Wednesday, 11th December 2024

Ganesh Chaturthi 2024: ಫೆಸ್ಟಿವ್‌ ಸೀಸನ್‌‌ನಲ್ಲಿ ಡಿಸೈನರ್‌ವೇರ್‌‌‌ಗಳ ಮೇಲೆ ಮೂಡಿದ ಗಣೇಶನ ಚಿತ್ತಾರ!

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಚತುರ್ಥಿಯ (Ganesh Chaturthi 2024) ಅಂಗವಾಗಿ ಇದೀಗ ವಿನಾಯಕನ ನಾನಾ ಬಗೆಯ ಚಿತ್ತಾರವಿರುವಂತಹ ವೈವಿಧ್ಯಮಯ ಎಥ್ನಿಕ್‌ವೇರ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಹಬ್ಬದ ಹಿನ್ನೆಲೆಯಲ್ಲಿ, ವಿಘ್ನವಿನಾಶಕನ ನಾನಾ ಅವತಾರದ ಚಿತ್ತಾರಗಳಿರುವಂತಹ ಈ ಟ್ರೆಡಿಷನಲ್‌ವೇರ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಯಾಗಿದ್ದು, ಸಾಕಷ್ಟು ಶೇಡ್‌ಗಳಲ್ಲಿ, ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ.

“ಹಬ್ಬದ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ವೇರ್‌ಗಳು ಬಿಡುಗಡೆಗೊಳ್ಳುತ್ತವೆ. ಅವುಗಳಲ್ಲಿ ಇದೀಗ ಗಣೇಶನ ನಾನಾ ಚಿತ್ತಾರವಿರುವಂತಹ ಉಡುಪುಗಳು ಕೂಡ ಬಂದಿವೆ. ಮಕ್ಕಳು, ಹಿರಿಯರೆನ್ನದೇ ಎಲ್ಲಾ ವಯಸ್ಸಿನವರು ಧರಿಸಬಹುದಾದ ಡಿಸೈನರ್‌ವೇರ್‌ಗಳಲ್ಲಿ ಇವು ಮೂಡಿವೆ. ಈ ಔಟ್‌ಫಿಟ್‌ ಧರಿಸಿದಾಗ ಹಬ್ಬದ ಲುಕ್‌ ಜತೆಗೆ ಗಣೇಶನ ಮೇಲೆ ತಮಗಿರುವ ಪ್ರೀತಿಯು ವ್ಯಕ್ತವಾಗುತ್ತದೆ. ಹೀಗೆ ಹಬ್ಬದೊಂದಿಗೆ ಫ್ಯಾಷನ್‌ವೇರ್‌ ಕೂಡ ಬೆಸೆದುಕೊಂಡಿದೆ” ಎನ್ನುತ್ತಾರೆ ಪರಂಪರಾ ಸಂಸ್ಥಾಪಕರಾದ ಪಾಯಲ್‌ ಸೇನ್‌ ಗುಪ್ತಾ.

ಟ್ರೆಂಡ್‌ನಲ್ಲಿರುವಂತಹ ಡಿಸೈನರ್‌ವೇರ್‌ಗಳಿವು

ಗಣೇಶನ ಚಿತ್ತಾರವಿರುವಂತಹ ನಾನಾ ಬಗೆಯ ಮಕ್ಕಳ ಹಾಗೂ ಪುರುಷರ ಕುರ್ತಾ ಸೆಟ್‌ಗಳು, ಪ್ರತ್ಯೇಕವಾಗಿ ದೊರೆಯುವ ಶಾರ್ಟ್ ಕುರ್ತಾ, ಶೆರ್ವಾನಿ, ಬಂದ್ಗಾಲಗಳು ಈಗಾಗಲೇ ಮಾರಾಟವಾಗುತ್ತಿವೆ. ಇನ್ನು, ಮಹಿಳೆಯರ ಚೂಡಿದಾರ್‌-ಸಲ್ವಾರ್‌ ಸೂಟ್‌ಗಳ ಮೇಲೂ ಭಿನ್ನ-ವಿಭಿನ್ನವಾಗಿ ಮೂಡಿದ ಗಣೇಶನ ಚಿತ್ತಾರ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

