ವರ್ತಮಾನ
maapala@gmail.com
ನರೇಂದ್ರ ಮೋದಿ ಮತ್ತು ಪ್ರತಿಪಕ್ಷಗಳ ನಡುವಿನ ಲೋಕಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗುತ್ತಿದೆ. ಕರ್ನಾಟಕವೂ ಇದಕ್ಕೆ ಹೊರತಾ ಗಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಗಳಿಸಿದ ಜನಬೆಂಬಲವನ್ನು ಕಾಂಗ್ರೆಸ್ ಉಳಿಸಿಕೊಳ್ಳುತ್ತದೋ ಅಥವಾ ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತದೋ ಎಂಬುದನ್ನು ಕಾದುನೋಡಬೇಕು.
ದೇಶದಲ್ಲಿ ಕಳೆದ ಒಂದು ದಶಕದ ರಾಜಕಾರಣವನ್ನು ಗಮನಿಸಿದಾಗ ಎದ್ದು ಕಾಣುವ ವ್ಯಕ್ತಿತ್ವ ನರೇಂದ್ರ ಮೋದಿ ಅವರದ್ದು. ೨೦೦೨ರಲ್ಲಿ ಸಂಭವಿಸಿದ
ಗೋಧ್ರಾ ಹತ್ಯಾಕಾಂಡದ ಬಳಿಕ ಜಾಗತಿಕ ಮಟ್ಟದಲ್ಲಿ ವಿವಾದಿತ ವ್ಯಕ್ತಿಯಾಗಿ ಕಾಣಿಸಿಕೊಂಡ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ ಇಂದು ವಿಶ್ವ ಮಟ್ಟದಲ್ಲಿ ನಾಯಕನಾಗಿ ಹೊರಹೊಮ್ಮಿದ್ದಾರೆ.
೨೦೦೪ರ ಬಳಿಕ ಹತ್ತು ವರ್ಷ ದೇಶವನ್ನಾಳಿದ ಯುಪಿಎ ಸರಕಾರ ಗೋಧ್ರಾ ಪ್ರಕರಣವನ್ನು ರಾಜಕೀಯಗೊಳಿಸಿ, ಮೋದಿ ಅವರನ್ನು ಇನ್ನಿಲ್ಲದಂತೆ
ಕಾಡಿ, ಮುಖ್ಯಮಂತ್ರಿ ಎಂಬುದನ್ನೂ ಲೆಕ್ಕಿಸದೆ ದಿನವಿಡೀ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿ ವಿಚಾರಣೆ ಮಾಡದೇ ಇದ್ದಿದ್ದರೆ, ಗೋಧ್ರಾ ಹತ್ಯಾಕಾಂಡಕ್ಕೆ
ಮೋದಿಯವರೇ ನೇರಕಾರಣ ಎಂಬುದನ್ನು ಸಾಬೀತುಪಡಿಸಲು ಎಲ್ಲಾ ಹಂತಗಳಲ್ಲೂ ಪ್ರಯತ್ನಿಸದೇ ಇದ್ದಿದ್ದರೆ ಇಂದು ಕಾಂಗ್ರೆಸ್ ಈ ಪರಿಸ್ಥಿತಿಗೆ
ತಲುಪುತ್ತಿರಲಿಲ್ಲ. ಮೋದಿ ಪ್ರಧಾನಿಯಾಗಿ ಒಂದು ದಶಕ ಅಧಿಕಾರ ನಡೆಸಿ ಮೂರನೇ ಬಾರಿಗೂ ಮತ್ತೆ ಗದ್ದುಗೆಗೇರುವ ಪರಿಸ್ಥಿತಿ ನಿರ್ಮಾಣ
ವಾಗುತ್ತಿರಲಿಲ್ಲ. ಅಂದು ಕಾಂಗ್ರೆಸ್ ಮಾಡಿದ ಆ ಸೇಡಿನ ರಾಜಕಾರಣ ಇಂದು ಆ ಪಕ್ಷವನ್ನೇ ಆಪೋಶನ ತೆಗೆದುಕೊಳ್ಳುವ ಮಟ್ಟಕ್ಕೆ ಮೋದಿ
ಬೆಳೆದು ನಿಂತಿದ್ದಾರೆ.
