Wednesday, 11th December 2024

ಎತ್ತಿನಹೊಳೆ ಕಾರ್ಯಪಾಲಕ ಅಭಿಯಂತರರಿಗೆ ಚಳಿ ಬಿಡಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಬೇಲೂರು: ವಿದ್ಯುತ್ ಕಂಬ ತೆರವುಗೊಳಿಸಿದೆ ಕಾಂಕ್ರೀಟ್ ರಸ್ತೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಕಾರ್ಯಪಾಲಕ ಅಭಿಯಂತರರಿಗೆ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಳಿ ಬಿಡಿಸಿದ ಘಟನೆ ತಾಲೂಕಿನ ಅಂಗಡಿಹಳ್ಳಿ ಗ್ರಾಮದಲ್ಲಿ ನಡೆಯಿತು.

ಹಗರೆ ಗ್ರಾಮ ಪಂಚಾಯಿತಿಗೆ ಒಳಪಡುವ ಅಂಗಡಿಹಳ್ಳಿ ಗ್ರಾಮದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಹಗರೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮಂಜುನಾಥ್  ವಿದ್ಯುತ್ ಕಂಬಗಳನ್ನು ತೆರವು ಗೊಳಿಸದೇ ಕಾಂಕ್ರೀಟ್ ಕಾಮಗಾರಿ ನಿರ್ಮಾಣ ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಜೊತೆಗೆ ಒಬ್ಬ ಕಾರ್ಯಪಾಲಕ ಅಭಿಯಂತರ ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಇದೇ ವೇಳೆ ನೆರೆದಿದ್ದ ಸಾರ್ವಜನಿಕರು ಕೂಡ ಆರೋಪಿಸಿದಾಗ ಕೆಂಡಾಮಂಡಲವಾದ ಜಿಲ್ಲಾ ಉಸ್ತುವಾರಿ ಸಚಿವ ಅಧಿಕಾರಿಗಳಿಗೆ ತರಾಟೆ ತೆಗೆದು ಕೊಂಡರು.

ತಾವು ಕಾರ್ಯಪಾಲಕ ಇಂಜಿನಿಯರ್ ಕಾಮಗಾರಿ ಮಾಡುವ ಬಗ್ಗೆ ಅರಿವಿಲ್ಲವೇ. . ? ನಾಗರಿಕರಿಗೆ ಯಾವುದೇ ತೊಂದರೆಯಾಗ ದಂತೆ ಮೊದಲು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಾಮಗಾರಿ ಮಾಡಬೇಕಲ್ಲ ಡಬಲ್ ಬಿಲ್ ಮಾಡಲು ಈ ರೀತಿ ಮಾಡು ತ್ತಿದ್ದೀರಿಯೇ. . ? ತಕ್ಷಣ ನನಗೆ ಸಂಜೆಯೊಳಗೆ ಇರೋ ಮಾಹಿತಿಯನ್ನು ನೀಡಬೇಕು ಜೊತೆಗೆ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿದ್ದರೆ ಕೂಡಲೇ ವಿದ್ಯುತ್ ಕಂಬವನ್ನು ತೆರವುಗೊಳಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ವೇದಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರಿಗೆ ತರಾಟೆ ತೆಗೆದುಕೊಂಡು.

ಜನರ ಸಮಸ್ಯೆ ಆಲಿಸಿ ಸೂಕ್ತ ನೆರವು ಹಾಗೂ ಪರಿಹಾರ ನೀಡುವ ಸಲುವಾಗಿ ಇಂದು ಬೇಲೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿದೆ ಇದೇ ರೀತಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಿ ಜನರ ಸಮಸ್ಯೆ ಆಲಿಸಿ ಸ್ಪಂದಿಸಲಾಗುವುದು ಎಂದು ಸಚಿವರಾದ ಕೆ.ಗೋಪಾಲಯ್ಯ ತಿಳಿಸಿದರು.