Saturday, 14th December 2024

ಫೇಸ್’ಬುಕ್ ಕೈಜಾರುತ್ತಾ ವಾಟ್ಸಾಪ್, ಇನ್‌ಸ್ಟಾಗ್ರಾಂ ?

ಬಡೆಕ್ಕಿಲ ಪ್ರದೀಪ್

ಟೆಕ್ ಟಾಕ್

ಎಲ್ಲಾ ಚೆನ್ನಾಗೇ ನಡೀತಿದೆ ಅಂದುಕೊಳ್ಳುತ್ತಿದ್ದ ಫೇಸ್‌ಬುಕ್‌ಗೆ ಇದೊಂದು ಪುಟ್ಟ ಆಘಾತ ಅಂದರೆ ತಪ್ಪಲ್ಲ. ಕಂಪೆನಿ ಸುಲಭ ದಲ್ಲಿ ಒಪ್ಪಿ ಕೊಳ್ಳದಿದ್ದರೂ, ಅಮೆರಿಕಾದ ಫೆಡರಲ್ ಟ್ರೇಡ್ ಕಮಿಶನ್, ಫೇಸ್‌ಬುಕ್‌ಗೆ ಈ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನೂ ಮಾರಿಬಿಡು ಅನ್ನುವ ರೀತಿಯ ಸಂದೇಶ ರವಾನಿಸಿದೆ.

ಇನ್ಸ್ಟಾಗ್ರಾಮನ್ನು 2012 ಮತ್ತು ವಾಟ್ಸಾಪನ್ನು 2014ರಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಸುರಿದು ತನ್ನದಾಗಿಸಿಕೊಂಡಿದ್ದ ಫೇಸ್‌ಬುಕ್‌ನ ಮನದೊಳಗಿದ್ದ ಒಂದೇ ಉದ್ದೇಶ, ಈ ಫೋಟೋ ಶೇರಿಂಗ್ ಹಾಗೂ ಮೆಸೆಜಿಂಗ್ ಲೋಕದ ಅನಭಿಷಿಕ್ತ ದೊರೆ ತಾನಾಗಬೇಕು ಅನ್ನೋದು. ಅದಕ್ಕೆ ಯಾವ್ಯಾವುದು ದೊಡ್ಡ ತೊಡಕಾಗಿತ್ತೋ ಅದನ್ನೇ ಒಂದೊಂದಾಗಿ ಕಬಳಿಸಿಕೊಂಡಿತ್ತು ಫೇಸ್‌ಬುಕ್.

ಅಪಾಯಕಾರಿ ಏಕಸ್ವಾಾಮ್ಯ
ವಿಚಿತ್ರ ಅಂದರೆ ಅಂದಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳದಿದ್ದ ಎಫ್ಟಿಸಿ ಅಥವಾ ಫೆಡರಲ್ ಟ್ರೇಡ್ ಕಮಿಶನ್ ಇದೀಗ ಬದ ಲಾಗುತ್ತಿರುವ ಪರಿಸ್ಥಿತಿಗನುಗುಣವಾಗಿ ತನ್ನ ಯೋಚನೆಯನ್ನೂ ಬದಲಾಯಿಸಿಕೊಂಡಿದ್ದು, ಫೇಸ್‌ಬುಕ್ ಈ ಎರಡು ಕಂಪೆನಿ ಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಈ ಎರಡು ವಿಭಾಗಗಳಲ್ಲಿ ಸ್ಪರ್ಧೆಯೇ ಇಲ್ಲದಂತೆ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಬಣ್ಣಿಸಿದೆ.

ಇದೊಂದು ರೀತಿಯಲ್ಲಿ ನೋಡೋದಾದರೆ ಕಳೆದ ವಾರ ನಾವು ಕಂಡ ಗೂಗಲ್ ಪೇ ಹಾಗೂ ಗೂಗಲ್ ಪ್ಲೇಯ ಆಟದ ರೀತಿಯೇ. ಬೃಹತ್ ಚಿತ್ರಣವನ್ನು ಕಂಡು ಮಾತನಾಡುವುದಾದರೆ, ಈ ಹಿಂದಿನ ಅಂಕಣದಲ್ಲಿ ಪ್ರಸ್ತಾಪಿಸಿದಂತೆಯೇ ಇವೆಲ್ಲಾ ಕಂಪೆನಿಗಳು ಸರ್ವಾಧಿಕಾರ, ಸ್ವಾಮ್ಯವನ್ನು ಸಾಧಿಸುವಲ್ಲಿ ತಮ್ಮ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿವೆ. ಈ ಹಿಂದೆ ರಾಜಾಧಿರಾಜರು ಹೇಗೆ
ಒಂದಾದ ಮೇಲೊಂದು ರಾಜ್ಯಗಳನ್ನೋ, ದೇಶಗಳನ್ನು ಕಬಳಿಸಿಕೊಳ್ಳುತ್ತಿದ್ದರೋ, ಆದೇ ರೀತಿ ಈ ಕಂಪೆನಿಗಳು ತಮಗೆ ಎದು ರಾಳಿಯಾಗಬಹುದೆಂದು ಕಾಣುವ ಕಂಪೆನಿಗಳನ್ನು, ಕಬಳಿಸಿ, ಕೊಳ್ಳುತ್ತಿದ್ದಾರೆ.

