Friday, 13th December 2024

ಜೀವ ವೈವಿಧ್ಯದ ಮೂಲ ಡಿಎನ್‌ಎ; ಕಸಿವಿಸಿಯಿಲ್ಲದ ಕಸಿ

ಅವಲೋಕನ

ಪ್ರೊ.ಎಂ.ಆರ್‌.ನಾಗರಾಜು/ಡಾ.ಗಣೇಶ್ ಎಸ್.ಹೆಗಡೆ

ಇತ್ತೀಚೆಗೆ ಪ್ರಕಟಿಸಲಾದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ವಂಶವಾಹಿ ಜೀನೋಮ್‌ಅನ್ನು ಸಂಪಾದಿಸುವ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದ ಇಬ್ಬರ ಮಹಿಳಾ ವಿಜ್ಞಾನಿಗಳ ತಂಡಕ್ಕೆ ನೀಡಲಾಗಿದೆ.

ಇದೇನಿದು ಸಂಪಾದಕರಿಗೆ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯ್ತೆ? ಹೌದು, ಆದರಿದು ಯಾವುದೋ ಪತ್ರಿಕೆಯ ಸಂಪಾದ
ರಿಗೆ ಕೊಟ್ಟಿದ್ದಲ್ಲ, ಬದಲಿಗೆ ‘ವಂಶವಾಹಿ ಸಂಪಾದಕರಿಗೆ’. ಈ ‘ವಂಶವಾಹಿ ಸಂಪಾದನೆ’ ಅಥವಾ ‘ವಂಶವಾಹಿ – ಕಸಿ’ ಏನೆಂಬು ದನ್ನು ಮುಂದೆ ತಿಳಿಯೋಣ.

ಮಹಿಳಾ ವಿಜ್ಞಾನಿಗಳೀರ್ವರು ಜೀವಲೋಕದ ಮೂಲ, ಜೀವಕೋಶದ ಕೇಂದ್ರಕೋಟೆಗೇ ಲಗ್ಗೆೆಯಿಟ್ಟು ಪ್ರಯೋಗ ನಡೆಸಿ ಯಶಸ್ವಿ ಯಾಗಿದ್ದಾರೆ. ಅಗಾಧ ಸಾಧ್ಯತೆಗಳ ಆಗರವಾಗಿ ಹೊಸ ಹಾದಿ ನಿರ್ಮಿಸಲಿರುವ ಪ್ರಮುಖ ಸಂಶೋಧನೆಯಾದ್ದರಿಂದ ವಿಶ್ವದ ಅತ್ಯುನ್ನತ ಪ್ರಶಸ್ತಿಗಿದು ಭಾಜನವಾಯ್ತು. ಫ್ರೆಂಚ್ ವಿಜ್ಞಾನಿ ಎಮ್ಯಾನುಲ್ಲೆ ಷಾರ್‌ಪೆಂಟೈರ್ ಹಾಗೂ ಅಮೆರಿಕಾದ ಜೆನ್ನೀಫರ್ ಡೌಡ್ನಾ ಈ ಸಾಧನೆಗೈದ ಮಹಿಳಾ ವಿಜ್ಞಾನಿಗಳು. ಐವತ್ತೆರಡು ವರ್ಷದ ಷಾರ್‌ಪೆಂಟೈರ್‌ರವರು ಜರ್ಮನಿಯ ಬರ್ಲಿನ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಯುನಿಟ್ ಫಾರ್ ದ ಸೈನ್ಸ್‌ ಆಫ್ ಪ್ಯಾಥೋಜನ್ಸ್ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಹಾಗೆಯೇ ಐವತ್ತಾರು ವರ್ಷದ ಜೆನ್ನೀಫರ್ ಡೌಡ್ನಾರವರು ಅಮೆರಿಕಾದ ಕ್ಯಾಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿಯೂ ಮತ್ತು ಹಾವರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ ಕಾರ್ಯನಿರತರಾಗಿದ್ದಾರೆ. ಇವರಿಬ್ಬರಿಗೂ ಪ್ರಶಸ್ತಿಯನ್ನು ಸಮಾನವಾಗಿ ಹಂಚಲಾಗಿದೆ.

