Wednesday, 11th December 2024

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ.ಕೆ ಶಿವಕುಮಾರ್

ಉಡುಪಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಗಂಭೀರ ವಿಚಾರ. ನನಗೆ ಮಾಧ್ಯಮದವರು ಹಾಗೂ ಸ್ನೇಹಿತರುಗಳು ಎರಡು ಮೂರು ತಿಂಗಳ ಹಿಂದೆಯೇ ನೀಡಿದ್ದ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಆದರೆ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳು ತ್ತಿರೋದೇಕೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಭಾನುವಾರ ಗೋಪಾಲ ಪೂಜಾರಿ ಅವರ ನಿವಾಸ ಹಾಗೂ ಉಡುಪಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನನ್ನ ಬಳಿ ಸಾಕ್ಷಿ ಇದೆ. ನಾನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ. ಈ ಹಿಂದೆ ರಾಜಕೀಯ ಕಾರ್ಯದರ್ಶಿಯನ್ನು ವಜಾ ಮಾಡಿ ದ್ದರು, ಕೆಲ ದಿನಗಳ ಹಿಂದೆ ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡಿದ್ದಾರೆ. ಈಗ ಅವರ ಆಪ್ತ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂದರೆ ಅದು ಜವಾಬ್ದಾರಿಯುತ ಸ್ಥಾನ. ಅವರ ಹೆಸರು ಅನೇಕ ವಿಚಾರದಲ್ಲಿ ಕೇಳಿಬಂದಿವೆ. ಹೀಗಾಗಿ ನನಗೆ ಬಂದ ಮಾಹಿತಿ ತಿಳಿಸಿದ್ದೇನೆ’ ಎಂದರು.

‘ಸಂತೋಷ್ ಅವರ ಪತ್ನಿ ಇದಕ್ಕೂ ಕುಟುಂಬಕ್ಕೂ ಸಂಬಂಧ ಇಲ್ಲ. ರಾಜಕೀಯ ಒತ್ತಡದಿಂದ ಈ ಪ್ರಯತ್ನ ಮಾಡಿರಬೇಕು ಎಂದು ಹೇಳಿದ್ದಾರೆ. ಅಂತಹ ಒತ್ತಡ ಅವರ ಮೇಲೆ ಏನಿತ್ತು? ಅವರನ್ನು ಯಾರಾದರೂ ಬೆದರಿಸುತ್ತಿದ್ದರೆ? ಅವರ ಹೆಸರಿಗೆ ಕಳಂಕ ತರುವಂತಹದ್ದು ಏನಾದರೂ ಇದೆಯೇ? ಅವರ ಮೇಲೆ ಇರುವ ರಾಜಕೀಯ ಒತ್ತಡ ಏನು ಎಂಬುದು ಜನರಿಗೆ ಗೊತ್ತಾಗಬೇಕು’ ಎಂದರು.

‘ನಾನು ಜವಾಬ್ದಾರಿಯುತ ಪ್ರತಿಪಕ್ಷದ ಅಧ್ಯಕ್ಷನಾಗಿ, ಎರಡು ಮೂರು ತಿಂಗಳ ಹಿಂದೆ ನನಗೆ ಸ್ನೇಹಿತರ ಮೂಲಕ ಬಂದ ಮಾಹಿತಿ ಯನ್ನು ಬಹಿರಂಗಪಡಿಸಿದ್ದೇನೆ. ಇಷ್ಟು ದಿನ ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಸುಮ್ಮನಿದ್ದೆ. ಆದರೆ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಮುಂದಾದಾಗ ಈ ಬಗ್ಗೆ ಮಾತನಾಡಬೇಕಾಗುತ್ತದೆ. ಸಂತೋಷ್ ಅವರಿಗೆ, ಸಾಲದ ಒತ್ತಡ ವಿಲ್ಲ. ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿ, ಸ್ಥಾನಮಾನ ಸಿಕ್ಕಿದೆ. ಅವರಿಗೆ ರಾಜಕೀಯ ಒತ್ತಡ ಬಿಟ್ಟರೆ ಬೇರೆ ಯಾವುದೇ ಕಾರಣ ಗಳು ಇಲ್ಲವಾಗಿದೆ. ಅವರಿಗೆ ಸಾಕ್ಷಾಧಾರ ಬೇಕು ಎಂದರೆ ಉನ್ನತ ಮಟ್ಟದ ತನಿಖೆ ನಡೆಸಲಿ.