ಏನ್ ನಡೀತಿದೆ ಅಮೆರಿಕಾದಲ್ಲಿ?
ಕಳೆದ ಕೆಲ ವಾರಗಳಿಂದ ಈ ರೀತಿಯ ಕ್ರಮಗಳನ್ನು ಸತತವಾಗಿ ಮಾಡುತ್ತಿದೆ ಎಫ್ಟಿಸಿ. ವೀಸಾ ಅನ್ನುವ ಸಂಸ್ಥೆ ಪ್ಲೇಡ್ ಅನ್ನುವ ಇನ್ನೊಂದು ಆರ್ಥಿಕ ಡೇಟಾ ಸ್ಟಾರ್ಟಪ್ ಅನ್ನು ಖರೀದಿಸುವ ಮೂಲಕ ತಾನೇ ಆರ್ಥಿಕ ವ್ಯವಹಾರಗಳ ಸಿಂಹಪಾಲನ್ನು ಪಡೆಯಲು ಹೊರಟಿದ್ದಕ್ಕೆ ತಡೆಯೊಡ್ಡಿತ್ತು. ಇನ್ನೊಂದೆಡೆ ಫಾರ್ಮಸ್ಯೂಟಿಕಲ್ಸ್ ಹಾಗೂ ಡಿಎನ್‌ಎ ಸೀಕ್ವೆೆನ್ಸಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹೊಂದಿಕೊಂಡ ಇದೇ ರೀತಿಯ ಖರೀದ ಪ್ರಯತ್ನಗಳಿಗೂ ಎಫ್ಟಿಸಿ ಬ್ರೇಕ್ ಹಾಕಿದೆ.

ಈ ಹಿಂದೆ ಫೇಸ್‌ಬುಕ್ ನಡೆಸಿದ್ದ ಆ ಖರೀದಿಗಳಿಗೆ ಒಪ್ಪಿಗೆ ಸೂಚಿಸಿದ್ದ ಎಫ್ಟಿಸಿ ಇದ್ಯಾಕೆ ಹೀಗೆ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿದೆ ಅನ್ನುವುದಕ್ಕೆ ಪರಿಸ್ಥಿತಿಯೇ ಉತ್ತರವಾಗಿ ನಿಲ್ಲುತ್ತದೆ. 2012-14 ವಿಭಿನ್ನವಾಗಿತ್ತು, ಎಲ್ಲವೂ ಉಚಿತವಾಗಿ ಲಭ್ಯವಿದ್ದಾಗ ಸ್ಪರ್ಧೆ ಅನ್ನುವುದು ಬೇರೆಯೇ ರೀತಿಯದಾಗಿರುತ್ತದೆ. ಅಂದು ಅವೇ ಕಂಪೆನಿಗಳಾಗಲಿ, ಜನರಾಗಲಿ, ಎಲ್ಲವೂ ಉಚಿತವಾಗಿದ್ದಾಗ ಜನರಿಗೆ, ಏನೂ ತೊಂದರೆಯಾಗದು ಎನ್ನುವ ನಿಲುವನ್ನು ಹೊಂದಿದ್ದರು. ಆದರೆ ಈಗ ಅದು ನಿಧಾನವಾಗಿ ಬದಲಾಗುತ್ತಿದೆ. ಆದರೀಗ ಅದೇ ಎಫ್ಟಿಸಿ ಎಂಟು ವರ್ಷಗಳ ಹಿಂದೆ ಕೈಗೊಂಡ ನಿರ್ಣಯವನ್ನು ಯಾಕೆ ಬದಲಾಯಿಸಿದೆ ಅನ್ನುವ ಮಾತು ಒಂದೆಡೆಯಾದರೆ, ಅದು ಕೇವಲ ತಪ್ಪಿತಸ್ಥ ಭಾವನೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದನ್ನು ತೋರ್ಪಡಿಸುವ ಮೂಲಕ ಕೇಸನ್ನು ಗೆಲ್ಲಬೇಕಿದೆ ಮತ್ತು ಫೇಸ್‌ಬುಕ್ ಅನ್ನು ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮನ್ನು ಮಾರುವಂತೆ ಮಾಡಬೇಕಿದೆ.