ರಸಾಯನಶಾಸ್ತ್ರದಲ್ಲಿ ನೊಬೆಲ್ ಅನೇಕ ಬಾರಿ ಮಹಿಳೆಯರಿಗೆ ಸಂದಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಮೊದಲ ಬಾರಿಗೆ ಇಬ್ಬರೂ ಮಹಿಳೆ ಯರು ಅದನ್ನು ಗಳಿಸಿರುವುದು. ಸಾಮಾನ್ಯವಾಗಿ ವಿಜ್ಞಾನಿಗಳ ಜೀವಮಾನದ ಸಾಧನೆಗಳಿಗೆ ನೊಬೆಲ್
ಸಿಗುತ್ತಿದ್ದರೆ, ಪ್ರಸ್ತುತ, ಕೇವಲ ಎಂಟು ವರ್ಷಗಳ ಸಂಶೋಧನಾ ಕಾರ್ಯವೊಂದು ‘ದಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್’ನ ಗಮನ ಸೆಳೆದು ನೊಬೆಲ್ ಪ್ರಶಸ್ತಿ ಘೋಷಿಸುವಲ್ಲಿ ಪ್ರೇರೇಪಿಸಿದೆಯೆಂದರೆ, ಆ ಸಂಶೋಧನೆಯ ಮಹತ್ವ ಎಷ್ಟಿದೆ ಯೆಂದು ಊಹಿಸಬಹುದು!

ಈ ‘ಜೀನೋಮ್ ಎಡಿಟಿಂಗ್’ ಅಥವಾ ‘ವಂಶವಾಹಿಗಳ ಸಂಪಾದನೆ’ ಎಂಬ ಅತ್ಯಂತ ಕ್ಲಿಷ್ಟಕರವಾದ ಆಳ ಸಂಶೋಧನೆಯನ್ನು ಒಬ್ಬ ಸಾಮಾನ್ಯನಾಗರಿಕನೂ ಪೂರ್ತಿ ತಾಂತ್ರಿಕವಾಗಿ ಅರ್ಥೈಸಿಕೊಳ್ಳುವುದು ಅಸಾಧ್ಯವೇ ಆದರೂ, ತನ್ನ ಸಮಕಾಲೀನ ಬದುಕಿ ನಲ್ಲಿ ಆಗುತ್ತಿರುವ ಮಹತ್ವದ ವೈಜ್ಞಾನಿಕ ಬೆಳವಣಿಗೆಗಳ ಕುರಿತು ಕನಿಷ್ಠ ಪರಿಜ್ಞಾನವನ್ನಾದರೂ ಹೊಂದುವ ಆಸ್ಥೆ ಅನೇಕ ರಿಗಿದೆ. ಹಿಂದೆ, ವಿಜ್ಞಾನವು ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳಲ್ಲಿ ಇಂಗ್ಲೇಂಡಿನ ಅನೇಕ ಕಡೆ ಸಾರ್ವಜನಿಕರಿಗಾಗಿ ವಿಜ್ಞಾನಿ ಗಳ ಬೃಹತ್ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು, ಜನರು ಮುಂಚಿತವಾಗಿಯೇ ಟಿಕೇಟ್ ಖರೀದಿಸಿ ಇಂಥ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು!

ನೇರವಾಗಿ ವಿಜ್ಞಾನಿಯೇ ತನ್ನ ಸಂಶೋಧನೆಯ ಕುರಿತು ಸಾಮಾನ್ಯರೂ ತಿಳಿದುಕೊಳ್ಳುವಂತೆ ಅತಾಂತ್ರಿಕವಾಗಿ ವಿವರಿಸುತ್ತಾ ವಿಜ್ಞಾನದ ಸಾಮಾಜೀಕರಣಕ್ಕೆ ದಾರಿಯಾಗುತ್ತಿದ್ದರು! ಹಂಫ್ರಿಡೇಯವರ ಇಂಥ ಉಪನ್ಯಾಸದಿಂದ ಪ್ರೇರಿತನಾದ, ಸರಿಯಾಗಿ ಶಾಲಾ ಶಿಕ್ಷಣವನ್ನೂ ಪೂರೈಸಿರದಿದ್ದ, ತೀವ್ರ ಕುತೂಹಲಿಯಾಗಿದ್ದ ಒಬ್ಬ ಸಾಮಾನ್ಯ ಯುವಕನೊಬ್ಬಮುಂದೆ ಅವರನ್ನೂ ಮೀರಿಸಿದ ಶ್ರೇಷ್ಠ ವಿಜ್ಞಾನಿಯಾಗಿ ರೂಪುಗೊಂಡಿದ್ದು ಇತಿಹಾಸವಾಗಿದೆ!

ಅವರೇ ಮೈಕೆಲ್ ಫ್ಯಾರಡೆ. ಪ್ರಸ್ತುತ, ವಿಜ್ಞಾನಿಗಳ ಉಪನ್ಯಾಸಗಳು ಬಹುತೇಕ ತಾಂತ್ರಿಕವರ್ಗಕ್ಕಷ್ಟೇ ಸೀಮಿತವಾಗುತ್ತಿರುವು ದರಿಂದ, ಲಘು – ಲೇಖನಗಳ ಮುಖಾಂತರವಷ್ಟೇ ಅವುಗಳನ್ನು ಸಮಾಜಕ್ಕೆ ತಲುಪಿಸಬೇಕಾಗಿದೆ. ಆದ್ದರಿಂದ ಈ ವರ್ಷದ ರಸಾಯನಶಾಸ್ತ್ರದ ನೊಬೆಲ್ ಸಂಶೋಧನೆಯ ಪರಿಕಲ್ಪನೆಯನ್ನು ಅಗತ್ಯವಾದ ಕನಿಷ್ಠ ತಾಂತ್ರಿಕ ಅಂಶಗಳಷ್ಟರ ಸಹಾಯ ದಿಂದ ಸಾಮಾಜಿಕ ಪಾರಿಭಾಷೆಯಲ್ಲಿಯೇ ತಿಳಿಯಲು ಪ್ರಯತ್ನಿಸೋಣ: ಕೃಷಿ ಕ್ಷೇತ್ರದ ದೃಷ್ಟಿಯಿಂದ ಗಮನಿಸುವುದಾದರೆ,
ರೈತರಿಗೆ ಬಿತ್ತನೆಗೆ ಬೀಜ ಆಯ್ಕೆ ಮಾಡುವಾಗ ವಿವಿಧ ಹೊಸತಳಿಗಳ ಬಗೆಗೆ ವಿಜ್ಞಾನದ್ದೇ ಇರುತ್ತದೆ. ಇನ್ನು ಮುಂದಿನ ತಲೆಮಾರಿನ ಸಸ್ಯಗಳ ಸ್ವರೂಪ ಬದಲಿಸಲು ಕಣ್ಣಿಗೆ ಕಾಣುವ ಗಾತ್ರದ ಬೀಜದ ಲಕ್ಷಣ ಬದಲಾಯಿಸುವುದನ್ನು ಹೈಬ್ರಿಡ್ ಅಥವಾ ಸಂಕರ ಮಾಡುವುದೆನ್ನುತ್ತಾರೆ.

ಆದರೆ ಗಿಡ ಬೆಳೆಯುವ ಪರಿ, ಬೀಜ ಉತ್ಪಾದನಾ ರೀತಿ – ಇವನ್ನು ಸಸ್ಯದ ಕೆಲವೆ ಕಾಂಡಕೋಶಗಳು ನಿರ್ಧರಿಸುತ್ತವೆ. ಆ  ಕಾಂಡ ಕೋಶಗಳ ವರ್ತನೆಯನ್ನು ಅವುಗಳಲ್ಲಿರುವ ಅಗೋಚರ ಅಣು ನಿರ್ಧರಿಸುವುದು, ಅದುವೇ ಡಿಎನ್‌ಎ ಅಣು. ಈ ಅಣು ಬದಲಾ ದರೆ ಕಾಂಡಕೋಶಗಳ ವರ್ತನೆ ಹಾಗೂ ಸಸ್ಯದ ಸ್ವರೂಪ ಎರಡನ್ನೂ ಬದಲಾಯಿಸಬಹುದು, ಇದನ್ನೇ ‘ಕ್ಲೋನಿಂಗ್’ ಅಥವಾ ‘ತದ್ರೂಪೀಕರಣ’ ಎನ್ನುವುದು, ಜಿನೆಟಿಕ್ ಎಂಜಿನಿಯರಿಂಗ್‌ನಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ.

