Wednesday, 11th December 2024

ಸ್ಕ್ಯಾನಿಂಗ್ ಮೇಲೊಂದು ಕ್ಷಕಿರಣ

ವೈದ್ಯ ವೈವಿಧ್ಯ

ಡಾ.ಎಚ್.ಎಸ್‌.ಮೋಹನ್

ನೀವು ವಾಹನ ಅಪಘಾತದಲ್ಲಿ ಕೈ ಮುರಿದುಕೊಂಡಿದ್ದೀರಿ, ನಿಮಗೆ ಹೊಟ್ಟೆ ನೋವು – ವೈದ್ಯರ ಸಾಮಾನ್ಯ ಪರೀಕ್ಷೆಗಳಲ್ಲಿ ಕಾಯಿಲೆ ಪತ್ತೆ ಆಗುತ್ತಿಲ್ಲ, ಬಸ್ ಮತ್ತು ಲಾರಿ ಡಿಕ್ಕಿ ಆಗಿ ತಲೆಗೆ ತೀವ್ರವಾದ ಪೆಟ್ಟಾಗಿದೆ – ಈ ಮೇಲಿನ ಎಲ್ಲಾ ಸಂದರ್ಭಗಳಲ್ಲಿ ವೈದ್ಯರಿಗೆ ಕಾಯಿಲೆ ಪತ್ತೆ ಹಚ್ಚಲು ಮತ್ತು ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಎಕ್ಸ್‌ ರೇ ಮತ್ತು ಅದಕ್ಕೆ ಸಂಬಂಧಿಸಿದ
ಸ್ಕ್ಯಾನ್‌ಗಳ ಅಗತ್ಯವಿದೆ.

1895ರ ನವೆಂಬರ್ 8ರಂದು ಜರ್ಮನ್ ಫಿಸಿಕ್ಸ್ ತಜ್ಞ ವಿಲ್ ಹೆಲ್ಮ್ ರೋಂಟಜೆನ್ ಅವರು ಆಕಸ್ಮಿಕವಾಗಿ ಎಕ್ಸ್‌ ರೇ ಕಂಡು ಹಿಡಿ ದರು. ಅದರ ಮೊದಲೂ ಸಹಿತ ಈ ಎಕ್ಸ್‌ ರೇ ಬಗ್ಗೆ ಚಾರಿತ್ರಿಕ ಅಂಶಗಳಿವೆ. ಪ್ರಾಯೋಗಿಕ ಟ್ಯೂಬ್‌ಗಳಿಂದ ಬರುವ ಸರಿಯಾಗಿ
ಗೊತ್ತಿಲ್ಲದ ರೇಡಿಯೇಷನ್ ಎಂದು ವಿಜ್ಞಾನಿಗಳು ಎಕ್ಸ್‌ ರೇ ಬಗ್ಗೆೆ ಗೊತ್ತಿಲ್ಲದ ಕಾಲದಲ್ಲಿ ಭಾವಿಸಿದ್ದರು. ಕ್ಯಾಥೋಡ್ ಕಿರಣಗಳ ಬಗ್ಗೆ ಪ್ರಯೋಗ ಮಾಡುವ ವಿಜ್ಞಾನಿಗಳಿಗೆ ಈ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಗೊತ್ತಾಗ ತೊಡಗಿತು.

1785ರಲ್ಲಿ ವಿಲಿಯಂ ಮೋರ್ಗನ್ ಎಂಬಾತ ಲಂಡನ್‌ನ ರಾಯಲ್ ಸೊಸೈಟಿಗೆ ಈ ಬಗ್ಗೆ ವೈಜ್ಞಾನಿಕ ಪೇಪರ್ ಪ್ರಕಟಿಸಿದ. ಇದರಲ್ಲಿ ವಿದ್ಯುಚ್ಛಕ್ತಿಯನ್ನು ಗಾಜಿನ ಟ್ಯೂಬ್ ಮೂಲಕ ಹಾಯಿಸಿದಾಗ ಉಂಟಾಗುವ ಪರಿಣಾಮವನ್ನು ವಿವರಿಸುವಾಗ
ಎಕ್ಸ್‌ ರೇ ಯಿಂದ ಉಂಟಾಗುವ ಕಾಂತಿಯನ್ನು ವಿವರಿಸಿದ್ದಾನೆ. ಈತನ ಈ ಪ್ರಯೋಗ ಹಂಫ್ರಿ ಡೇವಿ ಮತ್ತು ಮೈಕೆಲ್ ಫ್ಯಾರಡೆ ಅವರಿಂದ ವಿಸ್ತೃತಗೊಂಡಿತು. ನಂತರ ಹಲವು ವಿಜ್ಞಾನಿಗಳು ಎಕ್ಸ್‌ ರೇ ಬಗ್ಗೆೆ ತಮ್ಮ ಪ್ರಯೋಗಗಳಲ್ಲಿ ತಮಗಾದ ಅನುಭವಗಳ ಬಗ್ಗೆ ವಿವರಿಸಿದ್ದಾರೆ.

ಆದರೆ 1895ರ ನವೆಂಬರ್ 8ರಂದು ಜರ್ಮನಿಯ ಫಿಸಿಕ್ಸ್‌ ಪ್ರೊಫೆಸರ್ ವಿಲ್ ಹೆಲ್ಮ್ ರೋಂಟ್ ಜೆನ್ ಅವರು ಲೆನಾರ್ಡ್ ಟ್ಯೂಬ್ ಮತ್ತು ಕ್ರೂಕ್ ಟ್ಯೂಬ್‌ಗಳ ಜೊತೆ ಪ್ರಯೋಗ ಮಾಡುವಾಗ ಅಲ್ಲಿವರೆಗೆ ಸ್ಪಷ್ಟವಾಗಿ ಯಾರೂ ವಿವರಿಸದ ಕಿರಣಗಳ ಬಗ್ಗೆ ತಿಳಿಸುತ್ತಾ ಎಕ್ಸ್‌ ರೇ ಎಂದು ಕರೆದರು. ಆ ನಂತರದ ಹಲವು ವಿಜ್ಞಾನಿಗಳು ರೋಂಟಜೆನ್ ಕಿರಣಗಳು ಎಂದು ಕರೆದರೂ ಅದು ಈಗಲೂ ಎಕ್ಸ್‌ ರೇ ಎಂದೇ ಉಳಿದುಕೊಂಡಿದೆ. ಆತ 1895ರ ಡಿಸೆಂಬರ್‌ನಲ್ಲಿ ಫಿಸಿಕಲ್ – ಮೆಡಿಕಲ್ ಸೊಸೈಟಿಯ ಜರ್ನಲ್‌ನಲ್ಲಿ ಈ ಬಗೆಗಿನ ಸಂಶೋಧನೆಯ ವೈಜ್ಞಾನಿಕ ಪೇಪರ್ ಪ್ರಕಟಿಸಿದ.

ಇದನ್ನು ವೈದ್ಯಕೀಯದಲ್ಲಿ ಉಪಯೋಗಿಸಬಹುದೆಂದು ಆತ ಮೊಟ್ಟ ಮೊದಲು ತನ್ನ ಪತ್ನಿಯ ಎಕ್ಸ್‌ ರೇಯನ್ನು ತೆಗೆದ.
ಆನಂತರ ಹಲವಾರು ವಿಜ್ಞಾನಿಗಳು ಈ ಬಗೆಗೆ ವೈಜ್ಞಾನಿಕ ಪೇಪರ್‌ಗಳನ್ನು ಪ್ರಕಟಿಸಿದರು. 1896ರಲ್ಲಿ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ಸೈನ್ಸ್‌ ಈ ವಿಷಯದ ಮೇಲೆ 23 ಪೇಪರ್‌ಗಳನ್ನು ಪ್ರಕಟಿಸಿತು. ಎಕ್ಸ್‌ ರೇ ಎಂದರೆ ಬೆಳಕಿನ ರೀತಿಯಲ್ಲಿಯೇ ಸ್ಪಂದಿಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿಯ ತರಂಗಗಳು. ಆದರೆ ಸುಮಾರು ಇದು ಬೆಳಕಿಗಿಂತ 1000 ಅಲೆಯುದ್ದದ ಕಡಿಮೆ ಅಲೆಯುದ್ದ (Wave length) ಹೊಂದಿದೆ. ಆತನ ಈ ಸಂಶೋಧನೆಗೆ 1901ರ ನೋಬೆಲ್ ಪ್ರಶಸ್ತಿ ಲಭಿಸಿತು.

ರೋಂಟಜೆನ್‌ಗೆ ಈ ಎಕ್ಸ್‌ ರೇ ವೈದ್ಯಕೀಯದಲ್ಲಿ ಬಹಳ ಉಪಯೋಗವಾಗುತ್ತದೆ ಎಂದು ತಕ್ಷಣ ಗೊತ್ತಾಯಿತು. ಆತ ಯುರೋಪಿನ ಹಲವಾರು ವೈದ್ಯರಿಗೆ ಈ ಬಗೆಗೆ ಪತ್ರ ಬರೆದ. ವೈದ್ಯಕೀಯವಾಗಿ ನಿಜವಾಗಿ ಇದನ್ನು ಮೊಟ್ಟಮೊದಲು ಉಪಯೋಗಿಸಿದ್ದು – ಬರ್ಮಿಂಗ್ಹ್ಯಾಮ್‌ನ ಜಾನ್ ಹಾಲ್ ಎಡ್ವರ್ಡ್ ಎಂಬಾತ. 1896ರ ಜನವರಿಯಲ್ಲಿ ತನ್ನ ಮಿತ್ರನ ಕೈಯಲ್ಲಿ ಸಿಲುಕಿದ ಮೊಳೆ ಯನ್ನು ಎಕ್ಸ್‌ ರೇ ಉಪಯೋಗಿಸಿ ಕಂಡುಹಿಡಿದ. ಆನಂತರ ದೇಹವನ್ನು ಹೊಕ್ಕ ಬುಲೆಟ್‌ಗಳನ್ನು ಶೋಧಿಸಲು, ಮೂಳೆ ಮುರಿತ ಗಳಲ್ಲಿ, ಕಿಡ್ನಿಯ ಕಲ್ಲುಗಳನ್ನು ಕಂಡುಹಿಡಿಯಲು, ಮಕ್ಕಳು ಅಕಸ್ಮಾತ್ ನುಂಗಿದ ಆಟದ ಸಾಮಾನು ಅಥವಾ ಪದಾರ್ಥಗಳನ್ನು
ಸರಿಯಾಗಿ ಹುಡುಕಲು – ಹೀಗೆ ಹಲವು ರೀತಿಯಲ್ಲಿ ಇದರ ಉಪಯೋಗವಾಗತೊಡಗಿತು.

ಹೀಗೆ ಬೇಕಾಬಿಟ್ಟಿ ಎಕ್ಸ್‌ ರೇ ಉಪಯೋಗವಾಗ ತೊಡಗಿದಾಗ ಅದರ ಕೆಟ್ಟ ಪರಿಣಾಮಗಳು ನಿಧಾನವಾಗಿ ಗೊತ್ತಾಗತೊಡಗಿದವು. ಥಾಮಸ್ ಎಡಿಸನ್, ನಿಕೊಲಸ್ ಟೆಸ್ಲಾ ಮತ್ತು ವಿಲಿಯಂ ಮಾರ್ಟನ್ ಈ ವಿಜ್ಞಾನಿಗಳು ಹಲವಾರು ತೊಂದರೆಗಳನ್ನು ಬೆಳಕಿಗೆ
ತಂದರು. ಆದರೂ ಅದರ ಉಪಯೋಗ 1930- 1940 ದಶಕದಲ್ಲೂ ಮುಂದುವರಿಯಿತು. ಆಗ ಚಪ್ಪಲಿ ಅಂಗಡಿಯವರು ತಮ್ಮ ಗಿರಾಕಿಗಳಿಗೆ ತಮ್ಮ ಕಾಲಿನ ಮೂಳೆಗಳನ್ನು ನೋಡಬಹುದೆಂಬ ಆಮಿಷ ತೋರಿಸಿ ಉಚಿತವಾಗಿ ಎಕ್ಸ್ ರೇ ಮಾಡಿ ತೋರಿಸ ತೊಡಗಿದರು.

ಮುಖ್ಯ ಉಪಯೋಗಗಳು: ಯಾವುದೇ ನೋವಿಲ್ಲದೆ ದೇಹದ ಹಲವಾರು ಕಾಯಿಲೆಗಳನ್ನು ಪತ್ತೆ ಹಚ್ಚಲು ಉಪಯೋಗಿಸ
ಬಹುದು. ಮುಖ್ಯವಾಗಿ ಮೂಳೆ ಮುರಿತ, ಎದೆಯ ಭಾಗದ ಕ್ಷಯರೋಗ, ಹೊಟ್ಟೆಯ ಭಾಗದಲ್ಲಿನ ಹಲವು ರೋಗಗಳು, ಕಿಡ್ನಿಯ ಕಲ್ಲು ಇವುಗಳನ್ನು ಪತ್ತೆ ಹಚ್ಚಲು. ಹಾಗೆಯೇ ಹಲವು ಶಸ್ತ್ರಚಿಕಿತ್ಸೆಗಳನ್ನು ಆಯೋಜಿಸಲು ಮತ್ತು ಶಸ್ತ್ರಚಿಕಿತ್ಸೆ ಮಾಡಲು
ಸಹಾಯ ಮಾಡುತ್ತದೆ. ಇದರಿಂದ ಆಗುವ ದುಷ್ಪರಿಣಾಮಗಳೂ ಇವೆ. ಅವುಗಳಲ್ಲಿ ಮುಖ್ಯವಾಗಿ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ, ಕಣ್ಣಿನ ಪೊರೆ, ಚರ್ಮ ಸುಟ್ಟು ಹೋಗುವುದು, ಕೂದಲು ಉದುರುವುದು ಹೀಗೆ ಇತ್ಯಾದಿ.

ಸಿಟಿ ಸ್ಕ್ಯಾನ್‌ನ ಇತಿಹಾಸ: ಎಕ್ಸ್‌ ರೇ ತಾಂತ್ರಿಕತೆಯ ಮುಂದುವರಿದ ಭಾಗವೇ ಈ ಸಿಟಿ ಸ್ಕ್ಯಾನ್ ಅಥವಾ ಕಂಪ್ಯೂಟರೈಸ್ಡ್‌
ಟೋಮೋಗ್ರಫಿ ಸ್ಕ್ಯಾನ್. ಇದು ಮೂಲಭೂತವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾದರೂ ಇದರ ಮೂಲ ಆರಂಭವಾದದ್ದು ರಾಕ್ ಎಂಡ್ ರೋಲ್ ಸಂಗೀತದ ಕ್ಷೇತ್ರದಿಂದ. 1960ರ ದಶಕದಲ್ಲಿ ಬೀಟಲ್ಸ್ ಸಂಗೀತ ಯುರೋಪ್‌ನಲ್ಲಿ ಜನಪ್ರಿಯವಾದಾಗ ಇಂಗ್ಲೆಂಡಿನ ಆಭಿರೋಡ್ ಸ್ಟುಡಿಯೊದವರ ಎಲೆಕ್ಟ್ರಿಕಲ್ ಎಂಡ್ ಮ್ಯೂಸಿಕ್ ಇಂಡಸ್ಟ್ರೀಸ್(ಇಎಂಐ)
ಬಹಳವಾಗಿ ತನ್ನ ಸಂಗೀತದ ಆಲ್ಬಮ್‌ನ ಮಾರಾಟದಿಂದ ಬಂದ ಲಾಭವನ್ನು ಇಎಂಐ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್‌ನ ಸಂಶೋಧನೆಗೆ ತೊಡಗಿಸಿತು.

ಮೊಟ್ಟಮೊದಲ ಸಿಟಿ ಸ್ಕ್ಯಾನ್‌ನನ್ನು ಹೊರಗೆ ತಂದವ ಎಂದರೆ ಬ್ರಿಟಿಷ್ ಎಂಜಿನಿಯರ್ ಗಾಡ್ ಫ್ರೆಹೌನ್ಸ್‌ ಫೀಲ್ಡ್. ಈತ 1972ರಲ್ಲಿ ಫಿಸಿಸಿಸ್ಟ್‌ ಡಾ.ಅಲನ್ ಕೊರ್ಮಾಕ್ ಜೊತೆ ಸೇರಿ ಮೊಟ್ಟಮೊದಲ ಸಿಟಿ ಸ್ಕ್ಯಾನ್ ತಾಂತ್ರಿಕತೆ ಕಂಡು ಹಿಡಿದು ಆ ಯಂತ್ರವನ್ನು ಹೊರತಂದ. ಈ ಇಬ್ಬರು ಸಂಶೋಧಕರಿಗೆ 1979ರ ವೈದ್ಯಕೀಯ ನೊಬೆಲ್ ಲಭ್ಯವಾಯಿತು. ಆದರೆ ಇದರ ಮೂಲ ಎಂದರೆ
ಇದರಲ್ಲಿ ಅಡಗಿರುವ ಮೂಲದ ಥಿಯರಿಯನ್ನು ಕಂಡು ಹಿಡಿದವ ಎಂದರೆ ಜೊಹಾನ್ ರಾಡೆನ್ ಎಂಬಾತ. 1917ರಲ್ಲಿ ಈತ ರಾಡೆನ್ ಟ್ರಾನ್ಸ್‌ ಫಾರ್ಮ್ ಎಂಬ ತಾಂತ್ರಿಕತೆಯನ್ನು ಶೋಧಿಸಿದ.

ಆನಂತರ ಅದನ್ನು 1937ರಲ್ಲಿ ಆಲ್ಜಿಬ್ರಾಯಿಕ್ ರೀಕನ್‌ಸ್ಟ್ರಕ್ಚನ್‌ಗೆ ಬದಲಿಸಿದಾತ ಪೋಲೆಂಡ್‌ನ ಗಣಿತಜ್ಞ ಸ್ಟೆಫಾನ್ ಕಾಜ್ ಮಾರ್ಜ್. ಈ ಎರಡು ಥಿಯರಿಗಳನ್ನು ಮೂಲವಾಗಿಟ್ಟು ಕೊಂಡು ಹೌನ್‌ಸ್‌ ಫೀಲ್ಡ್ ವೈದ್ಯಕೀಯ ಇತಿಹಾಸದ ಬೃಹತ್ ಸಂಶೋಧನೆ ಮಾಡಿ ಸಿಟಿ ಸ್ಕ್ಯಾನ್ ರೂಪಿಸಿದ. ತುಂಬಾ ತಮಾಷೆಯ ವಿಷಯ ಎಂದರೆ ಹೌನ್ಸ್‌ ಫೀಲ್ಡ್ ಕಾಲೇಜಿಗೆ ಹೋಗಿ ಯಾವುದೇ ಡಿಗ್ರಿ ತೆಗೆದುಕೊಳ್ಳಲಿಲ್ಲ. ಅವನು ತನ್ನ 16ನೆಯ ವಯಸ್ಸಿನಲ್ಲಿಯೇ ಸ್ಕೂಲ್ ಬಿಟ್ಟವ. ಆತನ ಎಲ್ಲಾ ಡಿಗ್ರಿಗಳು ಆತನಿಗೆ ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಆತನ ಸಂಶೋಧನೆಯ ಫಲವಾಗಿ ಗೌರವವಾಗಿ ಕೊಡಲ್ಪಟ್ಟವು. ಆತನಿಗೆ ಆತನ 60 ವರ್ಷದವರೆಗೂ ಒಂದು ಶಾಶ್ವತವಾದ ಮನೆಯೇ ಇರಲಿಲ್ಲ.

ಏಕೆಂದರೆ ಆತ ವಿವಾಹವನ್ನೇ ಮಾಡಿಕೊಳ್ಳಲಿಲ್ಲ. ಈತ ತನ್ನ 84ನೆಯ ವಯಸ್ಸಿನಲ್ಲಿ 2004ರಲ್ಲಿ ಮರಣ ಹೊಂದಿದ. ಸಿಟಿ ಸ್ಕ್ಯಾನ್ ರೂಪಿಸಲು ಏನು ಪ್ರೇರಣೆ? ಒಮ್ಮೆ ಆತ ರಜೆಯಲ್ಲಿರುವಾಗ ಆತನಿಗೆ ಈ ಬಗೆಗೆ ಹೊಳೆಯಿತು. ಒಂದು ಪೆಟ್ಟಿಗೆಯನ್ನು ಮೂರು ಮೇಲ್ಮೆಯುಳ್ಳ ಆಕೃತಿಯಾಗಿ ಬದಲಿಸುವ ಯೋಚನೆ ಬಂದಿತು. ಅದನ್ನು ಬಹಳಷ್ಟು ಸ್ಲೆಸ್‌ಗಳಾಗಿ ಮಾರ್ಪಡಿಸಿ ಆ ನಂತರ ತನ್ನ ಉದ್ದೇಶ ಈಡೇರಿಸಲು ಪ್ರಯತ್ನಿಸಿದ. ಅದರ ಬಗ್ಗೆ ಮತ್ತಷ್ಟು ಸಂಶೋಧನೆಗೆ ಒಳಪಡಿಸಿದಾಗ ಮಾನವ ದೇಹ ದೊಳಗಿನ ಆಕೃತಿಗಳನ್ನೂ ಈ ರೀತಿ ಸ್ಲೆಸ್ ಮಾಡಿ ನೋಡಲು ಸಾಧ್ಯವೇ ಎಂಬ ಯೋಚನೆ ಬಂದು ಅದರ ಪ್ರತಿಫಲವೇ 1971 ರಲ್ಲಿ ಅಟ್ಲಿನ್ ಸನ್ ಮೋರ್ಲಿ ಆಸ್ಪತ್ರೆಯಲ್ಲಿ ಮೊದಲ ತಲೆಯ ಸ್ಕ್ಯಾನ್ ಸ್ಥಾಪಿಸಲ್ಪಟ್ಟಿತು.

ಆ ಸಂದರ್ಭದಲ್ಲಿ ಆತನಿಗೆ ಒಬ್ಬ ವೈದ್ಯರ ಸಹಕಾರ ಅವಶ್ಯಕವೆನಿಸಿತು. ಆಗ ಆ ಆಸ್ಪತ್ರೆಯ ರೇಡಿಯಾಲಜಿ ತಜ್ಞ ವೈದ್ಯ ಜೇಮ್ಸ್ ಅಂಬ್ರೋಸ್ ಅವರು ಬ್ರಿಟಿಷ್ ಎಂಜಿನಿಯರ್ ಜೊತೆಗೂಡಿ ಅವರ ಕನಸನ್ನು ನನಸಾಗಿಸಿದರು. ಈ ಮೆದುಳಿನ ಸ್ಕ್ಯಾನರ್‌ನಲ್ಲಿ
ಮೊಟ್ಟಮೊದಲ ಸ್ಕ್ಯಾನ್ ನಡೆಸಿದ್ದು ಒಬ್ಬ ಮಹಿಳೆಯ ಮೇಲೆ. ಆಕೆಗೆ ಮೆದುಳಿನ ಗೆಡ್ಡೆ (Tumor) ಇದೆ ಎಂದು ಈ ಸ್ಕ್ಯಾನ್ ‌ನಿಂದ ದೃಢಪಟ್ಟಿತು. ಈ ಉಪಯೋಗವನ್ನು ಮೊಟ್ಟಮೊದಲು ದೊರಕಿಸಿಕೊಂಡವರೇ ಮೇಲೆ ಉಲ್ಲೇಖಿಸಿದ ಡಾ.ಜೇಮ್ಸ್
ಅಂಬ್ರೋಸ್.

ಅದು ಆರಂಭದ ದಿನಗಳಾದ್ದರಿಂದ ಸ್ಕ್ಯಾನ್ ಪೂರ್ಣಗೊಳಿಸಲು ಕೆಲವು ದಿನಗಳು ಬೇಕಾಯಿತು. ಆನಂತರ ದೊರಕಿದ ಮಾಹಿತಿ ಯಿಂದ ಅಂತಿಮ ವರದಿ ತಯಾರಿಸಲು ಮತ್ತೆ ಕೆಲವು ದಿನಗಳು ಬೇಕಾಯಿತು. ಸಿಟಿ ಸ್ಕ್ಯಾನ್‌ನ ಸಫಲತೆ 1972ರ ಹೊತ್ತಿಗೆ ಜನ ಜನಿತವಾಯಿತು. 1973ರ ಹೊತ್ತಿಗೆ ಅಮೆರಿಕದಲ್ಲಿ ಸಿಟಿ ಸ್ಕ್ಯಾನ್ ಸ್ಥಾಪಿಸಲಾಯಿತು. ಅದರ ಜನಪ್ರಿಯತೆ ಯಾವ ಮಟ್ಟ ಮುಟ್ಟಿ ತೆಂದರೆ 1980ರ ಹೊತ್ತಿಗೆ 3 ಮಿಲಿಯನ್ ಸಿಟಿ ಸ್ಕ್ಯಾನ್ ಪರೀಕ್ಷೆ ಮಾಡಲಾಯಿತು.

ಇದರ ಧನಾತ್ಮಕ ಅಂಶಗಳು: ಇದು ನೋವುರಹಿತ ದೇಹಕ್ಕೆ ಏನೂ ಚುಚ್ಚದೆ ದೇಹದೊಳಗೆ ಏನೂ ತೂರಿಸದೆ ದೇಹದೊಳಗಿನ
ವಿವರಗಳನ್ನು ಹೊರಗಿನಿಂದಲೇ ನೋಡುವ ಉಪಕರಣ. ಹಾಗೆಯೇ ಇದರಿಂದ ಹೊರ ಬರುವ ರೋಗ ನಿರ್ಧಾರ ನೂರಕ್ಕೆ ನೂರು ಸ್ಪಷ್ಟತೆ ಹೊಂದಿರುತ್ತದೆ. ಇದು ದೇಹದೊಳಗಿನ ಮೂಳೆ, ಮಾಂಸಖಂಡಗಳಂಥ ಮೃದು ಅಂಗಾಂಶಗಳು ಹಾಗೂ ರಕ್ತ ನಾಳಗಳು – ಈ ಎಲ್ಲಾ ಅಂಗಾಂಗಗಳನ್ನು ವಿವರವಾಗಿ ದಾಖಲಿಸಿ ನಮಗೆ ಹೊರಗಿನಿಂದಲೇ ತೋರಿಸಬಲ್ಲದು. ಇಷ್ಟು ಸ್ಪಷ್ಟತೆ ಮತ್ತು ವಿವರವಾದ ನೋಟ ಎಕ್ಸ್‌ ರೇ ಪರೀಕ್ಷೆಯಿಂದ ಸಾಧ್ಯವಿಲ್ಲ.

