Friday, 13th December 2024

ನಾವು ಇತರರನ್ನು ಹೇಗೆ ಸಂತೋಷಪಡಿಸಬಹುದು ?

ಮಾತುಕತೆ

ಡಾ.ಕೆ.ಪಿ.ಪುತ್ತುರಾಯ

ಒಬ್ಬ ಮುದುಕಿ ಸಣ್ಣ ಅಂಗಡಿಯೊಂದರಲ್ಲಿ ಹಣ್ಣು ಹಂಪಲುಗಳನ್ನು ಮಾರುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಪ್ರತಿ ನಿತ್ಯ, ಓರ್ವ ಮುದುಕ, ಆಕೆಯ ಅಂಗಡಿಗೆ ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದ, ಆದರೆ ಪ್ರತಿಸಲ ಈ ಅಜ್ಜಿ ತೂಕಕ್ಕಿಂತ ಹೆಚ್ಚಾಗಿಯೇ ಒಂದು ಹಣ್ಣನ್ನು ಅವನ ಬುಟ್ಟಿಗೆ ಹಾಕಿ ಬಿಡುತ್ತಿದ್ದಳು. ಇದನ್ನು ಗಮನಿಸುತ್ತಿದ್ದ ಆಕೆಯ ಮೊಮ್ಮಗ ‘ಯಾಕಜ್ಜಿ ನೀನು ಈ ಮುದುಕನಿಗೆ, ತೂಕಕ್ಕಿಂತಲೂ ಹೆಚ್ಚಾಗಿ, ಹಣ್ಣನ್ನು ನೀಡುತ್ತಿರುವೆ?’ ಎಂದು ಕೇಳಲಾಗಿ, ಅಜ್ಜಿ ಹೇಳುತ್ತಾಳೆ ‘ಮಗೂ, ಈ ಮುದುಕನಿಗೆ ಯಾರೂ ಇಲ್ಲ.

ಈ ಇಳಿ ವಯಸ್ಸಿನಲ್ಲೂ ಅಲ್ಲಿ ಇಲ್ಲಿ ದುಡಿದು ಬಂದ ಹಣದಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದಾನೆ. ಒಂದು ಹಣ್ಣನ್ನು ಹೆಚ್ಚಾಗಿ ಪಡೆಯುವಾಗಿ ಅವನಿಗಾಗುವ ಸಂತೋಷದಿಂದ ನನಗೆ ಸಂತಸವಾಗುತ್ತದೆ. ಅದಕ್ಕೇ ಈ ಕೆಲಸವನ್ನು ಮಾಡುತ್ತಿದ್ದೇನೆ’. ಆದರೆ ಸ್ವಾಭಿಮಾನಿ ಮುದುಕನಾದರೋ, ಅಜ್ಜಿಗೆ ಹಣ್ಣುಗಳ ಬೆಲೆಯನ್ನು ಕೊಡುವಾಗ ಪ್ರತಿ ಸಲ ‘ಚಿಲ್ಲರೆಯನ್ನು ನೀನೇ ಇಟ್ಟುಕೋ’ ಎನ್ನುತ್ತಾ ತುಸು ಜಾಸ್ತಿ ಹಣವನ್ನೇ ಕೊಡುತ್ತಿದ್ದ! ಹಾಗೂ ಇದರಿಂದಾಗಿ ಅರಳುವ ಅಜ್ಜಿ ಮುಖವನ್ನು ಕಂಡು ತಾನೂ ಖುಷಿ ಪಡುತ್ತಿದ್ದ. ಹೀಗೆ ಇವರಿಬ್ಬರೂ, ಒಬ್ಬರಿನ್ನೊಬ್ಬರನ್ನು ಸಂತೋಷಪಡಿಸಿಕೊಂಡು, ತಾವು ಸಂತಸಪಟ್ಟುಕೊಳ್ಳು ತ್ತಿರುತ್ತಾರೆ!.

