Friday, 13th December 2024

ಹಥ್ರಾಸ್’ನಲ್ಲಿ ನಡೆಯುತ್ತಿರುವುದು ಹತಾಶೆಯ ರಾಜಕಾರಣವಷ್ಟೇ !

ಅಭಿವ್ಯಕ್ತಿ

ಪ್ರಸಾದ್ ಕುಮಾರ್‌

ರಾಜಕೀಯ ಅಂದರೆ ಹಾಗೇನೆ. ಹೊಲಸಿರಲಿ ಮತ್ತೊಂದಿರಲಿ ತನಗೆ ಲಾಭವಿದೆಯೆಂದಾದರೆ ಅದರಲ್ಲಿ ಈಜಾಡಕ್ಕೂ ರೆಡಿ. ಆದರೆ ಆ ಹೊಲಸು ಹೊರೋದಕ್ಕೂ ಒಂದು ಮಿತಿ ಬೇಡವೇ ಎಂದರೆ ಅದಕ್ಕೆ ಮಾತ್ರ ಉತ್ತರವಿಲ್ಲ!

ಇವತ್ತಿನ ರಾಜಕೀಯದ ಚಿತ್ರಣವೇ ಅಂತಹುದು. ಎಂತಹ ನೀಚ ಕೆಲಸಕ್ಕೂ ಇಂದಿನ ರಾಜಕೀಯ ಇಳಿದು ಬಿಡುತ್ತದೆ. ರಾಷ್ಟ್ರದ
ಭಾವೈಕ್ಯತೆಗೆ ಕಂಟಕವಾಗಲಿ ಇಲ್ಲವೇ ರಾಷ್ಟ್ರದ ರಕ್ಷಣೆಗೆ ತೊಂದರೆಯಾಗಲಿ ಅದ್ಯಾವೂದೂ ಇಲ್ಲಿ ಮುಖ್ಯವೆಂದೆನ್ನಿಸುವುದಿಲ್ಲ. ಬದಲಾಗಿ ‘ಚಿತೆಯ ಬೆಂಕಿಯಲ್ಲಿ ಅನ್ನ ಬೇಯಿಸಿದರು’ ಎನ್ನುತ್ತೀವಲ್ಲ ಹಾಗೇ ಎಲ್ಲೆಂದರಲ್ಲಿ ತನ್ನ ಲಾಭದ ಲೆಕ್ಕಾಚಾರವನ್ನಷ್ಟೇ
ಮಾಡಲಾಗುತ್ತದೆ!

ಮೊನ್ನೆಯಷ್ಟೇ ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ಅತ್ಯಾಚಾರ(!?) ಪ್ರಕರಣವನ್ನು ನಮ್ಮ ದೇಶದ ಪ್ರತಿಪಕ್ಷಗಳು ತೆಗೆದು ಕೊಂಡ ಬಗೆ ನೋಡಿದರೆ ಅದನ್ನು ‘ಹೊಲಸು’ ರಾಜಕೀಯ ಅನ್ನದೆ ಬೇರೆ ದಾರಿಯಿಲ್ಲ. ಹೌದು ಅತ್ಯಾಚಾರವನ್ನು ವಿರೋಧಿಸಲೇ ಬೇಕು. ಅತ್ಯಾಚಾರಿಗಳಿಗೆ ಕುಣಿಕೆಯಷ್ಟೇ ಉತ್ತರವಾಗಬೇಕು. ಪುಣ್ಯವಶಾತ್ ಈ ದೇಶದಲ್ಲಿ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ಕೊಡಬೇಡಿ ಎಂದು ಗಟ್ಟಿಯಾಗಿ ಹೇಳುವ ವರ್ಗ ಬಹುಷಃ ಇದ್ದಂತಿಲ್ಲ. ಇದ್ದರೂ ಅದು ಸಣ್ಣ ಪ್ರಮಾಣದ್ದು ಇರಬಹುದು.

ದೆಹಲಿಯ ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದಾಗ ದೇಶವೇ ಸಂಭ್ರಮಿಸಿತ್ತು. ಕಳೆದ ವರ್ಷ ಹೈದರಾ ಬಾದಿನಲ್ಲಿ ಹೆಣ್ಣನ್ನು ಅತ್ಯಾಚಾರಗೈದು ಸುಟ್ಟು ಕೊಂದ ಕಾಮ ಪಿಶಾಚಿಗಳನ್ನು ವಾರದೊಳಗೆ ಎನ್‌ಕೌಂಟರ್ ಮೂಲಕ ಕೊಂದು ಹಾಕಿದಾಗಲೂ ಜನ ಸಂತಸ ಪಟ್ಟರು. ವಿಚಾರಣೆಯಿಲ್ಲದೆ ಪೊಲೀಸರೇ ಸ್ವತಃ ಶಿಕ್ಷೆಯ ದಾರಿಯನ್ನು ಹುಡುಕುವುದು ಕಾನೂನು ಪ್ರಕಾರ ತಪ್ಪೇ. ಆದರೂ ಜನ ಈ ವಿಚಾರದಲ್ಲಿ ಮಾತ್ರ ಅಂದು ಪೊಲೀಸರನ್ನೇ ದೇವರಂತೆ ಕಂಡರು.