ಹೀಗೆ ಮಾಡುವಾಗ ಕಾಂಡಕೋಶ ಪ್ರತ್ಯೇಕಿಸಿ ಅದರೊಳಗಿರುವ ಡಿಎನ್‌ಎ ಹೊರತೆಗೆಯಬೇಕು. ಅದರ ರಚನೆಗೂ ಸಸ್ಯ ಸ್ವರೂಪಕ್ಕೂ ಇರುವ ಸಂಬಂಧ ಸ್ಥಾಪಿಸಬೇಕು. ಇದನ್ನು ಈಗಾಗಲೆ ಕೈಗೊಂಡು ಈ ಸಂಶೋಧನೆಗೆ ನೊಬೆಲ್ ಪುರಸ್ಕಾರವನ್ನು ಎಚ್.ಜಿ.ಕೆ. ಖೊರಾನ ಪಡೆದಿದ್ದಾರೆ ಎಂಬುದು ಭಾರತೀಯರಾದ  ನಮಗೆ ಹೆಮ್ಮೆಯ ಸಂಗತಿ. ಈಗ ಅದೇ ಮುಂದುವರಿದ
ಅಧ್ಯಯನ ಇನ್ನೂ ಆಳಕ್ಕಿಳಿದು ಅಣುಮಟ್ಟದಲ್ಲಿ ಬದಲಾವಣೆಮಾಡುವುದಾದ್ದರಿಂದ ಈ ಬಾರಿಯ ರಸಾಯನಶಾಸ್ತ್ರದ ನೊಬೆಲ್‌ಗೆ ಕಾರಣವಾಗಿದೆ. ಈ ವಿಷಯಗಳು ಮೂಲತಃ ಸಸ್ಯ ಹಾಗೂ ಪ್ರಾಣಿಗಳ ತಳಿ ಕುರಿತ ಜೀವಶಾಸ್ತ್ರದ ಉಪವಿಭಾಗ ತಳಿಶಾಸ್ತ್ರಕ್ಕೆ ಸೇರಿದವು. ಆದರೆ ಈ ಗುರಿ ಮುಟ್ಟುವಲ್ಲಿ ಜೀವರಸಾಯನಶಾಸ್ತ್ರ ವಿಧಾನಗಳು ಅಗತ್ಯ. ಆದ್ದರಿಂದಲೆ ರಸಾಯನ ಜ್ಞಾನದ ನೊಬೆಲ್ ಪ್ರಶಸ್ತಿ.

ಷಾರ್‌ಪೆಂಟೈರ್ ಹಾಗೂ ಡೌಡ್ನಾ ಅವರಿಬ್ಬರು, ವಂಶವಾಹಿ ಕ್ರೋಮೋಸೋಮ್‌ಗಳಲ್ಲಿರುವ ಜೀನೋಮ್‌ಗಳಲ್ಲಿನ  ‘ಡಿಎನ್‌ಎ’ ಯ ಯಾವುದೇ ಪೂರ್ವ ನಿರ್ಧರಿತ ಭಾಗವನ್ನು ಕತ್ತರಿಸಿ ತೆಗೆದು ಆ ಭಾಗದಲ್ಲಿ ಬೇರೊಂದು ಭಾಗವನ್ನು ಜೋಡಿುವ ಅತ್ಯಂತ ನಿಖರವಾದ ಮಾರ್ಗವನ್ನು ಸಂಶೋಧಿಸಿ ಆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ! ನುರಿತ ಸಂಪಾದಕರ ಕೆಲಸವೂ ಇದೇ ತಾನೆ? ಲೇಖನ / ಪತ್ರಿಕೆಯಲ್ಲಿನ ಅನಗತ್ಯ ಅಂಶಗಳನ್ನು ತೆಗೆದು ಸೂಕ್ತವಾದದ್ದನ್ನು ಸೇರಿಸಿ ಸರಿಪಡಿಸುವ ಕೆಲಸ. ಆದ್ದರಿಂದ ಈ ಸಂಶೋಧನೆಯಿಂದ ಜೀನ್ಸ್ ಗಳನ್ನು ಬೇಕಾದಲ್ಲಿ ಕತ್ತರಿಸಿ ತೆಗೆಯಬಲ್ಲ ‘ಕತ್ತರಿ’ ಹಾಗೂ ಅಲ್ಲಿಗೆ ಸರಿಹೊಂದುವ ಇನ್ನೊಂದು ಅಪೇಕ್ಷಿತ ಭಾಗವನ್ನು ಜೋಡಿಸುವ ‘ಗೋಂದನ್ನು’ ಸಂಶೋಧಿಸಿದ್ದಾರೆನ್ನಬಹುದು!