ಋಣಾತ್ಮಕ ಅಂಶಗಳು: ಮೆದುಳಿನ ಸ್ಕ್ಯಾನ್ ಮಾಡುವಾಗ ಹತ್ತಿರದ ಮೂಳೆಗಳಿಗೆ ವಿಕಿರಣದ ತೊಂದರೆ ಉಂಟಾಗಬಹುದು. ಒಂದು ಎದೆಯ ಭಾಗದ ಸಿಟಿ ಸ್ಕ್ಯಾನ್ ಎಂದರೆ 350 ಎದೆಯ ಎಕ್ಸ್‌ ರೇ ತೆಗೆದಷ್ಟು ವಿಕಿರಣತೆ, ಹೊಟ್ಟೆಯ ಭಾಗದ ಸ್ಕ್ಯಾನ್‌ನಲ್ಲಿ 400ರಷ್ಟು ವಿಕಿರಣತೆ, ಪಲ್ಮನರಿ ಆಂಜಿಯೋಗ್ರಫಿ ಎಂಬ ವಿಶೇಷ ಸ್ಕ್ಯಾನ್‌ನಲ್ಲಿ 750 ಎದೆಯ ಭಾಗದ ಎಕ್ಸ್ ರೇಯಷ್ಟು ವಿಕಿರಣ ತೆಗೆ ದೇಹ ಒಡ್ಡಿಕೊಳ್ಳುವುದರಿಂದ ಇದು ಬಹಳ ದೊಡ್ಡ ಋಣಾತ್ಮಕ ಅಂಶ.

ಎಂಆರ್‌ಐ ಸ್ಕ್ಯಾನ್‌ನ ಇತಿಹಾಸ: ಈ ಸ್ಕ್ಯಾನ್‌ನ ಮೊಟ್ಟಮೊದಲ ಮೂಲ ಅಂತೆಂದರೆ 1882ರಲ್ಲಿ ನಿಕೋಲಾ ಟೆಸ್ಲಾ ಎಂಬ ವಿಜ್ಞಾನಿ ತಿರುಗುವ ಅಯಸ್ಕಾಂತೀಯ ಕ್ಷೇತ್ರ (Rotating Magnetic field) ವನ್ನು ವಿವರಿಸಿದ. ಆಗ ಆತನಿಗೆ ತನ್ನ ಸಂಶೋಧನೆ ಯಾವ ಹಂತಕ್ಕೆ ಹೋಗಬಹುದು ಎಂಬ ಕಲ್ಪನೆ ಇರಲಿಲ್ಲ. ಆದರೆ 130 ವರ್ಷಗಳ ನಂತರ ಇದೇ ಬೆಳವಣಿಗೆ ಹೊಂದಿ ಹೊಂದಿ
ಮ್ಯಾಗ್ನೆಟಿಕ್ ರೆಸೋನೆನ್ಸ್‌ ಇಮೇಜಿಂಗ್(ಎಂಆರ್‌ಐ) ನ ತಾಂತ್ರಿಕತೆ ಹುಟ್ಟಿಕೊಂಡಿತು.

1937ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಫಿಸಿಕ್ಸ್ ಪ್ರೊಫೆಸರ್ ಇಸಿಡಾರ್ ರಾಬಿಯವರು ಅಣುವಿನ ಬೀಜದ ಚಲನೆ ಯನ್ನು ಅಳೆಯಲು ಒಂದು ಮಾದರಿಯನ್ನು ರೂಪಿಸಿದರು. ಅವರ ಈ ಪ್ರಯತ್ನಕ್ಕೆ ಅವರಿಗೆ 1944ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿತು. ಆರಂಭದಲ್ಲಿ ರಾಬಿಯವರ ಈ ವಿಧಾನ ಹಲವು ರಾಸಾಯನಿಕ ವಸ್ತುಗಳ ಆಕಾರದ ವಿವರವನ್ನು ಅಭ್ಯಸಿಸಲು ಉಪಯೋಗಿಸಲಾಗುತ್ತಿತ್ತು.

