Wednesday, 11th December 2024

ಸಂಸ್ಕಾರ ಮತ್ತು ಸಂವೇದನೆ

ಅಭಿಮತ

ಸಿದ್ದು ಯಾಪಲಪರವಿ

ನಮ್ಮ ಸುತ್ತಲೂ ನಡೆಯುವ ಎಲ್ಲಾ ವಿಷಯಗಳಿಗೆ ಪ್ರತಿಕ್ರಿಯೆ ನೀಡಲಾಗದ ಅಸೂಕ್ಷ್ಮ ಕಾಲದಲ್ಲಿ ನಾವಿದ್ದೇವೆ. ದೊಡ್ಡವರ ಮನೆಯಲ್ಲಿ ಇರುವವರ ಕ್ಷುಲ್ಲಕ ವರ್ತನೆ ಮತ್ತು ಸಣ್ಣ ನಡವಳಿಕೆ ಬಗ್ಗೆ ಹೇಳಲಾಗದು. ಆದರೆ ಇಂದು ನಾವು ಎಲ್ಲವನ್ನೂ, ಎಲ್ಲರನ್ನೂ ಕೆಲವೇ ಕ್ಷಣಗಳಲ್ಲಿ ಬೆತ್ತಲೆ ಮಾಡುವ ಸೋಷಿಯಲ್ ಮೀಡಿಯಾ ದುನಿಯಾದಲ್ಲಿದ್ದೇವೆ ಎಂಬ ಕನಿಷ್ಠ ಖಬರು, ಅರಿವು ಇರಬೇಕು.

ಐಷಾರಾಮಿ ಜನ ರಸ್ತೆಯಲ್ಲಿ ಓಡಾಡುವಾಗ, ಬಡಪಾಯಿಗಳು ದೂರ ಸರಿಯಲೇಬೇಕು. ಅದಕ್ಕೆಂದೇ ಸೈರನ್ ಒದರಿಕೊಂಡು ಎಸ್ಕಾರ್ಟ್ ಮೂಲಕ ಓಡಾಡುತ್ತಾರೆ ದೊಡ್ಡವರು. ರಾಜಕೀಯ ನಾಯಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಅಧ್ಯಯನ ಕ್ಕೆಂದು ವಿದೇಶಗಳಿಗೆ ಭೇಟಿ ಕೊಟ್ಟು ಬರು ತ್ತಾರೆ, ಆದರೆ ಬಂದ ಮೇಲೆ ಯಥಾಸ್ಥಿತಿ. ಏನೇನೂ ಬದಲಾವಣೆ ಇಲ್ಲ. ಸಾಮಾನ್ಯರು ಕೂಡ ಅಧಿಕಾರ ಹಿಡಿಯಲು ಹಂಬಲಿಸಲು ಇದೇ ಪವರಿನ
ಪೊಗರೇ ಮುಖ್ಯ ಕಾರಣ.

ಅಧಿಕಾರದ ಜತೆಜತೆಗೆ ಭಯಂಕರ ಪ್ರೋಟೋ ಕಾಲ್, ಜನಜಂಗುಳಿ, ಹೇರಳ ಹಣ, ಇವೆಲ್ಲಕ್ಕಿಂತ ಮುಖ್ಯವಾಗಿ ಐಷಾರಾಮಿ ಸವಲತ್ತುಗಳು. ಈ ಸವಲತ್ತು ಗಳ ಕಾರಣದಿಂದ ರಾಜ ಕಾರಣಿಗಳು ಅಧಿಕಾರದಲ್ಲಿ ಉಳಿಯುವ ಹರಸಾಹಸ ಮಾಡುತ್ತಾರೆ. ಸಾವಿರಾರು ಕೋಟಿ ರು. ಹಣ ಇದ್ದರೂ, ಅದು ಅಧಿಕಾರಕ್ಕೆ ಸಮನಾಗುವುದಿಲ್ಲ. ಹಣ+ಅಧಿಕಾರ+ ದರ್ಪ+ಅಹಂಕಾರ+ ಐಷಾರಾಮ = ರಾಜಕಾರಣ ಎಂಬ ವಿಕೃತಿ ಉಂಟಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಅಧಿಕಾರ ಹಿಡಿಯುವ ದಾಹಕ್ಕೆ ಕೊನೆ ಎಂಬುದೇ ಇಲ್ಲ ನಮ್ಮ ಶುದ್ಧ ಪ್ರಜಾಪ್ರಭುತ್ವ ದೇಶದಲ್ಲಿ!