ಇದನ್ನೇ ಇನ್ನೊಂದು ರೀತಿಯಲ್ಲಿ ಪರಿಭಾವಿಸುವುದಾದರೆ ಕಂಪ್ಯೂಟರ್‌ಗಳಲ್ಲಿರುವ ಯಾವುದೇ ವರ್ಡ್ ‌ಪ್ರೊಸೆಸರ್ ತಂತ್ರಾಂಶ ಗಳಲ್ಲಿನ (ಉದಾಹರಣೆ ಎಮ್.ಎಸ್.ವರ್ಡ್) ಫೈಂಡ್ ಅಂಡ್ ರಿಪ್ಲೇಸ್ ಟ್ಯಾಬ್‌ನ ಆಯ್ಕೆಯಿದ್ದಂತೆ, ಅಂದರೆ ಬರಹದಲ್ಲಿನ ಯಾವುದೇ ಒಂದು ಶಬ್ದವನ್ನು ಹುಡುಕಿ, ಆ ಜಾಗದಲ್ಲಿ ಬೇರೊಂದು ಪದವನ್ನು ಅನಾಯಾಸವಾಗಿ ಸ್ಥಾಪಿಸುವ ಕೆಲಸ. ಆದರಿದು ವಂಶವಾಹಿ ಜೀನ್ಸ್ ‌‌ಗಳೊಂದಿಗಿನ ಕತ್ತರಿ – ಗೋಂದಿನ ಆಟ! ಇದನ್ನು ‘ಶಸ್ತ್ರಚಿಕಿತ್ಸೆೆ’ಯಂತಾಗಿಯೂ  ಪರಿಭಾವಿಸಬಹುದು.

ಶಸ್ತ್ರಚಿಕಿತ್ಸೆ ಎಂದರೆ ಕತ್ತರಿಸುವುದು – ಕೂಡಿಸುವುದು ತಾನೆ? ಶಸ್ತ್ರಚಿಕಿತ್ಸೆಯನ್ನು ಮಾನವ, ಪ್ರಾಣಿ ಹಾಗೂ ಸಸ್ಯಗಳಿಗೂ ಮಾಡು ವುದು ಎಲ್ಲರಿಗೂ ತಿಳಿದಿದೆ, ಇದನ್ನು ಅಗೋಚರ ಜೀವಕೋಶಗಳಿಗೂ ಮಾಡುವುದಾಗಿತ್ತು, ಈಗ ಮತ್ತೂ ಮುಂದುವರಿದು ಕೋಶ ಕೇಂದ್ರದಲ್ಲಿನ ಡಿಎನ್‌ಎ ಅಣುವಿಗೇ ಶಸ್ತ್ರಚಿಕಿತ್ಸೆ ಮಾಡಿರುವುದೇ ಈ ಮಹತ್ಸಾಧನೆಯಾಗಿದೆ!

ಆದರೆ ಅಣುವನ್ನು ಕತ್ತರಿಸುವ ಹಾಗೂ ಕೂಡಿಸುವ ಸಾಧನಕೂಡ ಅಣುಗಳೆ ಆಗಿರುವುದು ವಿಶೇಷ. ಕತ್ತರಿಸುವುದು – ಕೂಡಿಸು ವುದು ಕೂಡ ಒಂದು ರಾಸಾಯನಿಕ ಕ್ರಿಯೆಯ ಮೂಲಕವೆ ಆಗುತ್ತವೆ! ಈಗ ನೀವು ಕಲ್ಪನಾಲೋಕಕ್ಕೆ ಜಾರಬಹುದು! ಹೌದು. ಈ ಸಂಶೋಧನೆಯು ಅಪಾರ ಸಾಧ್ಯತೆಯ  ಆಗರ, ಇದು ಜೀವಸಂಕುಲದ ವಂಶವಾಹಿಯನ್ನೇ ಮಾರ್ಪಡಿಸುವುದಾಗಿದೆ.