ಹೌದು; ಸಾಮಾನ್ಯವಾಗಿ ಜೀವನದಲ್ಲಿ ಎಲ್ಲರ ಆಸೆ-ಆಕಾಂಕ್ಷೆಗಳು ಎರಡೇ-ತನ್ನ ಜೀವನ ಸುಧೀರ್ಘವಾಗಿರಬೇಕು; ಹಾಗೂ ತಾನು ಸಂತೋಷ ದಿಂದಿರಬೇಕು. ಕಷ್ಟಗಳು ಯಾರಿಗೆ ಬೇಕು? ಸುಖಗಳು ಯಾರಿಗೆ ಬೇಕಿಲ್ಲ! ಜೀವನದಲ್ಲಿ ನಾವು ಸಂತೋಷಪಟ್ಟು ಕೊಳ್ಳುವ ಒಂದು ವಿಧಾನವೆಂದರೆ, ಇತರರನ್ನು ಸಂತೋಷಪಡಿಸೋದು! ನಾವು ನಾವೇ ಅನುಭವಿಸುವ ಭೋಗದಿಂದ, ಸಂತೋಷಪಟ್ಟುಕೊಳ್ಳೋದು ಇದ್ದೇ ಇದೆ.

ಇದು ಪ್ರಕೃತಿ ಸಹಜ ಸ್ವಾಭಾವಿಕವಾದ ಗುಣ ಧರ್ಮ. ಆದರೆ ಇತರರನ್ನು ಸಂತೋಷಪಡಿಸೋದರಿಂದಲೂ ನಾವು ಅಪರಿಮಿತ ವಾದ ಆನಂದವನ್ನು ಅನುಭವಿಸಬಹುದು. ಇದಕ್ಕೆ ನಾವು ಭಾರೀ ದಾನಗಳನ್ನೇ ನೀಡಬೇಕೆಂದಿಲ್ಲ; ಬಲು ದೊಡ್ಡ ತ್ಯಾಗಗಳನ್ನೇ ಮಾಡಬೇಕೆಂದಿಲ್ಲ! ಒಳ್ಳೆಯ ಮೃದುವಾದ ಮಧುರವಾದ, ಹಿತಮಿತವಾದ ಮಾತುಗಳಿಂದಲೂ, ಇತರರಿಗೆ ಪ್ರಿಯವಾಗುವ ನಮ್ಮ ನಡೆನುಡಿಗಳಿಂದಲೂ, ಸಣ್ಣಪುಟ್ಟ ಸಹಾಯ- ಸಹಕಾರಗಳಿಂದಲೂ ಜನರನ್ನು ಸಂತೋಷಪಡಿಸಬಹುದು.

ಇದಕ್ಕೆ ಯಾವ ಖರ್ಚೂ ಇಲ್ಲ; ಯಾವ ಬಂಡವಾಳವೂ ಬೇಕಿಲ್ಲ. ಇದು ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಒಂದು ಸದ್ಗುಣ ಅಷ್ಟೇ. ಹಾಗೇ ನೋಡಿದರೆ, ಬರೇ ದಾನದಿಂದ ಯಾರನ್ನು ಸಂಪೂರ್ಣವಾಗಿ ಸಂತೋಷಗೊಳಸಲಾಗದು. ಇಷ್ಟು ಕೊಟ್ಟರೆ, ‘ಇನ್ನಷ್ಟು ಕೊಡಬಹುದಿತ್ತಲ್ಲ!’ ಎಂಬ ಟೀಕೆ ತಪ್ಪಿದ್ದಲ್ಲ. ಮನುಷ್ಯನ ಸ್ವಭಾವವೇ ಹಾಗೇ-ಸಂತೋಷಪಟ್ಟುಕೊಳ್ಳಲು ಇಲ್ಲವೇ ಬೇಸರಿಸಿಕೊಳ್ಳಲು, ಯಾವಾಗಲೂ ದೊಡ್ಡ ದೊಡ್ಡ ಕಾರಣಗಳೇ ಬೇಕೆಂದಿಲ್ಲ; ಸಣ್ಣ ಪುಟ್ಟ ವಿಷಯಗಳೂ ಸಾಕು!

