Friday, 13th December 2024

ಜಾನಪದವೇ ಜೀವ ರಂಗೋಲಿಯೇ ಉಸಿರು

ಶಶಿಧರ ಹಾಲಾಡಿ

ರಂಗೋಲಿ ಕಲೆಯಲ್ಲಿ ಡಾಕ್ಟರೇಟ್‌ ಪಡೆದ ಮೊದಲ ಮಹಿಳೆ ಭಾರತಿ ಮರವಂತೆ

ಮನೆ ಮುಂದೆ ಬಿಡಿಸುವ ರಂಗೋಲಿ ಮತ್ತು ಹಸೆ ಚಿತ್ತಾರಗಳು ನೋಡಲು ಸಾಮಾನ್ಯ ಎನಿಸಬಹುದು. ಆದರೆ ಅದನ್ನೇ ಸಂಶೋಧನೆಯ ಕ್ಷೇತ್ರವಾಗಿ ಆಯ್ದುಕೊಂಡು, ಅಧ್ಯಯನ ನಡೆಸಿ, ಮಹಾಪ್ರಬಂಧ ಮಂಡಿಸಿದವರು ಜಾನಪದ ತಜ್ಞೆ ಡಾ. ಭಾರತಿ ಮರವಂತೆ. ಅವರು ರಂಗೋಲಿ ಕಲಾವಿದೆಯೂ ಹೌದು.

ರಂಗೋಲಿ ಮತ್ತು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಡಾ.ಭಾರತಿ ಮರವಂತೆಯವರದ್ದು ಸಾಹಸಮಯ
ಜೀವನ. ಉಡುಪಿ ಜಿಲ್ಲೆೆಯ ಪುಟ್ಟ ಗ್ರಾಮ ಮರವಂತೆಯಲ್ಲಿ ಜನನ. ಆ ದಿನಗಳಲ್ಲಿ ಮನೆಯಲ್ಲಿ ಹೆಚ್ಚಿನ ಸೌಕರ್ಯ ಇಲ್ಲದ ಕಾರಣಕ್ಕೆ, ಮಾಧ್ಯಮಿಕ ವಿದ್ಯಾಭ್ಯಾಸಕ್ಕೇ ತೊಂದರೆಯಾಗುವ ದಿನಗಳು ಎದುರಾಗಿದ್ದವು.

ಆ ಸ್ಥಿತಿಯನ್ನು ದಾಟಿ, ಬಂಧುಗಳ ಮತ್ತು ಹಿತೈಷಿಗಳ ಸಹಕಾರದಿಂದ ಪದವಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ. ಮತ್ತು ‘ಕರಾವಳಿ ಕರ್ನಾಟಕದಲ್ಲಿ ರಂಗೋಲಿ ಕಲೆ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದದ್ದು, ಅಧ್ಯಾಪನ ವೃತ್ತಿ ಕೈಗೊಂಡದ್ದು ಒಂದು ಹಂತ.

ಈ ನಡುವೆ ಮನೆಯ ಸುತ್ತಲೂ ಹರಡಿರುವ ಹಳ್ಳಿಗಳಲ್ಲಿ ತುಂಬಿದ್ದ ಜನಪದ ಕಲೆ ಮತ್ತು ಹಸೆ ಚಿತ್ತಾರದ ಕುರಿತು ವಿಪರೀತ ಆಸಕ್ತಿ. ಬುಡಕಟ್ಟು ಜನರು ಬಿಡಿಸುವ ಹಸೆ, ರಂಗೋಲಿಗಳ ಕುರಿತು ವಿವರ ಸಂಗ್ರಹಿಸುತ್ತಿದ್ದಾಗಲೇ, ಬಣ್ಣ ಬಣ್ಣದ ಪೂಜಾ ಮಂಡಲಗಳಲ್ಲೂ ಆಸಕ್ತಿ. ಉಡುಪಿಯಲ್ಲಿ ಚಿತ್ರಕಲೆ ಅಧ್ಯ ಯನದ ಸಂದರ್ಭದಲ್ಲಿ ರಂಗೋಲಿ ಪಿತಾಮಹ ಬಿ.ಪಿ.  ಬಾಯರಿ ಯವರ ಮಾರ್ಗದರ್ಶನ.