ಇಂಥ ಕೆಲಸಗಳು ಮೊದಲು ಆಗಿರಲೇ ಇಲ್ಲವೆಂದಲ್ಲ, ‘ಜೆನೆಟಿಕ್ ಎಂಜಿನೀಯರಿಂಗ್’ ಭಾಗದಲ್ಲಿ ನಡೆಸುವ ಕೆಲಸಗಳು, ಸಂಶೋ ಧನೆಗಳು ಹೆಚ್ಚಿನದ್ದಾಗಿ ಈ ರೀತಿಯದ್ದೇ ಆಗಿವೆ. ಈ ರೀತಿಯಲ್ಲಿ ಜೀನ್ ಮ್ಯೂಟೇಷನ್ (ಮಾರ್ಪಡಿಸುವ) ತಂತ್ರಗಳು ಈಗಾಗಲೇ ಇವೆ, ಆದರೆ ಅವುಗಳು ನಿಖರತೆಯನ್ನು ಹೊಂದಿರಲಿಲ್ಲ. ಷಾರ್ ಪೆಂಟೈರ್ ಹಾಗೂ ಡೌಡ್ನಾರ ಈ ತಂತ್ರಜ್ಞಾನವು ಅತ್ಯಂತ ನಿಖರತೆಯನ್ನು ಹೊಂದಿರುವುದೇ ಅದಕ್ಕೆ ಇಷ್ಟೊಂದು ವಿಶೇಷತೆಯನ್ನು ತಂದುಕೊಟ್ಟಿದೆ.

ಈ ತಂತ್ರಜ್ಞಾನದ ಕುರಿತು ಕೊಂಚ ವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ: ಜೀವಶಾಸ್ತ್ರದ ಪ್ರಕಾರ ಮಾನವ ಅಥವಾ ಎಲ್ಲಾ ಮೇಲ್ಮಟ್ಟದ ಜೀವಿಗಳನ್ನು(ಪ್ರಾಣಿ ಮತ್ತು ಸಸ್ಯ) ‘ಪರಸ್ಪರ ಸಾಂಗತ್ಯದಿಂದ ಕಾರ್ಯನಿರ್ವಹಿಸುವ ಅಸಂಖ್ಯಾತ ಜೀವ ಕೋಶಗಳ ಸಮೂಹ’ವೆನ್ನಬಹುದು. ಸಂಗೀತ – ಕಚೇರಿಯ ತಾಳ – ಮೇಳದಂತೆ ಜೀವಕೋಶಗಳೆಲ್ಲವೂ ಪರಸ್ಪರ ಪರಿಪೂರಕ ವಾಗಿ ಕಾರ್ಯನಿರ್ವಹಿಸಿದಾಗಲೇ ಬದುಕು ಸುಗಮ, (ಜೀವಕೋಶಗಳ ಈ ಆಂತರಿಕ ಸಂಗೀತ – ಕಚೇರಿಯ ಲಯ ತಪ್ಪಿದಲ್ಲಿ, ಬಾಹ್ಯ ಬದುಕಿನ ಸಂಗೀತವೂ ಹದಗೆಡುವುದು ನಿಶ್ಚಿತ!