ಅಲ್ಪವನ್ನೇ ಅನಂತವೆಂದು ಪರಿಗಣಿಸಿ, ಸಂತೋಷ ಪಡುವ ಅಲ್ಪತೃಪ್ತಿಗಳೂ ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ.

ಉದಾಹರಣೆಗೆ

* ಮನೆಯಲ್ಲಿ ಗಂಡನಾದವನು, ಮಡದಿ ಮಾಡಿದ ಅಡುಗೆಯನ್ನೋ, ಉಟ್ಟ ಸೀರೆಯನ್ನೋ ಮೆಚ್ಚಿಕೊಂಡರೆ ಸಾಕು ಆಕೆ ಸಂತೋಷ ಪಟ್ಟುಕೊಳ್ಳುತ್ತಾಳೆ. ಇನ್ನು ‘ಈ ವಯಸ್ಸಲ್ಲೂ ಎಷ್ಟೊಂದು ಸುಂದರವಾಗಿ ಕಾಣ್ತಾ ಇದ್ದೀಯಾ!’ ಇಲ್ಲವೇ ‘ಯಾಕೆ ಇಷ್ಟೊಂದು ಸಣ್ಣಗಾಗಿದ್ದೀಯಾ ನಿನ್ನ ಆರೋಗ್ಯವನ್ನು ಕೊಂಚ ನೋಡಿಕೋ My dear” ಅಂದು ಬಿಟ್ಟರಂತೂ, ಆಕೆಯ
ಸಂತಸದ ಗರಿಗಳು ಕೆದರುತ್ತವೆ. ಅಂತೆಯೇ, ಮಡದಿಯಾದವಳು ‘‘ತವರಿಗೆ ಹೋದರೂ, ಬೇಗ ಬಂದು ಬಿಡ್ತೀನ್ರೀ, ಇಲ್ಲವಾದರೆ ದಿನಾ ನಿಮಗೆ ಇಷ್ಟವಾದ ಅಡುಗೆಯನ್ನು ಮಾಡಿ ಹಾಕುವವರು ಯಾರು? ರೀ, ಮನೆಯ ಖರ್ಚಿಗೆಂದು ನೀವು ಕೊಡುತ್ತಿದ್ದ ಹಣ ದಲ್ಲಿ ಒಂದಿಷ್ಟು ಉಳಿತಾಯ ಮಾಡಿ, ಈ ಸಲದ ನಿಮ್ಮ ಹುಟ್ಟುಹಬ್ಬಕ್ಕೆ ಒಂದು ಚಿನ್ನದ ಚೈನ್ ಮಾಡಿಸಿದ್ದೇನೆ’’ ಎಂದಾಗ, ಗಂಡನಿಗಾಗುವ ಸಂತಸಕ್ಕೆ ಎಣೆಯೇ ಇಲ್ಲ!.

*ಶಾಲೆಯಿಂದ ವಾಪಾಸಾದ ಮಗಳು ತಿಂಡಿ ಕೊಟ್ಟ ಅಮ್ಮನಿಗೆ ‘ಅಮ್ಮ ನೀನು ಏನಾದರೂ ತಿಂದೆಯಾ?’ ಎಂದು ಕೇಳಿದರೆ, ಇಲ್ಲವೇ ‘ಮನೆ ಕೆಲಸಗಳನ್ನು ನೀನೊಬ್ಬಳೇ ಮಾಡದಿರು ನನ್ನನ್ನು ಸೇರಿಸಿಕೋ’ ಎಂದು ಹೇಳಿದರೇ ಸಾಕು; ಅಮ್ಮ ಭಾರೀ ಸಂತೋಷ ಪಟ್ಟುಕೊಳ್ಳುತ್ತಾಳೆ. ಅಂತೆಯೇ, ‘ಅಪ್ಪ ನನ್ನ ಶೂಗಳ ಜೊತೆ, ನಿನ್ನ ಶೂಗಳನ್ನು ಪಾಲೀಶ್ ಮಾಡಿದ್ದೀನಿ’ ಎಂದು
ಮಗ ಹೇಳಿದರೆ, ಅಪ್ಪನ ಕಣ್ಣುಗಳು ಒದ್ದೆಯಾಗುತ್ತದೆ.

