Saturday, 14th December 2024

ರೈತರ ಸಂಕೋಲೆ ಕಳಚಲು ಐತಿಹಾಸಿಕ ಮಸೂದೆ

ಪ್ರಸ್ತುತ
ಅಮಿತ್ ಶಾ, ಕೇಂದ್ರ ಗೃಹ ಸಚಿವ

ಭಾರತದ ಕೃಷಿ ಕ್ಷೇತ್ರ ಬಹಳ ಕಾಲದಿಂದ ಸರಕಾರದ ನಿರ್ಲಕ್ಷ್ಯದಿಂದ ನಲುಗಿದೆ. ರೈತರನ್ನು ಬಲಿ ಕೊಟ್ಟು ಬೇರೆಯವರಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ರೂಪಿಸಿದ ಕಾಯ್ದೆ ಕಾನೂನುಗಳಿಂದಾಗಿ ಕೃಷಿಯ ನಿಜವಾದ ಲಾಭ ಯಾರಿಗೆ ಸೇರಬೇಕಿತ್ತೋ ಅವರಿಗೆ ಸೇರುತ್ತಿಲ್ಲ.

ಒಂದಾದ ಮೇಲೊಂದರಂತೆ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ರೈತರಿಗೆ ಬಾಯ್ಮಾತಿನಲ್ಲಿ ಶ್ರದ್ದಾಂಜಲಿ
ಸಲ್ಲಿಸಲಾಯಿತೇ ಹೊರತು ರೈತರ ಹಿತದ ಹೆಸರಿನಲ್ಲಿ ಘೋಷಿಸಿದ ಯಾವುದೇ ಯೋಜನೆಗಳೂ ತಳಮಟ್ಟದಲ್ಲಿ ಜಾರಿಗೆ ಬರಲಿಲ್ಲ. ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಹಾಗೂ ರೈತರ ಬದುಕನ್ನು ಸುಧಾರಿಸಲು ಇಲ್ಲಿಯವರೆಗೆ ಬೇಕಾದಷ್ಟು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಆ ಸಮಿತಿಗಳ ತಜ್ಞರು ನೀಡಿದ ಸಲಹೆಗಳೆಲ್ಲ ಕಡತಗಳಲ್ಲಿ ಧೂಳು ಹಿಡಿಯುತ್ತಾ ಕುಳಿತಿವೆ.

ಈ ಅಪಸವ್ಯವನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಕೂಡಲೇ ತೊಡೆದು ಹಾಕಲು ನಿರ್ಧರಿಸಿತು. ಭಾರತದ ಕೃಷಿ ಕ್ಷೇತ್ರದಲ್ಲಿರುವ ಅವಕಾಶಗಳನ್ನು ರೈತರು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯ ವಾಗುವಂತೆ ಮಾಡಲು ಸರ್ಕಾರ ಸಂಕಲ್ಪ ಮಾಡಿತು. ನೀರಾವರಿಗೆ ಉತ್ತೇಜನ ನೀಡುವುದರಿಂದ ಹಿಡಿದು ರೈತರು ತಮ್ಮ ಚಟುವಟಿಕೆಗಳನ್ನು ಜೇನು ಸಾಕಣೆ, ಹೈನುಗಾರಿಕೆಯಂತಹ ಹಲವಾರು ಪೂರಕ ಚಟುವಟಿಕೆಗಳಿಗೆ ವಿಸ್ತರಿಸಲು ಮತ್ತು ಕನಿಷ್ಠ ಬೆಂಬಲ ಬೆಲೆ ಏರಿಕೆಯಿಂದ ಹಿಡಿದು ಸಾವಿರಾರು ಕೋಟಿ ರೂಪಾಯಿ ನೆರವು ನೀಡುವವರೆಗೆ ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಇದರಿಂದಾಗಿ ಹಿಂದಿನ ಸರಕಾರಗಳು ನೀಡುತ್ತಿದ್ದ ಸುಳ್ಳು ಭರವಸೆಗಳು ಹಾಗೂ ಜನಪ್ರಿಯ ಘೋಷಣೆಗಳ
ಬದಲಿಗೆ ರೈತರಿಗೆ ನಿಜವಾಗಿ ಅನುಕೂಲವಾಗುವಂತಹ ಹಲವಾರು ಕ್ರಮಗಳು ಜಾರಿಗೆ ಬರತೊಡಗಿದವು.