ಗೌರಿ-ಗಣೇಶನ ಚಿತ್ತಾರವಿರುವ ಸೀರೆಗಳು

ಇದೀಗ ಕೇವಲ ಕುರ್ತಾಗಳ ಮೇಲೆ ಮಾತ್ರವಲ್ಲ, ಹಬ್ಬಕ್ಕೆ ಉಡುವ ಸೀರೆಗಳಲ್ಲೂ ಗೌರಿ-ಗಣೇಶನ ಚಿತ್ತಾರವನ್ನು ಕಾಣಬಹುದು. ಹೌದು. ವಿನಾಯಕನ ಹಾಗೂ ಅವರ ಅಮ್ಮನ ಚಿತ್ತಾರಗಳಿರುವ ಪ್ರಿಂಟೆಡ್‌ ಹಾಗೂ ಪೇಂಟೆಡ್‌ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯ. ಅಂದಹಾಗೆ, ಈ ಸೀಸನ್‌ನಲ್ಲಿ ಮಾತ್ರ ಇಂತಹ ಡಿಸೈನ್‌ನ ಸೀರೆಗಳು ಆಗಮಿಸುತ್ತವೆ ಎನ್ನುತ್ತಾರೆ ಪಾಯಲ್‌.

ಆನ್‌ಲೈನ್‌ನಲ್ಲಿ ಬೇಡಿಕೆ

ಅಂಗಡಿಗಳಲ್ಲಾದರೇ ಈ ಶೈಲಿಯ ಉಡುಪು ಹಾಗೂ ಎಥ್ನಿಕ್‌ವೇರ್‌ಗಳನ್ನು ಹುಡುಕುವುದು ಕಷ್ಟ. ಹಾಗಾಗಿ ಕೆಲವು ಆನ್‌ಲೈನ್‌ ಶಾಪ್‌ಗಳು ಈಗಾಗಲೇ ನಾನಾ ಬಗೆಯ ಗಣೇಶನ ಚಿತ್ತಾರವಿರುವಂತಹ ಡಿಸೈನರ್‌ವೇರ್‌ಗಳನ್ನು ಡಿಸ್ಕೌಂಟ್‌, ಆಫರ್‌ಗಳ ಆಧಾರದ ಮೇಲೆ ಮಾರಾಟ ಮಾಡುತ್ತಿವೆ ಎನ್ನುತ್ತಾರೆ ಶಾಪಿಂಗ್‌ ಎಕ್ಸ್ಪರ್ಟ್ ಜೆನ್‌.

  • ಖರೀದಿಸುವ ಮೊದಲು ಬಣ್ಣ ಕದಡುವುದೇ ಎಂಬುದನ್ನು ಪರಿಶೀಲಿಸಿ.
  • ಪಾದದ ಕೆಳಗೆ ಮೂಡಿಸಿರುವ ಚಿತ್ತಾರವಿರುವಂತಹ ಡಿಸೈನರ್‌ವೇರ್‌ ಖರೀದಿಸಬೇಡಿ. ಇದನ್ನು ಧರಿಸಿದಾಗ ಉಡುಪಿನ ಮೇಲಿರುವ ದೇವರುಗಳಿಗೆ ಅಗೌರವ ಸಲ್ಲಿಸಿದಂತಾಗುತ್ತದೆ.
  • ಫೆಸ್ಟಿವ್‌ ಲುಕ್‌ ಇರುವಂತಹ ಡಿಸೈನ್‌ ಆಯ್ಕೆ ಮಾಡಿ.(ಲೇಖಕಿ ಫ್ಯಾಷನ್‌ ಪತ್ರಕರ್ತೆ)