*‘ಅಜ್ಜಿ, ನನ್ನನ್ನು ನಿನ್ನ ಜೊತೆಯಲ್ಲಿ ಮಲಗಿಸಿಕೋ’ ಎಂದು ಪುಟ್ಟ ಮೊಮ್ಮಗಳು ಅಜ್ಜಿಗೆ ಹಾಗೂ ‘ಅಜ್ಜಾ ನೀನೆ ನನಗೆ ಸ್ನಾನ ಮಾಡಿಸಬೇಕು’ ಎಂದು ಪುಟ್ಟ ಮೊಮ್ಮಗ, ತನ್ನ ತಾತನಿಗೆ ಒತ್ತಾಯಿಸಿದಾಗ, ಆ ಅಜ್ಜಿ-ತಾತನಿಗೆ ಆಗೋದು ಒಂದು ಮಧುರಾ ನುಭವ!

*ಅಂತೆಯೇ, ನಾವು ಇತರರಲ್ಲಿರುವ ಸದ್ಗುಣಗಳನ್ನು, ಸೌಂದರ್ಯವನ್ನು ಅವರ ಸಾಧನೆಗಳನ್ನು, ಮೆಚ್ಚಿಕೊಂಡು, ಒಂದೆರಡು ಒಳ್ಳೆಯ ಮಾತುಗಳನ್ನಷ್ಟೆ ಹೇಳಿದರೆ ಸಾಕು; ಅವರು ಒಳಗಿಂದೊಳಗೆ ಸಂತಸಪಟ್ಟುಕೊಳ್ಳುತ್ತಾರೆ.

*ಹೆಚ್ಚೇನು ಬೇಡ, ನಮಗೆ ದಾರಿಯಲ್ಲಿ ಎದುರಾದವರನ್ನು ಕಂಡು ಮುಗುಳ್ನಕ್ಕರೆ ಸಾಕು ಇಲ್ಲವೇ ‘ಹಲೋ’ ಎಂದಷ್ಟೆ ಹೇಳಿದರೆ ಸಾಕು, ಅವರು ಖುಷಿಪಟ್ಟು, ತಾವು ಅದೇ ಕೆಲಸವನ್ನು ಮುಂದುವರಿಸುತ್ತಾರೆ.

*ಅಂತೆಯೇ, ಜನರನ್ನು ಭೇಟಿಯಾದಾಗ, ಅವರನ್ನು ಅವರ ಹೆಸರುಗಳಿಂದ ಸಂಭೋಧಿಸೋದರಿಂದ ಮತ್ತು ಸ್ವಪ್ರಶಂಸೆ ಮಾಡಿ ಕೊಳ್ಳದೇ ಹಾಗೂ ಅವರ ಮಡದಿ ಮಕ್ಕಳ ಯೋಗಕ್ಷೇಮವನ್ನು ವಿಚಾರಿಸೋದರಿಂದ ನಾವೇನೂ ಕಳಕೊಳ್ಳೊದಿಲ್ಲ; ಆದರೆ, ಅವರ ಪ್ರೀತಿಯನ್ನ ಗಳಿಸಿಕೊಳ್ಳುತ್ತೇವೆ. ತೀರ ಆತ್ಮೀಯರಾದರೆ, ಒಂದು ಅಪ್ಪುಗೆ, ಆಲಿಂಗನ, (corona virus ಇರೋವರೆಗೆ  ಇವೆಲ್ಲ?) ಅವರಲ್ಲಿ ಸಂತಸದ ಅಲೆಗಳನ್ನೇ ಸೃಷ್ಟಿಸುತ್ತದೆ.

