕೊಡುತ್ತಿರುವ ಭಾರತ ಚೀನಾದ ಯೋಗ್ಯತೆಯನ್ನು ಜಗತ್ತಿಗೆ ತಿಳಿಸುತ್ತಿದೆ.