ದೊಡ್ಡ ಅಧಿಕಾರ, ದೊಡ್ಡ ಮೊತ್ತದ ಭ್ರಷ್ಟಾಚಾರ, ದೊಡ್ಡ ಪ್ರಮಾಣದ ಹಿಂಬಾಲಕರು ಎಂಬ ಭಯಾನಕ ರಾಜಕೀಯ ಪರಿಕಲ್ಪನೆ ಇರುವುದು ನಮ್ಮ ದೇಶದಲ್ಲಿ ಮಾತ್ರ! ಸರಳತೆ ಮತ್ತು ಪ್ರಾಮಾಣಿಕತೆ ಎಂಬುದು ಈಗ ಕೇವಲ ಬರಹದ ನಿಷ್ಪ್ರಯೋಜಕ ಸವಕಲು ಪದಗಳು. ‘ಬಡವನ ಕೋಪ ದವಡೆಗೆ ಮೂಲ’ ಎಂಬ ಮಾತು ಕೂಡ ಈಗ ಅಪ್ರಸ್ತುತ. ಬಡವ ಬೈಸಿಕಲ್, ಬೈಕು, ಟ್ರ್ಯಾಕ್ಟರ್, ಜೀಪುಗಳಲ್ಲಿ ಓಡಾಡುವಾಗ ನಯ, ನಾಜೂಕಿನಿಂದ ಇರಬೇಕು. ಎದುರಿಗೆ ನೂರಾರು ಕಿ.ಮೀ. ವೇಗದಲ್ಲಿ ದಾಳಿ ಮಾಡುವ, ಕೋಟಿ ಬೆಲೆ ಬಾಳುವ ವಿಐಪಿ ವಾಹನಗಳ ಬಗ್ಗೆ ಕಾಳಜಿ ಇರಬೇಕು. ಇಲ್ಲದೆ ಹೋದರೆ ಸಾವು ಗ್ಯಾರಂಟಿ.

ಬರೀ ಸಾವಲ್ಲ, ಇರುವ ಗಾಡಿ ಸುಟ್ಟು ಹಾಕಬಹುದು ಹುಷಾರ್! ಬೈಕ್ ಮೇಲೆ ಹೋಗುವವನಿಗೆ ಸೈಕಲ್ ಸವಾರ ಹುಚ್ಚನಂತೆ ಕಾಣುವ ಈ ಹೈರಾರ್ಕಿ ಮನುಷ್ಯನ ಸಹಜ ಮನೋರೋಗ. ಈ ಹುಚ್ಚುರೋಗ ದೊಡ್ಡ ವಾಹನಗಳಲ್ಲಿ ಸವಾರಿ ಮಾಡುವಾಗ ಇನ್ನೂ ಹೆಚ್ಚಾಗುತ್ತದೆ. ನಾವು ಒಂದು ಕಾಲಕ್ಕೆ
ನಡೆದುಕೊಂಡು, ಸೈಕಲ್ ಮೇಲೆ, ಸಣ್ಣ ಪುಟ್ಟ ವಾಹನಗಳಲ್ಲಿ ಓಡಾಡಿದ್ದನ್ನೂ ಮರೆಯುವಷ್ಟು! ಇರಲಿ ಸದರಿ ಘಟನೆಯ ಮೂಲಕ ಅನೇಕರು ಪಾಠ ಕಲಿಯುವುದರ ಜತೆಗೆ, ಸದರಿ ಚಳಿಗಾಲದ ಅಧಿವೇಶನದಲ್ಲಿ ಒಂದು ಸುದೀರ್ಘ ಚರ್ಚೆ ನಡೆದು, ಇಂಥ ಪ್ರಸಂಗದಲ್ಲಿ ಜನಸಾಮಾನ್ಯರು, ಬಡವರು
ಹೇಗೆ ರಸ್ತೆಯ ಮೇಲೆ ಓಡಾಡಬೇಕು ಎಂಬ ಕಾನೂನನ್ನು ಅಧಿಕಾರದಲ್ಲಿ ಇರುವ ಮಹನೀಯರು ತೀರ್ಮಾನ ಮಾಡಿ, ನೂತನ ಕಾನೂನು ರೂಪಿಸಲಿ. ಇಲ್ಲದೆ ಹೋದರೆ ದೊಡ್ಡವರಿಗೆ ಸೂಕ್ತರಕ್ಷಣೆ ಇಲ್ಲದಂತಾಗುತ್ತದೆ!

ಕೋಟಿ ಗಟ್ಟಲೆ ಬೆಲೆ ಬಾಳುವ ಕಾರುಗಳಿಗೆ ಸುಭದ್ರತೆ ಮಾಯವಾಗುತ್ತದೆ. ಇಂಥ ಘಟನೆಗಳು ನಡೆದಾಗ ಜನಸಾಮಾನ್ಯರ ವಾಹನಗಳನ್ನು ಮುಟ್ಟು ಗೋಲು ಹಾಕಿಕೊಂಡು, ಅದಕ್ಕೆ ಕಾರಣರಾದ ಸಾಮಾನ್ಯ ಮತದಾರನೆಂಬ ಮೂರ್ಖನಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಆದಷ್ಟು ಬೇಗ ಜಾರಿ
ಯಾಗಿ, ಇಂಥ ಪ್ರಸಂಗಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.