*ಯಾರನ್ನಾದರೂ ನೋಡಿದ ತಕ್ಷಣ, ಏನಾದರೊಂದು comment ಪಾಸ್ ಮಾಡೋದು ಕೆಲವರ nature. ಇದು ಅನಾವಶ್ಯಕ-
ಅಪ್ರಸ್ತುತ ಹಾಗೂ ಇವು Hurting comments ಗಳಾದರೆ, ಕೇಳಿದವರಿಗೆ ನೋವಾಗುತ್ತದೆ. ಬದಲಿಗೆ, ಪ್ರೋತ್ಸಾಹದಾಯಕ ಇಲ್ಲವೇ ಪ್ರಶಂಸನೀಯವಾಗಿದ್ದರೆ, ಕೇಳಿದವರಿಗೆ ಖುಷಿಯೋ ಖುಷಿ. ಉದಾಹರಣೆಗೆ, ತೂಕದಲ್ಲಿ ಇಳಿದು ಹೋದವರನ್ನು ಕಂಡು ‘‘ಸ್ವಲ್ಪ ಇಳಿದು ಹೋಗಿದ್ದೀರಾ, ಆದರೆ fit and smart ಆಗಿ ಕಾಣ್ತಾ ಇದ್ದೀರಾ’’ ಎಂದರೆ ಹಾಗೂ ಡುಮ್ಮಿ ಹುಡುಗಿಯನ್ನು ಕಂಡು ‘‘ನಿನ್ನ Dressing sense is amazing”  ಎಂದರೆ, ಇಬ್ಬರಿಗೂ ಭಾರೀ ಸಂತೋಷವಾಗುತ್ತದೆ.

*ಅಂತೆಯೇ, ಗಂಟು ಮೋರೆ ಮಾಡಿಕೊಳ್ಳದೆ, ಸದಾ ಹಸನ್ಮುಖಿಯಾಗಿರೋದರಿಂದಲೂ ಬಂಧು ಬಾಂಧವರಲ್ಲಿ ಅಹಿತಕರ ಘಟನೆಗಳನ್ನು ಜ್ಞಾಪಿಸಿಕೊಳ್ಳದೆ ನೋವಾಗುವ ವೈಯುಕ್ತಿಕ ವಿಚಾರಗನ್ನು ಚರ್ಚಿಸದೇ, ಆತ್ಮೀಯ ವಾತಾವರಣವನ್ನು ಸೃಷ್ಟಿ ಸೋದರಿಂದಲೂ ನಾವು ಅವರನ್ನು ಸಂತೋಷಪಡಿಸಬಹುದು. ಮಾತ್ರವೇ ಅಲ್ಲ, ನಮ್ಮ ಮಕ್ಕಳಂತೆ, ಇತರರ ಮಕ್ಕಳನ್ನು
ಪ್ರೀತಿಸೋದರಿಂದಲೂ, ತಮ್ಮ ಹೆತ್ತವರಂತೆ, ಎಲ್ಲಾ ಹಿರಿಯರನ್ನು ಗೌರವಿಸೋದರಿಂದಲೂ, ಜನರನ್ನು ಸಂತೋಷಗೊಳಿಸಲು ಸಾಧ್ಯ. ಆಪ್ತರ ಜನ್ಮ ದಿನವನ್ನು ಮರೆಯದೇ ಅವರಿಗೆ ಶುಭಾಷಯಗಳನ್ನು ಕಳುಹಿಸೋದು, ನಮ್ಮಿಂದ ತಪ್ಪುಗಳಾಗಿದ್ದಲ್ಲಿ, ego ಬಿಟ್ಟು, ಕ್ಷಮೆ ಯಾಚಿಸೋದು ಎಲ್ಲವೂ ಸಂತೋಷದ ಬಾಗಿಲನ್ನು ತೆರೆಯುತ್ತವೆ.

