Friday, 13th December 2024

ಜೂ.11ಕ್ಕೆ ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ಕಾಂಗ್ರೆಸ್ ಪಕ್ಷವು ಇಂಧನ ಬೆಲೆ ಏರಿಕೆ ವಿರೋಧಿಸಿ ಜೂ.11ಕ್ಕೆ ದೇಶವ್ಯಾಪಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ.

ಹಲವಾರು ರಾಜ್ಯಗಳಲ್ಲಿ ಇಂಧನ ಬೆಲೆಗಳು  ₹100 ದಾಟಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷವು ಬೀದಿಗಿಳಿಯಲು ನಿರ್ಧರಿಸಿದೆ. ಪಕ್ಷದ ಎಲ್ಲ ರಾಜ್ಯ ಘಟಕಗಳಿಗೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಸೂಚಿಸಿವೆ.

ಸಾರ್ವಜನಿಕ ಲೂಟಿ ಮತ್ತು ಬೆಲೆ ಏರಿಕೆ ವಿರುದ್ಧ ತುರ್ತಾಗಿ ಪ್ರತಿಭಟಿಸಲು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ರಾಜ್ಯ ಘಟಕಗಳಿಗೆ ಸೂಚಿಸಿದ್ದಾರೆ.

ಸಾಂಕ್ರಾಮಿಕ ರೋಗ, ಆರ್ಥಿಕ ಕುಸಿತ, ನಿರುದ್ಯೋಗ, ವೇತನ ಕಡಿತ, ಉದ್ಯೋಗ ಕಡಿತದಿಂದಾಗಿ ಸಂಕಷ್ಟದಲ್ಲಿರುವ ಜನರ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಅನಿಯಂತ್ರಿತ ಏರಿಕೆಯು ಬಲವಾದ ಹೊಡೆತ ನೀಡಿದೆ. ಸಾಂಕೇತಿಕ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.