ದೇಶವ್ಯಾಪಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆಯ ಸುರಿಮಳೆ ದೊರೆಯಿತು. ಅಂದ ಹಾಗೆ ನಮ್ಮ ದೇಶದಲ್ಲಿ ಅದ್ಯಾವ ಪ್ರಕರಣ ದಲ್ಲೂ ಅತ್ಯಾಚಾರಿಗಳನ್ನು ಕ್ಷಮಿಸಿದ ಉದಾಹರಣೆಗಳಿಲ್ಲ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣದಿಂದ ಆರೋಪಿ ಖುಲಾಸೆ ಯಾಗಿರಬಹುದೇ ಹೊರತು ‘ಇದೊಂದು ಬಾರಿಯಷ್ಟೇ ಅಲ್ಲವೇ’ ಎಂದು ಮುಚ್ಚಳಿಕೆ ಬರೆದು ಕಳುಹಿಸಿದ ಪ್ರಕರಣ ಗಳಿಲ್ಲ! ಅದರ ಅರ್ಥ ಈ ನೆಲದ ಕಾನೂನಿನಲ್ಲಿ ಅದರ ಚೌಕಟ್ಟಿನೊಳಗೆ ಶಿಕ್ಷೆಯನ್ನು ನೀಡಲಾಗುತ್ತಾ ಬಂದಿದೆ ಎಂಬುದು ಸತ್ಯವೇ.

ಆದರೂ ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ನಡೆದ ಪ್ರಕರಣವನ್ನು ವಿರೋಧ ಪಕ್ಷಗಳು ಏಕಾಏಕಿ ಗಗನದೆತ್ತರಕ್ಕೇರಿಸಿದ ಪರಿ ನೋಡಿದರೆ ಯೋಗಿ ಆದಿತ್ಯನಾಥರ ಉತ್ತರ ಪ್ರದೇಶ ಸರಕಾರದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆಯೇ ಆಗುತ್ತಿಲ್ಲವೇನೋ ಎಂಬಂತೆ ಭಾಸವಾಗುತ್ತಿದೆ. ನಿಜಕ್ಕೂ ಇದು ಪ್ರತಿಪಕ್ಷಗಳಿಗಿರುವ ಹೆಣ್ಣಿನ ಮೇಲಣ ಕಾಳಜಿಯೇ? ಹೌದು ಅಂದುಕೊಂಡರೆ ಮೂರ್ಖತನ ವಾದೀತು! ಬದಲಾಗಿ ಅದು ಪ್ರತಿಪಕ್ಷಗಳ ಅಽಕಾರದ ಲಾಲಸೆಯಷ್ಟೇ! ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವ ಯೋಗಿ ಆದಿತ್ಯ ನಾಥರನ್ನು ಮುಂದಿನ ಚುನಾವಣೆಯಲ್ಲೂ ಸೋಲಿಸುವುದು ಕಷ್ಟ ಎಂದು ಮನವರಿಕೆಯಾಗಿರುವ ವಿರೋಧ ಪಕ್ಷಗಳು
ಹೇಗಾದರು ಮಾಡಿ ಆದಿತ್ಯನಾಥರ ಮುಖಕ್ಕೆ ಮಸಿ ಬಳಿದು ಅಧಿಕಾರದಿಂದ ಇಳಿಸಬೇಕು ಎಂದು ತೊಟ್ಟಿರುವ ಪಣವಷ್ಟೇ!