*ಬಂಧು ಮಿತ್ರರಿಂದ ಅಪರೂಪಕ್ಕೆ ದೂರವಾಗಿ ಕರೆಗಳು ಬಂದಾಗ ‘‘ನಿನ್ನ ಧ್ವನಿ ಕೇಳಿ ಎಷ್ಟು ದಿನ ಆಯ್ತು ಕಣೋ’’ ಎಂದಷ್ಟೇ ಹೇಳಿದರೆ ಸಾಕು, ಕೇಳುಗನಿಗೆ ಏನೋ ಒಂದು ಸಂತೋಷ.

*ಅಂತೆಯೇ, ದಿನ ನಿತ್ಯ ಜೀವನದಲ್ಲಿ ಸಹಾಯ ಮಾಡಿದವರಿಗೆ, ಸಹಕರಿಸಿದವರಿಗೆ ‘ಉಪಕಾರವಾಯಿತು’, ‘ನಿಮ್ಮನ್ನು ಎಂದಿಗೂ ಮರೆಯಲಾರೆ’, ‘ಧನ್ಯವಾದಗಳು’ ಮುಂತಾದ ಪದ ಪ್ರಯೋಗಗಳು, ಇತರರಿಗೆ ಖುಷಿತರುವ ನುಡಿಗಳು.

*ನಾವು ಇತರರಿಗೆ ಹೆಚ್ಚೇನು ಮಾಡೋದು ಬೇಡ; ಕೆಲವೊಮ್ಮೆ ಅವರ ಸಮಸ್ಯೆ-ಸಂಕಷ್ಟಗಳನ್ನು, ನೋವು ಬೇನೆಗಳನ್ನು ಶ್ರದ್ಧೆ ಯಿಂದ just ಕೇಳಿಸಿಕೊಂಡರೆ ಸಾಕು-ಅವರಿಗದುದೇ ಸಮಾಧಾನ, ಸಂತೋಷ. ಆಸ್ಪತ್ರೆಯಲ್ಲಿ ವೈದ್ಯರುಗಳು, ನರ್ಸ್‌‌ಗಳು  ಈ ಕೆಲಸವನ್ನು ತಪ್ಪದೇ ಮಾಡಬೇಕು: ರೋಗಿ ಬಲುಬೇಗ ಚೇತರಿಸಿಕೊಳ್ಳುತ್ತಾನೆ. ಅಂತೆಯೇ, ಮನೆಯಲ್ಲಿ ದಂಪತಿಗಳು, ಮಕ್ಕಳೊಂದಿಗೆ ಹೆತ್ತವರು ಕೂಡಾ ಈ ತತ್ವವನ್ನೇ ಮುಂದುವರಿಸಬೇಕು.

*ಅಂತೆಯೇ, ಕಷ್ಟದಲ್ಲಿರುವವರಿಗೆ ಮಾಡುವ ಒಂದಿಷ್ಟು ಸಹಾಯ, ಅವರನ್ನು ಸಂತೋಷಗೊಳಿಸುವ ಬಲುದೊಡ್ಡ ವಿಧಾನ. ಸಹಾಯ ಮಾಡಿದವರೆಂದೂ ಬಡವರಾಗಲಿಲ್ಲ; ಉಪವಾಸ ಮಲಗಲಿಲ್ಲ!, ಇತರರನ್ನು ಸಂತೋಷಪಡಿಸಿ, ಯಾರೂ ದುಃಖಿ ಗಳಾಗಲಿಲ್ಲ. ಬಾಯಲ್ಲಿ ‘‘ಬೇಡ ಬೇಡ, ಇದೆಲ್ಲಾ ಯಾಕೆ ಬೇಕಿತ್ತು?’’ ಎಂದರೂ ಜನರಿಗೆ ನಾವು ಏನಾದರೊಂದು ಉಡುಗೊರೆ ಕೊಟ್ಟಾಗ, ಇಲ್ಲವೇ ಅವರನ್ನು ಹೊಗಳಿದಾಗ ಸಂತೋಷವಾಗುತ್ತದೆ. ಈ ಸತ್ಯವನ್ನು ಮರೆಯಬಾರದು.

