Wednesday, 11th December 2024

ಡ್ರೋಣ್ ದಾಳಿ ಪ್ರಕರಣ: ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಆರಂಭ

ಜಮ್ಮು: ಭಾರತೀಯ ವಾಯುಪಡೆ ಕೇಂದ್ರದ ಮೇಲಿನ ಡ್ರೋಣ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಯ (ಎನ್ ಎಸ್ ಜಿ) ವಿಶೇಷ ಬಾಂಬ್ ತಪಾಸಣಾ ತಂಡ ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ಭಾನುವಾರ ವಾಯುಪಡೆ ಕೇಂದ್ರದಲ್ಲಿ ಸ್ಫೋಟಕ್ಕೆ ಬಳಸಲಾದ ಡ್ರೋಣ್ ಗಳನ್ನು ಗಡಿ ಭಾಗ ದಲ್ಲಿಯೇ ನಿಯಂತ್ರಿಸಲಾಗುತ್ತಿತ್ತು. ಈಗಾಗಲೇ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ವಿಶೇಷ ಬಾಂಬ್ ತಪಾಸಣಾ ತಂಡ ವಾಯುಪಡೆ ಕೇಂದ್ರಕ್ಕೆ ಭೇಟಿ ನೀಡಿದ್ದು, ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದೆ. ಗಡಿಯುದ್ದಕ್ಕೂ ಡ್ರೋಣ್’ಗಳನ್ನು ನಿಯಂತ್ರಿಸಲಾಗಿದೆ. ಘಟನೆಯಲ್ಲಿ ಸ್ಥಳೀಯರ ಕೈ ವಾಡ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ.

ಭಾನುವಾರ ನಡೆದ ಡ್ರೋಣ್ ದಾಳಿ ಬಳಿಕ ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಪದೇ ಪದೇ ಡ್ರೋಣ್ ಗಳು ಪತ್ತೆಯಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಲೇ ಇವೆ. ಸ್ಫೋಟಕಗಳನ್ನು ಕಟ್ಟಲಾಗಿದ್ದ ಎರಡು ಡ್ರೋಣ್ ಮೂಲಕ ಜಮ್ಮುವಿನ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ದಾಳಿ ನಡೆಸಲಾಗಿತ್ತು.

ಈ ಘಟನೆ ಬಳಿಕ ಸೋಮವಾರ ಕಾಲೂಚಕ್ ಮಿಲಿಟರಿ ಸ್ಟೇಷನ್ ಬಳಿ ಡ್ರೋಣ್ ಪತ್ತೆಯಾಗಿತ್ತು, ಕೂಡಲೇ ಅಲರ್ಟ್ ಆಗಿದ್ದ ಸೇನಾಪಡೆ 20-25 ಸುತ್ತಿನ ಗುಂಡಿನ ದಾಳಿ ನಡೆಸಿ, ಉಗ್ರರ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು. ಮತ್ತೆ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಬಳಿ ಡ್ರೋಣ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಡ್ರೋಣ್ ಗಳನ್ನು ಬಳಸಿ ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರ ದಾಳಿ ನಡೆಸಿದ್ದರು. ಜಮ್ಮು ವಾಯುನೆಲೆ ಮೇಲೆ ನಡೆದ ಡ್ರೋನ್ ದಾಳಿಯ ತನಿಖೆಯನ್ನು ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ.