Saturday, 14th December 2024

ಪರಿಸರ ಪ್ರೇಮವೆಂದರೆ ಕರೆ ಕೊಡೋದಲ್ಲ, ಕೆರೆ ಕಟ್ಟಿಸೋದು!

ವಾರದ ತಾರೆ: ಬಬಿತಾ ರಜಪೂತ್‌

ವಿಶೇಷ ಲೇಖನ: ವಿರಾಜ್‌ ಕೆ.ಅಣಜಿ

ಪರಿಸರ ಹೋರಾಟಗಾರರ ಕೆಲಸವೀಗ ಪರಿಸರಕ್ಕಿಂತ ಬದಲಾಗಿ ವೇದಿಕೆಗಳಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ವಿಪರ್ಯಾಸ. ಮಾಧ್ಯಮ, ಸಾಮಾಜಿಕ ಜಾಲತಾಣ ಪೋಸ್‌ಟ್‌‌ಗಳಲ್ಲೇ ಪರಿಸರ ಪ್ರೇಮ ಮೆರೆಯುವವರ ಸಂಖ್ಯೆ ಕಡಿಮೆ ಯಿಲ್ಲ. ಅಂತಹ ಯಾವುದೇ ನಿರೀಕ್ಷೆ, ಮಾನ, ಸನ್ಮಾನ ಬಯಸದೇ, ತನ್ನೂರಿನ ನೀರಿನ ಬೇಗೆ ನಿವಾರಿಸಲು ಮಿಡಿದ ದಿಟ್ಟ ಯುವತಿಯ ಕತೆಯಿದು.

ಮಧ್ಯಪ್ರದೇಶದಲ್ಲಿ ಅಗ್ರೋತಾ ಎಂಬ ಹಳ್ಳಿ, ಸುಮಾರು 1500 ಜನರು ವಾಸಿಸುವ ಗ್ರಾಮ. ಕೃಷಿ ಅಲ್ಲಿನ ಮುಖ್ಯ ಕಸುಬು. ಆದರೆ, ವರ್ಷಕ್ಕೆ ಎರಡು ಮಳೆ ಬಂದರೆ ಅದೇ ಹರ್ಷ. ಮಳೆಯನ್ನು ನಂಬಿಯೇ ಕೃಷಿ ನೆಚ್ಚಿಕೊಳ್ಳಬೇಕು. ಮಳೆ ಇಲ್ಲದಿದ್ದಾಗ
ಸಮೀಪದಲ್ಲೇ ಹರಿಯುವ ಬಚೇರಿ ನದಿಯ ನೀರನ್ನೇ ಆಶ್ರಯಿಸಬೇಕು. ಆದರೆ, ನದಿ ಹಾಗೂ ಅಗ್ರೋತಾ ನಡುವೆ ದೊಡ್ಡ ದೊಂದು ಗುಡ್ಡವಿತ್ತು.

ಅದರಿಂದಾಗಿ ನದಿಯ ನೀರು ಕೂಡ ಕನಸಾಗಿತ್ತು. ಮಳೆ ಬಂದಾಗ ಅಗ್ರೋತಾದ 70 ಎಕರೆ ವಿಸ್ತಾರದ ಕೆರೆಯಲ್ಲಿ ಶೇಖರಣೆಯಾದ ನೀರನ್ನೇ ವರ್ಷವಿಡೀ ಬಳಸಿಕೊಳ್ಳಬೇಕಿತ್ತು. ಬರುಬರುತ್ತಾ ಬೋರ್‌ವೆಲ್‌ಗಳ ಹೆಚ್ಚಳ ಹಾಗೂ ಸತತ ಬರಗಾಲದಿಂದಾಗಿ ಅಗ್ರೋತಾದಲ್ಲಿ ಬೊಗಸೆ ನೀರು ಸಿಗುವುದು ಕಷ್ಟ ಎಂಬಂತಾಯಿತು. ಹಳ್ಳಿಯಲ್ಲೇ ಬದುಕಬೇಕು ಎಂದರೆ ಗ್ರಾಮಸ್ಥರೇ
ಏನನ್ನಾದರೂ ಮಾಡಬೇಕಿತ್ತು. ಈ ಬಯಕೆ ಎಲ್ಲರಿಗಿದ್ದರೂ ಇಚ್ಛಾಶಕ್ತಿ, ನಾಯಕತ್ವದ ಕೊರತೆಯಿತ್ತು. ಆ ಶೂನ್ಯ ತುಂಬಿ ಬಂದವರೇ ಬಬಿತಾ ರಜಪೂತ್, ಆಗಷ್ಟೇ ಹದಿನಾರರ ಹುಡುಗಿ.