ಹೌದು ಅದಕ್ಕಾಗಿಯೇ ಈ ಹಥ್ರಾಸ್ ಪ್ರಕರಣ. ಇಲ್ಲವೆಂದಾದರೆ ಹಥ್ರಾಸ್ ಪ್ರಕರಣವೊಂದೇ ಏಕೆ ಇವರೆಲ್ಲರಿಗೆ ಪ್ರಮುಖ
ವಾಗೋಯಿತು? ಕೇವಲ ಸೆಪ್ಟೆಂಬರ್ ತಿಂಗಳೊಂದನ್ನೇ ತೆಗೆದುಕೊಂಡರೂ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಒಂದಲ್ಲ
ಬರೋಬ್ಬರಿ ೧೬ ಅತ್ಯಾಚಾರ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿವೆ! ಇದೇ ಸೆಪ್ಟೆಂಬರ್ ತಿಂಗಳಲ್ಲಿ ಕೇರಳದ ಪಟ್ಟಣಂತಿಟ್ಟ ಎಂಬಲ್ಲಿ ಕೋವಿಡ್ ರೋಗಿಯನ್ನೇ ಆಂಬುಲೆನ್ಸ್ ಒಳಗಡೆ ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ! ಯಾಕೆ ಈ ಕೇಸ್ ಗಳಲ್ಲಿ ಪ್ರತಿಪಕ್ಷಗಳು ಬೀದಿ ಹೋರಾಟಕ್ಕೆ ಇಳಿದಿಲ್ಲ!? ಹೆಣ್ಣಿನ ಪರ ಧ್ವನಿ ಎತ್ತುತ್ತಾ ರಸ್ತೆಯಲ್ಲಿ ಮೆರವಣಿಗೆ
ನಡೆಸಿಲ್ಲಾ? ಸೆಪ್ಟೆಂಬರ್ ತಿಂಗಳ ವಿಚಾರ ಬಿಡೋಣ.

ಇನ್ನು ಇಡೀ ದೇಶದಲ್ಲಿ ವಾರ್ಷಿಕ ಸರಾಸರಿಯನ್ನು ತೆಗೆದುಕೊಂಡರೂ ಆವಾಗಲೂ ಈ ರಾಜಸ್ಥಾನ ಮೊದಲ ಸ್ಥಾನದಲ್ಲಿ ಕಾಣ ಬರುತ್ತದೆ. ಆದ್ದರಿಂದ ಅವಶ್ಯವಾಗಿ ಅಲ್ಲಿನ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ. ಆ ರಾಜ್ಯವನ್ನು ಗೂಂಡ ರಾಜ್ಯವೆನ್ನ ಬೇಕಾದುದ್ದೂ ಅಗತ್ಯವೇ. ಆದರೆ ಯಾವೊಂದು ಹೋರಾಟವೂ ರಾಜಸ್ಥಾನದ ಕಡೆಗೆ ಮುಖ ಮಾಡಿಲ್ಲ! ಹಾಗಾದರೆ ಅಲ್ಲಿ ಬಲಿಪಶು ಗಳಾಗಿರುವ ಹೆಣ್ಣುಮಕ್ಕಳಿಗೂ ಉತ್ತರದ ಪ್ರದೇಶದ ಹೆಣ್ಣುಮಕ್ಕಳಿಗೂ ಏನಾದರೂ ವ್ಯತ್ಯಾಸ ಗಳಿವೆಯೇ!? ಇದನ್ನೇ ಹೊಲಸು ರಾಜಕೀಯ ವೆನ್ನುವುದು. ಅದಕ್ಕಿಂತಲೂ ವಿಚಿತ್ರವೆಂದರೆ ಮೊನ್ನೆ ಹತ್ರಾಸ್‌ನಲ್ಲಿ ಹುಡುಗಿ ಬಲಿಯಾಗಿ ಹೋದಳಲ್ಲಾ ಅದೇ ದಿನ ಅದೇ ಉತ್ತರಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮಪುರದಲ್ಲಿ ದಲಿತ ಹುಡುಗಿಯೊಬ್ಬಳ ಸಾಮೂಹಿಕ ರೇಪ್ ಆಂಡ್ ಮರ್ಡರ್ ನಡೆದಿದೆ. ಇಲ್ಲಿ ಆರೋಪಿಗಳಾಗಿ ಬಂಧಿತರಾದವರು ಇಬ್ಬರು ಅಲ್ಪಸಂಖ್ಯಾತ ಸಮು ದಾಯದ ಯುವಕರು! ಆದರೆ ಆದರೆ ಹಥ್ರಾಸ್ ಗದ್ದಲದ ಮಧ್ಯೆ ಇದು ಸುದ್ದಿಯಾಗಿಯೇ ಇಲ್ಲ! ಹಥ್ರಾಸ್ ಬಗ್ಗೆ ಹರಿದ ಕಣ್ಣೀರು ಬಲರಾಮಪುರಕ್ಕೆ ಯಾಕೆ ಹರಿದಿಲ್ಲಾ ಎಂಬ ಪ್ರಶ್ನೆಗೆ ಜನರೇ ಉತ್ತರ ಹುಡುಕಬೇಕಿದೆ.