ಈ ರೈತಸ್ನೇಹಿ ಉಪಕ್ರಮಗಳ ಮುಂದಿನ ಭಾಗವಾಗಿ ಈಗ ಎರಡು ಮಹತ್ವದ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದೆ.
ಒಂದು, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರ (ಉತ್ತೇಜನ ಹಾಗೂ ಸರಳೀಕರಣ) ಮಸೂದೆ, ಇನ್ನೊಂದು, ರೈತರ (ಸಬಲೀಕರಣ ಹಾಗೂ ರಕ್ಷಣೆ) ಬೆಲೆ ಖಾತ್ರಿ ಮಸೂದೆ. ಇವುಗಳ ವಿರುದ್ಧ ಈಗ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಮತ್ತು ಮಧ್ಯವರ್ತಿಗಳಿಂದ ಉತ್ತೇಜಿತ ಪ್ರತಿಭಟನೆಗಳೇ ಹೊರತು ಮತ್ತೇನೂ ಅಲ್ಲ. ಈ ಮಸೂದೆಗಳು ಕಾಯ್ದೆಯಾಗಿ ಜಾರಿಗೆ ಬಂದ ಮೇಲೆ ಅಗತ್ಯ ವಸ್ತುಗಳ ಕಾಯ್ದೆಗೂ ತಿದ್ದುಪಡಿಯಾಗುತ್ತದೆ. ಆಗ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುವು ದಕ್ಕೆ ವಿಧಿಸಲಾಗಿರುವ ಮಿತಿ ರದ್ದಾಗುತ್ತದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೊಸತೊಂದು ಯುಗ ಆರಂಭವಾಗಲಿದೆ. ರೈತರು ಸಿಲುಕಿಕೊಂಡಿರುವ ಅನ್ಯಾಯದ ಸಂಕೋಲೆಯಿಂದ ಅವರನ್ನು ಬಿಡಿಸುವ ಗುರಿಯನ್ನು ಮೊದಲ ಮಸೂದೆ ಹೊಂದಿದೆ.

ಇಷ್ಟು ದಿನ ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಬೇಕಿತ್ತು. ಅಲ್ಲಿ ಅವರಿಗೆ ಸರಿಯಾದ ಬೆಲೆ ದೊರೆಯುತ್ತಿರಲಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿತ್ತು. ಉತ್ತಮ ಬೆಲೆ ಸಿಗುವವರೆಗೆ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುವುದಕ್ಕೂ ಸರಿಯಾದ ವ್ಯವಸ್ಥೆೆಯಿರಲಿಲ್ಲ. ಇಂತಹ ವ್ಯವಸ್ಥೆಯಲ್ಲಿ ಬೆಳೆಯನ್ನಿಟ್ಟುಕೊಂಡು ಕಾಯುತ್ತಾ
ಕುಳಿತುಕೊಳ್ಳುವುದಕ್ಕಿಂತ ಸಿಕ್ಕ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಗೆ ರೈತರು ಸಿಲುಕಿದ್ದರು. ಮಂಡಿ ಮಾಫಿಯಾಗಳು ರೈತರನ್ನು ಶೋಷಿಸುತ್ತಿದ್ದವು. ದುಬಾರಿ ಸಾಗಣೆ ವೆಚ್ಚದಿಂದಾಗಿ ರೈತರಿಗೆ ಸಿಗುತ್ತಿದ್ದ ಅತ್ಯಲ್ಪ ಲಾಭದಲ್ಲೂ ಇನ್ನೊಂದಿಷ್ಟು ಹಣ ಸೋರಿಹೋಗುತ್ತಿತ್ತು.

ಇದು ಒಂದು ರೀತಿಯಲ್ಲಿ ಸರಕಾರವೇ ರೈತರನ್ನು ಕೊಳ್ಳೆ ಹೊಡೆಯಲು ಮಾಡಿಕೊಟ್ಟ ವ್ಯವಸ್ಥೆೆಯಾಗಿತ್ತು. ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರ ಮಸೂದೆ ಜಾರಿಗೆ ಬಂದ ಮೇಲೆ ರೈತರು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಹೊರಬರಲಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕೋ ಅವರಿಗೆ ಮಾರಬಹುದು. ದೇಶದಲ್ಲಿ ಯಾರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡುತ್ತಾರೋ ಅವರಿಗೆ ಬೆಳೆ ಮಾರಾಟ ಮಾಡಲು ರೈತರು ಸ್ವತಂತ್ರರಾಗುತ್ತಾರೆ. ಖರೀದಿದಾರರು ರೈತರ ಹೊಲಕ್ಕೇ ಬಂದು ಬೆಳೆ ಖರೀದಿಸುವುದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ.

