Wednesday, 11th December 2024

ರೈಲಿನಲ್ಲಿ ವ್ಯಕ್ತಿಗೆ ರಾಡ್ ಕುತ್ತಿಗೆಗೆ ಚುಚ್ಚಿ ಸಾವು

ಲಖನೌ: ವ್ಯಕ್ತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಗರಾಜ್ ವಿಭಾಗದ ಸೋಮ್ನಾ ಮತ್ತು ದನ್ಬಾರ್ ರೈಲು ನಿಲ್ದಾಣಗಳ ನಡುವೆ ಕಬ್ಬಿಣದ ರಾಡ್ ಕಿಟಕಿಯ ಗಾಜು ಒಡೆದು ತೂರಿ ಬಂದಿದ್ದು, ರಾಡ್ ಕುತ್ತಿಗೆಗೆ ಚುಚ್ಚಿ ಮೃತಪಟ್ಟಿದ್ದಾನೆ.
ಶುಕ್ರವಾರ ಬೆಳಗ್ಗೆಘಟನೆ ನಡೆದಿದ್ದು, ರೈಲಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಸುಲ್ತಾನ್ಪುರ ಜಿಲ್ಲೆಯ ಗೋಪಿನಾಥಪುರದ ಹರಿಕೇಶ್ ಕುಮಾರ್ ದುಬೆ ಅವರು ರಾಡು ಚುಚ್ಚಿ ಮೃತಪಟ್ಟಿದ್ದಾರೆ. ದುಬೆ ಅವರ ಮೃತದೇಹವನ್ನು ಅಲಿಗಢ ರೈಲು ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಅಲಿಗಢ ರೈಲು ನಿಲ್ದಾಣಕ್ಕೆ ಧಾವಿಸಿದರು. ಮೂಲಗಳ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ರೈಲ್ವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಕಿಟಕಿಯಿಂದ ತೂರಿ ಬಂದ ಕಬ್ಬಿಣದ ರಾಡ್ ಪ್ರಯಾಣಿಕನ ಸಾವಿಗೆ ಕಾರಣವಾಗಿದೆ.
ಈ ಮಧ್ಯೆ, ನಿರ್ಮಾಣ ಹಂತದ ರೈಲ್ವೆ ಕಾಮಗಾರಿಯಿಂದ ಈ ಅವಘಢ ನಡೆದಿದೆ ಎಂಬ ಆರೋಪವನ್ನ ರೈಲ್ವೆ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.