Wednesday, 11th December 2024

ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲು ಮ.ಪ್ರದೇಶ ಸಚಿವ ಸಂಪುಟ ಅನುಮೋದನೆ

ಭೋಪಾಲ್‌: ಕಳ್ಳಭಟ್ಟಿ ದಂಧೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಲು ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಮಧ್ಯಪ್ರದೇಶದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಈ ಪ್ರಕರಣದಲ್ಲಿ ಸಾವು ಸಂಭವಿಸಿದಲ್ಲಿ ಜೀವಾವಧಿ ಸಜೆ ಮತ್ತು ತೀವ್ರ ಸ್ವರೂಪದ ದಂಡ ವಿಧಿಸಲು ಆಗುವಂತೆ ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ ಜತೆಗೆ 20 ₹ ಲಕ್ಷದವರೆಗೂ ದಂಡ ವಿಧಿಸುವ ಪ್ರಸ್ತಾವವಿದೆ. ರಾಜ್ಯ ಶಾಸನಸಭೆ ಒಮ್ಮೆ ಮಸೂದೆಗೆ ಅನುಮೋದನೆ ನೀಡಿ ರಾಜ್ಯಪಾಲರ ಅಂಕಿತ ದೊರೆತಂತೆಯೇ ಇದು ಜಾರಿಗೆ ಬರಲಿದೆ. ಇಂದೋರ್‌ನಲ್ಲಿ ಈಚೆಗೆ ಕಳ್ಳಬಟ್ಟಿ ಸೇವಿಸಿ ಏಳು ಮಂದಿ ಮೃತಪಟ್ಟಿದ್ದರು.

ಮದ್ಯದ ಅಕ್ರಮ ಮಾರಾಟ ಹಾಗೂ ಕಳ್ಳಬಟ್ಟಿ ದಂಧೆಯನ್ನು ಹತ್ತಿಕ್ಕುವುದು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಗೃಹ ಸಚಿವ ನರೋತ್ತಮ್‌ ಮಿಶ್ರಾ ಮಾಹಿತಿ ನೀಡಿದರು. ಕಳ್ಳಬಟ್ಟಿಯಿಂದ ದೈಹಿಕವಾಗಿ ತೊಂದರೆಯಾದಲ್ಲಿ ₹ 10 ಲಕ್ಷದಿಂದ ₹ 14 ಲಕ್ಷವರೆಗೆ ದಂಡ ವಿಧಿಸಲು, ಕನಿಷ್ಠ 5 ರಿಂದ 10 ವರ್ಷದವರೆಗೂ ಸಜೆ ವಿಧಿಸಲು ಅವಕಾಶವಿದೆ. ಸಜೆ ಪ್ರಮಾಣ ಕನಿಷ್ಠ 1 ವರ್ಷದಿಂದ ಗರಿಷ್ಠ 6 ವರ್ಷವಾಗಿದೆ ಎಂದರು.