ದೇಶಾದ್ಯಂತ ನಡೆದ ಸಮೀಕ್ಷೆಗಳೇ ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ’ ಎಂಬುದನ್ನು ಹೇಳುತ್ತಿವೆ. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಹಿಂದಿಗಿಂತಲೂ ಹೆಚ್ಚು ಬಹುಮತ ಬರುತ್ತದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣದ ವಿರುದ್ಧ ಬಹುಸಂಖ್ಯಾತ ಹಿಂದೂಗಳ ಪರ ಆಡಳಿತ ಬೇಕು ಎಂಬ ಕಾರಣಕ್ಕೆ, ೨೦೧೪ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ಯಾಗಿ ಸಾಧನೆ ಮಾಡಿದ್ದ ಮೋದಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಬೇಕು ಎಂಬ ತೀರ್ಮಾನವನ್ನು ದೇಶದ ಜನ ತೆಗೆದುಕೊಂಡಿದ್ದರು. ಇದರ ಪರಿಣಾಮ ನಿರೀಕ್ಷೆ ಮೀರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷವಾಗಿ ಕುಳಿತುಕೊಳ್ಳುವ ಅರ್ಹತೆಯನ್ನೂ ಕಳೆದುಕೊಂಡಿತ್ತು. ನಂತರದ ಐದು ವರ್ಷದ ಕೇಂದ್ರ ಸರಕಾರದ ಆಡಳಿತ ‘ಮತ್ತೊಮ್ಮೆ ಮೋದಿ’ ಎಂಬ ಘೋಷಣೆಯೊಂದಿಗೆ ಬಿಜೆಪಿ ಚುನಾವಣೆಯನ್ನು ಎದುರಿಸುವಂತೆ ಮಾಡಿತು. ಆ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುವ ಬದಲು ಮತ್ತೆ ಮೋದಿ ಅವರನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಿತು.
ಕಾಂಗ್ರೆಸ್ ನ ಈ ಕೆಲಸ ಎಷ್ಟರ ಮಟ್ಟಿಗೆ ಅದಕ್ಕೆ ತಿರುಗುಬಾಣ ವಾಯಿತು ಎಂದರೆ, ಮೋದಿ ಅವರನ್ನು ನಿಂದಿಸುವುದು ದೇಶವಿರೋಧಿ ಎಂಬ ಭಾವನೆ
ಜನರಲ್ಲಿ ಮೂಡುವಂತೆ ಮಾಡಿತ್ತು. ಇದರ ಪರಿಣಾಮ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಿಂದಿನ ಚುನಾವಣೆ ಗಿಂತ ಹೆಚ್ಚು ಜನಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂತು. ಆದರೆ, ತಪ್ಪು ತಿದ್ದಿಕೊಳ್ಳದ ಕಾಂಗ್ರೆಸ್ ಮತ್ತೆ ಹಿಂದಿನ ತಪ್ಪುಗಳನ್ನೇ ಮಾಡುತ್ತಾ ಸಾಗಿತೇ ಹೊರತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲೇ ಇಲ್ಲ. ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆಗಳನ್ನು ನಡೆಸಿದರಾದರೂ ಅವಕ್ಕೆ ಯಶಸ್ಸು ಸಿಕ್ಕಿದಂತೆ ಕಾಣುತ್ತಿಲ್ಲ.
ಅಷ್ಟೇ ಅಲ್ಲ, ಬಿಜೆಪಿ ಮತ್ತು ಎನ್‌ಡಿಎ ಹೊರತು ಪಡಿಸಿದ ಪಕ್ಷಗಳನ್ನು ಒಟ್ಟು ಸೇರಿಸಿಕೊಂಡು ‘ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್
ಇನ್‌ಕ್ಲೂಸಿವ್ ಅಲಯನ್ಸ್’ (‘ಇಂಡಿಯ’ ಮೈತ್ರಿಕೂಟ) ಸ್ಥಾಪಿಸಿದ ಕಾಂಗ್ರೆಸ್‌ನ ಉದ್ದೇಶವೂ ಈಡೇರಿಲ್ಲ. ಬದಲಾಗಿ ಕಾಂಗ್ರೆಸ್ ಮತ್ತು ಅದರ ಕೆಲವು ಮಿತ್ರಪಕ್ಷಗಳ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ‘ಇಂಡಿಯ’ ಮೈತ್ರಿಕೂಟದಲ್ಲೇ ಬಿರುಕು ಮೂಡಿಸಿ ಮತ್ತಷ್ಟು ಹಾನಿ ಮಾಡಿದೆ. ಇದೆಲ್ಲದರ
ಪರಿಣಾಮ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ಗ್ರಾಫ್ ಮೇಲೇರಿದೆ.
ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್‌ಗೆ ಕೊಂಚ ನಿರೀಕ್ಷೆ ಮೂಡಿಸಿರುವುದು ದಕ್ಷಿಣ ಭಾರತ. ಅದರಲ್ಲೂ ಮುಖ್ಯವಾಗಿ ಕರ್ನಾಟಕ ಮತ್ತು ತೆಲಂಗಾಣ.
ಇನ್ನುಳಿದಂತೆ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ತಮಿಳುನಾಡಿನಲ್ಲೂ ಕಾಂಗ್ರೆಸ್ ಸ್ವಲ್ಪ ಮಟ್ಟಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಹೀಗಾಗಿ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಒಟ್ಟಾರೆ ಗಳಿಸಿದ ಸ್ಥಾನಗಳಲ್ಲಿ ಹೆಚ್ಚಳ ಆಗುವ ನಿರೀಕ್ಷೆ ಇದೆ. ಈ ಪೈಕಿ ಕರ್ನಾಟಕದಲ್ಲಿ ಕಳೆದ ಬಾರಿ ಒಂದು ಸ್ಥಾನ ಮಾತ್ರ ಗಳಿಸಿದ್ದ ಕಾಂಗ್ರೆಸ್ ೧೦ಕ್ಕಿಂತ ಹೆಚ್ಚು ಸ್ಥಾನಗಳ ನಿರೀಕ್ಷೆಯೊಂದಿಗೆ ಕೆಲಸ ಮಾಡುತ್ತಿದೆ. ತೆಲಂಗಾಣದಲ್ಲಿ ಕೇವಲ ೩ ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ಅಲ್ಲೂ ೧೦ಕ್ಕೂ ಹೆಚ್ಚು ಸ್ಥಾನಗಳನ್ನು ನಿರೀಕ್ಷೆ ಮಾಡಿದೆ. ಸಾಮಾನ್ಯವಾಗಿ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಪಕ್ಷ ಲೋಕಸಭೆ ಚುನಾವಣೆ ಯಲ್ಲೂ ಉತ್ತಮ ಸಾಧನೆ ತೋರುವುದು ಸಾಮಾನ್ಯ ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.
ಆದರೆ, ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ೧೯೯೯ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದ ಮೇಲೆ ಕರ್ನಾಟಕ ದಲ್ಲಿ ಬಿಜೆಪಿ ಗೆಲ್ಲುವ ಸ್ಥಾನಗಳು ಏರಿಕೆಯಾಗುತ್ತಲೇ ಬಂತು. ೧೯೯೯ರಲ್ಲಿ ಕಾಂಗ್ರೆಸ್ ೧೮ ಸ್ಥಾನ, ಬಿಜೆಪಿ ೭ ಸ್ಥಾನ ಗಳಿಸಿದ್ದರೆ, ೨೦೦೪ರಲ್ಲಿ ಎನ್‌ಡಿಎ ಸೋತರೂ ಕರ್ನಾಟಕದಲ್ಲಿ ಬಿಜೆಪಿ ೧೮ ಸ್ಥಾನ ಗೆದ್ದಿತ್ತು. ಈ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ೨೦೦೯ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭಲ್ಲಿ ತನ್ನ ಸ್ಥಾನಗಳ ಸಂಖ್ಯೆಯನ್ನು ೧೯ಕ್ಕೆ ಹೆಚ್ಚಿಸಿಕೊಂಡಿತು.
