Saturday, 14th December 2024

ಬಡವರ ಪಾಲಿನ ಬೆಳಕು ಡಾ.ಅಪರ್ಣಾ

ವಿಶೇಷ ವರದಿ: ರಂಗನಾಥ ಕೆ.ಮರಡಿ

ತುಮಕೂರು: ಸೇವೆಯನ್ನು ಕಾಯಕ ಎಂದು ತಿಳಿದಿರುವ ಡಾ.ಅಪರ್ಣಾ ಪ್ರಸನ್ನ ಅವರು ಬಡವರ ಪಾಲಿನ ಬೆಳಕಾಗಿದ್ದಾರೆ.

ಹಲವಾರು ಕ್ಷೇತ್ರಗಳಲ್ಲಿ ಸುಮಾರು 20 ವರ್ಷಗಳಿಂದಲೂ ನಿಸ್ವಾರ್ಥ ಸೇವೆ ಮಾಡುತ್ತಿರುವ ವೈದ್ಯೆೆ ಅಪರ್ಣಾ ಅವರು ಮಾದರಿಯಾಗಿದ್ದಾರೆ. ತಾಲೂಕಿನ ಕುರಿಕೆಂಪಮ್ಮನಹಳ್ಳಿಯಲ್ಲಿ ಅಮೃತಂ ಆರ್ಯುವೇದ ಹೀಲಿಂಗ್ ಸೆಂಟರ್ ತೆರೆದು ಸುತ್ತಮುತ್ತಲಿನ ಬಡಜನರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

ಪ್ರಚಾರದಿಂದ ದೂರ ಉಳಿದು ಸೇವೆಯನ್ನೇ ಪ್ರಚಾರವಾಗಿಸಿ ಕೊಂಡಿರುವ ಅಪರ್ಣಾರಿಗೆ ಪತಿ ಡಾ.ಪ್ರಸನ್ನ ಅವರು ಸಾಥ್
ನೀಡುತ್ತಿದ್ದಾರೆ. ದಂಪತಿಗಳಿಗೆ ಸಮಾಜಸೇವೆ ಕಾಯಕವಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಗೆ ತಮ್ಮ ಸೆಂಟರ್‌ನಲ್ಲಿ ಉಚಿತ ಚಿಕಿತ್ಸೆ ನೀಡುತ್ತಾರೆ. ತುರ್ತುಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡುವುದರೊಂದಿಗೆ ಅದಕ್ಕೆ ಬೇಕಾದ ಸಹಾಯವನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಬಡಮಕ್ಕಳಿಗೆ ಸಹಾಯ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಹಲವು ವರ್ಷದಿಂದ ಸಹಾಯ ಮಾಡುತ್ತಿದ್ದಾರೆ. ಹಲವು ಮಕ್ಕಳಿಗೆ ನೋಟ್‌ಬುಕ್, ಶಾಲಾ ಶುಲ್ಕ ಸೇರಿದಂತೆ ಇನ್ನಿತರ ಸಹಾಯ ಮಾಡುತ್ತಿದ್ದಾರೆ. ಅಂಧ ಮಕ್ಕಳಿಗೆ ಚಿಕಿತ್ಸೆೆ ನೆರವು ನೀಡಿ ಹೃದಯವಂತಿಕೆ ತೋರಿದ್ದಾರೆ.

ಪರಿಸರ ಕಾಳಜಿ: ಕಳೆದ 20 ವರ್ಷಗಳಿಂದಲೂ ಪರಿಸರದ ಬಗ್ಗೆಕಾಳಜಿ ಹೊಂದಿರುವ ವೈದ್ಯೆ ಅಪರ್ಣಾ ಅವರು ಸಾರ್ವಜನಿಕ ರಲ್ಲಿ ಪರಿಸರ ಸ್ವಚ್ಛತೆ ಬಗ್ಗೆೆ ಅರಿವು ಮೂಡಿಸುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಕಾರ್ಯಾಗಾರ ಮಾಡುವ ಮೂಲಕ ಪರಿಸರದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.

ಸಂಪ್ರದಾಯದ ಉಳಿವು: ಭಾರತೀಯ ಸಂಪ್ರದಾಯ ಶ್ರೇಷ್ಠತೆಯನ್ನು ಹೊಂದಿದೆ. ವೈದ್ಯೆೆ, ವಿದೇಶಿಗರಿಗೆ ಭಾರತೀಯ ಸಂಪ್ರದಾಯವನ್ನು ಪರಿಚ ಯಿಸಿ, ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ರಕ್ತದಾನ ಶಿಬಿರ, ಆರೋಗ್ಯ ಮೇಳ, ಮದುವೆ ಇನ್ನಿತರ ಶುಭಕಾರ್ಯ ಗಳಿಗೆ ಧನಸಹಾಯ, ಚಿಕಿತ್ಸೆಗೆ ಸಹಾಯ ಹೀಗೆ ಹತ್ತಾರು ಸೇವೆಗಳನ್ನು ಸದ್ದಿಲ್ಲದೆ ಮಾಡುತ್ತಿರುವ ಡಾ.ಅಪರ್ಣಾ ಮಾದರಿಯಾಗಿದ್ದಾರೆ.