ಆದರೆ 1960ರ ದಶಕದಲ್ಲಿ ರೇಮಂಡ್ ಡಮಡಿಯನ್ ಎಂಬ ವೈದ್ಯರು ಇದನ್ನು ಜೀವವಿರುವ ಜೀವಿಗಳಲ್ಲಿ ಉಪಯೋಗಿಸಲು ಸಾಧ್ಯವೇ ಎಂದು ಯೋಚಿಸಿ ಆ ಬಗ್ಗೆ ಸಂಶೋಧನೆ ಕೈಗೊಂಡರು. 1971ರಲ್ಲಿ ಅವರು ಒಂದು ನಿರ್ಧಾರಕ್ಕೆ ಬಂದರು. ಅದೆಂದರೆ
ಆರೋಗ್ಯವಂತ ಅಂಗಾಂಶಗಳಿಗಿಂತ ಕ್ಯಾನ್ಸರ್‌ಗೆ ಒಳಗಾದ ಅಂಗಾಂಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುತ್ತದೆ. ಹಾಗಾಗಿ ಮಾನವ ದೇಹದ ಕೆಲವು ಅಂಶವನ್ನು ರೇಡಿಯೋ ತರಂಗಗಳಲ್ಲಿ ಮುಳುಗಿಸಲ್ಪಟ್ಟರೆ ಅದನ್ನು ಅಲ್ಲಿರುವ ಜಲಜನಕ
ಅಣುಗಳ ಸ್ಕ್ಯಾನ್ ಮೂಲಕ ಕಂಡುಹಿಡಿಯಬಹುದು. ನಂತರ ಉಳಿದ ಕೆಲಸ ಅಂದರೆ ಮಾನವ ದೇಹಕ್ಕೆ ಹೊಂದುವ ದೊಡ್ಡ ಸ್ಕ್ಯಾನ್ ರೂಪಿಸುವುದು ನಂತರ ಪಾಲ್ ಲಾಡೆರ್ ಬರ್ ಎಂಬ ರಸಾಯನ ಶಾಸ್ತ್ರದ ವಿಜ್ಞಾನಿ ಎನ್‌ಎಂಆರ್ ತಾಂತ್ರಿಕತೆ
ಉಪಯೋಗಿಸಿ ಪ್ರತಿಬಿಂಬಗಳನ್ನು ರೂಪಿಸಿದ.

ನಂತರ ಪೀಟರ್ ಮ್ಯಾನ್ಸ್‌ ಫೀಲ್ಡ್ ಎಂಬ ಇಂಗ್ಲೆಂಡಿನ ಭೌತಶಾಸ್ತ್ರಜ್ಞ ಶೀಘ್ರದಲ್ಲಿ ಎಂದರೆ ಕೆಲವೇ ನಿಮಿಷಗಳಲ್ಲಿ ಸ್ಕ್ಯಾನ್ ಮಾಡುವ ತಾಂತ್ರಿಕತೆ ರೂಪಿಸಿದ. ಹೀಗೆ ಹಲವಾರು ಭಿನ್ನ ವಿಭಾಗಗಳ ವಿಜ್ಞಾನಿಗಳ ಸಂಶೋಧನೆಯ ಫಲಶ್ರುತಿಯಾಗಿ ಈ
ಎಂಆರ್‌ಐ ಸ್ಕ್ಯಾನ್ ರೂಪುಗೊಂಡಿತು. ಇದರ ಪ್ರತಿಫಲವಾಗಿ ಲಾಡೆರ್ ಬರ್ ಮತ್ತು ಮ್ಯಾನ್ಸ್‌ ಫೀಲ್ಡ್ ರಿಗೆ 2003ರಲ್ಲಿ ವೈದ್ಯಕೀಯ ದ ನೊಬೆಲ್ ಪ್ರಶಸ್ತಿ ದೊರಕಿತು. ಸದ್ಯ ಜಗತ್ತಿನಾದ್ಯಂತ 25,000ಕ್ಕೂ ಅಧಿಕ ಎಂಆರ್‌ಐ ಘಟಕಗಳ ಸಹಾಯದಿಂದ ಸಾವಿರಾರು ರೋಗಿಗಳ ಜೀವ ಉಳಿಯುತ್ತಿದೆ.