ತನ್ನಿಡೀ ಹಳ್ಳಿಯೇ ಕುಡಿಯುವ ನೀರಿಗೆ ಪಡುವ ಕಷ್ಟವನ್ನು ಬಾಲ್ಯದಿಂದಲೇ ಬಬಿತಾ ಕಂಡಿದ್ದರು. ಈ ಕಷ್ಟಕ್ಕೆ ಮುಕ್ತಿ ಹಾಡಲೇಬೇಕು ಎಂದು ನಿಶ್ಚಯ ಮಾಡಿಕೊಂಡಿದ್ದರು. ಹಳ್ಳಿಗೆ ನೀರು ಬರಬೇಕು ಎಂದರೆ ನದಿ ಮತ್ತು ಕೆರೆಯ ಮಧ್ಯೆಯಿರುವ ಗುಡ್ಡ ಒಡೆಯಬೇಕು ಎಂದು ಬಬಿತಾ ಅಂದುಕೊಂಡರು. ತನ್ನೂರಿನವರಿಗೆ ತನ್ನ ಮನದ ಸಂಕಲ್ಪ ಹೇಳಿದಾಗ, ‘ಯಾವುದೀ
ಎಳಸು, ತಲೆ ಬುಡವಿಲ್ಲದೇ ಮಾತನಾಡುತ್ತದಲ್ಲ, ಇದೆಲ್ಲ ಆಗಿ ಹೋಗುವ ಮಾತಲ್ಲ ಎಂದು ಬಬಿತಾ ಉತ್ಸಾಹಕ್ಕೆ ತಣ್ಣೀರು ಎರಚಿದ್ದರು!

ಆದರೆ, ಒಂದಷ್ಟು ಮಹಿಳೆಯರಿಗೆ ಬಬಿತಾ ಮಾತಿನ ಬಗ್ಗೆ ಅದೇಗೋ ವಿಶ್ವಾಸ ಮೂಡಿತ್ತು. ದಿನಾ ಸಂಕಟ ಪಡುವುದಕ್ಕಿಂತ ಒಮ್ಮೆ ಸಂಕಲ್ಪ ಮಾಡಿ ನೋಡೋಣ ಅನ್ನಿಸಿರಲಿಕ್ಕೂ ಸಾಕು. ನಿನ್ನ ಜತೆ ನಾವಿರುತ್ತೇವೆ ಎಂದು ಹತ್ತು ಗೃಹಿಣಿಯರು ಬಬಿತಾಗೆ
ಸಾಥಿ ಯಾದರು. ಆದರೆ, ತಾನಂದುಕೊಂಡ ಕೆಲಸಕ್ಕೆ ದೊಡ್ಡ ತಂಡವೇ ಬೇಕು ಎಂಬುದನ್ನು ಅರಿತಿದ್ದ ಬಬಿತಾ, ತನ್ನ ಕೈಲಾದ ಪ್ರಯತ್ನಗಳನ್ನೆಲ್ಲ ಮುಂದುವರಿಸಿದ್ದರು.