ಹೀಗಾಗಿ ರೈತರ ಆದಾಯ ಏರಿಕೆಯಾಗುತ್ತದೆ. ‘ಒಂದು ದೇಶ, ಒಂದು ಮಾರುಕಟ್ಟೆ’ ಎಂಬ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ. ದೇಶಕ್ಕೆ ಸ್ವಾತಂತ್ರ್ಯ ಬಂದ 73 ವರ್ಷಗಳ ನಂತರ ರೈತರಿಗೆ ಇಂತಹದ್ದೊಂದು ಸ್ವಾತಂತ್ರ್ಯ ಲಭಿಸುತ್ತಿದೆ. ಶೀಘ್ರದಲ್ಲೇ ಜಾರಿಗೆ ಬರಲಿರುವ ಎರಡನೇ ಕಾಯ್ದೆಯಿಂದ ರೈತರು ಒಪ್ಪಂದದ ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಗಲಿದೆ. ಆಗ ರೈತರು ಕೃಷಿ ಉದ್ದಿಮೆಗಳು, ಸಗಟು ವ್ಯಾಪಾರಿಗಳು, ದೊಡ್ಡ ದೊಡ್ಡ ಚಿಲ್ಲರೆ ವ್ಯಾಪಾರಿಗಳು ಹಾಗೂ ರಫ್ತುದಾರರ ಜೊತೆಗೆ ಒಪ್ಪಂದ ಮಾಡಿಕೊಂಡು ಕೃಷಿ ಮಾಡಬಹುದು. ಬೀಜ ಬಿತ್ತನೆ ಮಾಡುವ ಹಂತದಿಂದಲೇ ರೈತರಿಗೆ ಮಾರುಕಟ್ಟೆೆಯ ಸಂಪರ್ಕ ದೊರೆಯುತ್ತದೆ. ಆಗ ಉತ್ಪಾದನೆಯ ಮತ್ತು ಬೆಲೆ ಏರಿಳಿತದ ಅನಿಶ್ಚಯತೆ ಯಿಂದ ರೈತರಿಗೆ ಬಿಡುಗಡೆ ದೊರೆಯುತ್ತದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಉತ್ತಮ ತಂತ್ರಜ್ಞಾನ, ಬೆಳೆ ವಿಮೆ ಹಾಗೂ ಸಾಲದ ವ್ಯವಸ್ಥೆ ಕೂಡ ಲಭಿಸಲಿದೆ. ಬಂಡವಾಳದ ಕೊರತೆಯಿಂದ ನಲುಗುತ್ತಿರುವ ಕೃಷಿ ಕ್ಷೇತ್ರಕ್ಕೆ ಗುತ್ತಿಗೆ ಕೃಷಿ ವ್ಯವಸ್ಥೆೆಯಿಂದಾಗಿ ಹೆಚ್ಚಿನ ಖಾಸಗಿ ಬಂಡವಾಳ ಹರಿದುಬರಲಿದೆ.

ಅದರಿಂದಾಗಿ, ಹೊಸ ಹೊಸ ಕೃಷಿ ಆಧಾರಿತ ಉದ್ದಿಮೆಗಳು ಹಾಗೂ ಉತ್ತಮ ಉಗ್ರಾಣ ವ್ಯವಸ್ಥೆಗಳು ಕೂಡ ತಲೆಯೆತ್ತಲಿವೆ. ಇದರಿಂದಾಗಿ ನಿಂತ ನೀರಾಗಿರುವ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಉಂಟಾಗಲಿದೆ. ತನ್ಮೂಲಕ ರೈತರ ಆದಾಯ ಹೆಚ್ಚಲಿದೆ. ಆಗ ರೈತರು ತಮ್ಮ ಕೃಷಿ ವಿಧಾನಗಳನ್ನು ಇನ್ನಷ್ಟು ಆಧುನೀಕರಣಗೊಳಿಸಿಕೊಳ್ಳಲು ಸಾಧ್ಯವಾಗಲಿದೆ. ವಾಣಿಜ್ಯ ಬೆಳೆಗಳು ಮತ್ತು ಕೃಷಿ ಉದ್ದಿಮೆಗಳಿಂದ ಇರುವ ಬೇಡಿಕೆಗೆ ಅನುಗುಣವಾಗಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಕಾಲಕಾಲಕ್ಕೆ ಬದಲಿಸಿ ಕೊಳ್ಳುವುದಕ್ಕೂ ಅನುಕೂಲವಾಗಲಿದೆ.