ಅಮೆರಿಕದ 46 ರಾಜ್ಯಗಳು, ವಾಷಿಂಗ್ಟನ್ ಡಿಸಿ ಮತ್ತು ಗುವಾಮ್ ಸೇರಿ ಎಲ್ಲಾ ಅಟರ್ನಿ ಜನರಲ್‌ಗಳು ಈ ಕೇಸಿನ ಪರವಾಗಿದ್ದು, ನ್ಯೂ ಯಾರ್ಕ್‌ನ ಅಟಾರ್ನಿ ಜನರಲ್ ಹೇಳುವ ಪ್ರಕಾರ ಸರಿಸುಮಾರು ಒಂದು ದಶಕದಿಂದ ಫೇಸ್‌ಬುಕ್ ತನ್ನಲ್ಲಿರುವ ಹಣದ ಬಲದಿಂದ ಪುಟ್ಟ ಸ್ಪರ್ಧಿಗಳನ್ನು ತುಳಿದು ಹಾಕುವ, ಅವುಗಳನ್ನು ಒದ್ದೋಡಿಸುವ ಮೂಲಕ ಸಾಮಾನ್ಯ ಬಳಕೆದಾರರಿಗೆ ತೊಂದರೆ ಯುಂಟು ಮಾಡುತ್ತಿದೆ ಎಂದಿದ್ದಾರೆ.

ಈ ಹಿಂದೆ 1998ರಲ್ಲಿ ಮೈಕ್ರೋಸಾಫ್ಟ್‌ ತನ್ನ ಬ್ರೌಸರನ್ನು ವಿಂಡೋಸ್ ಜೊತೆ ಉಚಿತವಾಗಿ ನೀಡುವ ಮೂಲಕ ನೆಟ್ಸ್ಕೇಪ್ ಎನ್ನುವ ಬ್ರೌಸರ್‌ನ ಬೆಳವಣಿಗೆಯನ್ನು ತಡೆಯುವ ಹಾಗೂ ಅದನ್ನು ಹೆಡೆಮುರಿ ಕಟ್ಟುವ ಪ್ರಯತ್ನ ಎಂದು ಇದೇ ಎಫ್ಟಿಸಿ ವಾದಿಸಿತ್ತು. ಒಮ್ಮೆ ಅಲ್ಲಿನ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ವಿರುದ್ಧ ಸೋತ ಮೈಕ್ರೋಸಾಫ್ಟ್ ನಂತರ ಇನ್ನೊಂದು ಮನವಿಯನ್ನು ಸಲ್ಲಿಸಿದಾಗ ಅದಕ್ಕೆ ಮಣಿದಿತ್ತು. ಇನ್ನು ಮೊನ್ನೆ ಮೊನ್ನೆಯಷ್ಟೇ, ಅಂದರೆ ಅಕ್ಟೋಬರ್‌ನಲ್ಲಿ ಗೂಗಲ್ ಸಂಸ್ಥೆ ಸಹ ತನ್ನ ಸ್ಪರ್ಧಿಗಳನ್ನು
ಮಕಾಡೆ ಮಲಗಿಸುವ ಪ್ರಯತ್ನ ಮಾಡುತ್ತಿದೆಯೆಂದು ಇದೇ ಡಿಓಜೆ (ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್) ಗೂಗಲ್ ವಿರುದ್ಧ ಕೇಸ್ ದಾಖಲಿಸಿದೆ.

ಫೇಸ್‌ಬುಕ್ ಏನು ಹೇಳುತ್ತೆ?
ಫೇಸ್‌ಬುಕ್‌ಗೆ ಯಾವುದೇ ಸ್ಪರ್ಧಿಗಳಿರದಂತೆ ಮಾಡುವ ಪ್ರಯತ್ನ ಅನ್ನುವ ಮಾತಿಗೆ ಫೇಸ್‌ಬುಕ್ ದಿಟ್ಟ ಉತ್ತರ ನೀಡಿದ್ದು, ತನಗೆ ಸ್ಪಷ್ಟವಾದ ಸ್ಪರ್ಧಿಗಳಿದ್ದಾರೆ, ಆಪಲ್, ಗೂಗಲ್, ಟ್ವಿಟರ್, ಅಮೆಜಾನ್, ಸ್ನ್ಯಾಪ್, ಟಿಕ್ಟಾಕ್, ಮೈಕ್ರೋಸಾಫ್ಟ್ ‌‌ನಂತಹ ಕಂಪೆನಿಗಳ ಸೇವೆಗಳನ್ನು ನಮ್ಮ ಗ್ರಾಹಕರು ಬಳಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದಿದೆ. ಈ ಹಿಂದೆ ಇದೇ ನಿಯಂತ್ರಣ ಆಯೋಗ ನಮಗೆ ಖರೀದಿಯ ಒಪ್ಪಿಗೆ ನೀಡಿತ್ತು, ಇದೀಗ ವರ್ಷಗಳ ನಂತರ ಅದು ತನ್ನ ನಿಲುವನ್ನು ಬದಲಾವಣೆ ಮಾಡುತ್ತಿದೆ, ಇದು ನಮ್ಮ
ಬಂಡವಾಳ ತೊಡಗಿಸುವ ಪ್ರಕ್ರಿಯೆಯಲ್ಲಿ ಹಾಗೂ ಆವಿಷ್ಕಾರದ ಹಾದಿಯಲ್ಲಿ ತೊಡಕಾಗಿ ಪರಿಣಮಿಸಲಿದೆ ಎಂದಿದೆ.