ಇದೀಗ ಮತ್ತೊಂದು ಉದಾಹರಣೆಯೆಂಬಂತೆ ಹರಿಯಾಣದಲ್ಲಿ ಹಾಡು ಹಗಲೇ ಹೆಣ್ಣೊಬ್ಬಳನ್ನು ಲವ್ ಜಿಹಾದ್ ಹೆಸರಲ್ಲಿ ಹತ್ಯೆ ಮಾಡಲಾಗಿದೆ! ಇಲ್ಲೂ ಪ್ರತಿ ಪಕ್ಷಗಳ ಸುದ್ದಿಯೇ ಇಲ್ಲ! ನ್ಯಾಯಕ್ಕಾಗಿ ನಡೆಯುವ ಹೋರಾಟದ ದಿಕ್ಕು ದೆಸೆ ಎಂತಹುದು ಎಂದು ಇಲ್ಲೇ ಅರ್ಥವಾಗುತ್ತದೆಯಲ್ಲವೇ!? ಹಥ್ರಾಸ್ ಪ್ರಕರಣವನ್ನು ಹಿಡಿದುಕೊಂಡು ಅದಕ್ಕೊಂದಷ್ಟು ರೆಕ್ಕೆ ಪುಕ್ಕ ಕಟ್ಟಿಸಿ ಕೊಂಡು ಯೋಗಿ ಆದಿತ್ಯನಾಥರನ್ನು ಕೆಳಗಿಳಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳು ತೇಲುತ್ತಿರಬಹುದು.

ಆದರೆ ಯೋಗಿ ಆದಿತ್ಯನಾಥರು ಅಷ್ಟು ಸುಲಭದಲ್ಲಿ ಜಗ್ಗುವ ಅಸಾಮಿ ಅಲ್ಲ. ಮೋದಿ, ಅಮಿತ್ ಷಾ ಬಳಿಕ ‘ಯೋಗಿ’ ಎನ್ನು ವಷ್ಟರ ಮಟ್ಟಿಗೆ ಈ ಯೋಗಿ ಆದಿತ್ಯನಾಥರು ಬೆಳೆದಿದ್ದಾರೆ. ಅಂತಹ ಯೋಗಿಯನ್ನು ಕೆಣಕುವುದು ಕಠಿಣವೇ. ಆದ್ದರಿಂದಲೇ ಉತ್ತರ ಪ್ರದೇಶ ಸರಕಾರ ಪ್ರತಿಪಕ್ಷಗಳ ಅರಚಾಟಕ್ಕೆ ಗಲಿಬಿಲಿಗೊಳ್ಳದೆ ಹಂತಹಂತವಾಗಿ ಪ್ರಕರಣವನ್ನು ಬೇಧಿಸ ಹೊರಟಿದೆ. ಪರಿಣಾಮ ಇದೀಗ ಹತ್ರಾಸ್‌ನಲ್ಲಿ ಅತ್ಯಾಚಾರವೇ ನಡೆದಿಲ್ಲ. ಹುಡುಗಿಯ ಸಾವಿಗೆ ಆಕೆಯ ಅಣ್ಣ ಹಾಗೂ ಅಮ್ಮ ಕಾರಣವೆನ್ನು ವಲ್ಲಿಯವರೆಗೆ ಬಂದು ನಿಂತಿದೆ!

ಆರೋಪಿಗಳಲ್ಲಿ ಒಬ್ಬ ಆ ಹುಡುಗಿಯ ಪ್ರಿಯಕರನೆಂದೂ ಆತನ ಹಾಗೂ ಆಕೆಯ ಅಣ್ಣನ ಮಧ್ಯೆ ಇವರಿಬ್ಬರ ಪ್ರೇಮದ ವಿಚಾರವಾಗಿ ಜಗಳವಾಗುತ್ತಲೇ ಇತ್ತು ಎಂಬ ಸ್ಪಷ್ಟ ಮಾಹಿತಿಯೂ ಹೊರಬಿದ್ದಿದೆ. ಅಷ್ಟು ಮಾತ್ರವೇ ಅಲ್ಲದೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ದಿನವೂ ಆಕೆ ಮತ್ತು ಪ್ರಿಯಕರ ಭೇಟಿಯಾಗಿದ್ದರು. ಅದನ್ನು ಕಂಡು ಆಕೆಯ ಅಣ್ಣ ಆಕೆ ಯನ್ನು ತಳಿಸಿದ್ದನು ಎಂಬುದೂ ವಿಚಾರಣೆಯಿಂದ ಬಯಲಾಗಿದೆ. ಅಷ್ಟುಮಾತ್ರವೇ ಅಲ್ಲದೆ ನಮ್ಮಿಬ್ಬರ ಪ್ರೇಮದಿಂದ ಕ್ರೋಧಿತರಾಗಿದ್ದ ಆಕೆಯ ಅಣ್ಣ ಹಾಗೂ ಅವರ ಮನೆಯವರು ನನ್ನ ಪ್ರೇಯಸಿಯನ್ನು ಹೊಡೆದು ಕೊಂದಿದ್ದಾರೆ. ನನ್ನನ್ನು
ವೃಥಾ ಆರೋಪಿಯನ್ನಾಗಿಸಿದ್ದಾರೆ, ನನಗೆ ನ್ಯಾಯ ಕೊಡಿ ಎಂದು ಗೋಗರೆಯುತ್ತಾ ಆರೋಪಿಯು ಪೊಲೀಸ್ ಆಯುಕ್ತರಿಗೆ ಮನವಿಯನ್ನೂ ಮಾಡಿರುತ್ತಾನೆ. ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ಸರಕಾರ ನಾರ್ಕೋ ಪರೀಕ್ಷೆಯನ್ನು ಮಾಡಿ ಸತ್ಯ ಹೊರ ಗೆಳೆಯುತ್ತೇವೆ ಎಂದಾಗ ಸ್ವತಃ ಹುಡುಗಿಯ ತಾಯಿ ಹಾಗೂ ಅಣ್ಣ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ!