ಹಾಗೇ ಬಾಹ್ಯ ಸಂಗತಿಗಳೂ ಆಂತರಿಕ ಸಾಮರಸ್ಯದೊಂದಿಗೆ ಇದೇ ತೆರನಾದ ನೇರಸಂಬಂಧವನ್ನು ಹೊಂದಿದೆ). ಈ ಜೀವ ಲೋಕದ ಎಲ್ಲಾ ಮೂಲಭೂತ ಮಾಹಿತಿಗಳು, ನಿಯಂತ್ರಣಗಳು, ಅಗತ್ಯ ಸಂವಹನ ಇವೆಲ್ಲವೂ ನಿರ್ದೇಶಿಸಲ್ಪಡುವುದು ಕೋಶಕೇಂದ್ರದಲ್ಲಿ. ಲೋಕದ ಚೇಷ್ಟೆಗೆ ರವಿಯೇ ಕಾರಣವೆಂಬಂತೆ, ಜೀವಿಯ ಚೇಷ್ಟೆಗೆ (ರವಿಯ ಜೊತೆಗೆ) ಜೀವಕೋಶದ ಕೇಂದ್ರವೇ ಕಾರಣ(ನಿರ್ದೇಶಕ) ಎನ್ನಬಹುದು! ಕೋಶಕೇಂದ್ರದಲ್ಲಿರುವ ಡಿಎನ್‌ಎ(ಪಾಲಿಮರ್ ಅಣು)ಗಳಿಂದಾದ ಜೀನ್ಸ್‌‌ಗಳು  ಮತ್ತು ಇವುಗಳಿಂದಾದ ಕ್ರೋಮೋಸೋಮ್ ಗಳು, ಜೀವಲೋಕದ ವೈವಿಧ್ಯತೆಗೆ ಹಾಗೂ ಅವುಗಳ ತಳಿಗಳಲ್ಲಿ ಕಾಣಬಹುದಾದ ಸಾಮ್ಯತೆ ಹೀಗೆ ಅನೇಕ ಸಂಗತಿಗಳಿಗೆ ಮೂಲಕಾರಣ.

ಮಾನವ ಕೇಂದ್ರಿತವಾಗಿ ಹೇಳುವುದಾದರೆ, ಅವನ ಅಂಗಾಂಗಗಳ ಆಕಾರ, ರಚನೆ, ಬಣ್ಣ ಇವುಗಳು ನಿರ್ಧರಿತವಾಗುವುದು ಆತನ
ಕೋಶಕೇಂದ್ರಗಳಲ್ಲಿರುವ ಫೀನೋಟೈಪ್-ಜೀನ್ಸ್‌‌‌‌ಗಳಲ್ಲಿನ ಸಂಕೇತಾಕ್ಷರಗಳಿಂದ(ಕೋಡ್). ಹೇಗೆ ಕಂಪ್ಯೂಟರ್ ತನ್ನ ಸಂವಹನೆಗೆ ಬೈನರಿ – ಅಂಕೆಗಳ (ಸೊನ್ನೆ ಮತ್ತು ಒಂದರ ಅಂಕಿಗಳ ವಿವಿಧ ಸಂಯೋಜನೆ) ಭಾಷೆಯನ್ನು ಬಳಸುತ್ತದೆಯೊ ಹಾಗೆ ಜೀವ ಲೋಕವು ತನ್ನ ಸಂವಹನೆಗೆ ಡಿಎನ್‌ಎ ಪಾಲೀಮರ್‌ನಲ್ಲಿರುವ ಅಡಿನೋಸಿನ್, ಗುವಾನಿನ್, ಸೈಟೋಸಿನ್ ಹಾಗೂ ಥೈಯಾ ಮಿನ್ (ಕ್ರಮವಾಗಿ ಎ, ಜಿ, ಸಿ, ಮತ್ತು ಟಿ) ಪ್ರತ್ಯಾಮ್ಲೀಯ – ಅಣುಗಳನ್ನು ತನ್ನ ಭಾಷೆಯ ಮೂಲಾಕ್ಷರಗಳನ್ನಾಗಿ ಬಳಕೆಮಾಡಿ, ಅವುಗಳ ಅಸಂಖ್ಯಾತ ನಿಖರ ಸಂಯೋಜನೆಗಳಿಂದಾದ ಜೀನ್‌ಸ್‌‌ಗಳ ಮುಖಾಂತರ ಸಂವಹನವನ್ನು ಸಾಕಾರಗೊಳಿಸುತ್ತವೆ.