1990ರ ದಶಕದಲ್ಲೇ ಹೊಸ ಹೊಸ ರಂಗೋಲಿಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುವ ಹವ್ಯಾಸವು ಸಾರ್ಥಕತೆಯನ್ನು ಕಂಡದ್ದೆೆಂದರೆ, ಆ ವಿಷಯದಲ್ಲೇ ಡಾಕ್ಟರೇಟ್ ಪದವಿ ಪಡೆದ ಕ್ಷಣ. ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಪಡೆದ ಮೊದಲಿಗರಾಗಿ ದಾಖಲೆ ಬರೆದ ಅಪೂರ್ವ ಕ್ಷಣ. ಮನೆ ಮುಂದೆ, ಬಾಗಿಲ ಮುಂದೆ ಹಾಕುವ ರಂಗೋಲಿಯಲ್ಲೇ ಡಾಕ್ಟರೇಟ್ ಪದವಿ ಪಡೆಯಲು ಸಾಧ್ಯವೆ ಎಂದು ಅಚ್ಚರಿಯಿಂದ ಹುಬ್ಬೇರಿಸಿದವರುಂಟು, ಆ ಸಾಧನೆಯನ್ನು ಕಂಡು, ಅತಿ ಅಭಿಮಾನದಿಂದ ಬೆರಗಾದವರೂ ಉಂಟು. ಹಳ್ಳಿ ಶಾಲೆಯಲ್ಲಿ ಕಲಿತ ಭಾರತಿಯವರು, ರಂಗೋಲಿಯಲ್ಲಿ ಉನ್ನತ ಅಧ್ಯಯನ ಮಾಡಿ ‘ಡಾಕ್ಟರ್ ಭಾರತಿ ಮರವಂತೆ’ ಯಾಗಿ ಗುರುತಿಸಿಕೊಂಡದ್ದು ಇನ್ನೊಂದು ಹಂತ.

ನೆಲದ ಮೇಲೆ ಅರಳುವ ಹೂವುಗಳು

ಡಾ.ಭಾರತಿ ಮರವಂತೆಯವರ ಕೈಯಲ್ಲಿ ರೂಪುಗೊಳ್ಳುವ ರಂಗೋಲಿಗಳು ಅಕ್ಷರಶಃ ನೆಲದ ಮೇಲೆ ಅರಳುವ ಕಲಾಕೃತಿ ಗಳು. ಎಷ್ಟೋ ಸಮಾರಂಭಗಳಲ್ಲಿ, ಪ್ರಾತ್ಯಕ್ಷಿಕೆಗಳಲ್ಲಿ ಭಾರತಿ ಮರವಂತೆಯವರು ಬಿಡಿಸಿದ ವಿಶಾಲ ರಂಗೋಲಿಗಳನ್ನು, ಕಾರ್ಯಕ್ರಮ ಮುಗಿದ ನಂತರ ಅಳಿಸಲು ಮನಸ್ಸಾಗದೇ ಹಾಗೆಯೇ ಉಳಿಸಿಕೊಂಡಿದ್ದುಂಟು. ಜಾಗವನ್ನು ಚೊಕ್ಕಟ ಮಾಡುವ ಅನಿವಾರ್ಯತೆ ಬಂದಾಗ, ಛೆ, ಇಷ್ಟೊಂದು ಚಂದದ ರಂಗೋಲಿಯನ್ನು ಅಳಿಸಬೇಕಲ್ಲಾ ಎಂದು ನಿರ್ವಾಹಕರು ಮತ್ತು ಚೊಕ್ಕಟ ಮಾಡುವ ಸಿಬ್ಬಂದಿ ಬೇಸರಿಸಿಕೊಂಡಿದ್ದೂ ಉಂಟು!