ಇದನ್ನೆಲ್ಲಾ ನೋಡಿದಾಗ ಅಲ್ಲೇನೋ ಸಮ್ ಥಿಂಗ್ ನಡೆದಿದೆ ಎಂಬಂತೆ ಭಾಸವಾಗುತ್ತಿರುವುದಂತೂ ನಿಜ. ಎಲ್ಲಕ್ಕಿಂತೂ ಮುಖ್ಯವಾಗಿ ಹುಡುಗಿಯ ಮೇಲೆ ಅತ್ಯಾಚಾರವೇ ನಡೆದಿರಲಿಲ್ಲ ಎಂಬುದು ವೈದ್ಯಕೀಯ ದಾಖಲೆಗಳು ಹೇಳುತ್ತಿವೆ! ಅದೇನೆ ಇರಲಿ ಹೋರಾಟಗಳು ಇಲ್ಲದಿದ್ದರೂ ಸತ್ಯವಂತು ಹೊರ ಬಂದೇ ಬರುತ್ತದೆ ಅಲ್ಲಿ! ಆದರೆ ಹೋರಾಟದ ಮುಖವಾಡ ಪಾರದರ್ಶಕ ವಾಗಿರಬೇಕು ಅಷ್ಟೇ!

ಇಲ್ಲಿ ಜನಸಾಮಾನ್ಯ ಅರ್ಥ ಮಾಡಿಕೊಳ್ಳಬೇಕಾಗಿರುವ ವಿಷಯವಿಷ್ಟೇ, ಅದೇನೆಂದರೆ ಪ್ರತಿಪಕ್ಷಗಳಿಗೆ ಇಲ್ಲಿ ಬೇಕಾಗಿರುವುದು ನ್ಯಾಯವಲ್ಲ. ಬದಲಾಗಿ ಅವಕಾಶ. ಅಧಿಕಾರದ ಅವಕಾಶ. ಕಳೆದು ಹೋದ ಸಿಂಹಾಸನವನ್ನು ಮತ್ತೆ ಪಡೆಯುವ ಹಪಾಹಪಿ. ಹೆಣ್ಣಿನ ನ್ಯಾಯದ ಬಗ್ಗೆ ಹೋರಾಡುವ ನಿಜವಾದ ಕಾಳಜಿ ಇರುವವರು ಧರ್ಮ – ರಾಜಕೀಯದ ಲೆಕ್ಕಾಚಾರ ಹಾಕಿ ಹೋರಾಟಕ್ಕೆ
ಇಳಿಯಲಾರರು. ದೂರದ ಹತ್ರಾಸ್‌ನಲ್ಲಿ ನಡೆದಿದೆಯೆನ್ನಲಾದ ಅತ್ಯಾಚಾರಕ್ಕೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುವುದಾದರೆ ಅದೇ ಮಂಗಳೂರಿನ ಮುಡಿಪು ಎಂಬಲ್ಲಿನ ಅಶ್ರ- ಎನ್ನುವವನು ನಡೆಸಿದ ಅತ್ಯಾಚಾರಕ್ಕೆ ಹೋರಾಟ ಏಕಿಲ್ಲ ಎಂಬ ಪ್ರಶ್ನೆಗೂ ಉತ್ತರ ಪಡೆಯಬೇಕಾಗುತ್ತದೆ.