ತಮ್ಮ ಕಂಪೆನಿಯಾಗಲಿ ಅಥವಾ ಇತರೆ ಸ್ಪರ್ಧಿಗಳು ಚುನಾವಣೆ, ನಕಾರಾತ್ಮಕ ಕಂಟೆಂಟ್ ಹಾಗೂ ಗೌಪ್ಯತೆಯ ವಿಚಾರದಲ್ಲಿ ಈ ರೀತಿಯ ಪ್ರಶ್ನೆಗಳನ್ನೆದುರಿಸುತ್ತಿದ್ದು, ನಾವಂತೂ ಇದಕ್ಕೆ ತಕ್ಕ ಉತ್ತರಗಳನ್ನು ನೀಡುತ್ತಿದ್ದೇವೆ. ಇದಕ್ಕೂ ಆಂಟಿಟ್ರಸ್ಟ್ಗೂ (ಅಪ ನಂಬಿಕೆ) ಯಾವುದೇ ಸಂಬಂಧವಿಲ್ಲ ಎಂದಿದೆ ಫೇಸ್‌ಬುಕ್. ಯಾವುದೇ ರೀತಿಯಲ್ಲಿ ನೋಡಿದರೂ ನಮ್ಮ ಉತ್ಪನ್ನಗಳ (ಅಂದರೆ ಫೇಸ್ಬುಕ್, ಮೆಸೆಂಜರ್, ವಾಟ್ಸಾಪ್ ಅಥವಾ ಇನ್ಸ್ಟಾಗ್ರಾಮ್) ಗುಣಮಟ್ಟವನ್ನು ಗುರುತಿಸಿ, ಜನರು ತಮ್ಮ ಸೇವೆಯನ್ನು ಪಡೆ ಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಅಂದಿದೆ ಕಂಪೆನಿ.

ಏಕಸ್ವಾಮ್ಯದ ತಂತ್ರಗಳು
ಫೇಸ್‌ಬುಕ್ ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಲು ನಿರ್ಭಿಡೆಯಿಂದ, ದೊಡ್ಡ ಮೊತ್ತದ ಹಣ ವೆಚ್ಚ ಮಾಡಿ ಸಾಕಷ್ಟು ಕ್ರಮಗಳನ್ನು  ಮಾಡುತ್ತಲೇ ಬಂದಿದೆ. ತನ್ನ ಪಾರುಪತ್ಯಕ್ಕೆ ಯಾವುದೇ ಪುಟ್ಟ ಕಂಪೆನಿ ತಡೆಯಾಗಿದ್ದು ಕಂಡು ಬಂದರೆ ಅಂಥವುಗಳನ್ನು ದೊಡ್ಡ ಮೊತ್ತ ನೀಡಿ ಖರೀದಿ ಮಾಡುವ ಮೂಲಕ ಸ್ಪರ್ಧೆಯೇ ಇಲ್ಲದಂತೆ ಮಾಡುತ್ತಿದೆ. ಅಂದು ಒಂದು ಬಿಲಿಯನ್ ಡಾಲರ್‌ಗೆ ಇನ್ಸ್ಟಾಗ್ರಾಮನ್ನು ಹಾಗೂ 19 ಬಿಲಿಯನ್ ಡಾಲರ್‌ಗೆ ವಾಟ್ಸಾಪನ್ನು ಫೇಸ್  ಬುಕ್ ಖರೀದಿ ಮಾಡಿತ್ತು. ಎಲ್ಲಾ ವಿಧದ ಸೇವೆ ನೀಡುವ, ಭವಿಷ್ಯದಲ್ಲಿ ಜಾಹೀರಾತಿಗೆ ಅವಕಾಶ ಸೌಲಭ್ಯಗಳನ್ನೆಲ್ಲವೂ ತನ್ನ ವಶದಲ್ಲಿಟ್ಟುಕೊಳ್ಳುವ ಫೇಸ್‌ಬುಕ್‌ನ ತಂತ್ರವು ಸಾಕಷ್ಟು ಯಶಸ್ಸನ್ನೂ ಪಡೆದಿದೆ. ಇಷ್ಟು ವರ್ಷಗಳ ನಂತರ, ಈಗ ಅದಕ್ಕೊಂದು ತಡೆ ಬಂದಿದೆ.