ಡಾ.ಭಾರತಿ ಮರವಂತೆಯವರು ಬಿಡಿಸುವ ರಂಗೋಲಿಗಳೇ ಹಾಗೆ. ಬಹು ಸುಂದರ ವರ್ಣ ವಿನ್ಯಾಸಗಳನ್ನು ರಂಗೋಲಿಯ ಮೂಲಕ ಒಡಮೂಡಿಸಬಲ್ಲ ಭಾರತಿಯವರು, ವಿವಿಧ ಸಂದರ್ಭಗಳಿಗೆ ತಕ್ಕಂತೆ ಹೊಸ ಹೊಸ ಪರಿಕಲ್ಪನೆಯ ರಂಗೋಲಿ ಯನ್ನು ರೂಪುಗೊಳಿಸಿ, ಸ್ವತಃ ನೆಲದ ಮೇಲೆ ಬಿಡಿಸಬಲ್ಲವರು. ಅವರು ಹಾಕಿದ ರಂಗವಲ್ಲಿಗಳನ್ನು ಕಂಡಾಗ ಅವರ ಕಲಾಚತುರತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸದೇ ಇರಲು ಸಾಧ್ಯವೇ ಇಲ್ಲ.

ಕೆಂಪೇಗೌಡ ರಂಗವಲ್ಲಿ
ಭಾರತಿ ಮರವಂತೆಯವರೇ ವಿನ್ಯಾಸಗೊಳಿಸಿದ ಅಂತಹ ಒಂದು ರಂಗೋಲಿ ಎಂದರೆ ಬೆಂಗಳೂರು ಕೆಂಪೇಗೌಡರ ರಂಗೋಲಿ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ರಂಗವಲ್ಲಿ ಬಿಡಿಸಲೆಂದೇ ಆಹ್ವಾನಿತರಾಗಿ ಬಂದ ಭಾರತಿಯವರು, ಒಂದು
ದಿನದ ಅವಧಿಯಲ್ಲಿ ರೂಪಿಸಿದ ಆ ರಂಗವಲ್ಲಿಯು ಒಂದು ವರ್ಣಕಲಾಕೃತಿ. ಆ ವಿಶಾಲ ರಂಗವಲ್ಲಿಯಲ್ಲಿ ಕೆಂಪೇಗೌಡರ
ಆಡಳಿತ, ಕೋಟೆ, ವಿವಿಧ ಸ್ಮಾರಕಗಳು, ಶಾಸನಗಳು, ಲಾಂಛನ ಮೊದಲಾದವುಗಳ ಬಣ್ಣದಲ್ಲಿ ಒಡಮೂಡಿದ್ದರ ಜತೆ,
ಬೆಂಗಳೂರಿನ ಮಿನಿ ಇತಿಹಾಸವೂ ಅಡಕಗೊಂಡಿತ್ತು.

ಬೆಂಗಳೂರಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ ಈ ರಂಗವಲ್ಲಿಯನ್ನು ಕಂಡು ಆ ಮಹಾನಗರದ ಜನರು ನಿಬ್ಬೆರಗಾದರು. ಬೆಂಗಳೂರಿನ ಇತಿಹಾಸವನ್ನು ಡಾ.ಭಾರತಿ ಮರವಂತೆಯವರು ಅಧ್ಯಯನ ಮಾಡಿ, ಆ ರಂಗವಲ್ಲಿಯನ್ನು ರಚಿಸಿದ್ದು ವಿಶೇಷ.
ಭಾರತ ಮರವಂತೆಯವರಿಗೆ ಹೆಚ್ಚು ತೃಪ್ತಿ ಕೊಟ್ಟ ಮತ್ತು ಅಪಾರ ಜನಪ್ರಿಯತೆ ಗಳಿಸಿಕೊಟ್ಟ ಇನ್ನೊಂದು ಹವ್ಯಾಸವೆಂದರೆ,
ರಂಗವಲ್ಲಿ ಪ್ರಾತ್ಯಕ್ಷಿಕೆ ಮತ್ತು ತರಬೇತಿ.

ವಿವಿಧ ಊರುಗಳಲ್ಲಿ ಆಸಕ್ತರಿಗೆ ರಂಗವಲ್ಲಿ ರಚನೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದು, ಆ ಸಂದರ್ಭದಲ್ಲಿ ಅವರು ಬಹು ಬೇಗನೆ ರಚಿಸುವ ವಿಶಾಲ ರಂಗವಲ್ಲಿಗಳನ್ನು ಕಂಡು ಎಲ್ಲರೂ ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 5,000ಕ್ಕೂ ಹೆಚ್ಚು ಜನ ರಂಗವಲ್ಲಿ ರಚನೆಯಲ್ಲಿ ತರಬೇತಿ ಪಡೆದಿದ್ದಾರೆ.

ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಸಹ ಭಾರತಿಯವರ ಇನ್ನೊಂದು ನೆಚ್ಚಿನ ಹವ್ಯಾಸ. ಪುರಸ್ಕಾರ ಡಾ.ಭಾರತಿ ಮರವಂತೆಯವರ ರಂಗವಲ್ಲಿ ಕಲಾಕೌಶಲವನ್ನು ಕಂಡು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಸವ ರತ್ನ ರಾಷ್ಟ್ರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಕಲಾಮಾಧ್ಯಮ ಪ್ರಶಸ್ತಿಯೂ ಸೇರಿದಂತೆ 30ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾರತಿಯವರು ಭಾಜನರಾಗಿದ್ದಾರೆ.

ಚಿತ್ರಕಲೆಯನ್ನು ಅಧ್ಯಯನ ಮಾಡಿರುವ ಡಾ.ಭಾರತಿಯವರು, ಅದರಲ್ಲೂ ಸಾಕಷ್ಟು ಪರಿಶ್ರಮ ತೋರಿದ್ದು, ರಂಗೋಲಿಯನ್ನು ಪೈಂಟಿಂಗ್ ರೂಪದಲ್ಲಿ ರಚಿಸಿ, ನವೋನ್ಮೇಷ ತೋರಿದ್ದಾರೆ. ಜಾನಪದ ವಿಶ್ವವಿದ್ಯಾಲಯದ ನಿಘಂಟು ರಚನೆಯಲ್ಲೂ ತೊಡಗಿಕೊಂಡಿರುವ ಭಾರತಿಯವರು, ಸದ್ಯ ಆಫ್ರಿಕಾ ಜನಪದದ ಕುರಿತು ಲೇಖನ ರಚನೆ ಮತ್ತು ಸಂಶೋಧನೆಯಲ್ಲಿ ಮಗ್ನರಾಗಿದ್ದಾರೆ.

ಸಂಶೋಧನೆಯಲ್ಲಿ ಒಲವು
ಪ್ರಸ್ತುತ ಗೋಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿಯಲ್ಲಿರುವ ಡಾ. ಭಾರತಿ ಮರವಂತೆಯವರು, ಸಂಶೋಧನೆಯಲ್ಲೂ ತೊಡಗಿಕೊಂಡಿದ್ದಾರೆ. ಆಫ್ರಿಕಾದ ಜನಪದದ ಕುರಿತು ವಿಸ್ತಾರವಾದ ಯೋಜನೆಯ ಅಂಗವಾಗಿ, ಅಲ್ಲಿನ ಜನಪದದ ಕುರಿತು ಸಾಕಷ್ಟು ಅಧ್ಯಯನ ನಡೆಸಿ, ಲೇಖನಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಕನ್ನಡ ಜಾನಪದ ನಿಘಂಟು
ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಾಕಷ್ಟು ಕೊಡುಗೆ ನೀಡಿದ್ದಾರೆ.

ಜನಪದ ಮತ್ತ ರಂಗೋಲಿಯ ಕುರಿತು ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುವುದು ಸಹ ಅವರ ಇನ್ನೊಂದು ಜನಪ್ರಿಯ ಹವ್ಯಾಸ. ಕೆಲಕಾಲ ರಂಗೋಲಿಗೆ ಮೀಸಲಾದ ಪತ್ರಿಕೆಯನ್ನೂ ಸಂಪಾದಿಸಿ, ಹೊರತಂದರು. ಇವರ ಲೇಖನಿಯಿಂದ ಹಲವು ಪುಸ್ತಕಗಳೂ ಹೊರಬಂದಿವೆ.

***

ಗ್ರಾಮೀಣ ಪ್ರದೇಶದಲ್ಲಿ ಆಸಕ್ತರ ನಡುವೆ ರಂಗೋಲಿ ರಚನೆ ಮಾಡುತ್ತಾ, ಪ್ರಾತ್ಯಕ್ಷಿಕೆ ನೀಡುತ್ತಾ, ಅವರಿಗೂ ರಂಗೋಲಿ ರಚನೆ ಯಲ್ಲಿ ತರಬೇತಿ ಕೊಡುವಾಗ ಬಹಳಷ್ಟು ಸಂತೃಪ್ತಿ ಕಾಣುತ್ತೇನೆ.
-ಡಾ. ಭಾರತಿ ಮರವಂತೆ