ಪ್ರತೀ ಜೀವಕೋಶದಲ್ಲೂ ಡಿಎನ್‌ಎಯ ಈ ಎ, ಜಿ, ಸಿ, ಟಿ ಮೂಲಾಕ್ಷರಗಳ ಸುಮಾರು 300 ಕೋಟಿ ಅಕ್ಷರಮಾಲೆಯು ದ್ವಿ-ಪ್ರತಿ ಯಲ್ಲಿ ಸುರುಳಿಯಾಗಿ ಹೊಸೆದುಕೊಂಡಿವೆ! ಯಾರನ್ನೇ ಆಗಲಿ ಅರ್ಥೈಸಿಕೊಳ್ಳಬೇಕಾದರೆ ಮೊದಲು ಅವರ ಭಾಷೆಯನ್ನು ತಿಳಿಯಬೇಕಲ್ಲವೇ? ಸಂವಹನದ ಭಾಷೆ ತಿಳಿಯದ ಹೊರತು ಎಲ್ಲವೂ ನಿಗೂಢವಾಗಿ ಗೋಚರಿಸುತ್ತದೆ. ಆದ್ದರಿಂದ ಜೀವ ಜ್ಞಾನದ ಪ್ರಾರಂಭದ ಪ್ರಮುಖ ಸಂಶೋಧನೆಗಳೆಂದರೆ, ಜೀವಭಾಷೆಯನ್ನು ತಿಳಿಯುವ ನಿಟ್ಟಿನಲ್ಲಾಗಿರುವಂಥವು.

ಪ್ರತೀ ಜೀವಿಕುಲದ ಬಾಹ್ಯ ವ್ಯಕ್ತರೂಪಗಳಿಗೆ ಡಿಎನ್‌ಎ ನ ನಿರ್ದಿಷ್ಟವಾದ ಭಾಗ, ಅಂದರೆ ಜೀನ್ಸ್’‌‌ಗಳು ಕಾರಣ. ಆಯಾ ಜಾತಿಯ ಜೀವಿಯ ಕ್ರೋಮೋಸೋಮುಗಳಲ್ಲಿರುವ ವಿವಿಧ ಜೀನ್‌ಸ್‌‌ಗಳ ಸ್ಥಾನವನ್ನು ಮತ್ತವುಗಳ ನಡುವಿರುವ ಅಂತರವನ್ನು ಗುರುತಿಸಿ
ದಾಖಲಿಸುವ ಪ್ರಕ್ರಿಯೆಗೆ ‘ಜೀನ್ – ಮ್ಯಾಪಿಂಗ್’ಎಂದು ಕರೆಯುತ್ತಾರೆ. ಉದಾಹರಣೆಗೆ, ಒಂದು ಜೀವಿಯ ಗಾತ್ರ ಹಾಗೂ ಬಣ್ಣಕ್ಕೆ ಕಾರಣವಾದ ಜೀನ್ಸ್ಗಳನ್ನು ಪತ್ತೆ ಮಾಡಿ, ಕ್ರೋಮೋಸೋಮ್ ಅಥವಾ ಜೀನೋಮ್‌ನಲ್ಲಿ ಅವುಗಳ ಸ್ಥಾನವನ್ನು ಪತ್ತೆ ಹಚ್ಚುವ
ಕ್ರಮ.

ಅಂದರೆ ಕ್ರೋಮೋಸೋಮಿನಲ್ಲಿ ಜೀನ್ಸ್‌‌ಗಳ ನಕ್ಷೆಯನ್ನು ಸಿದ್ಧಪಡಿಸುವುದು. ಆಯಾ ಜಾತಿಯ ಜೀವಿಗಳಲ್ಲಿ ಈ ನಕ್ಷೆಯು ಬಹುತೇಕ ಒಂದೇತರನಾಗಿರುತ್ತದೆ. ವಂಶವಾಹಿ ನಕ್ಷೆ ಸಿದ್ಧವಾದಮೇಲೆ, ಆಯಾ ಜೀನ್ಸ್‌‌ಗಳನ್ನು ಇನ್ನಷ್ಟು ಆಳವಾಗಿ ಅರ್ಥೈಸಿ ಕೊಳ್ಳುವುದೇ ‘ಡಿಎನ್‌ಎ – ಸೀಕ್ವೆಂನ್ಸಿಂಗ್’ ಕಾರ್ಯ.

(ಮುಂದುವರಿಯುವುದು…)