2018ರ ಮೇನಲ್ಲಿ ಪರಮಾರ್ಥ್ ಸಮಾಜ್ ಸೇವಿ ಸಂಸ್ಥೆ ಎಂಬ ಎನ್‌ಜಿಒಗೆ ಬಬಿತಾ ಕನಸಿಗೆ ಕೈ ಜೋಡಿಸಲು ಮುಂದೆ ಬಂತು. ಬಬಿತಾ ಜತೆಗಿದ್ದ ಸುಮಾರು 12 ಮಹಿಳೆಯರು ತಮ್ಮನ್ನು ಜಲ್ ಸಹೇಲಿ ಎಂದು ಹುರಿದುಂಬಿಸಿಕೊಂಡರು. ತಮ್ಮ ತಂಡಕ್ಕೆ ‘ಪಾನಿ ಪಂಚಾಯತ್’ ಎಂದು ಹೆಸರಿಟ್ಟುಕೊಂಡರು, ಬಬಿತಾ ತಂಡಕ್ಕೆ ಸಾರಥಿಯಾದರು. ನೀರಿನ್ನು ಊರಿನತ್ತ ಹರಿಸುವ ಯಜ್ಞ ಅಲ್ಲಿಂದ ಶುರುವಾಯಿತು.

ಯಾವುದೇ ಸಾಧನೆಗೆ ಕಲ್ಲು, ಮುಳ್ಳುಗಳು ಸಹಜ ಎಂಬ ಮಾತಿನಂತೆ ಜಲ್ ಸಹೇಲಿಗಳಿಗೆ ಸವಾಲುಗಳು ಎದುರಾದವು. ಕಲ್ಲಿನ ಗುಡ್ಡ ಅರಣ್ಯ ಇಲಾಖೆಗೆ ಸೇರಿದ್ದರಿಂದ ಗುಡ್ಡಕ್ಕೆ ಕೈಹಾಕುವಂತಿರಲಿಲ್ಲ. ಇದಕ್ಕೆ ಸಾಲದೆಂಬಂತೆ, ಕೆರೆ ಒತ್ತುವರಿ ಮಾಡಿ ಕೊಂಡಿದ್ದ ವರಿಂದ ವಿರೋಧ ವ್ಯಕ್ತವಾಯಿತು. ಗೃಹಿಣಿಯರು ಮನೆಯಿಂದ ಹೊರಹೋಗಲು ಮನೆಯ ಮುಖ್ಯಸ್ಥರ ಸಹಕಾರ ದುಸ್ತರ ವಾಯಿತು. ಆದರೂ, ಅವರಿಗೆ ತಮ್ಮ ಪ್ರಯತ್ನದ ಬಗ್ಗೆ ನಂಬಿಕೆ ಮಾಸಿರಲಿಲ್ಲ. ನೀರು ಬೇಕು ಎಂದರೆ ಬೆವರು ಬಸಿಯಲೇ ಬೇಕು ಎಂಬುದನ್ನು ಮನನ ಮಾಡಿಕೊಂಡು, ಮನಸಿಟ್ಟು ಕೆಲಸ ಮಾಡಿದ್ದರು.

ಅರಣ್ಯ ಇಲಾಖೆ ಜತೆ ಮಾತನಾಡಿ ತಮ್ಮೂರಿನ ಕಷ್ಟ ಹೇಳಿಕೊಂಡು ಗುಡ್ಡ ಒಡೆಯಲು ಅನುಮತಿ ಪಡೆಯುವಲ್ಲಿ ಜಲ್ ಸಹೇಲಿ ಗಳು ಯಶಸ್ವಿಯಾದರು. ಈ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನು ಎನ್ಜಿಒ ಒದಗಿಸಿತು. ನಿಧಾನವಾಗಿ ಗುಡ್ಡ ಕರಗಲು
ಆರಂಭಿಸಿತು. ದೂರದ ಪ್ರಯಾಣಕ್ಕೆ ಚಿಕ್ಕ ಹೆಜ್ಜೆಯಿಂದಲೇ ಆರಂಭ ಎನ್ನುವಂತೆ, ಮೊದಲು ಚಿಕ್ಕ ಚಿಕ್ಕ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಯಿತು. ಇದರಿಂದಾಗಿ ಗುಡ್ಡದಿಂದ ನದಿಗೆ ಹರಿದು ಹೋಗುತ್ತಿದ್ದ ನೀರನ್ನು ತಡೆಯಲಾಯಿತು. ಕ್ರಮೇಣ ಅಲ್ಲಲ್ಲಿ ನೀರಿನ ಒಸರೆಗಳು ಕಾಣಲಾರಂಭಿಸಿದವು.