ಕಾಂಗ್ರೆಸ್ ಕೇವಲ ಆರು ಸ್ಥಾನಕ್ಕೆ ಇಳಿದಿತ್ತು. ೨೦೧೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ ಕುಸಿತವಾಗಿತ್ತಾದರೂ ೧೭ ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಸಂಖ್ಯೆ ೯ಕ್ಕೆ ಏರಿತ್ತು. ಇನ್ನು ೨೦೧೯ರ ಲೋಕಸಭೆ ಚುನಾವಣೆ ಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಸ್ ಮೈತ್ರಿ ಸರಕಾರ ಇದ್ದರೂ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು ೨೫ಕ್ಕೆ ಹೆಚ್ಚಿಸಿಕೊಂಡಿದ್ದರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಅಷ್ಟೇ ಅಲ್ಲ, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಲ್ಲಿ ಗೆದ್ದಿದ್ದರು.
ಇದು ೨೦೦೪ರ ಬಳಿಕದ ಲೋಕಸಭೆ ಚುನಾವಣೆ ಲೆಕ್ಕಾಚಾರವಾದರೆ, ಈ ಬಾರಿ ಮತ್ತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ.
ವಿಶೇಷವೆಂದರೆ, ರಾಜ್ಯದಲ್ಲಿ ೨೦೧೯ರಲ್ಲಿ ಲೋಕಸಭೆ ಚುನಾವಣೆ ಹೇಗೆ ಪ್ರಧಾನಿ ನರೇಂದ್ರ ಮೋದಿ ವರ್ಸಸ್ ಕಾಂಗ್ರೆಸ್ ಎಂದು ನಡೆದಿತ್ತೋ, ೨೦೨೪ರ
ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಇದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲು ಪರದಾಡುತ್ತಿದ್ದ ಹಳೇ ಮೈಸೂರು ಭಾಗದಲ್ಲಿ ಮೈತ್ರಿಗೆ ಶಕ್ತಿ ಬಂದಂತಾಗಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಪ್ರತಿ ಬಾರಿ ಬಿಸಿ ಮುಟ್ಟಿಸುತ್ತಿದ್ದ ಜೆಡಿಎಸ್ ಈಗ ಬಿಜೆಪಿ ಜತೆ ಸೇರಿಕೊಂಡಿರುವುದರಿಂದ ಕಾಂಗ್ರೆಸ್ ಮತ್ತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ, ಕಳೆದ ಎರಡು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆ ಮತ್ತು ಅನುದಾನದ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ನಿರಂತರ ಆರೋಪಗಳನ್ನು ಮಾಡಿಕೊಂಡು ಬಂದಿರುವುದು ಆ ಪಕ್ಷಕ್ಕೆ ಸ್ವಲ್ಪ ಲಾಭ ತರಬಹುದಾದರೂ ಅದನ್ನು ಮತಗಳಾಗಿ ಎಷ್ಟರ ಮಟ್ಟಿಗೆ ಪರಿವರ್ತಿಸಬಹುದು ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಏಕೆಂದರೆ, ತೆರಿಗೆ ಹಂಚಿಕೆ ಮತ್ತು ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂಬುದನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್‌ನ ಪ್ರಯತ್ನ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದೆ. ಇದರ ಜತೆಗೆ ಇದೀಗ ರಾಜ್ಯಾದ್ಯಂತ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳಿಂದ ಜನರಿಗೆ
ಆಗಿರುವ ಅನುಕೂಲಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವ ಕೆಲಸದಲ್ಲಿ ತೊಡಗಿದೆ.
ಏಕೆಂದರೆ, ಪಕ್ಷಕ್ಕೆ ರಾಷ್ಟ್ರೀಯ ನಾಯಕತ್ವದ ಬಲವೇ ಇಲ್ಲದ ಕಾರಣ ಮೋದಿ ಅವರನ್ನು ಎದುರಿಸಲು ಈ ಗ್ಯಾರಂಟಿಗಳು ಕೈಹಿಡಿಯಬೇಕೇ ವಿನಾ ಬೇರಾವುದೇ ಮಾರ್ಗ ಕಾಂಗ್ರೆಸ್‌ಗೆ ಇಲ್ಲ. ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ನೆರವಾಗಬಹುದು. ರಾಜ್ಯದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು, ಕೇಂದ್ರದಲ್ಲೂ ಗ್ಯಾರಂಟಿ ಜಾರಿಯಾದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಪಕ್ಷದ ರಾಜ್ಯ ನಾಯಕರದ್ದು. ಏಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಗ್ಯಾರಂಟಿಗಳೇ ಕಾರಣ.
