Friday, 13th December 2024

ನಕಲಿ ರೇಷನ್ ಕಾರ್ಡ್ ಮಾಡುತ್ತಿದ್ದ ಆರೋಪಿಯ ಬಂಧನ

ಶಿರಸಿ ನಗರಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಶಿರಸಿ: ಕಳೆದ ಹಲವು ತಿಂಗಳುಗಳಿಂದ ನಕಲಿ ರೇಷನ್ ಕಾರ್ಡ್ ಹಾಗೂ ಮರಣ ಮತ್ತು ಜನನ ಪ್ರಮಾಣಪತ್ರ ವನ್ನು ಮಾಡುತ್ತಿದ್ದ ಆರೋಪಿಯ ಅಂಗಡಿಯ  ಮೇಲೆ ಶಿರಸಿ ನಗರಠಾಣೆ ಪೊಲೀಸರು ದಾಳಿ ನಡೆಸಿ, ಆರೋಪಿ ಯನ್ನು ಬಂಧಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಸಯ್ಯದ್ ಮುಜಾಮಿಲ್ ಮನ್ಸೂರ್, ಮುಸ್ಲಿಂಗಲ್ಲಿ ಶಿರಸಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಹಲವು ತಿಂಗಳುಗಳಿಂದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಮಾಡಿಕೊಡುವುದರ ಮೂಲಕ ಸರಕಾರಕ್ಕೆ ಹಾಗೂ ಸಾರ್ವಜನಿಕ ವಲಯಕ್ಕೆ ವಂಚನೆ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಶಿರಸಿ ನಗರಸಭೆಯ ಪೌರಾಯುಕ್ತರಾದ ಕೇಶವ ಎಂ. ಚೌಗುಲೆ ಎಂಬುವವರು ೩-೪ ದಿನಗಳ ಹಿಂದೆ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ಆರೋಪಿಯನ್ನು ಬಂಧಿಸುವ ಸಲುವಾಗಿ ಶಿರಸಿ ನಗರಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ. ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ಅವರ ನೇತೃತ್ವದಲ್ಲಿ ಪಿ.ಎಸ್.ಐ. ರಾಜಕುಮಾರ ಅವರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅಲ್ಲದೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇನ್ನಷ್ಟು ತನಿಖೆ ಮುಂದುವರೆದಿದ್ದು, ನಕಲಿ ರೇಷನ್ ಕಾರ್ಡ್ ಹಾಗು ಜನನ-ಮರಣ ಪತ್ರವನ್ನು ಎಷ್ಟು ಜನರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.