*ಸಾಮಾನ್ಯವಾಗಿ, ಪ್ರತಿಯೊಬ್ಬರು, ತಮ್ಮ ಬಗ್ಗೆೆಯೇ ಚಿಂತಿಸುತ್ತಿರುತ್ತಾರೆಯೇ ವಿನಃ, ಇತರರ ಬಗ್ಗೆ ಚಿಂತಿಸೋದೆ ಇಲ್ಲ. ಇತರರ ಬಗ್ಗೆ ಯೋಚಿಸಲು, ಅವರ ಬಳಿ ವೇಳೆಯೂ ಇರೋದಿಲ್ಲ; ಆ ಪರಿಜ್ಞಾನವೂ ಇರೋದಿಲ್ಲ. ಇದು ಮನುಷ್ಯನಲ್ಲಿ ಅಂತರ್ಗತ ವಾಗಿರುವ ಮೃಗಸ್ವಭಾವ. ತನ್ನ ಹೊರತಾಗಿ ಇತರರ ಬಗ್ಗೆಯೂ ಚಿಂತಿಸೋದೆ ಒಳ್ಳೆಯ ಸ್ವಭಾವ (ಮಾನವೀಯತೆ). ತನ್ನ ಬಗ್ಗೆ ಎಂದೂ, ಏನನ್ನೂ ಯೋಚಿಸದೆ, ಇತರರ ಯೋಗಕ್ಷೇಮದ ಬಗ್ಗೆ ಮಾತ್ರ ಚಿಂತಿಸೋದು ದೈವೀ ಗುಣ. ನಾವು ದೈವತ್ವವನ್ನು ಪಡೆಯಲು ಸಾಧ್ಯವಾಗದೇ ಹೋದರೂ ಪರವಾಗಿಲ್ಲ!

ಒಳ್ಳೆಯ ಮನುಷ್ಯರಾಗಿ ಬದುಕಿದರೆ ಸಾಕು. ಹೀಗಾಗಲು ಬೇಕು, ಇತರರನ್ನು ಸಂತೋಷಪಡಿಸುವ ಹಂಬಲ; ಇತರರಿಗಾಗಿ ನಾವೇನೂ ಮಹತ್ಕಾರ್ಯ, ಮಹಾತ್ಯಾಗಗಳನ್ನು ಮಾಡಬೇಕಾಗಿಲ್ಲ; ನಮ್ಮ ಬಗ್ಗೆಯ ಹೊರತಾಗಿ, ಅವರ ಬಗ್ಗೆಯೂ ಕೊಂಚ ಆಸಕ್ತಿ, ಕಾಳಜಿಗಳನ್ನು ಬೆಳೆಸಿಕೊಂಡರೆ ಸಾಕು. ಈಗಿನ ಕಾಲದಲ್ಲಂತೂ, ಸ್ವಲ್ಪ ಪ್ರೀತಿ-ಪ್ರೇಮ, ವಾತ್ಸಲ್ಯ- ಒಲುಮೆ, ಗಮನ ಸಿಕ್ಕಿ ದರೆ ಸಾಕು; ಜನ ಕರಗಿ ನೀರಾಗುತ್ತಾರೆ.

ಇತರರನ್ನು ಸಂತೋಷಪಡಿಸುವ ಕೆಲಸ, ನಮ್ಮ ಜೀವನ ಸಿದ್ಧಾಂತವಾಗಬೇಕು; ಇದನ್ನು ರೂಢಿಮಾಡಿಕೊಂಡರೆ ಸಾಕು; ಕ್ರಮೇಣ ಅದು ನಮ್ಮ ಗುಣ ಸ್ವಭಾವವಾಗಿ ಪರಿವರ್ತನೆ ಹೊಂದಿ, ಜೀವನವೇ, ಜಗತ್ತೇ ಹಸನಾಗುತ್ತದೆ.