ಹಲವಾರು ರಾಜ್ಯಗಳಲ್ಲಿ ಶ್ರೀಮಂತ ಕೃಷಿಕರು ಈಗಾಗಲೇ ಕಾರ್ಪೊರೇಟ್ ಕ್ಷೇತ್ರದ ಜೊತೆಗೆ ಕೈಜೋಡಿಸುವ ಮೂಲಕ ಅದರ ಲಾಭ ಉಣ್ಣುತ್ತಿದ್ದಾರೆ. ಈಗ ಜಾರಿಗೊಳಿಸುತ್ತಿರುವ ಕಾಯ್ದೆಯಿಂದಾಗಿ ಸಣ್ಣ ರೈರಿಗೂ ಈ ಅನುಕೂಲ ದೊರೆಯಲಿದೆ. ಒಮ್ಮೆ ಕಾರ್ಪೊರೇಟ್ ಕಂಪನಿಗಳು ಅಥವಾ ವ್ಯಾಪಾರಿಗಳ ಜೊತೆಗೆ ಒಪ್ಪಂದ ಮಾಡಿಕೊಂಡ ಮೇಲೂ ಯಾವುದೇ ಕ್ಷಣದಲ್ಲಿ ರೈತರು ಅದರಿಂದ ಹಿಂದೆ ಸರಿಯಲು ಸ್ವತಂತ್ರರಾಗಿರುತ್ತಾರೆ. ಅದಕ್ಕಾಗಿ ಅವರಿಗೆ ಯಾವ ದಂಡವನ್ನೂ ವಿಧಿಸುವುದಿಲ್ಲ. ಈ ಒಪ್ಪಂದದ ಕೃಷಿಯಲ್ಲಿ ಭೂಮಿಯ ಮಾರಾಟ, ಲೀಸ್ ಅಥವಾ ಅಡಮಾನಕ್ಕೆ ಸಂಪೂರ್ಣ ನಿಷೇಧವಿದೆ. ಹೀಗಾಗಿ ಈ ಎರಡು ಮಸೂದೆಗಳು ರೈತರಿರೋಧಿ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇಂತಹದ್ದೊಂದು ಗುಲ್ಲೆಬ್ಬಿಸಿವೆ ಅಷ್ಟೆ.

2019ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಎಪಿಎಂಸಿ ಕಾಯ್ದೆ ರದ್ದುಪಡಿಸುವುದಾಗಿ ಹೇಳಿತ್ತು. ಆದರೆ ಈಗ ರೈತರ ಬದಲು ಮಧ್ಯವರ್ತಿಗಳ ಪರ ನಿಂತು ಈ ಸುಧಾರಣೆಯನ್ನು ವಿರೋಧಿಸುತ್ತಿದೆ. ಕೃಷಿ ಮಸೂದೆಗಳ ಅಂಗೀಕಾರದ ವೇಳೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ನಡೆದುಕೊಂಡ ರೀತಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಂಸದೀಯ ವ್ಯವಸ್ಥೆಗೆ ಕಪ್ಪು ಚುಕ್ಕೆಯಿದ್ದಂತೆ. ತಮ್ಮ ರೈತವಿರೋಧಿ ಮನಸ್ಥಿತಿಗೆ ಬೆಂಬಲ ದೊರೆಯದಿರುವುದರಿಂದ ಈ ರಾಜಕೀಯ ಪಕ್ಷಗಳು
ಚಡಪಡಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿಯೇ, ಹೊಸ ಕಾಯ್ದೆಗಳು ಜಾರಿಗೆ ಬಂದರೆ ಕನಿಷ್ಠ ಬೆಂಬಲ ಬೆಲೆ
ವ್ಯವಸ್ಥೆಯೇ ರದ್ದಾಗಿ ಬಿಡುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿವೆ. ಬೆಂಬಲ ಬೆಲೆ ಹೀಗೇ ಮುಂದುವರೆಯುತ್ತದೆ ಎಂದು ರಬಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಸರಕಾರ ಮತ್ತೊಮ್ಮೆ ಎತ್ತಿ ತೋರಿಸಿದೆ.