ನಾನು ಆ ಸಚಿವ ಯಾರು? ಆ ವಿಧಾನ ಪರಿಷತ್ ಸದಸ್ಯ ಯಾರು ಎಂದು ಹೇಳಿಲ್ಲ. ಆದರೂ ಅವರು ಯಾಕೆ ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆದರೆ, ಈ ವಿಡಿಯೋ ಇದೆಯೋ, ಇಲ್ಲವೋ, ಅವರನ್ನು ಬೆದರಿಸಲಾಗಿತ್ತೋ, ಇಲ್ಲವೋ ಎಂಬುದೆಲ್ಲ ಹೊರಗೆ ಬರುತ್ತದೆ. ಗೃಹ ಸಚಿವರು ಈ ಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ’ ಎಂದರು.

ಎಲ್ಲೆಲ್ಲಿ ರಕ್ತಪಾತವಾಗಿದೆ ತನಿಖೆ ನಡೆಸಲಿ: ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ರಕ್ತಪಾತವಾಗಿದೆ ಎಂಬ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲಿ ರಕ್ತಪಾತವಾಗಿದೆ? ನಮ್ಮ ಸರ್ಕಾರದ ಅವಧಿಯಲ್ಲಿ ರಕ್ತಪಾತವಾಗಿದ್ದರೆ, ಅದರ ಬಗ್ಗೆ ತನಿಖೆ ಮಾಡಲಿ’ ಎಂದು ಉತ್ತರಿಸಿದರು.

ಬೇರೆ ಪಕ್ಷದಲ್ಲಿ ಬಣಗಳಿರಬಹುದು, ನಮ್ಮದು ಕೇವಲ ಕಾಂಗ್ರೆಸ್ ಬಣ: ‘ನಮ್ಮ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಇರು ವುದು ಒಂದೇ ಬಣ, ಅದು ಕಾಂಗ್ರೆಸ್ ಬಣ ಮಾತ್ರ. ನಮ್ಮ ಪಕ್ಷಗಳಲ್ಲಿ ಬಣಗಳಿವೆ ಎಂದು ಹೇಳುತ್ತಿರುವವರ ಪಕ್ಷದಲ್ಲಿ ಬಣಗಳಿರಬಹುದು’ ಎಂದರು.

ಬಿಜೆಪಿ ಆಂತರಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ: ‘ಸಂಪುಟ ವಿಸ್ತರಣೆ ಆಗಲಿ ಅಥವಾ ಅವರ ಆಂತರಿಕ ವಿಚಾರಕ್ಕೆ ನಮಗೂ ಸಂಬಂಧವಿಲ್ಲ. ಅವರು ಏನಾದರೊ ಮಾಡಿಕೊಳ್ಳಲಿ. ಅದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಶಾಸಕರ ಅಸಮಾಧಾನದ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇವೆ. ಅದು ಅವರಿಗೆ ಬಿಟ್ಟದ್ದು, ಅವರ ಅಸ್ತಿತ್ವ ಹಾಗೂ ಅವರ ಭವಿಷ್ಯದ ವಿಚಾರ’ ಎಂದರು.

‘ಗೋ ಹತ್ಯೆ ನಿಷೇಧ ಮಸೂದೆ ಮೊದಲಿನಿಂದಲೂ ಚರ್ಚೆಯಲ್ಲಿದೆ. ಲವ್ ಜಿಹಾದ್ ಕುರಿತ ವಿಚಾರದಲ್ಲಿ ರಾಷ್ಜ್ತ್ರೀಯ ನಾಯ ಕರು ತೀರ್ಮಾನ ಮಾಡುತ್ತಾರೆ. ಇದು ಭಾರತ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಚ್ಛೆಗೆ ತಕ್ಕಂತೆ ಧರ್ಮ, ಪ್ರೀತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ, ಹಕ್ಕು ಇದೆ. ಅವರ ಆಯ್ಕೆಯಲ್ಲಿ ನಾವು ಹಸ್ತಕ್ಷೇಪ ಮಾಡಲು ಇಚ್ಚಿಸುವುದಿಲ್ಲ’ ಎಂದರು.

ಹೆಚ್ ಡಿಕೆ ಏನುಬೇಕಾದರೂ ಹೇಳಲಿ: ‘ಕುಮಾರಸ್ವಾಮಿ ಅವರು ಏನು ಬೇಕಾದರೂ ಹೇಳಲಿ. ಅವರು ಹಿರಿಯರಿದ್ದಾರೆ. ಇನ್ನು ಬೇರೆ ಏನೇ ಹೇಳಿದರೂ ಸಂತೋಷ. ಇಷ್ಟು ತಡವಾಗಿ ಏಕೆ ಹೇಳಿದ್ದಾರೆ ಗೊತ್ತಿಲ್ಲ’ ಎಂದರು.