ಚುನಾವಣೆ ವೇಳೆ ಘೋಷಿಸಿದ್ದ ಐದೂ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ತಕ್ಕ
ಮಟ್ಟಿಗೆ ಜನರ ವಿಶ್ವಾಸ ಗಳಿಸಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಬಡ ಕುಟುಂಬಗಳಿಗೆ ಕನಿಷ್ಠ ೫ ಸಾವಿರ ರು. ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ
ಇದು ಸಮಾಧಾನಕರ ಮೊತ್ತವೇ ಹೌದು. ಮತ್ತೊಂದೆಡೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಬಗ್ಗೆಯೂ ಕಾಂಗ್ರೆಸ್ ಯೋಚನೆ ಮಾಡುತ್ತಿದೆ. ಆದರೆ, ಅಸಮಾಧಾನಗೊಂಡಿರುವವರಲ್ಲಿ ಮೂಲ ಬಿಜೆಪಿಗರೇ ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ಗೆ ಎಷ್ಟು ಅನುಕೂಲವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ, ವಿಧಾನಸಭೆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಪಕ್ಷಕ್ಕೆ ಸಾಕಷ್ಟು ಲಾಭ ವಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಅವರು ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅಂದರೆ, ಮೂಲ ಬಿಜೆಪಿಗರಿಗೆ ಪಕ್ಷದ ಸಿದ್ಧಾಂತವನ್ನು ಬಿಟ್ಟು ಬರುವುದು ಕಷ್ಟಸಾಧ್ಯ ಎಂಬುದು ಈ ಪ್ರಕರಣದಲ್ಲಿ ಗೊತ್ತಾಗಿದೆ. ಹೀಗಾಗಿ ಅಸಮಾಧಾನಗೊಂಡಿರುವ ಬಿಜೆಪಿಯವರಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭ ಸಿಗುವ ಸಾಧ್ಯತೆಗಳು ಕಡಿಮೆ. ಮೇಲಾಗಿ ದೇಶದ ಇತರೆ ಭಾಗಗಳಂತೆ ಈ ಚುನಾವಣೆಯೂ ನರೇಂದ್ರ ಮೋದಿ ಅವರ ಹೆಸರಲ್ಲೇ ನಡೆಯುತ್ತಿದೆ.
ಬಿಜೆಪಿ ಕೂಡ ಅಭ್ಯರ್ಥಿ ಯಾರು ಎಂಬುದಕ್ಕಿಂತ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಮತ ಕೇಳುವುದು ಸ್ಪಷ್ಟ. ೨೦೧೯ರ ಚುನಾವಣೆ ಯಲ್ಲೂ ಬಿಜೆಪಿಯು ಅಭ್ಯರ್ಥಿಗಿಂತ ಮೋದಿ ಹೆಸರಲ್ಲೇ ರಾಜ್ಯದಲ್ಲೂ ಚುನಾವಣೆ ಎದುರಿಸಿ ೨೮ಕ್ಕೆ ೨೫ ಸ್ಥಾನಗಳನ್ನು ಗೆದ್ದಿತ್ತು. ಅದನ್ನೇ ಈ ಬಾರಿ ಮುಂದುವರಿಸಲಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳು ಕಾಂಗ್ರೆಸ್ ಕೈಹಿಡಿದಂತೆ ಲೋಕಸಭೆ ಚುನಾವಣೆಯಲ್ಲೂ ಕೈಹಿಡಿಯು ವುದೋ ಅಥವಾ ಮೋದಿ ಅಲೆಯಲ್ಲಿ ಕೊಚ್ಚಿಹೋಗುವುದೋ ಎಂಬುದನ್ನು ಫಲಿತಾಂಶವೇ ಉತ್ತರಿಸಬೇಕಿದೆ.
ಲಾಸ್ಟ್ ಸಿಪ್: ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಆದರೆ, ಸೋಲೇ ಸಹಜವಾದರೆ ಅದಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಎನ್ನಬಹುದೇ?