ಇದನ್ನು ಕಂಡ ಗ್ರಾಮದ ಇತರರಿಗೂ ಜಲ್ ಸಹೇಲಿಗಳ ಬಗ್ಗೆ ನಂಬಿಕೆ ಮೂಡಿತು. ಒಬ್ಬೊಬ್ಬರಾಗಿ ಕೈ ಜೋಡಿಸಲು ಆರಂಭಿಸಿದರು. ಸತತ 7 ತಿಂಗಳು ಕೆಲಸ ನಡೆಯಿತು. ಇದರ ಫಲವಾಗಿ 12 ಅಡಿ ಅಗಲದ, 107 ಮೀಟರ್ ಎತ್ತರದ ಕಾಲುವೆಯನ್ನು
ಗುಡ್ಡ ಒಡೆದು ನಿರ್ಮಿಸಲಾಯಿತು. ಬೇಸಿಗೆ ಸುಡು ಬಿಸಿಲೂ ಲೆಕ್ಕಿಸದೇ, 1400 ಗ್ರಾಮಸ್ಥರ ಶ್ರಮಾದಾನ ಮಾಡಿದ್ದರ ಫಲವಾಗಿ ಮಳೆಗಾಲದಲ್ಲಿ ಬಿದ್ದ ನೀರು, ನದಿ ನೀರು ಅಗೋತ್ರಾ ಕೆರೆಗೂ ತುಂಬಲು ಆರಂಭಿಸಿದೆ.

ಕೊಡದಷ್ಟು ನೀರಿಗೆ ಕಷ್ಟವಾಗಿದ್ದ ಊರಿನಲ್ಲಿಗ ಕೊಡುವಷ್ಟು ನೀರು ವರ್ಷವಿಡೀ ತುಂಬಿಕೊಂಡಿರುತ್ತದೆ. ಸದ್ಯ ಪದವಿ ವಿದ್ಯಾಭಾಸ ಮಾಡುತ್ತಿರುವ ಬಬಿತಾ ಯುವ ಜನರ ರೋಲ್ ಮಾಡೆಲ್ ಆಗಿದ್ದಾರೆ. ಒಗ್ಗಟ್ಟು, ನಂಬಿಕೆ, ಧ್ಯೇಯಗಳು ಒಂದಾದರೆ ಎಲ್ಲವೂ ಸಾಧ್ಯ ಎಂಬುದು ಮತ್ತೊಮ್ಮೆ ನಿಜವಾಗಿದೆ.

ಕೃಷಿ ಕಾಯಿದೆಗಳ ಪ್ರತಿಭಟನೆ, ಟೂಲ್‌ಕಿಟ್ ಆರೋಪ-ಪ್ರತ್ಯಾರೋಪಗಳ ಈ ಹೊತ್ತಲ್ಲಿ, ಮೌನವಾಗಿದ್ದುಕೊಂಡೇ ದುರಿಗಿದ್ದ ದೊಡ್ಡ ಕಲ್ಲಿನ ಪರ್ವತವನ್ನು, ತಮ್ಮ ಇಚ್ಛಾಶಕ್ತಿಯಿಂದಲೇ ಚಿಕ್ಕದಾಗಿಸಿ, ಒಡೆದು ಕಾಲುವೆಯಲ್ಲಿ ನೀರು ತರಿಸಿದ ಬಬಿತಾ ರಜಪೂತ್ ಧೀಶಕ್ತಿಗೆ ಸೆಲ್ಯೂಟ್ ಹೇಳಲೇಬೇಕು.