ಅಲ್ಲದೆ, ಬೆಂಬಲ ಬೆಲೆ ರದ್ದಾಗುವುದಿಲ್ಲ ಎಂದು ಸಂಸತ್ತಿನ ಒಳಗೂ ಹೊರಗೂ ಸ್ಪಷ್ಟವಾಗಿ ಹೇಳಿದೆ. 2013-14ರ ನಂತರ ಗೋಧಿಗೆ ಮತ್ತು ಭತ್ತಕ್ಕೆ ನೀಡುತ್ತಿದ್ದ ಬೆಂಬಲ ಬೆಲೆ ಶೇ.41 ಮತ್ತು ಶೇ.43ರಷ್ಟು ಹೆಚ್ಚಾಗಿದೆ. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಿಗೆ ಶೇ.65ವರೆಗೆ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಸರಕಾರ ಬೆಂಬಲ ಬೆಲೆಯಡಿ ಖರೀದಿಸಿರುವ ಗೋಧಿ ಮತ್ತು ಭತ್ತದ ಪ್ರಮಾಣ ಕೂಡ
ಕ್ರಮವಾಗಿ ಶೇ.73 ಮತ್ತು ಶೇ.114ರಷ್ಟು ಹೆಚ್ಚಾಗಿದೆ. ಬೇಳೆಕಾಳುಗಳ ಖರೀದಿಯಲ್ಲಂತೂ ದಾಖಲೆಯ ಶೇ.4962 ರಷ್ಟು ಏರಿಕೆ ಯಾಗಿದೆ. ಕೃಷಿ ಸಾಲದ ಹೆಚ್ಚಳ, ಸಾಲಕ್ಕೆ ನೀಡುವ ಸಬ್ಸಿಡಿಯಲ್ಲಿ ಹೆಚ್ಚಳ, 16.38 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ, ಯಾಂತ್ರೀಕೃತ ಕೃಷಿಗೆ ಪ್ರೋತ್ಸಾಹ ಹೆಚ್ಚಳ ಹಾಗೂ 1 ಲಕ್ಷ ಕೋಟಿ ರೂ. ಮೊತ್ತದ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ ಮುಂತಾದ ಕ್ರಮಗಳು ಮೋದಿ ಸರ್ಕಾರ ಕೃಷಿ ಕ್ಷೇತ್ರ ಮತ್ತು ರೈತರ ಒಳಿತಿಗೆ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಾಕ್ಷಿ. ಈ ಸರಕಾರದ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣ ಶೇ.7.29ರಷ್ಟು ಹೆಚ್ಚಾಗಿದೆ.

ತೋಟಗಾರಿಕೆ ಬೆಳೆಗಳ ಉತ್ಪಾದನೆ ಶೇ.12.4 ರಷ್ಟು ಹಾಗೂ ಬೇಳೆಕಾಳುಗಳ ಉತ್ಪಾದನೆ ಶೇ.20.65ರಷ್ಟು  ಹೆಚ್ಚಾಗಿದೆ. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ಮೋದಿ ಸರಕಾರ 13.26 ಕೋಟಿ ರೈತರಿಗೆ ಬೆಳೆ ವಿಮೆಯ ಭದ್ರತೆಯನ್ನೂ ಒದಗಿಸಿದೆ. 10.21 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ 94,000 ಕೋಟಿ ರೂ.  ನೇರ ನಗದು ವರ್ಗಾವಣೆ ಮಾಡಲಾ ಗಿದೆ.

‘ಈ ಭೂಮಿಯ ಮೇಲೆ ಯಾರಿಗಾದರೂ ತಲೆಯೆತ್ತಿ ನಡೆಯುವ ಹಕ್ಕಿದ್ದರೆ ಅದು ರೈತರಿಗೆ. ಏಕೆಂದರೆ ಭೂಮಿಯ ಸಂಪತ್ತನ್ನು ಹೊರ ತೆಗೆದು ದೇಶಕ್ಕೆ ನೀಡುವವರು ರೈತರು’ ಎಂದು ಸರ್ದಾರ್ ಪಟೇಲ್ ಹೇಳಿದ್ದರು. ಮೋದಿಯವರ ನಾಯಕತ್ವದಲ್ಲಿ ಇಂದು ಬಿಜೆಪಿ ಸರಕಾರ ದೇಶದ ರೈತರನ್ನು ಸಬಲೀಕರಣಗೊಳಿಸಲು ಮತ್ತು ಅವರನ್ನು ಆತ್ಮನಿರ್ಭರರನ್ನಾಗಿ ಮಾಡಲು ಐತಿಹಾಸಿಕ ಹಾಗೂ ಕ್ರಾಂತಿಕಾರಿ ಕ್ರಮ ಕೈಗೊಂಡಿದೆ ಎಂಬ ಹೆಮ್ಮೆ ನನಗಿದೆ.